ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ; ಹೊಸಪೇಟೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ
Congress Protest: ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಹೊಸಪೇಟೆ ಮತ್ತು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಹೊಸಪೇಟೆ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ರವಿಕುಮಾರ್ ಅವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
-
ಹೊಸಪೇಟೆ, ಅ.12: ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಹೊಸಪೇಟೆ ಮತ್ತು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿ (Vijayanagara News) ಪ್ರತಿಭಟನೆ ನಡೆಸಿದರು. ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ನಗರದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ದೇಶದ ಚುನಾವಣಾ ಆಯೋಗವು ಸ್ವತಂತ್ರ ನಿಸ್ಪಕ್ಷಪಾತ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕಾದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾಗಿದೆ. ಆದರೆ ಇತ್ತೀಚಿನ ವಿದ್ಯಮಾನಗಳು ಹಾಗೂ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ನಿರ್ಧಾರಗಳು ಚುನಾವಣೆ ವ್ಯವಸ್ಥೆ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಕುಸಿಯುವಂತೆ ಮಾಡಿದೆ ಎಂದು ಪ್ರತಿಭಟನಾಕಾರರು ದೂರಿದರು.
ಬಿ.ಜೆ.ಪಿ. ಕೆಲವು ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಉದ್ದೇಶ ಪೂರ್ವಕವಾಗಿ ಸರಿ ಸುಮಾರು 13 ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಚುನಾವಣೆಗಳನ್ನು ಗೆಲ್ಲಲು ಸಂಚು ರೂಪಿಸಿ ಕೇಂದ್ರದಲ್ಲಿ ಬಿ.ಜೆ.ಪಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವ ಕಾರಣಕ್ಕೆ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಯಲು ಜ್ಞಾನೇಶ್ ಕುಮಾರ್ ತಕ್ಷಣವೇ ಚುನಾವಣಾ ಆಯುಕ್ತರ ಹುದ್ದೆಗೆ ರಾಜೀನಾಮೆ ನೀಡಬೇಕು. ಎಸ್‌ಐಆರ್ ಪ್ರಕ್ರಿಯೆಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ನಿಷ್ಪಕ್ಷಪಾತ ಮತ್ತು ನ್ಯಾಯ ಸಮ್ಮತ ಚುನಾವಣೆಗಳೂ ಪ್ರಜಾಪ್ರಭುತ್ವದ ಜೀವಾಳವಾಗಿದೆ. ಆದ್ದರಿಂದ ಈ ವಿಷಯದ ಗಂಭೀರತೆಯನ್ನು ಪರಿಗಣಿಸಿ, ದೇಶದ ಸಾಂವಿಧಾನಿಕ ಮುಖ್ಯಸ್ಥರಾಗಿ ನೀವು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗೌರವಪೂರ್ವಕವಾಗಿ ವಿನಂತಿಸುತ್ತೇನೆ ಎಂದು ಮನವಿಮಾಡಿದರು.
ಹುದ್ದೆ ಬಿಡುವವರೆಗೂ ನಿದ್ದೆ ಮಾಡದಂತೆ ಮಾಡುತ್ತೇವೆ: ಜ್ಞಾನೇಶ್ ಕುಮಾರ್‌ಗೆ ರಾಹುಲ್ ಗಾಂಧಿ ಎಚ್ಚರಿಕೆ
ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ರವಿಕುಮಾರ್‌ರವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಮಲಾಪುರ ಬ್ಲಾಕ್ ಅಧ್ಯಕ್ಷ ಅಲ್ಲಾಭಕ್ಷಿ, ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಡಿ. ವೆಂಕಟರಮಣ, ಪ.ಜಾ. ಜಿಲ್ಲಾಧ್ಯಕ್ಷ ಸೋಮಶೇಖರ್ ಬಣ್ಣದಮನೆ, ನಗರಸಭೆ ಸದಸ್ಯ ಕೆ. ಮಹೇಶ್, ಮಹಿಳಾ ಘಟಕದ ಅಧ್ಯಕ್ಷೆ ಯೋಗಲಕ್ಷ್ಮೀ, ವಕೀಲ ಕೆ.ಮಹೇಶ್, ಮುಖಂಡರಾದ ಬಡಾವಲಿ, ಪಲ್ಲೆದ ಸಿದ್ದೇಶ್, ಕಾರಿಗನೂರು ಯರ‍್ರಿಸ್ವಾಮಿ, ಸಣ್ಣಮಾರೆಪ್ಪ, ಅನಿತಾ.ಎಸ್. ಗಿಂಜಿಮಂಜುನಾಥ, ಗುಜ್ಜಲ್ ನಿಂಗಪ್ಪ, ಯುವ ಕಾಂಗ್ರೆಸ್ ಸಮಿತಿ ಬ್ಲಾಕ್ ಅಧ್ಯಕ್ಷ ಪ್ರದೀಪ್‌ನಾಯ್ಕ್, ಯುವ ಕಾಂಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಶಿವಕುಮಾರ್, ರಾಜಸಾಬ್, ರಾಘವೇಂದ್ರ ಇತರರಿದ್ದರು.