Ranjith H Ashwath Column: ದಶಕದ ಬಳಿಕವೂ ಪಾಠ ಕಲಿಯದ ಕೈ ಪಡೆ
ಚುನಾವಣೋತ್ತರ ಸಮೀಕ್ಷೆಯಲ್ಲಿ, ಬಿಜೆಪಿ ಹಾಗೂ ಆಮ್ ಆದ್ಮಿ ಪಾರ್ಟಿ ‘ನೆಕ್ ಟು ನೆಕ್’ ಫೈಟ್ ನೀಡಲಿವೆ ಎಂದೇ ಹೇಳಲಾಗಿದ್ದರೂ, ಅಂತಿಮವಾಗಿ ಬಿಜೆಪಿ ಬರೋಬ್ಬರಿ 27 ವರ್ಷಗಳ ಬಳಿಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
![ದಶಕದ ಬಳಿಕವೂ ಪಾಠ ಕಲಿಯದ ಕೈ ಪಡೆ](https://cdn-vishwavani-prod.hindverse.com/media/original_images/Ranjith_H_Ashwath_Column_110225.jpg)
ಮುಖ್ಯ ವರದಿಗಾರ, ಅಂಕಣಕಾರ ರಂಜಿತ್ ಎಚ್.ಅಶ್ವತ್ಥ
![Ranjith H Ashwath](https://cdn-vishwavani-prod.hindverse.com/media/images/Ranjith_H_Ashwathrgylr.2e16d0ba.fill-100x100.jpg)
ಅಶ್ವತ್ಥಕಟ್ಟೆ
ranjith.hoskere@gmail.com
ಪ್ರಜಾಪ್ರಭುತ್ವ ವ್ಯವಸ್ಥೆಗೆ ಚುನಾವಣೆಗಳೇ ಮೂಲಾಧಾರ. ಆಡಳಿತ ಪಕ್ಷದಲ್ಲಿರುವವರು ಪ್ರತಿಪಕ್ಷ ದಲ್ಲಿ, ಪ್ರತಿಪಕ್ಷದಲ್ಲಿರುವವರು ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಬಂದು ಕೂರುವ ಹಾಗೂ ಸಾಮಾನ್ಯ ವ್ಯಕ್ತಿಯೂ ದೇಶದ ಅತ್ಯುನ್ನತ ಹುದ್ದೆಯನ್ನು ಹಿಡಿಯುವ ಸಾಧ್ಯತೆ ಇರುವುದೇ ಈ ಪ್ರಜಾಪ್ರಭುತ್ವದ ವೈಶಿಷ್ಟ್ಯ ಹಾಗೂ ತಾಕತ್ತು. ಅಧಿಕಾರದ ಗದ್ದುಗೆ ಏರಿರುವ ಯಾವುದೇ ರಾಜ ಕಾರಣಿಯಾಗಲಿ, ಐದು ವರ್ಷಕ್ಕೊಮ್ಮೆ ಜನರ ಮುಂದೆ ಮತಭಿಕ್ಷೆಯನ್ನು ಕೇಳಿಯೇ ಆಯ್ಕೆಯಾಗ ಬೇಕು. ಇಂಥ ವ್ಯವಸ್ಥೆಯಲ್ಲಿ ಅದರಲ್ಲಿಯೂ, ಭಾರತದಲ್ಲಿರುವ ‘ವಿವಿಧತೆಯಲ್ಲಿ ಏಕತೆ’ಯ ವ್ಯವಸ್ಥೆ ಹಾಗೂ ಮನಸ್ಥಿತಿಯಲ್ಲಿ ಯಾವುದೇ ಒಂದು ಪಕ್ಷವು ಸದಾಕಾಲ ಆಡಳಿತ ಪಕ್ಷವಾಗಿರಬಹುದು ಎನ್ನುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಆದರೆ, ಸೋತ ಪಕ್ಷವು ಪ್ರತಿಪಕ್ಷದ ಸ್ಥಾನದಲ್ಲಿ ಕೂತು ಪಕ್ಷವನ್ನು ಯಾವ ರೀತಿ ಸಂಘಟಿಸುತ್ತದೆ, ಯಾವ ರೀತಿಯಲ್ಲಿ ಮೇಲೆದ್ದು ಬರುತ್ತದೆ ಎನ್ನುವುದು ಅಷ್ಟೇ ಮುಖ್ಯ. ರಾಷ್ಟ್ರ ರಾಜಧಾನಿ ಯಾಗಿರುವುದರಿಂದ, ಅತಿಚಿಕ್ಕ ಗಾತ್ರದಲ್ಲಿದ್ದರೂ ಆಯಕಟ್ಟಿನ ರಾಜ್ಯ ಎನಿಸಿರುವ ದೆಹಲಿಯ ವಿಧಾನಸಭಾ ಚುನಾವಣೆ ಇತ್ತೀಚಿಗಷ್ಟೇ ಮುಕ್ತಾಯಗೊಂಡಿದೆ.
