Bhatkal Tragedy: ಭಟ್ಕಳದಲ್ಲಿ ಘೋರ ದುರಂತ; ತಟ್ಟಿಹಕ್ಕಲ ನದಿಯಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿದ್ದ 8 ಮಂದಿ ದಾರುಣ ಸಾವು
ಭಟ್ಕಳ ತಾಲೂಕಿನ ಶಿರಾಲಿಯ ಅಳ್ವೆಕೋಡಿ ಸಮೀಪವಿರುವ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಯಲ್ಲಿ ಈ ದುರಂತ ಸಂಭವಿಸಿದೆ. ಸ್ಥಳೀಯ ನಿವಾಸಿಗಳು ನದಿಯಲ್ಲಿ ಕಪ್ಪೆಚಿಪ್ಪುಗಳನ್ನು ಸಂಗ್ರಹಿಸಲು ತೆರಳಿದ್ದರು. ಈ ವೇಳೆ ನದಿಯಲ್ಲಿ ಮುಳುಗಿ ಎಂಟು ಮಂದಿ ಮೃತಪಟ್ಟಿದ್ದು, ಪೊಲೀಸರು ಭೇಟಿ ನೀಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಭಟ್ಕಳ ಮೃತದೇಹಗಳಿಗಾಗಿ ಶೋಧ -
ಶಿರಸಿ/ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಸಮೀಪ ಇಂದು ಭೀಕರ ದುರಂತ (Bhatkal Tragedy) ಸಂಭವಿಸಿದೆ. ಕಪ್ಪೆಚಿಪ್ಪು (ಚಪ್ಪೆಕಲ್ಲು) ಆರಿಸಲು ನದಿಗೆ ಇಳಿದಿದ್ದ ಒಂದೇ ಕುಟುಂಬಕ್ಕೆ ಸೇರಿದ 8 ಜನ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಭಟ್ಕಳ ತಾಲೂಕಿನ ಶಿರಾಲಿಯ ಅಳ್ವೆಕೋಡಿ ಸಮೀಪವಿರುವ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಯಲ್ಲಿ ಈ ದುರಂತ ಸಂಭವಿಸಿದೆ. ಸ್ಥಳೀಯ ನಿವಾಸಿಗಳು ನದಿಯಲ್ಲಿ ಕಪ್ಪೆಚಿಪ್ಪುಗಳನ್ನು ಸಂಗ್ರಹಿಸಲು ತೆರಳಿದ್ದರು. ಈ ವೇಳೆ ನದಿಗೆ ಇಳಿದವರು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು ಸಾಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ದುರಂತಕ್ಕೆ ಕಾರಣವೇನು?
ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ತೀವ್ರವಾಗಿತ್ತು. ಇದರೊಂದಿಗೆ ಸಮುದ್ರದ ಅಲೆಗಳ ಅಬ್ಬರವೂ ಹೆಚ್ಚಾಗಿದ್ದರಿಂದ ಹೊಳೆಯಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದೆ. ನೀರಿನ ರಭಸಕ್ಕೆ ಸಿಲುಕಿ ಇವರೆಲ್ಲರೂ ಮುಳುಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ನದಿಯಲ್ಲಿ ಮುಳುಗಿ ಮೃತಪಟ್ಟವರೆಲ್ಲರ ಮೃತದೇಹಗಳನ್ನು ಅಳ್ವೆಕೋಡಿ ಬಳಿ ಪತ್ತೆಹಚ್ಚಿ ಹೊರತೆಗೆಯಲಾಗಿದೆ. ಪಡುಶಿರಾಲಿ ಬೆಂಗ್ರೆಯ ಲಕ್ಷ್ಮಿ ಮಹಾದೇವ ನಾಯ್ಕ (42), ಶಾರದಾಹೊಳೆಯ ಉಮೇಶ ನಾಯ್ಕ (30), ಲಕ್ಷ್ಮಿ ನಾಯ್ಕ (30), ಲಕ್ಷ್ಮಿ ಅಣ್ಣಪ್ಪ ನಾಯ್ಕ (60), ಲಕ್ಷ್ಮಿ ಶಿವರಾಮ ನಾಯ್ಕ (49) , ಜ್ಯೋತಿ ನಾಗಪ್ಪ ನಾಯ್ಕ (34) , ಮಾಲತಿ ನಾಯ್ಕ (38) , ಮಾಸ್ತಮ್ಮ ನಾಯ್ಕ ಮೃತರು.
ಘಟನೆಯಲ್ಲಿ ಅದೃಷ್ಟವಶಾತ್ ನಾಗರತ್ನಾ ಮತ್ತು ಮಹಾದೇವಿ ಎಂಬ ಇಬ್ಬರು ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ತವ್ಯಕ್ಕೆ ತೆರಳುತ್ತಿದ್ದ ASI ಮೇಲೆ ಗುಂಡು ಹಾರಿಸಿ ಕೊಂದ ದುಷ್ಕರ್ಮಿಗಳು
ಘಟನಾ ಸ್ಥಳಕ್ಕೆ ಭಟ್ಕಳ ಠಾಣೆಯ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಭೇಟಿ ನೀಡಿದ್ದಾರೆ. ನದಿಯಲ್ಲಿ ಇನ್ನೂ ಕೆಲವರು ಕಣ್ಮರೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರ ಸಹಾಯದೊಂದಿಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಭಟ್ಕಳ ನಗರದಲ್ಲಿ ಈ ಘಟನೆಯಿಂದಾಗಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ.