ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಾಳೆ ಉಡುಪಿಗೆ ನರೇಂದ್ರ ಮೋದಿ ಭೇಟಿ; ಕನ್ನಡದಲ್ಲೇ ಪೋಸ್ಟ್‌ ಹಂಚಿಕೊಂಡ ಪ್ರಧಾನಿ

Laksha Kantha Gita Parayana: ಶುಕ್ರವಾರ (ನವೆಂಬರ್‌ 28) ಉಡುಪಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಮೋದಿ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೇವರ ದರ್ಶನ ಹಾಗೂ ರೋಡ್‌ ಶೋ ಮಾಡಲಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಕನ್ನಡದಲ್ಲೇ ಪೋಸ್ಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ನಾಳೆ ಉಡುಪಿಗೆ ನರೇಂದ್ರ ಮೋದಿ ಭೇಟಿ; ಕನ್ನಡದಲ್ಲೇ ಸಂತಸ ಹಂಚಿಕೊಂಡ ಪ್ರಧಾನಿ

ಉಡುಪಿ ಶ್ರೀ ಕೃಷ್ಣ ಮಠ; ಒಳ ಚಿತ್ರದಲ್ಲಿ ಮೋದಿ (ಸಂಗ್ರಹ ಚಿತ್ರ). -

Ramesh B
Ramesh B Nov 27, 2025 10:51 PM

ದೆಹಲಿ, ನ. 27: ಶುಕ್ರವಾರ (ನವೆಂಬರ್‌ 28) ಉಡುಪಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಭೇಟಿ ನೀಡಲಿದ್ದು, ಸಕಲ ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಉಡುಪಿ ನಗರದ ಸುತ್ತಮುತ್ತಲಿನ ಶಾಲೆಗಳಿಗೆ ರಜೆ ಸಾರಲಾಗಿದೆ. ಮೋದಿ ಉಡುಪಿ ಶ್ರೀ ಕೃಷ್ಣ ಮಠದಲ್ಲಿ (Udupi Sri Krishna Math) ದೇವರ ದರ್ಶನ ಹಾಗೂ ರೋಡ್‌ ಶೋ ಮಾಡಲಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಕನ್ನಡದಲ್ಲೇ ಪೋಸ್ಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ʼʼಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯʼʼ ಎಂದು ಹೇಳಿದ್ದಾರೆ.

ʼʼಗೀತಾ ಪಠಣಕ್ಕಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಈ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಅತ್ಯಂತ ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತವಾದ ಈ ಮಠವು, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆʼʼ ಎಂದು ಕನ್ನಡದಲ್ಲೇ ಬರೆದುಕೊಂಡಿದ್ದಾರೆ.

ಮೋದಿ ಅವರ ಎಕ್ಸ್‌ ಪೋಸ್ಟ್‌:



ಸಾಧು-ಸಂತರು ಭಾಗಿ

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ವಿದ್ಯಾರ್ಥಿಗಳು, ಸಾಧು-ಸಂತರು, ವಿದ್ವಾಂಸರು ಮತ್ತು ವಿವಿಧ ವರ್ಗಗಳ ನಾಗರಿಕರು ಸೇರಿದಂತೆ 1,00,000 ಮಂದಿ 'ಲಕ್ಷ ಕಂಠ ಗೀತಾ ಪಾರಾಯಣ' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಗವದ್ಗೀತೆಯ ಸಾಮೂಹಿಕ ಪಾರಾಯಣಕ್ಕೆ ಪ್ರಧಾನ ಮಂತ್ರಿ ಸಾಕ್ಷಿಯಾಗಲಿದ್ದಾರೆ.

