Child Dies: ಲಸಿಕೆ ಹಾಕಿದ ಕೆಲವೇ ಹೊತ್ತಿನಲ್ಲಿ 5 ತಿಂಗಳ ಮಗು ಸಾವು
Child Dies: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾಗೋಡು ಗ್ರಾಮದಲ್ಲಿ ಘಟನೆ ನಡೆದಿದೆ. ಆರೋಗ್ಯ ಸಿಬ್ಬಂದಿಯೊಬ್ಬರು ಗ್ರಾಮಕ್ಕೆ ಬಂದು ಮಗುವಿಗೆ ಲಸಿಕೆ ನೀಡಿದ್ದರು. ಬಳಿಕ ಕೆಲವೇ ಗಂಟೆಗಳಲ್ಲಿ ಮಗು ಅಸ್ವಸ್ಥಗೊಂಡಿದೆ. ಹೀಗಾಗಿ ಆಸ್ಪತ್ರೆಗೆ ಕರೆದೊಯ್ದಾಗ ಮಗು ಮೃತಪಟ್ಟಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.


ಶಿರಾ: ತಾಲೂಕಿನ ಮಾಗೋಡು ಗ್ರಾಮದಲ್ಲಿ ರೋಟ್-2 ಲಸಿಕೆ ಹಾಕಿಸಿಕೊಂಡಿದ್ದ ಮಗು ಮೃತಪಟ್ಟಿದ್ದು, ಮಗು ಸಾವಿಗೆ ಲಸಿಕೆಯೇ ಕಾರಣ ಎಂದು ಪೋಷಕರು ಆರೋಪಿಸಿ ದೂರು ದಾಖಲಿಸಿದ್ದಾರೆ. ಗ್ರಾಮದ ಕೀರ್ತನ ಹಾಗೂ ಲಕ್ಷ್ಮೀಕಾಂತ್ ದಂಪತಿಯ 5 ತಿಂಗಳ ಮಗುವಿಗೆ ಅದೇ ಗ್ರಾಮದ ಎಎನ್‌ಎಂ ಮುದ್ದಮ್ಮ ಎಂಬುವವರು ಮಾ.6 ರಂದು ಬೆಳಗ್ಗೆ 11.30ರ ಸುಮಾರಿಗೆ ರೋಟ್-2 ಲಸಿಕೆ ಹಾಕಿದ್ದರು. ಲಸಿಕೆಯ ಬಳಿಕ ಮಲಗಿದ ಮಗು ಸಂಜೆ 3.30ರ ಹೊತ್ತಿಗೆ ಭೇದಿಯಿಂದ ಅಸ್ವಸ್ಥಗೊಂಡಿದೆ. ಬಳಿಕ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವಾಗ ಮಗು ಮೃತಪಟ್ಟಿದೆ.
ಮಗು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಪೋಷಕರು ಮಗುವನ್ನು ಮೊದಲಿಗೆ ಶಿರಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ವೈದ್ಯರು ತುಮಕೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಬಳಿಕ ಅಲ್ಲಿಂದ ಶ್ರೀದೇವಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಮಗುವನ್ನು ಪರಿಶೀಲಿಸಿದ ವೈದ್ಯರು ಮಗು ಮೃತಪಟ್ಟು ಒಂದು ಗಂಟೆಯಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಮಗು ಮೃತಪಡಲು ಲಸಿಕೆಯೇ ಕಾರಣ ಎಂದು ಪಾಲಕರು ಆಕ್ರೋಶ ಹೊರಹಾಕಿದ್ದು, ಈ ಸಂಬಂಧ ಶಿರಾ ನಗರ ಪೊಲೀಸ್ ಠಾಣೆ ದೂರು ದಾಖಲಿಸಿದ್ದಾರೆ.
![]()
ಮಗು ಮೃತಪಟ್ಟಿರುವುದು ನಿಜ. ಆದರೆ ಲಸಿಕೆಯಿಂದಲೇ ಮೃತಪಟ್ಟಿದೆಯೋ ಅಥವಾ ಬೇರೆ ಕಾರಣಕ್ಕೆ ಮೃತಪಟ್ಟಿದ್ದೆಯೇ ಎಂಬುದು ತಿಳಿದಿಲ್ಲ. ವಿಧಿ ವಿಜ್ಞಾನ ಪ್ರಯೋಗಲಾಯದ ವರದಿ ಬಂದ ನಂತರ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು.
ಚಂದ್ರಶೇಖರ್, ಡಿಎಚ್ಒ, ತುಮಕೂರು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜಿಲ್ಲೆಯಲ್ಲಿ 72 ಕೆರೆ ಅಭಿವೃದ್ಧಿ

ತುಮಕೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜಿಲ್ಲೆಯಲ್ಲಿ ಈವರೆವಿಗೂ 72 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.
ತಾಲೂಕಿನ ಪಿ.ಗೊಲ್ಲಹಳ್ಳಿ, ಕುರಿಕೆಂಪನಹಳ್ಳಿ ಕೆರೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪುನರುಜ್ಜೀವನಗೊಳಿಸಿ ಗ್ರಾಮಸ್ಥರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಈವರೆಗೂ ರಾಜ್ಯದಲ್ಲಿ 816 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ವೀರೇಂದ್ರಹೆಗ್ಗಡೆ ಅವರ ದೂರದೃಷ್ಟಿತ್ವದಂತೆ ಊರಿಗೊಂದು ಕೆರೆಯನ್ನು ಅಭಿವೃದ್ಧಿಪಡಿಸಿ ರೈತರ ಜೀವನಕ್ಕೆ ಹೊಸ ಚೈತನ್ಯ ನೀಡುವುದರ ಜತೆಗೆ ಪ್ರಾಣಿಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ಕೆರೆಯ ದಂಡೆಯ ಮೇಲೆ ನೂರಾರು ಗಿಡಮರಗಳನ್ನು ಬೆಳೆಸುತ್ತಿದ್ದೇವೆ ಎಂದರು.