ಇದನ್ನೂ ಓದಿ: Ranjith H Ashwath Column: ಬಿಜೆಪಿಗರ ದಿಲ್ಲಿ ದಂಡಯಾತ್ರೆಯ ಫಲವೇನು ?
ಚುನಾವಣೋತ್ತರ ಸಮೀಕ್ಷೆಯಲ್ಲಿ, ಬಿಜೆಪಿ ಹಾಗೂ ಆಮ್ ಆದ್ಮಿ ಪಾರ್ಟಿ ‘ನೆಕ್ ಟು ನೆಕ್’ ಫೈಟ್ ನೀಡಲಿವೆ ಎಂದೇ ಹೇಳಲಾಗಿದ್ದರೂ, ಅಂತಿಮವಾಗಿ ಬಿಜೆಪಿ ಬರೋಬ್ಬರಿ 27 ವರ್ಷಗಳ ಬಳಿಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಅರವಿಂದ ಕ್ರೇಜಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು.
2015ರ ಚುನಾವಣೆಯಲ್ಲಿ 70 ಕ್ಷೇತ್ರದ ಪೈಕಿ 67ರಲ್ಲಿ ‘ಆಪ್’ ಗೆದಿದ್ದರೆ, 2020ರಲ್ಲಿ 62 ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಸಂಚಲನವನ್ನು ಮೂಡಿಸಿದ್ದು ಸುಳ್ಳಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ಆಪ್ ಮುಖ್ಯಸ್ಥ ಕ್ರೇಜಿವಾಲ್ ನಡೆದುಕೊಂಡ ರೀತಿ, ಸರಕಾರದ ವಿರುದ್ಧ ಕೇಳಿಬಂದ ಆರೋಪ ಸೇರಿದಂತೆ ಹಲವು ಕಾರಣಗಳಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ 48ರಲ್ಲಿ (ಕಳೆದ ಬಾರಿ ಗೆದ್ದಿದ್ದ 4೦ ಕ್ಷೇತ್ರದಲ್ಲಿ ಸೋಲು) ಸೋಲುವ ಮೂಲಕ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕಾಗಿದೆ.
ಹಾಗೆಂದ ಮಾತ್ರಕ್ಕೆ ಬಿಜೆಪಿ ಹಾಗೂ ಆಪ್ ತೆಗೆದುಕೊಂಡಿರುವ ಶೇಕಡವಾರು ಮತಗಳಲ್ಲಿ ಭಾರಿ ವ್ಯತ್ಯಾಸವೇನಿಲ್ಲ. ಯಾವುದೇ ಒಂದು ರಾಜಕೀಯ ಪಕ್ಷ ಸತತ 12 ವರ್ಷಗಳ ಕಾಲ ಅಧಿಕಾರ ನಡೆಸಿದರೆ ಸಹಜವಾಗಿಯೇ ಆಡಳಿತ ವಿರೋಧಿ ಅಲೆ ಏಳುವುದು ಸಹಜ. ಆದರೆ ಈ ಚುನಾವಣೆ ಯಲ್ಲಿ ಆಮ್ ಆದ್ಮಿ ಪಕ್ಷದ ಸೋಲು-ಗೆಲುವಿನ ‘ಲೆಕ್ಕಾಚಾರ’ ಮಾಡುವುದಕ್ಕಿಂತ, ದೇಶದ ಅತ್ಯಂತ ಹಳೆಯ ಪಕ್ಷ ಎನಿಸಿರುವ ಕಾಂಗ್ರೆಸ್‌ನ ಬಗ್ಗೆ ಯೋಚಿಸಲೇಬೇಕಿದೆ.
