ಏಳು ಬಾರಿ ಜನರ ಪ್ರೀತಿಯಿಂದ ಗೆದ್ದು ಬಂದಿರುವ ಯಶವಂತ್ ರಾಯಗೌಡ ಪಾಟೀಲ್ ಅವರು, ಇಂಡಿ ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳನ್ನು ಆದ್ಯತೆಯ ಮೇರೆಗೆ ಸಾಕಾರಗೊಳಿಸಿದ್ದಾರೆ. ಇನ್ನಷ್ಟು ಅಭಿವೃದ್ಧಿ ಸಾಧಿಸುವುದು ಅವರ ಗುರಿ.
ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕ ಹಾಗೂ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇಂಡಿ ಶಾಸಕ ಯಶವಂತ್ ರಾಯಗೌಡ ಪಾಟೀಲ್, ವಿಜಯಪುರ ಜಿಲ್ಲೆಯ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಾಯಕ. ಕ್ಷೇತ್ರದ ಅಭಿವೃದ್ಧಿ, ಸಚಿವ ಸ್ಥಾನದ ನಿರೀಕ್ಷೆ, ಉತ್ತರ ಕರ್ನಾಟಕದ ಸಮಸ್ಯೆಗಳು, ರಾಜ್ಯ ರಾಜಕೀಯ ಹಾಗೂ ಕಾಂಗ್ರೆಸ್‌ನ ಭವಿಷ್ಯದ ಕುರಿತು ಅವರು ‘ವಿಶ್ವವಾಣಿ’ಗೆ ನೀಡಿದ ವಿಶೇಷ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ನಿಮ್ಮ ರಾಜಕೀಯ ಪಯಣ ಹೇಗೆ ಆರಂಭವಾಯಿತು?
ನಮ್ಮದು ಕೃಷಿ ಆಧಾರಿತ ಹಾಗೂ ರಾಜಕೀಯ ಹಿನ್ನೆಲೆಯ ಕುಟುಂಬ. ನನ್ನ ತಂದೆ ವಿಠ್ಠಲ್ ಗೌಡ ಪಾಟೀಲ್ ಅವರ ಕಾಲದಿಂದಲೇ ಕಾಂಗ್ರೆಸ್ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿದ್ದೇವೆ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ತಾಲೂಕಿನಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಏಕೈಕ ಜಿಲ್ಲಾ ಪಂಚಾಯಿತಿ ಸದಸ್ಯರು ನನ್ನ ತಂದೆ. ಅವರಿಂದಲೇ ಸಾರ್ವಜನಿಕ ಜೀವನದ ಮೌಲ್ಯಗಳನ್ನು ಕಲಿತೆ. ನಾನು ನಾಲ್ಕು ಜಿಲ್ಲಾ ಪಂಚಾಯಿತಿ ಹಾಗೂ ನಾಲ್ಕು ವಿಧಾನಸಭೆ ಚುನಾವಣೆ ಸೇರಿದಂತೆ ಒಟ್ಟು ಎಂಟು ಚುನಾವಣೆಗಳನ್ನು ಎದುರಿಸಿದ್ದು, ಏಳು ಬಾರಿ ಜನರ ಆಶೀರ್ವಾದ ಪಡೆದಿದ್ದೇನೆ, ಜಯ ಗಳಿಸಿದ್ದೇನೆ. ಕಾಂಗ್ರೆಸ್ ನನ್ನ ರಾಜಕೀಯ ಜೀವನದ ಗುರುತು. ಕೊನೆಯ ಉಸಿರಿರುವವರೆಗೂ ಪಕ್ಷದೊಂದಿಗೇ ಇರುತ್ತೇನೆ.
ಕ್ಷೇತ್ರದ ಅಭಿವೃದ್ಧಿಯಲ್ಲಿ ನಿಮ್ಮ ಪ್ರಮುಖ ಸಾಧನೆಗಳೇನು?
