ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narayana Murthy-Sudha Murthy’s Biopic: ಸುಧಾ ಮೂರ್ತಿ-ನಾರಾಯಣ ಮೂರ್ತಿ ಬಯೋಪಿಕ್‌ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡ ನಿರ್ದೇಶಕಿ ಅಶ್ವಿನಿ ಅಯ್ಯರ್‌

Narayana Murthy-Sudha Murthy’s Biopic: 4 ವರ್ಷಗಳ ಹಿಂದೆ ಇನ್ಫೋಸಿಸ್ ಸಹಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಮತ್ತು ಲೇಖಕಿ ಸುಧಾ ಮೂರ್ತಿ ದಂಪತಿಯ ಬಯೋಪಿಕ್‌ ಮಾಡುವುದಾಗಿ ಘೋಷಿಸಿದ್ದ ಬಾಲಿವುಡ್‌ ನಿರ್ದೇಶಕಿ ಇದೀಗ ಈ ಬಗ್ಗೆ ಅಪ್‌ಡೇಟ್‌ ನೀಡಿದ್ದಾರೆ. ʼʼಚಿತ್ರದ ಕಥೆಯನ್ನು ಬರೆಯುತ್ತಿದ್ದೇನೆ. ಈ ಪ್ರತಿಕ್ರಿಯೆ ಸುದೀರ್ಘವಾದುದು, ಇದಕ್ಕೆ ತುಂಬ ಸಮಯ ಹಿಡಿಯುತ್ತಿದೆʼʼ ಎಂದಿದ್ದಾರೆ.

ತೆರೆ ಮೇಲೆ ಬರಲಿದೆ ಸುಧಾ ಮೂರ್ತಿ-ನಾರಾಯಣ ಮೂರ್ತಿ ಬಯೋಪಿಕ್‌

Profile Ramesh B Mar 10, 2025 8:19 PM

ಮುಂಬೈ: ಇನ್ಫೋಸಿಸ್ ಸಹಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ (N.R. Narayana Murthy) ಮತ್ತು ಅವರ ಪತ್ನಿ, ಲೇಖಕಿ ಸುಧಾ ಮೂರ್ತಿ (Sudha Murthy) ಭಾರತೀಯ ಉದ್ಯಮದಲ್ಲಿ ಬಹುದೊಡ್ಡ ಹೆಸರು. ಅದಕ್ಕಿಂತ ಹೆಚ್ಚಾಗಿ ತಮ್ಮ ಸಮಾಜ ಸೇವೆಯಿಂದಲೇ ಈ ದಂಪತಿ ಗುರುತಿಸಿಕೊಂಡಿದ್ದಾರೆ. ಸರಳ ಜೀವನ ಶೈಲಿಗೂ ಇವರು ಜನಪ್ರಿಯ. ಹೀಗಾಗಿ ಈ ದಂಪತಿಯ ಬಯೋಪಿಕ್‌ ತೆರೆ ಮೇಲೆ ತರುವುದಾಗಿ 4 ವರ್ಷಗಳ ಹಿಂದೆಯೇ ಬಾಲಿವುಡ್‌ನ ಜನಪ್ರಿಯ ನಿರ್ದೇಶಕಿ ಅಶ್ವಿನಿ ಐಯ್ಯರ್‌ ತಿವಾರಿ (Ashwiny Iyer Tiwari) ಘೋಷಿಸಿದ್ದರು. ಆದರೆ ಚಿತ್ರ ಇದುವರೆಗೆ ಸೆಟ್ಟೇರಿಲ್ಲ (Narayana Murthy-Sudha Murthy’s Biopic). ಕೆಲವು ದಿನಗಳಿಂದ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದೀಗ ಅಶ್ವಿನಿ ಐಯ್ಯರ್‌ ತಿವಾರಿ ಈ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ.

ನ್ಯೂಸ್‌ 18 ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜತೆಗೆ ತಾವು ಕೈಗೆತ್ತಿಕೊಳ್ಳಲಿರುವ ಇತರ ಪ್ರಾಜೆಕ್ಟ್‌ ಬಗ್ಗೆಯೂ ಮಾತನಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Shiva Rajkumar: ಡಾಕ್ಯುಮೆಂಟರಿ ರೂಪದಲ್ಲಿ ಬರಲಿದೆ ಶಿವಣ್ಣನ ಕ್ಯಾನ್ಸರ್‌ ಹೋರಾಟದ ಕಥೆ

ನಾರಾಯಣ ಮೂರ್ತಿ-ಸುಧಾ ಮೂರ್ತಿ ಬಯೋಪಿಕ್‌ ಬಗ್ಗೆ ಏನಂದ್ರು?