ಏಕೆಂದರೆ, ಒಂದು ಕಾಲದಲ್ಲಿ ಇಡೀ ದೇಶವನ್ನು ಆಳಿದ್ದ, ದೆಹಲಿ ರಾಜ್ಯ ರಚನೆಯಾದ ಮೊದಲ ಬಾರಿಗೆ ಗೆಲುವು ಸಾಧಿಸಿದ ಬಳಿಕ, ಸತತವಾಗಿ 15 ವರ್ಷ ರಾಷ್ಟ್ರ ರಾಜಧಾನಿಯ ಚುಕ್ಕಾಣಿಯನ್ನು ಹಿಡಿದಿದ್ದ ಕಾಂಗ್ರೆಸ್‌ನ ಇಂದಿನ ಪರಿಸ್ಥಿತಿಯನ್ನು ನೋಡಿದರೆ, ರಾಷ್ಟ್ರೀಯ ಪಕ್ಷವೊಂದರ ಸ್ಥಿತಿ ಈ ಮಟ್ಟಕ್ಕೆ ತಲುಪಬಾರದಿತ್ತು ಎನಿಸುವುದು ಸುಳ್ಳಲ್ಲ.
ಹಾಗೆ ನೋಡಿದರೆ, ಆಮ್ ಆದ್ಮಿ ಪಕ್ಷ ಚುನಾವಣಾ ಅಖಾಡಕ್ಕೆ ಇಳಿದ ಬಳಿಕ ದೆಹಲಿಯಲ್ಲಿ ರಾಷ್ಟ್ರೀ ಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಸಂಪೂರ್ಣವಾಗಿ ನೆಲಕಚ್ಚಿದ್ದವು. 2015ರಲ್ಲಿ 3 ಸೀಟು ಗಳನ್ನು ಗೆದ್ದಿದ್ದ ಬಿಜೆಪಿ 2020ರಲ್ಲಿ 8 ಸೀಟುಗಳನ್ನು ಗೆದಿದ್ದು ಬಿಟ್ಟರೆ ಹೇಳಿಕೊಳ್ಳುವಂಥ ಸಾಧನೆ ಯನ್ನೇನೂ ಮಾಡಿರಲಿಲ್ಲ.
ಇನ್ನು ಕಾಂಗ್ರೆಸ್‌ಗೆ 2015ರಲ್ಲಿ ನಡೆದ ಚುನಾವಣೆಯಿಂದ ಆರಂಭವಾದ ಶೂನ್ಯ ಸಾಧನೆಯ ಕಾರ್ಯ 2025ರ ವಿಧಾನಸಭಾ ಚುನಾವಣೆಯಲ್ಲಿಯೂ ಮುಂದುವರಿದಿದೆ. ಎಲ್ಲ ಸಮಯದಲ್ಲಿ ಯೂ ಸೀಟುಗಳೇ ಪಕ್ಷದ ಸಂಘಟನೆಯ ಆಧಾರವಾಗಿರುವುದಿಲ್ಲ ಎನ್ನುವುದು ಎಷ್ಟು ಮುಖ್ಯವೋ, ಸಂಘಟನೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸದೇ ಇದ್ದಿದ್ದೇ ಕಾಂಗ್ರೆಸ್‌ನ ಹ್ಯಾಟ್ರಿಕ್ ಶೂನ್ಯ ಸಾಧನೆಗೆ ಕಾರಣ ಎನ್ನುವುದು ಸ್ಪಷ್ಟ.
