#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Hampi Utsav 2025: ಫೆ. 28ರಿಂದ ಹಂಪಿ ಉತ್ಸವ; 4 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ: ಡಿಸಿ ದಿವಾಕರ್ ಮಾಹಿತಿ

ಫೆ. 28, ಮಾ. 1 ಮತ್ತು 2 ಸೇರಿ 3 ದಿನಗಳ ಹಂಪಿ ಉತ್ಸವಕ್ಕೆ ಈಗಾಗಲೇ ವಿಜಯನಗರ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಆರಂಭಿಸಿದೆ. ಹಂಪಿ ಉತ್ಸವದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಬಾರಿಯ ಉತ್ಸವದಲ್ಲಿ ಸುಮಾರು 4 ಲಕ್ಷ ಜನ ಪಾಲ್ಗೊಳ್ಳಲುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದ್ದಾರೆ.

ಫೆ. 28ರಿಂದ ಹಂಪಿ ಉತ್ಸವ: ಸಿದ್ಧತೆ ಪರಿಶೀಲಿಸಿದ ಡಿಸಿ

ಹಂಪಿ ಉತ್ಸವ -2025ರ ಸಿದ್ಧತೆಗಳನ್ನು ಡಿಸಿ ಎಂ.ಎಸ್. ದಿವಾಕರ್‌ ವೀಕ್ಷಿಸಿದರು.

Profile Siddalinga Swamy Feb 12, 2025 9:21 PM

ವಿಜಯನಗರ: ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಾಗೂ ಪ್ರವಾಸೋದ್ಯಮ ಅಭಿವೃದ್ದಿ ನಿಟ್ಟಿನಲ್ಲಿ ಹಂಪಿ ಉತ್ಸವ -2025 (Hampi Utsav 2025) ಆಯೋಜನೆಗೆ ಸರ್ಕಾರ ಸಮ್ಮತಿ ನೀಡಿದೆ. ಫೆ. 28, ಮಾ. 1 ಮತ್ತು 2 ಸೇರಿ 3 ದಿನಗಳ ಉತ್ಸವಕ್ಕೆ ಈಗಾಗಲೇ ವಿಜಯನಗರ ಜಿಲ್ಲಾಡಳಿತ ವತಿಯಿಂದ ಸಕಲ ಸಿದ್ಧತೆಯನ್ನು ಆರಂಭಿಸಲಾಗಿದೆ. ಗಾಯಿತ್ರಿ ಪೀಠದ ಬಳಿಯ 5 ಎಕರೆ ವಿಶಾಲ ಪ್ರದೇಶದಲ್ಲಿ 120 X 80 ಅಡಿ ವಿಸ್ತಿರ್ಣದಲ್ಲಿ ಹಂಪಿಯ ಸ್ಮಾರಕವನ್ಮು ಪ್ರತಿಬಿಂಬಿಸುವ ಪ್ರಧಾನ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಮಾಜಿ ಉಪ ಮುಖ್ಯಮಂತ್ರಿ, ಹಂಪಿ ಉತ್ಸವದ ರುವಾರಿ ಎಂ.ಪಿ.ಪ್ರಕಾಶ್ ಹೆಸರನ್ನು ಪ್ರಧಾನ ವೇದಿಕೆಗೆ ಇಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.