ಶಾಸಕನಾಗಿ ಅಧಿಕಾರಕ್ಕೆ ಬಂದ ನಂತರ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ರು.3300 ಕೋಟಿ ವೆಚ್ಚದ ಶ್ರೀ ಗುರು ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಕ್ಷೇತ್ರದ ರೈತರ ಬದುಕನ್ನೇ ಬದಲಾಯಿಸುವ ಯೋಜನೆಯಾಗಿದೆ. ಮೊದಲ ಹಂತದ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಹಂತಗಳ ಕಾಮಗಾರಿಯೂ ವೇಗವಾಗಿ ಸಾಗುತ್ತಿದೆ.
ಇದನ್ನೂ ಓದಿ: Indi News: ದೇಶ ಸೇವೆ ಮಾಡುವುದು ಪವಿತ್ರವಾದ ಕಾರ್ಯ
ನಾಲ್ಕು ದಶಕಗಳ ಕನಸಾಗಿದ್ದ ಶ್ರೀ ಭೀಮಾಶಂಕರ್ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಿದೆ. ಇದರಿಂದ ಸಾವಿರಾರು ರೈತರಿಗೆ ಅನುಕೂಲವಾಗಲಿದೆ. ನಮ್ಮ ಭಾಗದ ನಿಂಬೆ ಬೆಳೆಗೆ ಅಂತರ ರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ‘ಜಿಐ ಟ್ಯಾಗ್’ ದೊರಕುವಂತೆ ಮಾಡಿದ್ದೇವೆ. ಇದು ರೈತರ ಆದಾಯ ಹೆಚ್ಚಿಸಲು ನೆರವಾಗಲಿದೆ. ಒಂದು ಕಾಲದಲ್ಲಿ ಟ್ಯಾಂಕರ್ ನೀರಿಗಾಗಿ ಕಾಯುತ್ತಿದ್ದ ಹಳ್ಳಿಗಳಲ್ಲಿ ಇಂದು ಕುಡಿಯುವ ನೀರಿನ ಸಮಸ್ಯೆ ಬಹುತೇಕ ನಿವಾರಣೆಯಾಗಿದೆ. ಇಂಡಿ ನಗರಕ್ಕೆ ಭೀಮಾ ನದಿಯಿಂದ 24 ಗಂಟೆಯ ನೀರು ಪೂರೈಸುವ ಯೋಜನೆಯೂ ಜಾರಿ ಯಲ್ಲಿದೆ. ಇದರ ಜೊತೆಗೆ ಮಿನಿ ವಿಧಾನಸೌಧ, ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಜಿಟಿಟಿಸಿ ಕಾಲೇಜನ್ನು ಕ್ಷೇತ್ರಕ್ಕೆ ತರಲಾಗಿದೆ.
ಈ ಬಾರಿ ಸಚಿವ ಸಂಪುಟದಲ್ಲಿ ನಿಮಗೆ ಸ್ಥಾನ ಸಿಗುವ ನಿರೀಕ್ಷೆ ಇದೆಯೇ?
ನನಗೆ ನಮ್ಮ ಪಕ್ಷದ ನಾಯಕತ್ವದ ಮೇಲೆ ಸಂಪೂರ್ಣ ವಿಶ್ವಾಸವಿದೆ. ವಿಜಯಪುರ ಜಿಲ್ಲೆಯಿಂದ ಉಳಿದ ಶಾಸಕರಿಗೆ ಈಗಾಗಲೇ ಅವಕಾಶ ಸಿಕ್ಕಿದೆ. ಈ ಬಾರಿ ನನಗೂ ಸಚಿವ ಸ್ಥಾನ ಸಿಗುತ್ತದೆ ಎಂಬ ಭರವಸೆ ಇದೆ. ನನ್ನ ಕ್ಷೇತ್ರದ ಜನರು 16 ಬಸ್ಸುಗಳಲ್ಲಿ ಬೆಂಗಳೂರಿಗೆ ಬಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ, ನನಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿರುವುದು ನನ್ನ ಮೇಲಿನ ಅವರ ಪ್ರೀತಿಯನ್ನು ತೋರಿಸುತ್ತದೆ. ಸರ್ಕಾರ ರಚನೆಯಾದಾಗ ನಿಗಮ ಮಡಳಿಯ ಅಧ್ಯಕ್ಷ ಸ್ಥಾನ ನೀಡಲು ಮುಂದಾಗಿದ್ದರು. ಆದರೆ ನಾನು ಅದನ್ನು ಸ್ವೀಕರಿಸಲಿಲ್ಲ. ಸಚಿವ ಸ್ಥಾನ ನೀಡುವುದಾಗಿ ನಾಯಕತ್ವ ನೀಡಿದ ಮಾತಿನ ಮೇಲೆ ನನಗೆ ವಿಶ್ವಾಸವಿದೆ.