ಶೂನ್ಯ ಸಾಧನೆಗೆ ಮಾತ್ರ ಸೀಮಿತವಾಗದೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂರೇ ಮೂರು ಅಭ್ಯರ್ಥಿಗಳು ‘ಠೇವಣಿ’ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರಂತೆ. ಅಂದರೆ ರಾಷ್ಟ್ರೀಯ ಪಕ್ಷವೊಂದು 67 ಕ್ಷೇತ್ರಗಳಲ್ಲಿ ಠೇವಣಿ ಪಡೆಯುವಷ್ಟು ಜನಬೆಂಬಲವನ್ನು ಉಳಿಸಿ ಕೊಳ್ಳುವಲ್ಲಿ ವಿಫಲವಾಗಿದೆ ಎಂದರೆ ಆ ಸಂಘಟನೆ ಯಾವ ಹಂತದಲ್ಲಿದೆ ಎನ್ನುವುದನ್ನು ಯೋಚಿ ಸಬೇಕಿದೆ.
ಆಪ್ ಚುನಾವಣಾ ಅಖಾಡಕ್ಕೆ ಬರುತ್ತಿದ್ದಂತೆ ಎರಡೂ ರಾಷ್ಟ್ರೀಯ ಪಕ್ಷಗಳ ಸ್ಥಿತಿ ಒಂದೇ ಆಗಿತ್ತು. ಇಡೀ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಸತತ ಗೆಲುವಿನ ನಗೆ ಬೀರುತ್ತಿದ್ದ ಬಿಜೆಪಿಗೆ ರಾಷ್ಟ್ರ ರಾಜಧಾನಿಯನ್ನು ‘ಭೇದಿಸಲು’ ಸಾಧ್ಯವಾಗಿರಲಿಲ್ಲ. ಅದರಲ್ಲಿಯೂ 2019ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದಿದ್ದ ಬಿಜೆಪಿಗೆ, ಮರುವರ್ಷ ದೆಹಲಿಯಲ್ಲಿ ನಡೆದ ಚುನಾವಣೆಯಲ್ಲಿ ಎರಡಂಕಿ ದಾಟಲು ಕ್ರೇಜಿವಾಲ್ ಬಿಟ್ಟಿರಲಿಲ್ಲ.
ಈ ಹಂತದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡೆದುಕೊಂಡ ರೀತಿಯೇ ಇಂದಿನ ಫಲಿತಾಂಶದ ಕೈಗನ್ನಡಿ ಎಂದರೆ ತಪ್ಪಾಗುವುದಿಲ್ಲ. ಸುಷ್ಮಾ ಸ್ವರಾಜ್ ಅಽಕಾರದಿಂದ ಕೆಳಗಿಳಿದ ಬಳಿಕ ಬಿಜೆಪಿ ರಾಜಧಾನಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ ಪ್ರಯತ್ನಗಳನ್ನು ಮಾತ್ರ ಬಿಜೆಪಿ ಎಂದಿಗೂ ಬಿಡಲಿಲ್ಲ.
ಹಾಗೆ ನೋಡಿದರೆ, ಈ ಬಾರಿಯ ವಿಧಾನಸಭಾ ಚುನಾವಣೆ ಯಾರ ನೇತೃತ್ವದಲ್ಲಿನ ಚುನಾವಣೆ? ಒಂದು ವೇಳೆ ಗೆದ್ದರೆ ಯಾರು ಮುಖ್ಯಮಂತ್ರಿ ಅಭ್ಯರ್ಥಿ? ಎನ್ನುವ ಯಾವ ಲೆಕ್ಕಾಚಾರಗಳೂ ಬಿಜೆಪಿ ಯಲ್ಲಿ ಇರಲಿಲ್ಲ. ಆದರೆ ತಳಮಟ್ಟದಲ್ಲಿ ಪಕ್ಷವನ್ನು ಕಳೆದೊಂದು ದಶಕದಲ್ಲಿ ವ್ಯವಸ್ಥಿತವಾಗಿ ಕಟ್ಟುವಲ್ಲಿ ಹಾಗೂ ಆಪ್ ಸರಕಾರದ ವಿರುದ್ಧ ‘ಜನಾಕ್ರೋಶ’ ವ್ಯವಸ್ಥಿತವಾಗಿ ಮೂಡುವಂತೆ ನೋಡಿಕೊಳ್ಳುವ ಕೆಲಸವನ್ನು ಮಾಡಿಕೊಂಡೇ ಬಂದಿತ್ತು.
