ಆಲಮಟ್ಟಿ; ಬೇಸಿಗೆಯಷ್ಟೇ ಬಿಸಲಿನ ಪ್ರಖರತೆ, ಹೆಚ್ಚಾದ ಹಿನ್ನೀರಿನ ಬಳಕೆ, ಕಾಲುವೆಗೂ ಹರಿಯು ತ್ತಿರುವ ನೀರು... ಇದರಿಂದ ಸಂಪೂರ್ಣ ಭರ್ತಿಯಾಗಿದ್ದ ಆಲಮಟ್ಟಿ ಜಲಾಶಯದ ಹಿನ್ನೀರು ದಿನೇ ದಿನೇ ಕಡಿಮೆಯಾಗುತ್ತಿದೆ.
ಹೀಗಾಗಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ(D K Shivakumar) ಬಾಗಿನ ಅರ್ಪಣೆಯ ಕನಸು ನನಸಾಗುವುದೇ? ಎಂಬ ಪ್ರಶ್ನೆ ಉದ್ಭವವಾಗಿದೆ.
ಆಲಮಟ್ಟಿ ಜಲಾಶಯ ಬಹುತೇಕ ಜುಲೈನಲ್ಲಿ ಭರ್ತಿಯಾಗಿದ್ದರೂ, ಒಳಹರಿವು ಹೆಚ್ಚಿದ್ದರಿಂದ ಜಲಾಶಯ ಭರ್ತಿ ಮಾಡದೇ ನದಿಗೆ ನೀರು ಹರಿಸಲಾಗುತ್ತಿತ್ತು. ಆದರೆ ಕಳೆದ ಮೂರು ದಿನಗಳ ಹಿಂದಷ್ಟೇ (ಸೆ.12) ರಂದು ಜಲಾಶಯ ಪೂರ್ಣ ಭರ್ತಿಯಾಗಿತ್ತು.
ಕುಸಿದ ಒಳಹರಿವು; ಮಹಾರಾಷ್ಟ್ರದಲ್ಲಿ ಮಳೆ ಸಂಪೂರ್ಣ ನಿಂತ ಕಾರಣ ಜಲಾಶಯದ ಒಳಹರಿವು ಬುಧವಾರ ಶೂನ್ಯಕ್ಕೆ ತಲುಪಿದೆ. ಆದರೆ ಕಾಲುವೆಗಳ ಜಾಲಕ್ಕೆ ಮುಂಗಾರು ಹಂಗಾಮಿಗೆ ನೀರು, ಕೆರೆಗಳ ಭರ್ತಿ, ಹಿನ್ನೀರಿನ ಬಳಕೆ, ಭಾಷ್ಪಿಭವನದ ಕಾರಣ 13,692 ಕ್ಯುಸೆಕ್ ನೀರು ಜಲಾಶಯದಿಂದ ಹೊರ ಹೋಗುತ್ತಿದೆ. ಇದರಿಂದ ಜಲಾಶಯದ ಮಟ್ಟ ಕುಸಿಯತೊಡಗಿದೆ.
ಇದನ್ನೂ ಓದಿ: Alamatti News: ಕೆ.ಪಿ.ಮೋಹನ ರಾಜ ಅವರಿಗೆ ಪುನರ್ವಸತಿ ಇಲಾಖೆಯ ಆಯುಕ್ತರ ಹೆಚ್ಚುವರಿ ಅಧಿಕಾರ
ಗರಿಷ್ಠ ಮಟ್ಟ 519.60 ಮೀ ತಲುಪಿದ್ದ ಆಲಮಟ್ಟಿ ಜಲಾಶಯದಲ್ಲಿ ಬುಧವಾರ 519.4 ಮೀಗೆ ಇಳಿಕೆಯಾಗಿದೆ. 123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 120 ಟಿಎಂಸಿ ಅಡಿ ನೀರಿದೆ. ಕಾಲುವೆಗೆ ನೀರು ಹರಿಸುವುದರಿಂದ ನಿತ್ಯ ಒಂದು ಟಿಎಂಸಿ ಅಡಿ ನೀರು ಜಲಾಶಯದಿಂದ ಖಾಲಿಯಾಗುತ್ತಿದೆ. ಜಲಾಶಯ ಖಾಲಿಯಾಗುತ್ತಿರುವಾಗ ಮುಖ್ಯಮಂತ್ರಿಗಳು ಹೇಗೆ ಬಾಗಿನ ಅರ್ಪಿಸುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಸದ್ಯಕ್ಕೆ ಒಳಹರಿವು ಶೂನ್ಯವಾಗಿದ್ದರಿಂದ ಸದ್ಯಕ್ಕೆ ಜಲಾಶಯದ ಮಟ್ಟ 519.60 ಮೀ ತಲುಪುವುದು ಕಷ್ಟ ಸಾಧ್ಯ.
