Caste Census: ಜಾತಿ ಗಣತಿ ವರದಿ ಜಾರಿಯಾದ್ರೆ ಸರ್ಕಾರ ಬಿದ್ದೇ ಬೀಳುತ್ತೆ: ಒಕ್ಕಲಿಗರ ಸಂಘ ಎಚ್ಚರಿಕೆ
Caste Census: ಸರ್ಕಾರ ಕಾಂತರಾಜು ಆಯೋಗದ ವರದಿ ಜಾರಿ ಮಾಡಲು ಹೊರಟಿದೆ. ಆದರೆ ಅದರ ವಿರುದ್ಧ ಹೋರಾಟ ಮಾಡಲು ಒಕ್ಕಲಿಗ ಸಂಘದ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಮುಂದಿನ ಹಂತದಲ್ಲಿ ಯಾವ ರೀತಿ ಹೋರಾಟ ಮಾಡುವುದರ ಕುರಿತು ಇಂದು ಚರ್ಚಿಸಲಾಗಿದೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ತಿಳಿಸಿದ್ದಾರೆ.


ಬೆಂಗಳೂರು: ಜಾತಿ ಗಣತಿ ವರದಿ (Caste Census) ಅನುಷ್ಠಾನ ಸಂಬಂಧ ಚರ್ಚೆ ನಡೆಸಲು ಸಿಎಂ ಸಿದ್ದರಾಮಯ್ಯ ಅವರು ಏ.17ಕ್ಕೆ ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಆದರೆ, ಮತ್ತೊಂದೆಡೆ ಇದಕ್ಕೆ ರಾಜ್ಯ ಒಕ್ಕಲಿಗರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಒಂದು ವೇಳೆ ಜಾತಿ ಗಣತಿ ವರದಿ ಜಾರಿಯಾದರೆ ಸರ್ಕಾರ ಬಿದ್ದೇ ಬೀಳುತ್ತೆ, ಯಾವುದೇ ಕಾರಣಕ್ಕೂ ಈ ಸರ್ಕಾರ ಉಳಿಯಲ್ಲ ಎಂದು ಎಚ್ಚರಿಕೆ ನೀಡಿದೆ. ಈ ಬಗ್ಗೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಮಾತನಾಡಿ, ಒಂದು ವೇಳೆ ವರದಿ ಜಾರಿ ಆದರೆ ಸರ್ಕಾರವನ್ನು ಬೀಳಿಸಿ, ಕರ್ನಾಟಕ ಬಂದ್ ರೀತಿಯ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸರ್ಕಾರ ಕಾಂತರಾಜು ಆಯೋಗದ ವರದಿ ಜಾರಿ ಮಾಡಲು ಹೊರಟಿದೆ. ಆದರೆ ಅದರ ವಿರುದ್ಧ ಹೋರಾಟ ಮಾಡಲು ಒಕ್ಕಲಿಗ ಸಂಘದ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಮುಂದಿನ ಹಂತದಲ್ಲಿ ಯಾವ ರೀತಿ ಹೋರಾಟ ಮಾಡುವುದರ ಕುರಿತು ಇಂದು ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾಂತರಾಜು ಅವರ ವರದಿ ಆರೋಗ್ಯಕರವಾಗಿಲ್ಲ, 10 ವರ್ಷದ ಹಿಂದೆ ಮಾಡಿದ ವರದಿಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಈ ವರದಿಯಲ್ಲಿ ಒಕ್ಕಲಿಗ ಜನಾಂಗವನ್ನ ಕೇವಲ 61 ಲಕ್ಷ ತೋರಿಸಲಾಗಿದೆ. ಆದರೆ ಒಂದೊಂದು ತಾಲೂಕಿನಲ್ಲ ಲ್ಲೂ 60 ಸಾವಿರದಿಂದ 1ಲಕ್ಷಕ್ಕೂ ಅಧಿಕ ಒಕ್ಕಲಿಗ ಸಮುದಾಯದ ಜನರಿದ್ದಾರೆ. ಆದರೆ ಈ ವರದಿಯಲ್ಲಿ ನಮ್ಮ ಜನಾಂಗವನ್ನ 6ನೇ ಸ್ಥಾನದಲ್ಲಿ ಇರಿಸಲಾಗಿದೆ. ಇದು ಬೇರೆ ಜನಾಂಗಕ್ಕೆ ಮೀಸಲಾತಿ ನೀಡುವ ಉದ್ದೇಶದಿಂದ ಮಾಡುವ ಹುನ್ನಾರ. ಹೀಗಾಗಿ ನಾವು ಕರ್ನಾಟಕ ಬಂದ್ ಮಾಡುವುದರ ಮೂಲಕ ಹೋರಾಟ ಮಾಡಬೇಕಾಗುತ್ತೆ. ಜಾತಿ ಜನಗಣತಿ ವರದಿಯಲ್ಲಿ ಸಾಕಷ್ಟು ಜನಾಂಗಕ್ಕೆ ಅನ್ಯಾಯವಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಸುದ್ದಿಯನ್ನೂ ಓದಿ | Caste census: ಇನ್ನೊಮ್ಮೆ ಸಮೀಕ್ಷೆ ಮಾಡಿ: ಜಾತಿ ಗಣತಿ ವರದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ಷೇಪ
ಈ ವರದಿಗೆ ನಮ್ಮ ವಿರೋಧ ಇದೆ. ಹೀಗಾಗಿ ಮತ್ತೊಮ್ಮೆ ಪರಿಶೀಲನೆ ಮಾಡಬೇಕು. ನಮ್ಮ ಜನಾಂಗ, ವೀರಶೈವ ಲಿಂಗಾಯತರು, ಇತರೆ ಅನ್ಯಾಯಕ್ಕೊಳಗಾದ ಸಮುದಾಯ ಒಟ್ಟಿಗೆ ಹೋರಾಟ ಮಾಡಲಿದ್ದೇವೆ. ಕರ್ನಾಟಕದಾದ್ಯಂತ ಹೋರಾಟ ಮಾಡಲಾಗುತ್ತದೆ. ನಮ್ಮ ಹೋರಾಟಕ್ಕೆ ಲಿಂಗಾಯತರು, ಬ್ರಾಹ್ಮಣರು ಬೆಂಬಲ ನೀಡಲಿದ್ದಾರೆ. ಅನ್ಯಾಯಕ್ಕೊ ಒಳಗಾದ ಸಮುದಾಯಗಳು ಸೇರಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಬು ಮಾತನಾಡಿ, ಜಾತಿ ಗಣತಿ ವರದಿ ಜಾರಿಯಾದರೆ ಸರ್ಕಾರ ಬಿದ್ದೇ ಬೀಳುತ್ತೆ, ಯಾವುದೇ ಕಾರಣಕ್ಕೂ ಈ ಸರ್ಕಾರ ಉಳಿಯಲ್ಲ. ಒಕ್ಕಲಿಗ ಸಂಘದ ವತಿಯಿಂದ ರಾಜ್ಯದಲ್ಲಿ ನಿಜವಾಗಿ ಎಷ್ಟು ಒಕ್ಕಲಿಗರಿದ್ದಾರೆ ಎಂದು ಪ್ರತ್ಯೇಕ ಸಮೀಕ್ಷೆ ಮಾಡುತ್ತೇವೆ. ಅದಕ್ಕಾಗಿ ಹೊಸ ಸಾಫ್ಟ್‌ವೇರ್ ತಯಾರು ಮಾಡುತ್ತೇವೆ. ಎಷ್ಟೇ ಖರ್ಚಾದರೂ ಸಹ ನಾವು ಪ್ರತ್ಯೇಕ ಸಮೀಕ್ಷೆ ಮಾಡಿಸುತ್ತೇವೆ ಎಂದು ಹೇಳಿದ್ದಾರೆ.