ಬುಧವಾರ ಹಂಪಿಯ ಗಾಯಿತ್ರಿ ಪೀಠದ ಬಳಿಯ ಮೈದಾನದಲ್ಲಿ ಹಂಪಿ ಉತ್ಸವ-2025ರ ಸಿದ್ಧತೆಗಳನ್ನು ವೀಕ್ಷಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರತಿ ವರ್ಷದಂತೆ ಈ ಬಾರಿಯೂ 4 ಪ್ರಮುಖ ಸ್ಥಳಗಳಲ್ಲಿ ವೇದಿಕೆಗಳನ್ನು ನಿರ್ಮಿಸಲಾಗುವುದು. 1 ಕಡೆ ಧ್ವನಿ ಬೆಳಕು ಪ್ರದರ್ಶನ ನಡೆಯಲಿದೆ. ಗಾಯಿತ್ರಿ ಪೀಠದ ಬಳಿ ಇರುವ ಸುಮಾರು ಐದು ಎಕರೆ ಮೈದಾನದಲ್ಲಿ 120 X 80 ಅಡಿ ಪ್ರಧಾನ ವೇದಿಕೆ ನಿರ್ಮಿಸಲಾಗುವುದು. ಸಾರ್ವಜನಿಕರಿಗೆ ಸುಮಾರು 70 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುವುದು. ಇದರೊಂದಿಗೆ ಎದುರು ಬಸವಣ್ಣ ಮಂಟಪದ ಆವರಣ, ವಿರೂಪಾಕ್ಷ ದೇವಸ್ಥಾನ, ಸಾಸಿವೆ ಕಾಳು ಗಣಪ ಮಂಟಪದ ಬಳಿ ಸಮಾನಂತರ ವೇದಿಕೆಗಳನ್ನು ನಿರ್ಮಿಸಲಾಗುವುದು. ಈ ವೇದಿಕೆಗಳಲ್ಲಿ ನಾಡಿನ ಹೆಸರಾಂತ ಕಲಾವಿದರು ಶಾಸ್ತ್ರೀಯ ಹಾಗೂ ಜಾನಪದ ಕಲೆಗಳನ್ನು ಅನಾವರಣಗೊಳಿಸಲಿದ್ದಾರೆ. ವಿರೂಪಾಕ್ಷ ದೇವಸ್ಥಾನ ವೇದಿಕೆಯಲ್ಲಿ ಮಹಿಳಾ ಗೋಷ್ಠಿ, ಕವಿಗೋಷ್ಠಿ, ಹಂಪಿ ಇತಿಹಾಸ ಸಾರುವ ಗೋಷ್ಠಿಗಳನ್ನು ಆಯೋಜಿಸಲಾಗುವುದು. ಕಳೆದ ಮೂರು ಬಾರಿ ಹಂಪಿ ಉತ್ಸವದಲ್ಲಿ ಭಾಗವಹಿಸಿ ಪ್ರದರ್ಶನ ನೀಡದೆ ಇರುವ ಕಲಾವಿದರು ಹಾಗೂ ಸ್ಥಳೀಯ ಕಲಾವಿದರಿಗೆ ಈ ಬಾರಿಯ ಉತ್ಸವದಲ್ಲಿ ಆದ್ಯತೆ ನೀಡಲಾಗುವುದು. ಆನೆಲಾಯದ ಬಳಿ ಧ್ವನಿ ಬೆಳಕು ಪ್ರದರ್ಶನಕ್ಕೆ ಭಾರತೀಯ ಪುರತತ್ವ ಇಲಾಖೆ ಅನುಮತಿ ನೀಡಿದೆ. ಉತ್ಸವ ಆರಂಭಕ್ಕೂ 3 ದಿನ ಮುನ್ನ ಹಾಗೂ ನಂತರ 7 ದಿನಗಳ ಕಾಲ ಧ್ವನಿ ಬೆಳಕು ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆ

ಹಂಪಿ ಉತ್ಸವದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಉತ್ಸವ ಆರಂಭದ ಎರಡು ದಿನ ಮುನ್ನ ತುಂಗಭದ್ರಾ ನದಿ ತಟದಲ್ಲಿ ತುಂಗಾರತಿ ಮಾಡಲಾಗುವುದು. ಒಂದು ದಿನ ಮುನ್ನ ಹೊಸಪೇಟೆ ನಗರದಲ್ಲಿ ವಸಂತ ವೈಭವ ಮೆರವಣಿಗೆ ನಡೆಯಲಿದೆ. ಉತ್ಸವದ ಮೊದಲ ದಿನ ಉದ್ದಾನ ವೀರಭದ್ರ ಮಂದಿರದಿಂದ ವಿರೂಪಾಕ್ಷ ಮಂದಿರದವರೆಗೆ ಜನಪದ ಮೆರವಣಿಗೆ ನಡೆಯಲಿದೆ. ಹಂಪಿ ಬೈ ಸ್ಕೈ ವಿಶೇಷವಾಗಿದ್ದು, ಹೆಲಿಕಾಪ್ಟರ್ ಏರಿ ಆಗಸದಿಂದ ಹಂಪಿ ವೈಭವವನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದು. ಇದರೊಂದಿಗೆ ಶ್ವಾನ, ಕುರಿ ಪ್ರದರ್ಶನ ಸ್ಪರ್ಧೆ, ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ಮಾತಂಗ ಪರ್ವತ ಮೈದಾನದಲ್ಲಿ ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುವುದು. ಇಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಂದ ವಿಶೇಷ ಪ್ರದರ್ಶನ ಏರ್ಪಡಿಸಲಾಗುತ್ತದೆ. ಈ ಬಾರಿ ವಿಜಯ ವಿಠಲ ಮಂದಿರದ ಆವರಣದಲ್ಲಿ ಉತ್ಸವ ಎರಡನೇ ದಿನ ಮುಂಜಾನೆ ಸಾಮೂಹಿಕ ಯೋಗಾಭ್ಯಾಸ ಆಯೋಜನೆಗೆ ಚಿಂತನೆ ನಡೆಸಲಾಗಿದೆ. ಹಂಪಿ ಉತ್ಸವದ ಕುರಿತು ಪ್ರಚಾರ ನಡೆಸುವ ದೃಷ್ಟಿಯಿಂದ ಹವ್ಯಾಸಿ ಬೈಕ್ ರೈಡರ್ ತಂಡವೊಂದು ಬೆಂಗಳೂರಿನಿಂದ ಹಂಪಿವರೆಗೆ ಬೈಕ್ ರ‍್ಯಾಲಿ ನಡೆಸಲಿದೆ ಎಂದು ಮಾಹಿತಿ ನೀಡಿದರು.