ಇದರ ಫಲವಾಗಿ, 2020ರ ಚುನಾವಣೆಗೆ ಹೋಲಿಸಿದರೆ, 40 ಹೆಚ್ಚುವರಿ ಸೀಟುಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಆದರೆ ಮೂರು ಬಾರಿ ಸತತವಾಗಿ ದೆಹಲಿಯಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದ ಕಾಂಗ್ರೆಸ್, ಬಿಜೆಪಿಯ ವಿರುದ್ಧ ದಿಕ್ಕಿನಲ್ಲಿ ನಿಂತಿತ್ತು. ಚುನಾವಣೆಗೆ ಹೋಗುವ ಮೊದಲೇ ‘ಇಂಡಿಯ’ ಮೈತ್ರಿಕೂಟದಲ್ಲಿನ ಗೊಂದಲದಿಂದಾಗಿ ಸ್ವತಂತ್ರ ಸ್ಪರ್ಧೆಯನ್ನು ಘೋಷಿಸಿದ್ದ ಕಾಂಗ್ರೆಸ್, ನಾಮಪತ್ರ ಸಲ್ಲಿಸುವ ಮೊದಲೇ ಸೋಲನ್ನು ಒಪ್ಪಿಕೊಂಡಿತ್ತು.
ಕರ್ನಾಟಕದ ಗ್ಯಾರಂಟಿ ಯೋಜನೆಯ ಕಾರ್ಡ್ ಅನ್ನು ದೆಹಲಿಯಲ್ಲಿ ಪ್ಲೇ ಮಾಡಲು ಹೋಗಿ ಕೈ ಸುಟ್ಟುಕೊಂಡಿದೆ ಕಾಂಗ್ರೆಸ್. ಗ್ಯಾರಂಟಿ ಘೋಷಿಸಿದರೂ ಸೋತಿದ್ದು ಏಕೆನ್ನುವ ಪ್ರಶ್ನೆಗೆ ಈಗಲೂ ಕಾಂಗ್ರೆಸ್ಸಿಗರು ಉತ್ತರಿಸುತ್ತಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರೆನ್ನುವುದು ಹೋಗಲಿ, ಚುನಾವಣೆಗೆ ಮೂಲಭೂತ ಎನಿಸುವ ‘ಸಂಘಟನೆ’ಯೇ ಇರಲಿಲ್ಲ.
ಚುನಾವಣೆಯಲ್ಲಿ ಸೋತ ಬಳಿಕ ಸಂಘಟನೆಯನ್ನೇ ಮರೆತಿದ್ದ ಕಾಂಗ್ರೆಸ್ ನಾಯಕರು, ವಿಧಾನ ಸಭಾ ಚುನಾವಣೆಯ ಸಮಯದಲ್ಲಿ ಬೇರೆ ರಾಜ್ಯಗಳ ನಾಯಕರನ್ನು ಕರೆಸಿಕೊಂಡು ಪ್ರಚಾರ ಮಾಡುವ ಸ್ಥಿತಿಗೆ ತಲುಪಿದ್ದರು. ಕಾಂಗ್ರೆಸ್‌ನ ಸಂಘಟನೆ ನೆಲ ಕಚ್ಚಿರುವುದು ಕಾಂಗ್ರೆಸ್ ನಾಯಕರಿಗೆ ತಿಳಿದಿಲ್ಲವೆಂದಲ್ಲ.