ನಾರಾಯಣ ಮೂರ್ತಿ-ಸುಧಾ ಮೂರ್ತಿ ಬಯೋಪಿಕ್‌ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶ್ವಿನಿ ತಿವಾರಿ, ʼʼಚಿತ್ರದ ಕಥೆಯನ್ನು ಬರೆಯುತ್ತಿದ್ದೇನೆ. ಈ ಪ್ರತಿಕ್ರಿಯೆ ಸುದೀರ್ಘವಾದುದು, ಇದಕ್ಕೆ ತುಂಬ ಸಮಯ ಹಿಡಿಯುತ್ತಿದೆ. ಆದರೆ ಒಂದಂತೂ ಸತ್ಯ. ಇವರ ಕಥೆಯನ್ನು ಖಂಡಿತವಾಗಿಯೂ ತೆರೆ ಮೇಲೆ ತರುತ್ತೇವೆ. ಇವರ ಕಥೆಯನ್ನು ಹೇಳಲು ಉತ್ಸುಕಳಾಗಿದ್ದೇನೆʼʼ ಎಂದು ತಿಳಿಸಿದ್ದಾರೆ. ಆ ಮೂಲಕ ಪ್ರಾಜೆಕ್ಟ್‌ ಆರಂಭವಾಗಲಿದೆ ಎನ್ನುವ ಸುಳಿವು ನೀಡಿದ್ದಾರೆ. ಹೀಗಾಗಿ ಕನ್ನಡಿಗರ ಬಹು ದಿನಗಳ ಕನಸು ನನಸಾಗುವ ಸೂಚನೆ ನೀಡಿದ್ದಾರೆ.

ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಜೀವನ ಮತ್ತು ಸಾಧನೆಗಳನ್ನು ನಿಖರವಾಗಿ ಕಟ್ಟಿಕೊಡುವುದಕ್ಕಾಗಿ ಅವರು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರ ವೈಯಕ್ತಿಕ ಜೀವನದ ಜತೆಗೆ ನಡೆಸಿದ ಹೋರಾಟ, ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸಲು ಪಟ್ಟ ಶ್ರಮ ಮುಂತಾದ ಯಾರಿಗೂ ಗೊತ್ತಿರದ ವಿಚಾರದ ಮೇಲೆ ಈ ಚಿತ್ರ ಬೆಳಕು ಚೆಲ್ಲಲಿದೆ.

ಈ ಚಿತ್ರದ ಆರಂಭಿಸುವ ಮುನ್ನ ತಾವು ನಿರ್ಮಿಸುವ ಇತರ ಸಿನಿಮಾಗಳತ್ತ ಗಮನ ಹರಿಸಿರುವುದಾಗಿ ಅವರು ಹೇಳಿದ್ದಾರೆ. ಟಿಪ್ಸ್‌ ಪ್ರೊಡಕ್ಷನ್ಸ್‌ ಸಹಯೋಗದೊಂದಿಗೆ ಅವರು ವಿವಿಧ ಚಿತ್ರಗಳನ್ನು ನಿರ್ಮಿಸುತ್ತಿರುವುದಾಗಿ ತಿಳಿಸಿದ್ದಾರೆ.

2016ರಲ್ಲಿ ತೆರೆಕಂಡ ʼನಿಲ್‌ ಬಟ್ಟೆ ಸನ್ನಾಟʼ ಚಿತ್ರ ನಿರ್ದೇಶಿಸುವ ಮೂಲಕ ಅಶ್ವಿನಿ ತಿವಾರಿ ಬಾಲಿವುಡ್‌ಗೆ ಕಾಲಿಟ್ಟರು. ಮೊದಲ ಚಿತ್ರವೇ ಪ್ರೇಕ್ಷಕರ, ವಿಮರ್ಶಕರ ಗಮನ ಸೆಳೆಯುವಲ್ಲಿ ಯಸಸ್ವಿಯಾಯಿತು. ಅದಾದ ಬಳಿಕ ಚಿತ್ರವನ್ನು ʼಅಮ್ಮ ಕಣಕ್ಕುʼ ಹೆಸರಿನಲ್ಲಿ ತಮಿಳಿಗೆ ರಿಮೇಕ್‌ ಮಾಡಲಾಯಿತು. ಇದಕ್ಕೂ ಅವರೇ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅದಾದ ಬಳಿಕ 'ಬರೆಲಿ ಕಿ ಬರ್ಫಿ', 'ಪಂಗ', 'ಘರ್‌ ಕಿ ಮುರ್ಗಿ', ʼಆಂಕಿ ಕಹಾನಿಯಾʼ, ʼಬ್ರೇಕ್‌ ಪಾಯಿಂಟ್‌ʼ, ʼಫಾದುʼ ಮುಂತಾದ ಚಿತ್ರ, ವೆಬ್‌ ಸೀರಿಸ್‌ಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಸಂವೇದನಾಶೀಲ ನಿರ್ದೇಶಕಿ ಎನಿಸಿಕೊಂಡಿರುವ ಅವರ ಚಿತ್ರ ಸೆಟ್ಟೇರುವಾಗಲೇ ಸಹಜವಾಗಿ ಕುತೂಹಲ ಕೆರಳಿಸುತ್ತದೆ. ಹೀಗಾಗಿ ನಾರಾಯಣ ಮೂರ್ತಿ-ಸುಧಾ ಮೂರ್ತಿ ಬಯೋಪಿಕ್‌ ಬಗ್ಗೆ ನಿರೀಕ್ಷೆ ಗರಿಗೆದರಿದೆ.