ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Crazy Brahma Event: ʻನಮ್‌ ಯಜಮಾನ್ರು ಅಂದು ಕನಸುಗಾರ, ಇಂದು ಮಾತುಗಾರʼ; ರವಿಚಂದ್ರನ್‌ಗೆ ಹಂಸಲೇಖ ಬಹುಪರಾಕ್‌

'ಕ್ರೇಜಿಸ್ಟಾರ್' ರವಿಚಂದ್ರನ್ ಹಾಗೂ 'ನಾದಬ್ರಹ್ಮ' ಹಂಸಲೇಖ ಜೋಡಿಯನ್ನು ಒಂದೇ ವೇದಿಕೆಯಲ್ಲಿ ಗೌರವಿಸಲು ಮೇ 30ರಂದು ಕೆಂಗೇರಿ ಬಳಿಯ ಜೆ.ಕೆ.ಗ್ರಾಂಡ್ ಅರೇನಾದಲ್ಲಿ "ಕ್ರೇಜಿ - ಬ್ರಹ್ಮ" ಮೆಗಾ ಇವೆಂಟ್ ಆಯೋಜಿಸಲಾಗಿದೆ. ಈ ಜೋಡಿಯ 16 ವರ್ಷಗಳ ಸಂಗೀತ ಪಯಣವನ್ನು ಕೊಂಡಾಡುವ ಈ ಕಾರ್ಯಕ್ರಮದ ಅಂಗವಾಗಿ 80 ಅಡಿಯ ಬೃಹತ್ ಕಟೌಟ್ ಅನಾವರಣಗೊಳಿಸಲಾಗಿದೆ.

ʻಕ್ರೇಜಿ-ಬ್ರಹ್ಮʼ ಇವೆಂಟ್‌ನಲ್ಲಿ ರವಿಚಂದ್ರನ್ - ಹಂಸಲೇಖ ‌ಜೋಡಿಯ ಮ್ಯಾಜಿಕ್

-

Avinash GR
Avinash GR May 25, 2026 4:36 PM

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆಯಲಾದ ಅದ್ಭುತ ಕಾಂಬಿನೇಷನ್ ಎಂದರೆ ಅದು 'ಕ್ರೇಜಿಸ್ಟಾರ್' ರವಿಚಂದ್ರನ್ ಮತ್ತು 'ನಾದಬ್ರಹ್ಮ' ಹಂಸಲೇಖ ಜೋಡಿ. 80-90ರ ದಶಕದಲ್ಲಿ ಸತತ 16 ವರ್ಷಗಳ ಕಾಲ ಒಟ್ಟಾಗಿ ಸೂಪರ್ ಹಿಟ್ ಸಿನಿಮಾಗಳ ಮೂಲಕ ಸಂಗೀತದ ಮೋಡಿ ಮಾಡಿದ್ದ ಈ ದಿಗ್ಗಜ ಜೋಡಿಯನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸುವ ಸಲುವಾಗಿ ಮೇ 30ರಂದು ಕೆಂಗೇರಿ ಬಳಿಯ ಜೆ.ಕೆ.ಗ್ರಾಂಡ್ ಅರೆನಾದಲ್ಲಿ "ಕ್ರೇಜಿ - ಬ್ರಹ್ಮ" ರೀಯೂನಿಯನ್ ಮೆಗಾ ಇವೆಂಟ್ ಆಯೋಜಿಸಲಾಗಿದೆ.

ಒಂದೇ ದೇಹ ಎರಡು ಜೀವ ಇದ್ದ ಹಾಗೆ: ರವಿಚಂದ್ರನ್

ಪ್ರಸ್ತುತ ಇನ್ನೋವೇಟಿವ್‍ ಕ್ರಿಯೇಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ನ.ವಿನಯ್ ಹಾಗೂ ಕಲಾಲೂಹ ಸಂಸ್ಥಾಪಕಿ ಡಾ.ಚೇತನಾ ಆರ್.ಎಸ್ ಜಂಟಿಯಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಇತ್ತೀಚೆಗೆ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ರವಿಚಂದ್ರನ್‌, "ನನ್ನ ಹಾಗೂ ಹಂಸಲೇಖ ಅವರ ಕಾಂಬಿನೇಷನ್‌ನಲ್ಲಿ 'ಪ್ರೇಮಲೋಕ'ದಿಂದ ಹಿಡಿದು ನೂರಾರು ಸೂಪರ್ ಹಿಟ್ ಹಾಡುಗಳು ಬಂದಿವೆ. ನಮ್ಮಿಬ್ಬರ ಹಾಡುಗಳು ಅಂದು, ಇಂದು ಹಾಗೂ ಮುಂದೆಯೂ ಜನಪ್ರಿಯವಾಗಿರುತ್ತವೆ" ಎಂದು ಹೇಳಿದ್ದಾರೆ.

ʻಸರ್..‌ ಪೂಜೆಗೆ ಕಾಸಿಲ್ಲಾ.. 200 ರೂ. ಕೊಡಿʼ; ಅಂದು ರವಿಚಂದ್ರನ್‌ ಮಾಡಿದ್ದ ಸಹಾಯವನ್ನು ಸದಾ ನೆನೆಯುವ ನಟ ಜಗ್ಗೇಶ್‌!