ಶ್ರೀ ಕೃಷ್ಣ ದೇಗುಲದ ಗರ್ಭಗುಡಿಯ ಮುಂಭಾಗದಲ್ಲಿರುವ 'ಸುವರ್ಣ ತೀರ್ಥ ಮಂಟಪ'ವನ್ನು ಮೋದಿ ಉದ್ಘಾಟಿಸಲಿದ್ದಾರೆ. ಜತೆಗೆ ಕನಕದಾಸರು ಭಗವಾನ್ ಶ್ರೀಕೃಷ್ಣನ ದಿವ್ಯ ದರ್ಶನವನ್ನು ಪಡೆದ ಸ್ಥಳವಾದ 'ಕನಕನ ಕಿಂಡಿ'ಗೆ ಕನಕ ಕವಚವನ್ನು ಸಮರ್ಪಿಸಲಿದ್ದಾರೆ.

ಮೋದಿ ಅವರ ಕಾರ್ಯಕ್ರಮದ ಟೈಮ್‌ ಟೇಬಲ್‌

  • ಬೆಳಗ್ಗೆ 11:05 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ.
  • 11.10ಕ್ಕೆ ಹೆಲಿಕಾಪ್ಟರ್ ಮೂಲಕ ಉಡುಪಿಗೆ ತೆರಳಲಿದ್ದಾರೆ.
  • ಬೆಳಗ್ಗೆ 11.35ಕ್ಕೆ ಆದಿಉಡುಪಿಯ ಹೆಲಿಪ್ಯಾಡ್ ತಲುಪಲಿದ್ದಾರೆ.
  • ಅಲ್ಲಿಂದ ರಸ್ತೆ ಮೂಲಕ ಉಡುಪಿ ಮಠಕ್ಕೆ ತೆರಳಿ ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ.
  • ಲಕ್ಷಕಂಠ ಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಮೋದಿ ಭಗವದ್ಗೀತೆಯ 10 ಶ್ಲೋಕಗಳನ್ನು ಪಠಿಸಲಿದ್ದಾರೆ.
  • ಕಾರ್ಯಕ್ರಮ ಮುಗಿಸಿಕೊಂಡು ಮತ್ತೆ ಮಂಗಳೂರಿಗೆ ವಾಪಸಾಗಲಿದ್ದಾರೆ.
  • ಮಧ್ಯಾಹ್ನ 2 ಗಂಟೆಗೆ ಏರ್‌ಪೋರ್ಟ್‌ಗೆ ವಾಪಸ್ ಆಗಲಿದ್ದಾರೆ. ಅಲ್ಲಿಂದ ಗೋವಾಕ್ಕೆ ತೆರಳಲಿದ್ದಾರೆ.

ನಾಳೆ ಉಡುಪಿಗೆ ಪಿಎಂ ನರೇಂದ್ರ ಮೋದಿ, ಮಂಗಳೂರು ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್‌

ಭರ್ಜರಿ ರೋಡ್‌ ಶೋ

ವಿಶೇಷ ಎಂದರೆ ಮೋದಿ ಉಡುಪಿಯಲ್ಲಿ ಭರ್ಜರಿ ರೋಡ್‌ ಶೋ ನಡೆಸಲಿದ್ದಾರೆ. ಬನ್ನಂಜೆಯಿಂದ ಕಲ್ಸಂಕದವರೆಗೆ ರೋಡ್ ಶೋ ನಡೆಯಲಿದೆ. ಹೀಗಾಗಿ ಈ ಮಾರ್ಗದಲ್ಲಿ ಎರಡೂ ಕಡೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಬನ್ನಂಜೆ ಶ್ರೀ ನಾರಾಯಣ ಗುರು ಮಂದಿರದ ಸಮೀಪ, ಜಯಲಕ್ಷ್ಮೀ ಸಿಲ್ಕ್ ಸಮೀಪ ಹಾಗೂ ಸಿಟಿ ಬಸ್ ನಿಲ್ದಾಣ ಸಮೀಪದಲ್ಲಿ ವೇದಿಕೆ ನಿರ್ಮಿಸಿ ಯಕ್ಷಗಾನ, ಹುಲಿವೇಷ ಹಾಗೂ ಕೃಷ್ಣವೇಷ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಮೋದಿ ಅವರಿಗೆ ಹೂಮಳೆಗೆರೆಯಲು ಸಿದ್ಧತೆ ನಡೆಸಲಾಗಿದೆ ಎಂದು ಬಿಜೆಪಿ ತಿಳಿಸಿದೆ.