ಒಂದು ವೇಳೆ ಆಪ್ ನೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಹೋಗಿದ್ದರೂ, ‘ಮೈತ್ರಿ ಸರಕಾರ’ದ ನೆಪದಲ್ಲಾದರೂ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಕೂರಬಹುದಾಗಿತ್ತು. ಆದರೆ ಹರಿಯಾಣದಲ್ಲಿ ಗೆಲ್ಲುವ ಅತಿಯಾದ ಆತ್ಮವಿಶ್ವಾಸದಿಂದ, ಆಪ್‌ನೊಂದಿಗೆ ಸಂಬಂಧ ಕೆಡಿಸಿಕೊಂಡ ಕಾಂಗ್ರೆಸ್ಸಿಗರು, ಅದೇ ಮನಸ್ತಾಪವನ್ನು ದೆಹಲಿ ಚುನಾವಣೆಗೂ ಮುಂದುವರಿಸಿದರು. ಇದರ ಫಲಿ ತಾಂಶವೇ ಸತತ ಮೂರನೇ ಬಾರಿಗೆ ದೆಹಲಿಯಲ್ಲಿ ‘ಶೂನ್ಯ’ ಫಲಿತಾಂಶ.
ಆದರೆ ಈ ಸೋಲನ್ನು ಸಮರ್ಥಿಸಿಕೊಳ್ಳುತ್ತಿರುವ ಕಾಂಗ್ರೆಸ್ಸಿಗರು, “ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.2ರಷ್ಟು ಮತಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡಿದ್ದೇವೆ, ಅರವಿಂದ ಕ್ರೇಜಿವಾಲ್, ಮನೀಶ್ ಸಿಸೋಡಿಯಾ ಸೇರಿದಂತೆ ಆಪ್‌ನ ಹಲವು ನಾಯಕರು ಸೋಲುವುದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪಡೆದಿರುವ ನಾಲ್ಕೈದು ಸಾವಿರ ಮತಗಳೇ ಕಾರಣ" ಎಂದು ಹೇಳಿಕೊಂಡು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ.
ಆದರೆ ರಾಷ್ಟ್ರೀಯ ಪಕ್ಷದವರಾಗಿದ್ದುಕೊಂಡು ಈ ರೀತಿಯ ಹೀನಾಯ ಸೋಲಿನ ಹೊರತಾಗಿಯೂ, ಶೇಕಡವಾರು ಮತ ಪ್ರಮಾಣ ಹೆಚ್ಚಾಗಿದೆ ಎನ್ನುವ ಮಾತುಗಳನ್ನು ಅವರು ಆಡುತ್ತಿರುವುದು ವಿಪರ್ಯಾಸ. ವರ್ಷದಿಂದ ವರ್ಷಕ್ಕೆ, ಚುನಾವಣೆಯಿಂದ ಚುನಾವಣೆಗೆ ಅಧಃಪತನದತ್ತ ಸಾಗು ತ್ತಿರುವ ಕಾಂಗ್ರೆಸ್‌ಗೆ ಈಗಲೂ ಇರುವ ಏಕೈಕ ಭರವಸೆಯೆಂದರೆ ಅದು ಕರ್ನಾಟಕ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿನ ಗೆಲುವು ಅದು ಕಾಂಗ್ರೆಸ್ ವರಿಷ್ಠರ ಅಥವಾ ಕಾಂಗ್ರೆಸ್ ನಾಯಕತ್ವದ ಗೆಲುವು ಎನ್ನುವುದಕ್ಕಿಂತ, ರಾಜ್ಯದಲ್ಲಿರುವ ಕಾಂಗ್ರೆಸ್ ನಾಯ ಕತ್ವದ ಗೆಲುವು ಎನ್ನುವುದು ಸೂಕ್ತ. ಕರ್ನಾಟಕದಲ್ಲಿ ಘೋಷಿಸಿದ್ದ ಗ್ಯಾರಂಟಿಗಳನ್ನೇ ದೆಹಲಿ ಯಲ್ಲಿಯೂ ಘೋಷಿಸಿದ ಕಾಂಗ್ರೆಸ್‌ಗೆ ಫಲಿತಾಂಶ ಸಿಗಲಿಲ್ಲ. ಇದಕ್ಕೆ ಕಾರಣ, ಮೂರೂ ಪಕ್ಷಗಳು ತಮ್ಮ ತಮ್ಮ ಪ್ರಣಾಳಿಕೆಯಲ್ಲಿ ಕರ್ನಾಟಕ ಮಾದರಿಯನ್ನು ಅಳವಡಿಸಿಕೊಂಡಿದ್ದವು.
