ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

World Record: 422 ವಸ್ತು ಗುರುತಿಸಿ ʼನೊಬೆಲ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ʼ ಪುಟ ಸೇರಿದ ವಿಜಯಪುರದ 9 ತಿಂಗಳ ಮಗು!

World Record: ವಿಜಯಪುರ ನಗರದ 9 ತಿಂಗಳ ಹೆಣ್ಣು ಮಗು, ವಿಶ್ವದಾಖಲೆ ಮಾಡುವ ಮೂಲಕ ವಯಸ್ಸಿಗೂ ಮೀರಿದ ಸಾಧನೆ ಮಾಡಿದ್ದಾಳೆ. ಈಕೆಯ ಸಾಧನೆಗೆ ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದ್ದಾರೆ.

422 ವಸ್ತು ಗುರುತಿಸಿ ವಿಶ್ವದಾಖಲೆ ನಿರ್ಮಿಸಿದ 9 ತಿಂಗಳ ಮಗು!

Profile Prabhakara R Feb 9, 2025 2:05 PM

ವಿಜಯಪುರ: 422 ವಸ್ತುಗಳನ್ನು ಗುರುತಿಸುವ ಮೂಲಕ ವಿಜಯಪುರದ 9 ತಿಂಗಳ ಹೆಣ್ಣು ಮಗು, ವಿಶ್ವದಾಖಲೆ (World Record) ಮಾಡಿದ್ದಾಳೆ. ತಾಯಿಯ ಮಾರ್ಗದರ್ಶನದಲ್ಲಿ ಮಗು ಸಾಧನೆ ಮಾಡಿದ್ದು, ಹಾಲುಗಲ್ಲದ ಕಂದಮ್ಮನ ಸಾಧನೆಗೆ ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದ್ದಾರೆ. ವಿಜಯಪುರ ನಗರದ 9 ತಿಂಗಳ ಪೋರಿ ಐರಾ, ಒಟ್ಟು 422 ವಸ್ತುಗಳನ್ನು ಗುರುತಿಸುವ ಮೂಲಕ ʼನೊಬೆಲ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ʼ (Nobel Book of World Records) ಪುಟ ಸೇರಿದ್ದಾಳೆ. ನಗರದ ಪಾಟೀಲ್ ಪ್ಲಾನೇಟ್ ಅಪಾರ್ಟ್‌ಮೆಂಟ್ ನಿವಾಸಿ ದೀಪಕ್ ಹಾಗೂ ಅನುಷಾ ದಂಪತಿಯ ಪುತ್ರಿ ಐರಾ ಸಾಧನೆ ಎಲ್ಲರನ್ನೂ ಬೆರಗಾಗಿಸುತ್ತಿದೆ.

ವಿಜಯಪುರ ನಗರದ 9 ತಿಂಗಳ ಪೋರಿ ಐರಾ, ವಿಶ್ವದಾಖಲೆ ಮಾಡುವ ಮೂಲಕ ವಯಸ್ಸಿಗೂ ಮೀರಿದ ಸಾಧನೆ ಮಾಡಿದ್ದಾಳೆ. ಐರಾಳಿಗೆ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು. ಹುಟ್ಟಿದ ಕೆಲ ವಾರಗಳಲ್ಲೇ ಎಲ್ಲವನ್ನೂ ಗುರುತು ಹಿಡಿಯೋದನ್ನು ಗಮನಿಸಿದ ಅನುಷಾ ತನ್ನ ಮಗಳಿಗೆ ಏನೋ ವಿಶೇಷ ಸಾಮರ್ಥ್ಯವಿದೆ ಎಂದು ಮನಗಂಡಿದ್ದರು. ಐರಾಳ ಬುದ್ಧಿಮತ್ತೆ, ನೆನಪಿನ ಶಕ್ತಿ, ಗ್ರಹಣ ಶಕ್ತಿಗಳನ್ನು ಗುರುತಿಸಿ ಐರಾಗೆ ಪೂರಕವಾಗಿ ಕಲಿಕೆ ಮಾಡಿಸುತ್ತಾ, ಕಲಿಕೆ ಜತೆಗೆ ತರಬೇತಿಯನ್ನು ನೀಡ ತೊಡಗಿದರು.

ಐರಾಗೆ 9 ತಿಂಗಳು ಆಗಿದ್ದ ವೇಳೆ 24 ಹಣ್ಣುಗಳು, 20 ಸಾಕು ಪ್ರಾಣಿಗಳು, 24 ಸಾರಿಗೆ ವಿಧಾನಗಳು, 24 ದೇಹದ ಭಾಗಗಳು, 24 ತರಕಾರಿಗಳು, 24 ಪಕ್ಷಿಗಳು, 13 ಆಕಾರಗಳು, 11 ಬಣ್ಣಗಳು, ಇಂಗ್ಲಿಷ್ ವರ್ಣಮಾಲೆ, 24 ಸಂಖ್ಯೆಗಳು, 48 ಏಷ್ಯನ್ ದೇಶಗಳ ಧ್ವಜಗಳು, 28 ಸ್ವಾತಂತ್ರ್ಯ ಹೋರಾಟಗಾರರು, 24 ಹೂವುಗಳು, 24 ಕಾರ್ಯಗಳು, 12 ಸಮುದ್ರ ಜೀವಿಗಳು, 12 ಸಮುದಾಯ ಕಾರ್ಯಕರ್ತರು, 12 ವೃತ್ತಿಪರರು, 12 ಭಾರತದ ಪ್ರಸಿದ್ಧ ಸ್ಥಳಗಳು, 12 ಮನೆಯಲ್ಲಿರುವ ವಸ್ತುಗಳು, 24 ಕಾಡು ಪ್ರಾಣಿಗಳನ್ನು ಐರಾ ಗುರುತಿಸುತ್ತಾಳೆ. ಈ ಮೂಲಕ ಪುಟ್ಟ ಬಾಲೆ ಒಟ್ಟು 422 ವಸ್ತುಗಳನ್ನು ಗುರುತಿಸುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿದ್ಧಾಳೆ.

