ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ ಹಾಕುತ್ತೀರಾ? 2 ವರ್ಷದವರೆಗೆ ಜೈಲೂಟ ಫಿಕ್ಸ್!

Pigeon feeding ban: ಕರ್ನಾಟಕ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಪೂರೈಸುವ ಕಾರ್ಯಕ್ಕೆ ಕಟ್ಟುನಿಟ್ಟಿನ ನಿಯಂತ್ರಣ ಮತ್ತು ನಿಷೇಧವನ್ನು ಜಾರಿಗೆ ತರಲು ಮುಂದಾಗಿದೆ. ನಿಯಮಗಳನ್ನು ಉಲ್ಲಂಘಿಸಿದವರಿಗೆ ಗಂಭೀರ ದಂಡಾತ್ಮಕ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾರಿವಾಳಗಳಿಗೆ ಆಹಾರ ಹಾಕುತ್ತೀರಾ? ಈ ಸುದ್ದಿ ಓದ್ಲೇಬೇಕು

ಸಾಂದರ್ಭಿಕ ಚಿತ್ರ -

Priyanka P
Priyanka P Dec 17, 2025 6:49 PM

ಬೆಂಗಳೂರು, ಡಿ. 17: ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು (Pigeon feeding ban) ಮತ್ತು ನಿಷೇಧಿಸಲು ಕರ್ನಾಟಕ ಆರೋಗ್ಯ ಇಲಾಖೆ (Karnataka Health Department) ಮುಂದಾಗಿದೆ. ಗಂಭೀರ ಆರೋಗ್ಯ ಅಪಾಯಗಳು ಮತ್ತು ಸಾರ್ವಜನಿಕ ತೊಂದರೆಗಳನ್ನು ಉಲ್ಲೇಖಿಸಿ ಇಲಾಖೆ ಈ ಕ್ರಮ ಕೈಗೊಳ್ಳಲಿದೆ. ಡಿಸೆಂಬರ್ 16ರಂದು ಹೊರಬಂದ ಅಧಿಕೃತ ಪತ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಹಾಗೂ ಎಲ್ಲ ನಗರ ಪಾಲಿಕೆಗಳಿಗೆ ಹೊಸ ನಿರ್ಬಂಧಾತ್ಮಕ ಮಾರ್ಗಸೂಚಿಗಳನ್ನು ತಕ್ಷಣ ಜಾರಿಗೆ ತರಲು ಸೂಚನೆ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಮನವಿ ಮಾಡಿದೆ.

ಪಾರಿವಾಳಗಳಿಗೆ ಆಹಾರ ನೀಡುವುದರಿಂದ ಉಂಟಾಗುವ ಆರೋಗ್ಯ ಅಪಾಯಗಳ ಬಗ್ಗೆ ವೈದ್ಯಕೀಯ ತಜ್ಞರು ಎಚ್ಚರಿಸಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಾರಿವಾಳಗಳ ಮಲ ಮತ್ತು ಗರಿಗಳು ಸಂಗ್ರಹವಾಗುವುದರಿಂದ ತೀವ್ರ ಶ್ವಾಸಕೋಶ ಸಂಬಂಧಿತ ಅತಿಸೂಕ್ಷ್ಮ ನ್ಯುಮೋನೈಟಿಸ್ ಸೇರಿದಂತೆ ತೀವ್ರವಾದ ಉಸಿರಾಟದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ದೀರ್ಘಕಾಲ ಒಡ್ಡಿಕೊಳ್ಳುವಿಕೆಯಿಂದ ಶ್ವಾಸಕೋಶದ ಹಾನಿಯಾಗಬಹುದು ಎಂದು ಎಚ್ಚರಿಸಿದೆ. ಮಕ್ಕಳು, ವೃದ್ಧರು ಮತ್ತು ಈಗಾಗಲೇ ಶ್ವಾಸಕೋಶ ಸಮಸ್ಯೆಗಳನ್ನು ಹೊಂದಿರುವವರಿಗೆ ಅತ್ಯಂತ ಅಪಾಯಕಾರಿ.

