ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಟ್ಕಳ ನದಿ ದುರಂತ; ಶಾರದಾಹೊಳೆಯಲ್ಲಿ ನೆರವೇರಿದ 11 ಮಂದಿಯ ಸಾಮೂಹಿಕ ಅಂತ್ಯಸಂಸ್ಕಾರ

Bhatkal Tragedy: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಶಾರದಾಹೊಳೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರದ ನೆರವು ನಿರಂತರವಾಗಿ ಇರಲಿದೆ. ಚಿಕಿತ್ಸೆ ಪಡೆಯುತ್ತಿರುವವರ ವೈದ್ಯಕೀಯ ವೆಚ್ಚವನ್ನು ವೈಯಕ್ತಿಕವಾಗಿ ಭರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ಭಟ್ಕಳ ನದಿ ದುರಂತ; 11 ಮಂದಿಯ ಸಾಮೂಹಿಕ ಅಂತ್ಯಸಂಸ್ಕಾರ

ಭಟ್ಕಳದ ಶಾರದಾಹೊಳೆಯಲ್ಲಿ ಸಾಮೂಹಿಕ ಅಂತ್ಯಕ್ರಿಯೆಗೆ ಸೇರಿರುವ ಜನರು. -

Prabhakara R
Prabhakara R May 25, 2026 3:31 PM

ಭಟ್ಕಳ: ಕಪ್ಪೆಚಿಪ್ಪು ಸಂಗ್ರಹಿಸಲು ತೆರಳಿದ್ದ ವೇಳೆ ಸಂಭವಿಸಿದ ದುರಂತದಲ್ಲಿ ಮೃತಪಟ್ಟಿದ್ದ 11 ಮಂದಿಯ ಸಾಮೂಹಿಕ ಅಂತ್ಯಸಂಸ್ಕಾರವು ಭಟ್ಕಳದ ಶಾರದಾಹೊಳೆಯಲ್ಲಿ ಸೋಮವಾರ ನೆರವೇರಿತು. ಈ ವೇಳೆ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಪ್ರದೇಶವೇ ಶೋಕ ಸಾಗರದಲ್ಲಿ ಮುಳುಗಿತ್ತು. ಸಾವಿರಾರು ಮಂದಿ ಅಂತಿಮ ದರ್ಶನ ಪಡೆದು ಮೃತರಿಗೆ ಕಣ್ಣೀರಿನ ವಿದಾಯ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸ್ಥಳಕ್ಕೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ ಅವರು, ಭಟ್ಕಳದ ಇತಿಹಾಸದಲ್ಲೇ ಇಂತಹ ದುರ್ಘಟನೆ ನಡೆದಿರಲಿಲ್ಲ. ಪ್ರತಿ ವರ್ಷ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕಪ್ಪೆಚಿಪ್ಪು ತೆಗೆಯುವ ಕಾರ್ಯ ಸಾಮಾನ್ಯವಾಗಿದ್ದರೂ, ಈ ಬಾರಿ ಸಂಭವಿಸಿದ ದುರಂತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಗೆ ಕಾರಣ ಏನು ಎಂಬುದನ್ನು ಪತ್ತೆಹಚ್ಚಲು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಮೃತರ ಕುಟುಂಬಗಳಿಗೆ ಸರ್ಕಾರದ ನೆರವು ನಿರಂತರವಾಗಿ ಇರಲಿದೆ. ಚಿಕಿತ್ಸೆ ಪಡೆಯುತ್ತಿರುವವರ ವೈದ್ಯಕೀಯ ವೆಚ್ಚವನ್ನು ವೈಯಕ್ತಿಕವಾಗಿ ಭರಿಸುವುದಾಗಿ ತಿಳಿಸಿದ ಮಂಕಾಳು ವೈದ್ಯ ಅವರು, ಮೃತರ ಮಕ್ಕಳ ಶಿಕ್ಷಣಕ್ಕೂ ಅಗತ್ಯ ಸಹಾಯ ನೀಡಲು ಸಿದ್ಧವಿದ್ದೇನೆ ಎಂದು ಭರವಸೆ ನೀಡಿದರು.

ಭಟ್ಕಳ ನದಿ ದುರಂತ; ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಏನಿದು ಘಟನೆ?

ಶಿರಾಲಿಯ ಶಾರದಾ ಹೊಳೆಯ 14 ಜನರು ಭಾನುವಾರ ಬೆಳಗ್ಗೆ ಕಪ್ಪೆಚಿಪ್ಪು ಆರಿಸಲು ತಟ್ಟಿಹಕ್ಕಲು ನದಿಗೆ ಇಳಿದಿದ್ದಾಗ ಏಕಾಏಕಿ ನೀರು ಉಕ್ಕಿ ಬಂದು, 11 ಜನ ಕೊಚ್ಚಿ ಹೋಗಿದ್ದರು. ಈ ವೇಳೆ ಮೂವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದರು.

ಶಿರಾಲಿಯ ಶಾರದಾಹೊಳೆ ನಿವಾಸಿಗಳಾದ ಲಕ್ಷ್ಮೀ ಮಾದೇವ ನಾಯ್ಕ ಮಳುಮನೆ (38), ಮಾಲತಿ ಜಟ್ಟಪ್ಪ ನಾಯ್ಕ (38), ಲಕ್ಷ್ಮೀ ಅಣ್ಣಪ್ಪ ನಾಯ್ಕ (44), ಮಾಸ್ತಮ್ಮ ಮಂಜುನಾಥ ನಾಯ್ಕ (43), ಉಮೇಶ್ ಮಂಜುನಾಥ ನಾಯ್ಕ (42), ಲಕ್ಷ್ಮೀ ಶಿವರಾಮ ನಾಯ್ಕ (39), ಮಂಜಮ್ಮ ನಾಯ್ಕ (50) ಜ್ಯೋತಿ ನಾಗಪ್ಪ ನಾಯ್ಕ (37), ಲಕ್ಷ್ಮೀ ನಾಯ್ಕ, ನಾಗರತ್ನ ನಾಯ್ಕ (40) ಮತ್ತು ಮಾದೇವ ನಾಯ್ಕ (52) ಮೃತರಾಗಿದ್ದಾರೆ.

ಮೃತರ ಕುಟುಂಬಕ್ಕೆ ರಾಜ್ಯ ಸರಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.