ಇದರೊಂದಿಗೆ ದೆಹಲಿ ಕಾಂಗ್ರೆಸ್‌ನಲ್ಲಿನ ಯಾವ ಮುಖ ನೋಡಿ ಮತ ಹಾಕಬೇಕು ಎನ್ನುವ ಗೊಂದಲದಲ್ಲಿ ಮತದಾರರಿದ್ದರು. ಕರ್ನಾಟಕ ಸೇರಿದಂತೆ ದೇಶದ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆ ಉಳಿದಿದೆ ಎನ್ನುವುದಿದ್ದರೆ ಅದು ಸ್ಥಳೀಯ ನಾಯಕತ್ವದ ಕಾರಣಕ್ಕಾಗಿಯೇ ಹೊರತು, ದೆಹಲಿ ನಾಯಕರ ಬಲದಿಂದ ಅಲ್ಲ ಎನ್ನುವುದು ಈಗಾಗಲೇ ಜಗಜ್ಜಾಹೀರಾಗಿದೆ.
ಕೊನೆಯದಾಗಿ, ಚುನಾವಣೆಯಲ್ಲಿನ ಸೋಲು ಬಹುದೊಡ್ಡ ಹಿನ್ನಡೆಯೆಂದು ಭಾವಿಸಬೇಕಿಲ್ಲ. ಆದರೆ ಸೋಲಿನ ಬಳಿಕ ಯಾವ ರೀತಿಯಲ್ಲಿ ಸ್ಥಳೀಯವಾಗಿ ಪಕ್ಷವನ್ನು ಮತ್ತೆ ಕಟ್ಟಲು ಪ್ರಯತ್ನಿ ಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಕಾಂಗ್ರೆಸ್ ವಿಷಯದಲ್ಲಿ ಹೇಳುವುದಾದರೆ, ಸೋತ ರಾಜ್ಯ ಗಳಲ್ಲಿ ಸಂಘಟನೆಯನ್ನು ಮರುಸ್ಥಾಪಿಸುವ ಬದಲು, ಮುಂದೆ ನೋಡೋಣ ಎನ್ನುವ ಮನಸ್ಥಿತಿ ಯಲ್ಲಿ ಅದು ರಾಜ್ಯಗಳನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ.
ಬಿಜೆಪಿಯನ್ನು ಸೈದ್ಧಾಂತಿಕವಾಗಿ ಖಂಡಾತುಂಡವಾಗಿ ವಿರೋಧಿಸುತ್ತಿರುವ ಕಾಂಗ್ರೆಸ್, ಪಕ್ಷ ಸಂಘಟನೆಗೆ, ಸೋತ ರಾಜ್ಯಗಳಲ್ಲಿ ಗೆಲುವಿನ ನಗೆ ಬೀರುವುದಕ್ಕೆ ಬಿಜೆಪಿಯವರು ಮಾಡುವ ‘ತಂತ್ರಗಾರಿಕೆ’ಯನ್ನಾದರೂ ನಕಲು ಮಾಡಬೇಕಿದೆ. ಇಲ್ಲವಾದರೆ, ಭಾರತ ಇತಿಹಾಸದ ಜತೆಜತೆಗೆ ಬೆಳೆದ ಕಾಂಗ್ರೆಸ್ ಅನ್ನು ಮುಂದೆ ದೇಶದಲ್ಲಿ ಹುಡುಕಬೇಕಾದ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಯಿಲ್ಲ.