ರಾಜ್ಯದ ನಾಯಕತ್ವ ಬದಲಾವಣೆಯನ್ನು ಹೇಗೆ ನೋಡುತ್ತೀರಿ?
ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಹಾಗೂ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಮುಂದಿನ ಚುನಾವಣೆಗಳನ್ನು ಎದುರಿಸಲಿದೆ. ಸಾಮೂಹಿಕ ನಾಯಕತ್ವ ಪಕ್ಷವನ್ನು ಇನ್ನಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸವಿದೆ. ಇಂಡಿ ಎಂದರೆ ಇನ್ನೂ ‘ಭೀಮಾ ತೀರ’ ಎಂಬ ಹೆಸರು ಕೇಳಿಬರುತ್ತದೆ. ಮಾಧ್ಯಮದವರಿಗೆ ನನ್ನ ವಿನಂತಿ ಒಂದೇ. ಇಂಡಿಯನ್ನು ಅಭಿವೃದ್ಧಿಯ ಪ್ರತೀಕ ಎಂದು ಗುರುತಿಸಿ. ‘ಭೀಮಾ ತೀರ’ ಮೊದಲಾದ ಪದಗಳನ್ನು ಬಳಸುವಾಗ, ಭೀಮಾ ನದಿ ಒದಗಿಸುವ ನೀರನ್ನು ನೆನಪಿಸಿ, ಹೊರತು ನಕಾರಾತ್ಮಕ ಪದಗಳಿಂದ ಗುರುತಿಸಬೇಡಿ. ಇಂದು ಕ್ಷೇತ್ರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಇದೆ. ಆಡಳಿತದಲ್ಲಿ ಪಾರದರ್ಶಕತೆ ಇದೆ. ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಮೂಲಕ ಇಂಡಿಯ ಹೊಸ ಗುರುತನ್ನು ಕಟ್ಟುವ ಪ್ರಯತ್ನ ನಡೆಯುತ್ತಿದೆ.
ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳು ಹಾಗೂ ಉದ್ಯೋಗಾವಕಾಶಗಳ ಕೊರತೆ ಇದೆ ಎಂಬಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ?
ಉತ್ತರ ಕರ್ನಾಟಕದ ಜನರಲ್ಲಿ ಅಭಿವೃದ್ಧಿ ವಂಚಿತರಾಗಿದ್ದೇವೆ ಎಂಬ ಭಾವನೆ ಇರುವುದನ್ನು ನಾನು ನಿರಾಕರಿಸುವುದಿಲ್ಲ. ಆಡಳಿತ ಪಕ್ಷದ ಶಾಸಕರಾಗಿದ್ದರೂ ನಮ್ಮ ಭಾಗಕ್ಕೆ ಅನ್ಯಾಯವಾದರೆ ಮೌನವಾಗಿರುವುದಿಲ್ಲ. ಅಗತ್ಯವಿದ್ದರೆ ಪ್ರತಿಭಟನೆಯನ್ನೂ ಮಾಡುತ್ತೇವೆ. ಅಧಿಕಾರಕ್ಕಿಂತ ಜನರ ಹಿತವೇ ನನಗೆ ಮುಖ್ಯ.
ಬರ ಪರಿಸ್ಥಿತಿ ಕುರಿತು ಸರ್ಕಾರ ಯಾವ ರೀತಿಯ ಸಿದ್ಧತೆ ಮಾಡಿಕೊಂಡಿದೆ?
ಮಳೆ ಕೊರತೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರತಿ ಜಿಲ್ಲಾಧಿಕಾರಿಗಳ ಖಾತೆಗೆ ತುರ್ತು ಕಾಮಗಾರಿಗಳಿಗಾಗಿ ರು.5 ಕೋಟಿ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ವರ್ಷ, ಮಳೆ ಪ್ರಮಾಣ ಕಡಿಮೆಯಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಆದರೂ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.