ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Dr Pathanjali Acharya Column: ಬೆನ್ನುಮೂಳೆಯನ್ನು ಚುರುಕಾಗಿಸುವ ಉಪಾಯ

ಸೊಂಟ ಮತ್ತು ಹೊಟ್ಟೆಯನ್ನು ಆವರಿಸಿಕೊಂಡಿರುವ ಕೊಬ್ಬಿನಂಶವನ್ನು ಕರಗಿಸುವ ನಿಟ್ಟಿನಲ್ಲಿ ಈ ಆಸನವು ಮಹಾನ್ ಪ್ರಯೋಜನಕಾರಿ. ಪ್ರತಿದಿನವೂ ಐದಾರು ಕಿಲೋ ಮೀಟರು ಗಳಷ್ಟು ದೂರವನ್ನು ಓಡಿದಾಗ ದೇಹಕ್ಕೆ ಸಿಗುವಷ್ಟೇ ವ್ಯಾಯಾಮವು, ಈ ಆಸನ ವನ್ನು ಎಡೆ ಬಿಡದೆ ಆಚರಿಸುವುದರಿಂದ ಸಿಗುತ್ತದೆ.

ಬೆನ್ನುಮೂಳೆಯನ್ನು ಚುರುಕಾಗಿಸುವ ಉಪಾಯ

Profile Ashok Nayak Feb 23, 2025 6:02 PM

ವಿಶ್ವಯೋಗ

ಡಾ.ಪತಂಜಲಿ ಆಚಾರ್ಯ

ಪಾಶ್ಚಾತ್ಯ ವ್ಯಾಯಾಮ ಪದ್ಧತಿಗಳು ಅಂಗಸೌಷ್ಠವ, ಸೌಂದರ್ಯದ ಕಡೆಗೇ ಒತ್ತುನೀಡಿ ಅದಕ್ಕನುಗುಣವಾದ ದೇಹ ದಂಡನೆಯನ್ನು ಬಿಂಬಿಸುತ್ತವೆ. ಇಂಥ ಅಂಗ ಸಾಧನೆಗಳಿಂದ ಮಾಂಸಖಂಡಗಳ ಬೆಳವಣಿಗೆಯಷ್ಟೇ ಸಾಧ್ಯ. ಆದರೆ ಯೋಗಾಸನಗಳು ವ್ಯಕ್ತಿಯ ದೈಹಿಕ-ಮಾನಸಿಕ-ಆಧ್ಯಾತ್ಮಿಕ ಬೆಳವಣಿಗೆಗೂ ಕಸುವು ತುಂಬುತ್ತವೆ. ಅಂಥ ಆಸನಗಳನ್ನು ಕಲಿ ಯೋಣ. ಇಲ್ಲಿರುವುದು ಪೂರಕ ಮಾಹಿತಿಯಷ್ಟೇ; ಯೋಗಾಭ್ಯಾಸಕ್ಕೆ ಮುಂದಾಗುವವರು ಅದನ್ನು ಗುರುಮುಖೇನ ಕಲಿಯಬೇಕಾದುದು ಅಪೇಕ್ಷಣೀಯ.

ಪಶ್ಚಿಮೋತ್ತಾಸನ

ಸೊಂಟ ಮತ್ತು ಹೊಟ್ಟೆಯನ್ನು ಆವರಿಸಿಕೊಂಡಿರುವ ಕೊಬ್ಬಿನಂಶವನ್ನು ಕರಗಿಸುವ ನಿಟ್ಟಿನಲ್ಲಿ ಈ ಆಸನವು ಮಹಾನ್ ಪ್ರಯೋಜನಕಾರಿ. ಪ್ರತಿದಿನವೂ ಐದಾರು ಕಿಲೋ ಮೀಟರುಗಳಷ್ಟು ದೂರವನ್ನು ಓಡಿದಾಗ ದೇಹಕ್ಕೆ ಸಿಗುವಷ್ಟೇ ವ್ಯಾಯಾಮವು, ಈ ಆಸನ ವನ್ನು ಎಡೆಬಿಡದೆ ಆಚರಿಸುವುದರಿಂದ ಸಿಗುತ್ತದೆ.

