ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shiva Rajkumar: ಡಾಕ್ಯುಮೆಂಟರಿ ರೂಪದಲ್ಲಿ ಬರಲಿದೆ ಶಿವಣ್ಣನ ಕ್ಯಾನ್ಸರ್‌ ಹೋರಾಟದ ಕಥೆ

Shiva Rajkumar: ಕ್ಯಾನ್ಸ್‌ರ್‌ನಿಂದ ಸಂಪೂರ್ಣ ಚೇತರಿಸಿಕೊಂಡಿರುವ ಹ್ಯಾಟ್ರಿಕ್‌ ಹೀರೋ ಶಿವ ರಾಜ್‌ಕುಮಾರ್‌ ಇದೀಗ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಕ್ಯಾನ್ಸರ್‌ ವಿರುದ್ಧ ತಾವು ನಡೆಸಿದ ಹೋರಾಟವನ್ನು ಇದೀಗ ಡಾಕ್ಯುಮೆಂಟರಿ ರೂಪದಲ್ಲಿ ಹೊರ ತರಲು ಇದೀಗ ಅವರು ಸಜ್ಜಾಗಿದ್ದಾರೆ. ಆ ಮೂಲಕ ಜಾಗೃತಿ ಮೂಡಿಸುವುದು ಅವರ ಉದ್ದೇಶ.

ಡಾಕ್ಯುಮೆಂಟರಿ ರೂಪದಲ್ಲಿ ಬರಲಿದೆ ಶಿವಣ್ಣನ ಕ್ಯಾನ್ಸರ್‌ ಹೋರಾಟದ ಕಥೆ

ಶಿವ ರಾಜ್‌ಕುಮಾರ್‌.

Profile Ramesh B Mar 10, 2025 1:19 PM

ಬೆಂಗಳೂರು: ಕ್ಯಾನ್ಸ್‌ರ್‌ನಿಂದ ಬಳಲುತ್ತಿದ್ದ ಕರುನಾಡ ಚಕ್ರವರ್ತಿ ಡಾ. ಶಿವ ರಾಜ್‌ಕುಮಾರ್‌ (Shiva Rajkumar) ಅಮೆರಿಕಕ್ಕೆ ತೆರಳಿ ಯಶಸ್ವಿಯಾಗಿ ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ಮರಳಿದ್ದಾರೆ. ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಶಿವಣ್ಣ ಕೆಲ ದಿನಗಳ ವಿಶ್ರಾಂತಿ ಬಳಿಕ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಅವರು ತಾವು ಕ್ಯಾನ್ಸರ್‌ ವಿರುದ್ದ ನಡೆಸಿದ ಹೋರಾಟವನ್ನು ಡಾಕ್ಯಮೆಂಟರಿ ಮೂಲಕ ದಾಖಲಿಸಲು ಮುಂದಾಗಿದ್ದಾರೆ. ಆ ಮೂಲಕ ಒಂದಷ್ಟು ಜನರಿಗೆ ಆತ್ಮಸ್ಥೈರ್ಯ ನೀಡುವುದು ಅವರ ಉದ್ದೇಶ. ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ಡಾಕ್ಯುಮೆಂಟರಿ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಮೂತ್ರಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಿವಣ್ಣ ಸ್ವಲ್ಪವೂ ಧೃತಿಗೆಡದೆ ಅದರ ವಿರುದ್ದ ಹೋರಾಡಿ ಇದೀಗ ಫಿಟ್‌ ಆ್ಯಂಡ್‌ ಫೈನ್‌ ಆಗಿದ್ದಾರೆ. ಹೀಗಾಗಿ ಒಂದಷ್ಟು ಜನರಲ್ಲಿ ಕ್ಯಾನ್ಸರ್‌ ಬಗ್ಗೆ ಇರುವ ತಪ್ಪು ಕಲ್ಪನೆ, ಭಯವನ್ನು ಹೋಗಾಲಾಡಿಸಲೆಂದೇ ಅವರು ಡಾಕ್ಯಮೆಂಟರಿ ರೂಪದಲ್ಲಿ ತಮ್ಮ ಅನುಭವವನ್ನು ಬಿಚ್ಚಿಡಲಿದ್ದಾರೆ.

ಡಾಕ್ಯುಮೆಂಟರಿಯಲ್ಲಿ ಏನಿರಲಿದೆ?

