IAF officer dies: ಪ್ಯಾರಾಚೂಟ್ ವೈಫಲ್ಯದಿಂದ ವಾಯುಸೇನೆ ಅಧಿಕಾರಿ ಸಾವು; ಶಿವಮೊಗ್ಗ ತಲುಪಿದ ಪಾರ್ಥಿವ ಶರೀರ
IAF officer dies: ಉತ್ತರ ಪ್ರದೇಶದ ಆಗ್ರಾದ ವಾಯುಸೇನೆಯ ಪ್ಯಾರಾಟ್ರೂಪರ್ ಟ್ರೈನಿಂಗ್ ಸ್ಕೂಲ್‌ನಲ್ಲಿ (ಪಿಟಿಎಸ್) ಶುಕ್ರವಾರ ಬೆಳಗ್ಗೆ ತರಬೇತಿ ವೇಳೆ ಪ್ಯಾರಾಚೂಟ್ ವೈಫಲ್ಯದಿಂದ ಶಿವಮೊಗ್ಗ ಜಿಲ್ಲೆ ಹೊಸನಗರ ಮೂಲದ ಜೂನಿಯರ್ ವಾರಂಟ್ ಆಫೀಸರ್ ಮಂಜುನಾಥ್ ಮೃತಪಟ್ಟಿದ್ದರು.


ಶಿವಮೊಗ್ಗ: ತರಬೇತಿ ವೇಳೆ ಪ್ಯಾರಾಚೂಟ್ ತೆರೆದುಕೊಳ್ಳದ ಪರಿಣಾಮ ಮೃತಪಟ್ಟಿದ್ದ (IAF officer dies) ಜಿಲ್ಲೆಯ ಹೊಸನಗರ ಮೂಲದ ಭಾರತೀಯ ವಾಯುಸೇನೆಯ ಜೂನಿಯರ್ ವಾರಂಟ್ ಆಫೀಸರ್ ಮಂಜುನಾಥ್(36) ಅವರ ಪಾರ್ಥಿವ ಶರೀರ ಭಾನುವಾರ ಬೆಳಗ್ಗೆ ಶಿವಮೊಗ್ಗ ನಗರಕ್ಕೆ ತಲುಪಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಸಂಸದ ರಾಘವೇಂದ್ರ, ಶಾಸಕರು ಹಾಗೂ ಇತರ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಉತ್ತರ ಪ್ರದೇಶದ ಆಗ್ರಾದ ವಾಯುಸೇನೆಯ ಪ್ಯಾರಾಟ್ರೂಪರ್ ಟ್ರೈನಿಂಗ್ ಸ್ಕೂಲ್‌ನಲ್ಲಿ (ಪಿಟಿಎಸ್) ಶುಕ್ರವಾರ ಬೆಳಗ್ಗೆ ತರಬೇತಿ ವೇಳೆ ಪ್ಯಾರಾಚೂಟ್ ವೈಫಲ್ಯದಿಂದ ಜೂನಿಯರ್ ವಾರಂಟ್ ಆಫೀಸರ್ ಮಂಜುನಾಥ್ ಮೃತಪಟ್ಟಿದ್ದರು.
ಮೃತ ಮಂಜುನಾಥ್ ಅವರು 2023ರಲ್ಲಿ ಭಾರತೀಯ ವಾಯುಸೇನೆಗೆ ಜೂನಿಯರ್ ವಾರಂಟ್ ಅಧಿಕಾರಿಯಾಗಿ ಸೇರ್ಪಡೆಗೊಂಡಿದ್ದರು. ನಂತರ, ಜಮ್ಮು-ಕಾಶ್ಮೀರ್, ಅಸ್ಸಾಂ, ಗಾಜಿಯಾಬಾದ್, ದೆಹಲಿಯಲ್ಲಿ ಸೇವೆ ಸಲ್ಲಿಸಿದ ಬಳಿಕ ಕಳೆದ ಒಂದೂವರೆ ತಿಂಗಳಿನಿಂದ ಉತ್ತರ ಪ್ರದೇಶದ ಆಗ್ರಾದ ಭಾರತೀಯ ವಾಯುಸೇನೆಯ ಪಿಟಿಎಸ್‌ನಲ್ಲಿ ಜೂನಿಯರ್ ವಾರಂಟ್ ಅಧಿಕಾರಿಯಾಗಿ ಕರ್ತವ್ಯ ನಿರತರಾಗಿದ್ದರು.
ಮೂಲತಃ ಕೃಷಿ ಕುಟುಂಬಕ್ಕೆ ಸೇರಿದ ಮಂಜುನಾಥ್ ಇವರು 2019ರಲ್ಲಿ ಅಸ್ಸಾಂ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದರು. ಒಟ್ಟಾರೆ 16 ವರ್ಷಗಳ ಕಾಲ ವಾಯುಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮೃತರು, ಇದೇ ಫೆಬ್ರವರಿ 7ರ ಶುಕ್ರವಾರ ಬೆಳಗ್ಗೆ ಸರಿ ಸುಮಾರು 7 ರಿಂದ 8 ಗಂಟೆಯ ವೇಳೆಯಲ್ಲಿ ಆಗ್ರಾ ವಾಯುಸೇನೆ ಪಿಟಿಎಸ್ ಕೇಂದ್ರದಲ್ಲಿ ಮಂಜುನಾಥ ಅವರನ್ನು ಒಳಗೊಂಡಂತೆ ಸುಮಾರು 12 ಜನರ ತಂಡಕ್ಕೆ ಕಾರ್ಗೋ ಮಾದರಿ ವಿಮಾನದಿಂದ ಸುಮಾರು 18 ಸಾವಿರ ಅಡಿ ಎತ್ತರದಿಂದ ಪ್ಯಾರ ಜಂಪ್ ತರಬೇತಿ ನೀಡುವ ಸಮಯದಲ್ಲಿ, ಎಲ್ಲಾ 11 ಮಂದಿ ಶಿಬಿರಾರ್ಥಿಗಳು ಸುರಕ್ಷಿತವಾಗಿ ಜಂಪ್ ಪೂರೈಸಿದ್ದು, ಕೊನೆಯವರಾಗಿ ಮಂಜುನಾಥ್ ಜಿಗಿದಿದ್ದು, ಅವರ ಪ್ಯಾರಚೂಟ್ ಸರಿಯಾಗಿ ತೆರೆದುಕೊಳ್ಳದ ಪರಿಣಾಮ ಕೊನೆಯುಸಿರೆಳೆದಿದ್ದರು.