ಇದನ್ನೂ ಓದಿ: Yoga Namaskara: ಹನುಮ ಜಯಂತಿ ಪ್ರಯುಕ್ತ 108 ಯೋಗ ನಮಸ್ಕಾರ ಮಾಡಿದ ಯೋಗಪಟುಗಳು

ಅಭ್ಯಾಸಕ್ರಮ: ಪದರಗಳಲ್ಲಿ ಮಡಚಿಟ್ಟುಕೊಂಡಿರುವ ದಪ್ಪನೆಯ ಬಟ್ಟೆ ಅಥವಾ ಜಮ ಖಾನದ ಮೇಲೆ ಅಂಗಾತವಾಗಿ ನಿರಾಳರಾಗಿ ಮಲಗಿಕೊಳ್ಳಿ. ತರುವಾಯದಲ್ಲಿ ತಲೆ ಹಾಗೂ ಎದೆಯ ಭಾಗವನ್ನು ಮೇಲಕ್ಕೆತ್ತುತ್ತಾ ಬಂದು ನೇರವಾಗಿ ಕುಳಿತುಕೊಳ್ಳಿ. ಉಸಿರುಬಿಡುತ್ತಾ ತಲೆ ಮತ್ತು ಎದೆಯನ್ನು ಮುಂದಕ್ಕೆ ಬಾಗಿಸುತ್ತಾ, ಎರಡೂ ಕೈಗಳ ತೋರುಬೆರಳುಗಳಿಂದ ಕಾಲಿನ ಹೆಬ್ಬೆರಳುಗಳನ್ನು ಹಿಡಿಯುವ ಯತ್ನ ಮಾಡಿರಿ. ಹಣೆಯನ್ನು ಮೊಣಕಾಲುಗಳಿಗೆ ತಾಗಿಸಬೇಕು ಮತ್ತು ಮೊಣಕಾಲನ್ನು ಬಾಗಿಸದಂತೆ ನೇರವಾಗಿ ಇಟ್ಟುಕೊಂಡಿರಬೇಕು (ಶುರುವಿನಲ್ಲಿ ಇದು ಕೈಗೂಡದಿರಬಹುದು, ದಿನಗಳೆದಂತೆ ಮತ್ತು ಅಭ್ಯಾಸವನ್ನು ನಿರಂತರವಾಗಿಸಿದಂತೆ ಈ ಹಂತಗಳನ್ನು ಸಾಧಿಸಬಹುದು). ಈ ಭಂಗಿಯಲ್ಲಿ ಸುಮಾರು ಐದು ಸೆಕೆಂಡುಗಳವರೆಗಿದ್ದು, ನಂತರ ತಲೆಯನ್ನು ಮೊಣಕಾಲಿನ ಭಾಗದಿಂದ ಮೇಲಕ್ಕೆತ್ತಿ ಉಸಿರನ್ನು ಎಳೆದುಕೊಳ್ಳಿ. ಅಭ್ಯಾಸವಾದಂತೆ ಈ ಆಸನದ ಭಂಗಿಯನ್ನು ೫ ಸೆಕೆಂಡು ಗಳಿಂದ 1 ನಿಮಿಷದ ವರೆಗೂ ವಿಸ್ತರಿಸಬಹುದು.

ಪ್ರಯೋಜನಗಳು: ಈ ಆಸನದ ಅಭ್ಯಾಸದಿಂದಾಗಿ ಬೆನ್ನೆಲುಬಿನ ಸ್ನಾಯು, ಅಸ್ತಿರಜ್ಜುವಿನ ಶಕ್ತಿ ಹೆಚ್ಚುತ್ತದೆ, ಜಠರದ ಸ್ನಾಯುಗಳೂ ಬಲಗೊಳ್ಳುತ್ತವೆ, ಜಠರದ ಕೆಳ ಭಾಗದಲ್ಲಿ ಇರಬ ಹುದಾದ ಎಲ್ಲ ತೆರನಾದ ವಾಯುವೂ (ಗ್ಯಾಸ್) ಶರೀರದಿಂದ ಹೊರ ದೂಡಲ್ಪಡುತ್ತದೆ. ರಕ್ತ ಸಂಚಾರವು ಹೆಚ್ಚುವುದರಿಂದ ಬೆನ್ನು ಮೂಳೆಯ ಸಾಮರ್ಥ್ಯವು ಚುರುಕಾಗುತ್ತದೆ.