ಹೊಸಪೇಟೆ: ಪತಂಜಲಿ ಯೋಗ ಸಮಿತಿಯಿಂದ ನಗರದ ಬಲ್ಡೋಟ ಪಾರ್ಕ್ ನಲ್ಲಿ ಆಯೋಜಿಸಿದ್ದ ಬೀಜದ ಉಂಡೆ ತಯಾರಿಸಿ, ಜೋಳದ ರಾಶಿ ಗುಡ್ಡದಲ್ಲಿ ಹಾಕುವ ಬೀಜ ಸಿಂಪರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಎಂ ಎಸ್ ಪಿ ಎಲ್ ಸಂಸ್ಥೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ನರೇಂದ್ರಕುಮಾರ್ ಬಲ್ಡೋಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪತಂಜಲಿ ಯೋಗ ಸಮಿತಿಯು ಹೊಸಪೇಟೆಯಲ್ಲಿ ಉತ್ತಮ ಕಾರ್ಯಯಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಯೋಗ ಕೇಂದ್ರ ಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿಕೊಂಡು ಬರುತ್ತಿದ್ದು ನಗರದ ನಾಗರಿಕರ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದರು.
ಪರಿಸರ ಚೆನ್ನಾಗಿದ್ದಷ್ಟು ನಾವು ಚೆನ್ನಾಗಿರಲು ಸಾಧ್ಯ. ಹೊಸಪೇಟೆ ನಗರ ಈ ಹಿಂದೆ ಹೆಚ್ಚಿನ ತಾಪಮಾನ ಹೊಂದಿದ ಪ್ರದೇಶ ಎಂದೇ ಗುರುತಿಸಲಾಗಿತ್ತು. ಆದರೆ ಎಂ ಎಸ್ ಪಿ ಎಲ್ ಸಂಸ್ಥೆಯು ಹೊಸಪೇಟೆ, ಕೊಪ್ಪಳ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಿಕೊಂಡು ಬಂದಿದ್ದು ನಗರದಲ್ಲಿ ತಾಪಮಾನ ಕಡಿಮೆಯಾಗಿದೆ ಎಂದರು.
ಇದನ್ನೂ ಓದಿ: Asia Cup 2025: ತಮ್ಮ ನೆಚ್ಚಿನ ಇಬ್ಬರು ಕ್ರಿಕೆಟಿಗರನ್ನು ಬಹಿರಂಗಪಡಿಸಿದ ಶುಭಮನ್ ಗಿಲ್!
ಆದರೂ ಮತ್ತಷ್ಟು ಗಿಡ ನೆಡುವ ಅವಶ್ಯಕತೆ ಇದೆ, ಈ ನಿಟ್ಟಿನಲ್ಲಿ ಪತಂಜಲಿ ಯೋಗ ಸಮಿತಿಯು ಹತ್ತು ಸಾವಿರಕ್ಕೂ ಹೆಚ್ಚು ಬೀಜ ಉಂಡೆಗಳನ್ನು ತಯಾರಿಸಿ ಜೋಳದ ರಾಶಿ ಗುಡ್ಡದಲ್ಲಿ ಹಾಕುವು ದರ ಮೂಲಕ ಪರಿಸರಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ. ಬೀಜದ ಉಂಡೆಗಳು ಮಳೆ ಬಂದಾಗ ಮೊಳಕೆಯೊಡೆದು ಹುಟ್ಟುತ್ತವೆ, ಇದರಿಂದ ಸಸಿಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪರಿಸರವಾದಿ ಪ್ರಭಾಕರ ಮಾತನಾಡಿ, ಪರಿಸರಕ್ಕೆ ಬಲ್ಡೋಟ ಸಂಸ್ಥೆಯಿಂದ ಅದ್ಭುತವಾದ ಕೊಡುಗೆ ಇದೆ. ಎಷ್ಟೋ ಉದ್ಯಮಿಗಳು ಶ್ರೀಮಂತರಾಗಿದ್ದರು ಸಹ ಪರಿಸರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಆದರೆ ಎಂ.ಎಸ್.ಪಿ.ಎಲ್ ಸಂಸ್ಥೆಯು ಪರಿಸರಕ್ಕೆ ಅತ್ಯಂತ ಹೆಚ್ಚಿನ ಮಹತ್ವ ನೀಡುತ್ತ ಬಂದಿದೆ. ಹೊಸಪೇಟೆ ನಗರವು ಗ್ರೀನ್ ಹೊಸಪೇಟೆ ಆಗಿದೆ ಎಂದರೆ ಅದಕ್ಕೆ ಬಲ್ಡೋಟ ಸಂಸ್ಥೆಯೇ ಕಾರಣ. ಇಂತಹ ಸಂಸ್ಥೆ ಇದ್ದರೇನೇ ಪರಿಸರ ಮತ್ತು ಸಮಾಜ. ಈಗಾಗಲೇ ಸಾವಿರಾರು ಗಿಡಗಳನ್ನು ವಿಜಯನಗರ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ನೆಟ್ಟು ಪೋಷಿಸುತ್ತಾ ಬಂದಿದೆ. ಇಂತಹ ಬಟ ಸಂಸ್ಥೆ ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಬಲ್ಡೋಟ ಪಾರ್ಕ್ ಪತಂಜಲಿ ಯೋಗ ಸಮಿತಿಯ ಸಂಚಾಲಕ ಮತ್ತು ಯೋಗ ಮಿತ್ರ ಶ್ರೀನಿವಾಸ ಮಂಚಿಕಂಟಿ ಮಾತನಾಡಿ, ನಮ್ಮ ಯೋಗ ಪರಿವಾರದವರಿಂದ ಇದೊಂದು ಪರಿಸರ ಕಾಳಜಿಯ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭೂಪಾಳ್ ರಾಘವೇಂದ್ರ ಶೆಟ್ಟಿ, ಗೊಗ್ಗ ಚನ್ನಬಸವರಾಜ, ಅಶ್ವಿನ್ ಕೊತಂಬರಿ, ಕಾಕುಬಾಳ್ ರಾಜೇಂದ್ರ, ಸಾಲಿ ಬಸವರಾಜ್, ಕಿರಣ್ ಕುಮಾರ್, ಅನಂತ ಜೋಶಿ ಮತ್ತು ಪತಂಜಲಿ ಯೋಗ ಪರಿವಾರದವರು ಉಪಸ್ಥಿತರಿದ್ದರು.