ಗ್ರಾಮದಲ್ಲಿ ಮಡುಗಟ್ಚಿದ ಶೋಕ
ವಿಷಯ ತಿಳಿಯುತ್ತಿದ್ದಂತೆ ಮೃತರ ಗ್ರಾಮದಲ್ಲಿ ಅತೀವ ಶೋಕ ಮನೆ ಮಾಡಿದ್ದು, ಸಂಬಂಧಿಕರು, ಹಿತೈಷಿಗಳು ನೊಂದ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ. ತಾಲೂಕು ಆಡಳಿತ ಸಕಲ ಸರ್ಕಾರಿ ಗೌರವ ನೀಡಲು ಸರ್ವ ತಯಾರಿಗೆ ಮುಂದಾಗಿದೆ.

ಈ ಸುದ್ದಿಯನ್ನೂ ಓದಿ | Koratagere News: ಅಕ್ರಮ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್: ಆರೋಪಿ ಬಂಧನ, 137 ಸಿಲಿಂಡರ್ ವಶ
ಹೊಸನಗರದ ಕ್ರೀಡಾಂಗಣದಲ್ಲಿ ಶಾಸಕ ಗೋಪಾಲಕೃಷ್ಣ ಸಮ್ಮುಖದಲ್ಲಿ ತಹಸೀಲ್ದಾರ್ ರಶ್ಮಿ ಎಚ್. ನೇತೃತ್ವದಲ್ಲಿ ಸರ್ಕಾರಿ ಗೌರವ ನೀಡಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ ಎಂದು ಮೃತನ ಕುಟುಂಬ ಮೂಲಗಳು ತಿಳಿಸಿವೆ.
ಕಾಶಿಯಲ್ಲಿ ಸ್ನಾನ ಮಾಡುವ ವೇಳೆ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು
ಬಾಗಲಕೋಟೆ: ಕಾಶಿಯಲ್ಲಿ ಸ್ನಾನ ಮಾಡುವ ವೇಳೆ ನದಿಯಲ್ಲಿ ಮುಳುಗಿ ಬಾಗಲಕೋಟೆ ಮೂಲದ ವ್ಯಕ್ತಿ ಮೃತಪಟ್ಟಿದ್ದಾರೆ. ಸತೀಶ್ ಜೋಷಿ(44) ಮೃತರು. ಇವರು ಬಾಗಲಕೋಟೆ ಜಿಪಂ ಹೊರಗುತ್ತಿಗೆ ಡಾಟಾ ಎಂಟ್ರಿ ಆಪರೇಟರ್ ಆಗಿದ್ದು, ವಾರದ ಹಿಂದೆ ಕುಂಭಮೇಳಕ್ಕೆ ಪ್ರಯಾಣ ಬೆಳೆಸಿದ್ದರು. ಪ್ರಯಾಗ್ ರಾಜ್ ಕುಂಭ ಮೇಳದಲ್ಲಿ ಭಾಗಿಯಾಗಿ ನಂತರ ಕಾಶಿಗೆ ತೆರಳಿದ್ದರು. ಕಾಶಿಯಲ್ಲಿ ಸ್ನಾನ ಮಾಡುವ ವೇಳೆ ದುರ್ಘಟನೆ ನಡೆದಿದೆ. 35 ಜನ ಪ್ರವಾಸಿ ಬಸ್‌ನಲ್ಲಿ ತೆರಳಿದ್ದರು. ಮೃತ ಸತೀಶ್‌ಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.