"ನಾವು ಒಟ್ಟಿಗೆ ಸಿನಿಮಾ ಮಾಡದಿದ್ದರೂ, ಇಬ್ಬರ ಮನಸ್ಸಿನಲ್ಲೂ ಪರಸ್ಪರ ಗೌರವ ಸದಾ ಇರುತ್ತದೆ. ನಾವು ಒಂದೇ ದೇಹ ಎರಡು ಜೀವ ಇದ್ದ ಹಾಗೆ. ಈ ಸಮಾರಂಭಕ್ಕೆ ಬರುವಂತೆ ನಾನು ಅಭಿಮಾನಿಗಳನ್ನು ಪ್ರತ್ಯೇಕವಾಗಿ ಆಹ್ವಾನಿಸುವುದಿಲ್ಲ, ಅವರು ಬಂದೇ ಬರುತ್ತಾರೆ ಎಂಬ ನಂಬಿಕೆ ನನಗಿದೆ" ಎಂದು ರವಿಚಂದ್ರನ್‌ ಹೇಳಿದರು.

ಅಂದು ಕನಸುಗಾರ, ಇಂದು ಮಾತುಗಾರ: ಹಂಸಲೇಖ

ನಾದಬ್ರಹ್ಮ ಹಂಸಲೇಖ ಮಾತನಾಡಿ, "ಆಯೋಜಕರು ಮಾಡುತ್ತಿರುವ ಈ ಕಾರ್ಯಕ್ರಮ ಎಲ್ಲರಿಗೊಂದು ಇವೆಂಟ್ ಆದರೆ, ನಮ್ಮಿಬ್ಬರಿಗೆ ಇದೊಂದು ದೊಡ್ಡ ವಿದ್ಯಮಾನ. ನಮ್ಮ ಯಜಮಾನರು (ರವಿಚಂದ್ರನ್) ಅಂದು ಕನಸುಗಾರರಾಗಿದ್ದರು, ಇಂದು ಅದ್ಭುತ ಮಾತುಗಾರರಾಗಿದ್ದಾರೆ. ಕಾರ್ಯಕ್ರಮದ ನಿಮಿತ್ತ ಹಾಕಲಾಗಿರುವ ನಮ್ಮಿಬ್ಬರ ಕಟೌಟ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿರುವ ಪ್ರೋಮೋಗಳು ಅದ್ಭುತವಾಗಿ ಮೂಡಿಬಂದಿದ್ದು, ಕಾರ್ಯಕ್ರಮ ಬಹಳ ಯಶಸ್ವಿಯಾಗಲಿದೆ" ಎಂದು ಹಾರೈಸಿದರು.

Sathish Ninasam: ಸದ್ದು ಮಾಡಿದ ʻದಿ ರೈಸ್‌ ಆಫ್‌ ಅಶೋಕʼ ಟ್ರೇಲರ್;‌ ಸಿನಿಪ್ರೇಮಿಗಳಿಗೆ ರವಿಚಂದ್ರನ್‌ ಕೊಟ್ರು ನೋಡಿ ಬೊಂಬಾಟ್‌ ಸಲಹೆ

80 ಅಡಿ ಕಟೌಟ್ ಅನಾವರಣ: ಆಯೋಜಕ ವಿನಯ್ ಮಾಹಿತಿ

ಕಾರ್ಯಕ್ರಮದ ರೂವಾರಿ ವಿನಯ್ ಮಾತನಾಡಿ, "ಮೇ 30 ರ ಸಂಜೆ 6 ಗಂಟೆಗೆ ಜೆಕೆ ಗ್ರಾಂಡ್ ಅರೇನಾದಲ್ಲಿ 4 ಗಂಟೆಗಳ ಕಾಲ ಈ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಸ್ಯಾಂಡಲ್‌ವುಡ್‌ನ ಪ್ರಮುಖ ಕಲಾವಿದರು ಭಾಗಿಯಾಗಲಿದ್ದಾರೆ. ಸಾರ್ವಜನಿಕರಿಗೆ ಹೊರೆಯಾಗದಂತೆ ಟಿಕೆಟ್ ದರ ನಿಗದಿಪಡಿಸಲಾಗಿದ್ದು, 'ಬುಕ್ ಮೈ ಶೋ'ನಲ್ಲಿ ಟಿಕೆಟ್‌ಗಳು ಲಭ್ಯವಿವೆ. ಸುಮಾರು 8 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಸಮಾರಂಭದ ಪೂರ್ವಭಾವಿಯಾಗಿ ಇಬ್ಬರದ್ದೂ 80 ಅಡಿಯ ಬೃಹತ್ ಕಟೌಟ್ ಅನಾವರಣ ಮಾಡಲಾಗಿದೆ. ವಿಶೇಷವೆಂದರೆ, ಅಂದು ರವಿಚಂದ್ರನ್ ಅವರ ಹುಟ್ಟುಹಬ್ಬವಿದ್ದು, ವೇದಿಕೆಯ ಮೇಲೆ ಯಾರಿಗೂ ಪ್ರವೇಶವಿಲ್ಲದ ಕಾರಣ ಅಭಿಮಾನಿಗಳು ದಯವಿಟ್ಟು ಶಾಲು, ಕೇಕ್ ಅಥವಾ ಹಾರಗಳನ್ನು ತರಬಾರದು" ಎಂದು ಮನವಿ ಮಾಡಿದರು.