Nobel Book of World Records (1)

ಐರಾ ತಂದೆ-ತಾಯಿ ಆಕೆಯ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿ ನೊಬೆಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಗೆ ಕಳುಹಿಸಿದ್ದರು. ಕಳೆದ ನವೆಂಬರ್ ನಲ್ಲಿ ವಿಶ್ವ ದಾಖಲೆಗಾಗಿ ಅಪ್ಲೈ ಮಾಡಿದ್ದರು. ಎಲ್ಲಾ ಬಗೆಯ ಪರೀಕ್ಷೆಗಳನ್ನು ಮಾಡಿದ ಬಳಿಕ ನೊಬೆಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆ 2024ರ ಡಿ.26 ರಂದು ಪುಟ್ಟ ಬಾಲೆ ಐರಾಗೆ ಯಂಗೆಸ್ಟ್ ಚೈಲ್ಡ್ ಟು ಐಡೆಂಟಿಫೈ ದಿ ಮೋಸ್ಟ್ ನಂಬರ್ ಆಫ್ ಐಟಮ್ಸ್ ಆಟ್ ದಿ ಏಜ್ ಆಫ್ 9 ಮಂಥ್ಸ್ ಸರ್ಟಿಫಿಕೇಟ್ ನೀಡಿದೆ.

ದೀಪಕ್‌ ಹಾಗೂ ಅನುಷಾ ತಮ್ಮ ಮಗಳು ಐರಾ ನೊಬೆಲ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ ಮಾಡಿದ್ದರ‌ ಬಗ್ಗೆ ಕುರಿತು ಸಿಎಂ ಸಿದ್ಧರಾಮಯ್ಯ ಅವರಿಗೆ ಮೇಲ್ ಮೂಲಕ ಮಾಹಿತಿ ನೀಡಿದ್ದರು. ಅದನ್ನು ಗಮನಿಸಿ ಸಿಎಂ ಕರೆ ಮಾಡಿ, ಬೆಳಗಾವಿಯ ಚಳಿಗಾಲದ ಅಧಿವೇಶನದ ಸಮಯದಲ್ಲಿ ಬೆಳಗಾವಿಗೆ ಕರೆದು, ಮಗುವಿನ ಪ್ರತಿಭೆ ಕಂಡು ಆಕೆಗೆ ಸನ್ಮಾನಿಸಿ ಶುಭ ಹಾರೈಸಿದ್ದರು. ಇನ್ನು ವಿಜಯಪುರ ಜಿಲ್ಲಾಡಳಿತೂ ಐರಾಳ ಸಾಧನೆಗೆ ಸನ್ಮಾನಿಸಿದೆ.

Nobel Book of World Records (2)

ಸದ್ಯ 1 ವರ್ಷ ಒಂದು ವಾರ ಪ್ರಾಯದ ಪೋರಿ ಇದೀಗಾ 700 ವಿವಿಧ ಬಗೆಯ ಕಾರ್ಡ್ ಗಳನ್ನು ಗುರುತಿಸುತ್ತಾಳೆ. ಮುಂದೆ ಐರಾಳಿಗೆ ಗಣಿತ ವಿಷಯದಲ್ಲಿ ತರಬೇತಿಯನ್ನು ನೀಡಲು ಅನುಷಾ ನಿರ್ಧಾರ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ | Air Show: ನಾಳೆಯಿಂದ ಏರ್ ಶೋ-2025′ ಆರಂಭ ; ಟಿಕೆಟ್ ಬುಕ್ ಮಾಡಲು ಇಲ್ಲಿದೆ ಸುಲಭ ವಿಧಾನ

ನೊಬೆಲ್ ವರ್ಲ್ಡ್ ರೆಕಾರ್ಡ್ಸ್(ಎನ್‌ಡಬ್ಲ್ಯುಆರ್) ಸ್ವತಂತ್ರ, ಸರ್ಕಾರೇತರ ಸಂಸ್ಥೆಯಾಗಿದೆ. ವಿವಿಧ ದೇಶಗಳಲ್ಲಿ ನೋಂದಣಿಯಾಗಿ ಕಾರ್ಯನಿರ್ವಹಿಸುತ್ತಿದೆ. 2017ರಲ್ಲಿ ಆರಂಭವಾದ ಈ ಸಂಸ್ಥೆ ಜನರ ವೈಯಕ್ತಿಕ ಅತ್ಯುನ್ನತ ಗುಣಗಳ ಸಾಧನೆಗಳ ಗುರುತಿಸುವಿಕೆಯೇ ಧ್ಯೇಯವಾಗಿದೆ. ಈ ಸಾಧನೆಗಳನ್ನು ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಿಸುತ್ತದೆ.