100 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ

ಈ ಬಾರಿಯ ಹಂಪಿ ಉತ್ಸವದಲ್ಲಿ ಸುಮಾರು 4 ಲಕ್ಷ ಜನ ಪಾಲ್ಗೊಳ್ಳಲುವ ನಿರೀಕ್ಷೆಯಿದೆ. ಪ್ರಧಾನ ವೇದಿಕೆ ಹಾಗೂ ಸಮಾನಾಂತರ ವೇದಿಕೆಗಳಿಗೆ ಹತ್ತಿರದ 100 ಎಕರೆ ಜಾಗದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ರೈತರು ಸಂತಸದಿಂದ ಪಾರ್ಕಿಂಗ್‌ಗೆ ಜಮೀನು ನೀಡಿದ್ದಾರೆ. ಉತ್ಸವಕ್ಕೆ ಆಗಮಿಸುವ ಜನರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮೊದಲ ದಿನ ಸಾರ್ವಜನಿಕರು ಉತ್ಸವಕ್ಕೆ ಆಗಮಿಸಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲಾ ಗ್ರಾಮಗಳಿಂದ ಸುಮಾರು 250 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಉತ್ಸವ ನಡೆಯುವ ಮೂರು ದಿನಗಳ ಕಾಲ ಹೊಸಪೇಟೆ ನಗರದ ಬಸ್ ನಿಲ್ದಾಣದಿಂದ 40 ಬಸ್‌ಗಳು ಹಂಪಿಗೆ ಸರತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸುತ್ತವೆ ಎಂದರು.

20 ಕೋಟಿ ರೂ. ಅನುದಾನಕ್ಕೆ ಬೇಡಿಕೆ

ಹಂಪಿ ಉತ್ಸವ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆಗಮಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ಝಡ್. ಜಮೀರ್ ಅಹಮದ್ ಖಾನ್ ಸೇರಿದಂತೆ ಹಲವು ಸಚಿವರು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಇಂಡಿಯಾ ಗಾಟ್ ಟ್ಯಾಲೆಂಟ್ ಟಿವಿ ಕಾರ್ಯಕ್ರಮದಲ್ಲಿ ಪ್ರಖ್ಯಾತರಾದ ಕಲಾವಿದರನ್ನು ಉತ್ಸವಕ್ಕೆ ಕರೆ ತರಲು ಮಾತುಕತೆ ನಡೆಸಲಾಗುತ್ತದೆ. ನಾಡಿನ ಹೆಸರಾಂತ ಕಲಾವಿದರು, ಚಿತ್ರನಟರನ್ನು ಸಹ ಉತ್ಸವಕ್ಕೆ ಆಹ್ವಾನಿಸಲಾಗುವುದು. ಉತ್ಸವ ಆಯೋಜನೆಗೆ 20 ಕೋಟಿ ರೂ. ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Pralhad Joshi: ರಾಜ್ಯ ಶೇಂಗಾ ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ- ಬೆಂಬಲ ಬೆಲೆಯಲ್ಲಿ ಖರೀದಿ ಅವಧಿ ವಿಸ್ತರಣೆ

ಪ್ರಧಾನ ವೇದಿಕೆ ವಿನ್ಯಾಸವನ್ನು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಂತಿಮ ಗೊಳಿಸಲಾಗುವುದು. ಪ್ರದರ್ಶನ ಮಳಿಗೆಗಳ ಬಾಡಿಗೆಯನ್ನು 3,000 ರೂ.ಗೆ ಅಂತಿಮಗೊಳಿಸುವುದಾಗಿ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ತಿಳಿಸಿದರು.