ಬಾಗಿನ ಯಾವಾಗ?
ಪ್ರತಿ ವರ್ಷ ಜಲಾಶಯ ಭರ್ತಿಯಾದಾಗ ಮುಖ್ಯಮಂತ್ರಿಗಳು ಕೃಷ್ಣೆಗೆ ಬಾಗಿನ ಅರ್ಪಿಸುವುದು ಸಂಪ್ರದಾಯ. ಒಂದೆಡೆ ಕುಸಿಯುತ್ತಿರುವ ಜಲಾಶಯದ ಮಟ್ಟ, ಮತ್ತೊಂದೆಡೆ ಶೂನ್ಯಕ್ಕಿಳಿದ ಒಳಹರಿವು. ಕರ್ನಾಟಕದಲ್ಲಿ ಭರ್ತಿಯಾದ ಏಕೈಕ ದೊಡ್ಡ ಜಲಾಶಯ ಆಲಮಟ್ಟಿ. ಮೊದಲ ಬಾರಿ ಡಿ.ಕೆ. ಶಿವಕುಮಾರ ಯಾವಾಗ ಬಾಗಿನ ಅರ್ಪಿಸುತ್ತಾರೆ ? ಎಂಬ ಕುತೂಹಲ ಹೆಚ್ಚಿದೆ.
ಕಳೆದ ತಿಂಗಳು ಕೂಡಲಸಂಗಮಕ್ಕೆ ಮುಖ್ಯಮಂತ್ರಿಗಳು ಬಂದ ಸಂದರ್ಭದಲ್ಲಿ ಕೃಷ್ಣೆ, ಮಲಪ್ರಭಾ ಸಂಗಮ ಸ್ಥಳದಲ್ಲಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ಆಲಮಟ್ಟಿಯಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸುತ್ತಾರೋ ಇಲ್ಲ ಎಂಬ ಕುತೂಹಲ ರೈತರಲ್ಲಿ ಮೂಡಿದೆ.
2002 ರಿಂದ ಆಯಾ ಕಾಲಘಟ್ಟದ ಮುಖ್ಯಮಂತ್ರಿಗಳಿಂದ ನಡೆದುಕೊಂಡ ಬಂದ ಆಲಮಟ್ಟಿ ಜಲಾಶಯದ ಬಾಗಿನ ಸಂಪ್ರದಾಯ ಈ ವರ್ಷ ನಿಲ್ಲಿಸಬಾರದು ಎಂಬುದು ರೈತ ಮುಖಂಡರ ವಾದ.
ಕೃಷ್ಣೆಯ ಬಗ್ಗೆ ಮಲತಾಯಿ ಧೋರಣೆ ತಾಳದೇ, ಕಾವೇರಿಯಷ್ಟೇ ಪ್ರಾಮುಖ್ಯತೆ ಕೃಷ್ಣೆಗೂ ನೀಡಿ, ಶೀಘ್ರವೇ ಬಾಗಿನ ಅರ್ಪಿಸಿ, ಯುಕೆಪಿ ಮೂರನೇ ಹಂತದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಒದಗಿಸಬೇಕು. ಜಲಾಶಯದ ಮಟ್ಟ ಇನ್ನಷ್ಟು ಕಡಿಮೆಯಾಗುತ್ತಾ ಸಾಗುವ ಮೊದಲೇ ಬಾಗಿನ ಅರ್ಪಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದರು.
ಬಾಗಿನ ಎಂಬುದು ನಮ್ಮ ಕೃಷ್ಣಾ ತೀರದ ಜನತೆಯ ಅಸ್ಮಿತೆ, ಇದನ್ನು ಉಳಿಸಿಕೊಂಡು ಹೋಗಬೇಕಿದೆ. ಬಾಗಿನ ನೆಪದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಬಗ್ಗೆ ಚರ್ಚೆಯಾಗಲಿ ಎಂದು ಜಿ.ಪಂ ಮಾಜಿ ಸದಸ್ಯ ಶಿವಾನಂದ ಅವಟಿ ಹೇಳಿದರು.