ಜನಜಾಗೃತಿ ವೇದಿಕೆಯ ಸದಸ್ಯ ಶಿವಕುಮಾರ್ ಮಾತನಾಡಿ, ಧರ್ಮಸ್ಥಳ ಸಂಘ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ನಾಡಿನ ಪ್ರತಿ ಹೆಣ್ಣುಮಕ್ಕಳು ಸಂಘದಿಂದ ಬ್ಯಾಂಕ್ ಗಳ ಮೂಲಕ ಸಾಲ ಪಡೆದು ಆರ್ಥಿಕ ಸ್ವಾವಲಂಬಿಗಳಾಗಿ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಊರಿನ ಕೆರೆಯನ್ನು ಕೇವಲ 1 ತಿಂಗಳಲ್ಲಿ ಅಭಿವೃದ್ಧಿಗೊಳಿಸಿದ್ದಾರೆ. ಅವರಿಗೆ ಊರಿನ ಗ್ರಾಮಸ್ಥರ ಪರವಾಗಿ ಧನ್ಯವಾದಗಳು ಎಂದು ತಿಳಿಸಿದರು.
ವಿಶ್ವವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ರಂಗನಾಥ ಕೆ.ಹೊನ್ನಮರಡಿ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಧರ್ಮಸ್ಥಳ ಸಂಘ ಸಾಮಾಜಿಕ ಕಾರ್ಯ ನಿರ್ವಹಿಸುತ್ತಿದೆ. ಜನಸಾಮಾನ್ಯರಿಗೆ ಅಷ್ಟು ಸುಲಭವಾಗಿ ಬ್ಯಾಂಕ್‌ಗಳಲ್ಲಿ ಸಾಲ ಸಿಗುವುದಿಲ್ಲ. ಆದರೆ ಧರ್ಮಸ್ಥಳ ಸಂಘದಲ್ಲಿ ಮಹಿಳೆಯರು ಕೇವಲ ಆಧಾರ್ ಕಾರ್ಡನ್ನು ನೀಡಿ 1 ಲಕ್ಷದಿಂದ 5 ಲಕ್ಷದವರೆಗೆ ಸಾಲ ಪಡೆದು ಆರ್ಥಿಕ ಸ್ವಾವಲಂಬಿಯಾಗಿ ಜೀವನ ನಿರ್ವಹಿಸುತ್ತಿದ್ದಾರೆ. ಮನೆ ಇಲ್ಲದ ನಿರಾಶ್ರಿತರಿಗೆ ವಾತ್ಸಲ್ಯ ಯೋಜನೆಯಡಿ ಮನೆ, ಮಾಸಾಶನ, ಶುದ್ಧ ಕುಡಿಯುವ ನೀರು, ಆರೋಗ್ಯ ವಿಮೆ ಸೇರಿದಂತೆ ಅನೇಕ ಜನಪರ ಕಾರ್ಯ ಮಾಡುವ ಮೂಲಕ ಧರ್ಮಸ್ಥಳ ಸಂಘ ಮಾದರಿಯಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಓಂಕಾರಸ್ವಾಮಿ ಮಾತನಾಡಿ, ಕೆರೆ ಅಭಿವೃದ್ಧಿಯಾದರೆ ವರ್ಷಕ್ಕೆ 3 ಬೆಳೆಗಳನ್ನು ರೈತ ಬೆಳೆಯುತ್ತಾನೆ. ದೇಶದ ಜಿಡಿಪಿಯು ಸಹ ಅಭಿವೃದ್ಧಿ ಆಗುತ್ತದೆ,ಪ್ರತಿಯೊಬ್ಬರೂ ಕೆರೆಯ ಅಂಗಳದಲ್ಲಿ ಅವರ ಹೆಸರಿನಲ್ಲಿ 2 ಗಿಡಗಳನ್ನು ನೆಟ್ಟು ಬೆಳೆಸಿ ಎಂದು ಕರೆ ನೀಡಿದರು.
ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹನುಮಂತರಾಯಪ್ಪ ಮಾತನಾಡಿ, ಕೆರೆಯನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಾದ ಕರ್ತವ್ಯ ಗ್ರಾಮಸ್ಥರ ಮೇಲಿದೆ,ಅನವಶ್ಯಕವಾಗಿ ಕೆರೆಯ ಮಣ್ಣನ್ನು ತೆಗೆಯಬಾರದು. ಒಂದು ಕೆರೆ ಅಭಿವೃದ್ಧಿಯಾಗಿ ನೀರು ನಿಂತರೆ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದ್ರೆ ಕಾನೂನು ಹೋರಾಟ: ಜೋಶಿ ಎಚ್ಚರಿಕೆ
ಕಾರ್ಯಕ್ರಮದಲ್ಲಿ ಪಿಡಿಒ ಗಂಗಾಧರ್, ಯೋಜನಾಧಿಕಾರಿ ಪಿ.ಬಿ.ಸಂದೇಶ್, ಕೃಷಿ ಮೇಲ್ವಿಚಾರಕ ರಾಘವೇಂದ್ರ, ಡಾ. ತುಳಸಿಪ್ರಸನ್ನ,ರಂಗಸ್ವಾಮಯ್ಯ, ಕರಿಯಣ್ಣ,ಶಿವರಾಜು,ಶಶಿಧರ್,ರಂಗಪ್ಪ,ಸೋಮಣ್ಣ ಉಪಸ್ಥಿತರಿದ್ದರು.