ಕ್ಯಾನ್ಸರ್‌ ಬಂದರೆ ಜೀವನವೇ ಮುಗಿಯಿತು ಎನ್ನುವ ತಪ್ಪು ಅಭಿಪ್ರಾಯ ಈಗಲೂ ಬಹುತೇಕರಲ್ಲಿದೆ. ಸೂಕ್ತ ಚಿಕಿತ್ಸೆ ಪಡೆದು ಮೊದಲಿನಂತೆ ಸಹಜ ಜೀವನ ನಡೆಸಬಹುದು ಎಂಬುದೇ ಹಲವರಿಗೆ ತಿಳಿಸಿಲ್ಲ. ಹೀಗಾಗಿ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸಿ ಅವರಿಗೆ ಧೈರ್ಯ ತುಂಬಲೆಂದೇ ಡಾಕ್ಯಮೆಂಟರಿ ನಿರ್ಮಿಸಲಾಗುತ್ತಿದೆ. ಕ್ಯಾನ್ಸರ್ ಬಂದ ನಂತರ ತಾವು ಅನುಭವಿಸಿದ ನೋವು, ಚಿಕಿತ್ಸಾ ವಿಧಾನವನ್ನೂ ಅವರು ವಿವರಿಸಲಿದ್ದಾರೆ. ಡಾಕ್ಯುಮೆಂಟರಿ ಬಗ್ಗೆ ಈಗಾಗಲೇ ಒಂದು ಸುತ್ತಿನ‌ ಮಾತುಕತೆಯೂ ನಡೆದಿದೆ. ಈ ಡಾಕ್ಯುಮೆಂಟರಿ ಯಾರು ಮಾಡಲಿದ್ದಾರೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ.

ಈ ಸುದ್ದಿಯನ್ನೂ ಓದಿ: Shiva Rajkumar: ಕ್ಯಾನ್ಸರ್‌ ಗೆದ್ದ ಶಿವಣ್ಣ ಕರುನಾಡಿಗೆ ಆಗಮನ;‍ ಫ್ಯಾನ್ಸ್‌ ಫುಲ್‌ ಖುಷ್‌

ಮೂತ್ರಕೋಶದ ಕ್ಯಾನ್ಸರ್ ಚಿಕಿತ್ಸೆಗಾಗಿ ಶಿವ ರಾಜ್‌ಕುಮಾರ್‌ 2024ರ ಡಿ. 18ರಂದು ಬೆಂಗಳೂರಿನಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದರು. ಡಿ. 24ರಂದು ಮಿಯಾಮಿಯ ಆಸ್ಪತ್ರೆಯಲ್ಲಿ ಶಿವ ರಾಜ್‌ಕುಮಾರ್‌ಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿತ್ತು. 6 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಚೇತರಿಸಿಕೊಂಡು 2025ರ ಜ. 26ರಂದು ಬೆಂಗಳೂರಿಗೆ ಮರಳಿದ್ದರು. ಕೈತುಂಬಾ ಸಿನಿಮಾ ಹೊಂದಿರುವ ಶಿವ ರಾಜ್‌ಕುಮಾರ್‌ ಇದೀಗ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

ತೆಲುಗು ಚಿತ್ರದಲ್ಲಿ ಶಿವಣ್ಣ

ಕನ್ನಡದ ಸಾಲು ಸಾಲು ಚಿತ್ರಗಳ ಜತೆಗೆ ಶಿವಣ್ಣ ಇದೀಗ ತೆಲುಗು ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ. ಟಾಲಿವುಡ್‌ ಸೂಪರ್‌ ಸ್ಟಾರ್‌ ರಾಮ್‌ ಚರಣ್‌ ಅವರ ಮುಂದಿನ ಚಿತ್ರದಲ್ಲಿ ಶಿವಣ್ಣ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2021ರಲ್ಲಿ ತೆರೆಕಂಡ ತೆಲುಗಿನ ʼಉಪ್ಪೇನಾʼ ಚಿತ್ರದ ಮೂಲಕ ಟಾಲಿವುಡ್‌ನ ಗಮನ ಸೆಳೆದ ಬುಚ್ಚಿ ಬಾಬು ಸನಾ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದ್ದು, ತಾತ್ಕಾಲಿಕವಾಗಿ ʼಆರ್‌ಸಿʼ 16 (RC 16) ಎನ್ನುವ ಟೈಟಲ್‌ ಇಡಲಾಗಿದೆ. ಇತ್ತೀಚೆಗೆ ʼಆರ್‌ಸಿ 16ʼ ಚಿತ್ರತಂಡ ಶಿವಣ್ಣ ಅವರ ಲುಕ್‌ ಟೆಸ್ಟ್‌ ಪೂರ್ಣಗೊಳಿಸಿದೆ. ಮೊದಲ ಬಾರಿಗೆ ರಾಮ್‌ ಚರಣ್‌ ಮತ್ತು ಶಿವಣ್ಣ ತೆರೆ ಹಂಚಿಕೊಳ್ಳುತ್ತಿರುವ ಕಾರಣದಿಂದಲೇ ಈಗಾಗಲೇ ಸಿನಿಮಾ ಕುತೂಹಲ ಕೆರಳಿಸಿದೆ. ಕಥೆಗೆ ತಿರುವು ನೀಡುವ ಬಹುಮುಖ್ಯ ಪಾತ್ರದಲ್ಲಿ ಶಿವ ರಾಜ್‌ಕುಮಾರ್‌ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.