ದಿಲ್ಲಿಯಿಂದ ಮಂಡ್ಯಕ್ಕೆ ಹಾರಿ ಬಂದ ಪಾರಿವಾಳ

ಮಾರ್ಗಸೂಚಿಗಳ ಪ್ರಕಾರ, ಸಾರ್ವಜನಿಕರಿಗೆ ತೊಂದರೆ ಅಥವಾ ಆರೋಗ್ಯ ಅಪಾಯವನ್ನುಂಟು ಮಾಡಬಹುದಾದ ಯಾವುದೇ ಪ್ರದೇಶದಲ್ಲಿ ಪಾರಿವಾಳಗಳಿಗೆ ಆಹಾರ ಪೂರೈಸುವ ಬಗ್ಗೆ ಸಂಪೂರ್ಣ ನಿಷೇಧ ಹೇರಲಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಆಹಾರ ಹಾಕಲು ಆಯ್ಕೆ ಮಾಡಿದ ನಿಯೋಜಿತ ಪ್ರದೇಶಗಳಲ್ಲಿ ಮಾತ್ರ ಅನುಮತಿ ನೀಡಲಾಗುತ್ತದೆ. ಈ ವಲಯಗಳು ಕಟ್ಟುನಿಟ್ಟಿನ ನಿಯಮಾವಳಿಗಳಡಿ ಕಾರ್ಯನಿರ್ವಹಿಸುತ್ತವೆ. ಅವುಗಳನ್ನು ಎನ್‌ಜಿಒಗಳು ಅಥವಾ ಚಾರಿಟೇಬಲ್ (ದತ್ತಿ) ಸಂಸ್ಥೆಗಳು ನಿರ್ವಹಿಸಬೇಕು. ಹಾಗೆಯೇ ಆಹಾರ ನೀಡುವ ಸಮಯವನ್ನು ದಿನದ ನಿರ್ದಿಷ್ಟ ಘಂಟೆಗಳೊಳಗೆ ಮಾತ್ರ ಮಿತಿ ಮಾಡಲಾಗುವುದು ಎಂದು ಹೇಳಿದೆ.

ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ಧವಾಗಿದೆ. ಅಧಿಕಾರಿಗಳಿಗೆ ಸ್ಥಳದಲ್ಲೇ ಎಚ್ಚರಿಕೆ ನೀಡಲು ಮತ್ತು ದಂಡ ವಿಧಿಸಲು ಅಧಿಕಾರ ನೀಡಲಾಗುತ್ತದೆ. ಇದಲ್ಲದೆ, ಭಾರತೀಯ ನ್ಯಾಯ ಸಂಹಿತಾ 2023ರ ಸೆಕ್ಷನ್ 271 ಮತ್ತು 272ರ ಅಡಿಯಲ್ಲಿ ಮೊಕದ್ದಮೆ ಹೂಡಲು ದೂರು ಸಲ್ಲಿಸಬಹುದು ಎಂದು ಪತ್ರದಲ್ಲಿ ಹೇಳಲಾಗಿದೆ. ಸೆಕ್ಷನ್ 271ರ ಅಡಿಯಲ್ಲಿ, ಜೀವಕ್ಕೆ ಅಪಾಯಕಾರಿ ಸೋಂಕನ್ನು ಹರಡುವ ಸಾಧ್ಯತೆಯಿರುವ ನಿರ್ಲಕ್ಷ್ಯದ ಕೃತ್ಯಗಳಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಆದರೆ ಸೆಕ್ಷನ್ 272, ದುರುದ್ದೇಶಪೂರಿತ ಕೃತ್ಯಗಳನ್ನು ನಿರ್ವಹಿಸಿದರೆ, ಎರಡು ವರ್ಷಗಳವರೆಗೆ ಸಂಭಾವ್ಯ ಶಿಕ್ಷೆ ವಿಧಿಸಬಹುದು.

ಸ್ಥಳೀಯ ಅಧಿಕಾರಿಗಳು ಸಾರ್ವಜನಿಕ ಜಾಗೃತಿಯ ಅಭಿಯಾನಗಳನ್ನು ನಡೆಸಿ, ಪಾರಿವಾಳಗಳ ಹಿಕ್ಕೆಗಳು ಮತ್ತು ಗರಿಗಳಿಂದ ಉಂಟಾಗುವ ಆರೋಗ್ಯ ಅಪಾಯಗಳನ್ನು ವಿವರಿಸಬೇಕು. ಸಾರ್ವಜನಿಕ ಆರೋಗ್ಯಕ್ಕೆ ಹಾನಿ ಉಂಟು ಮಾಡದೆ ಪಕ್ಷಿ ಸಂರಕ್ಷಣೆಯ ಪರ್ಯಾಯ ಮತ್ತು ಮಾನವೀಯ ವಿಧಾನಗಳನ್ನು ಅನ್ವಯಿಸುವ ಅಗತ್ಯವನ್ನು ಒತ್ತಿ ಹೇಳಲಾಗಿದೆ.