ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಾಕ್‌ಗೆ ಮಗ್ಗುಲ ಮುಳ್ಳಾದ ಬಲೂಚಿಸ್ಥಾನ

ಪಾಕಿಸ್ತಾನದಲ್ಲಿ ಪ್ರತ್ಯೇಕ ಬಲೂಚಿಸ್ತಾನದ ಬೇಡಿಕೆ ಇಂದು ನಿನ್ನೆಯದಲ್ಲ, ಅದು ದಶಕಗಳಷ್ಟು ಹಳೆಯ ವಿಷಯ. ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಇತ್ತೀಚಿನ ವರ್ಷಗಳಲ್ಲಿ ತನ್ನ ಬಲವೃದ್ಧಿ ಮಾಡಿಕೊಂಡಿದ್ದು, ಹಿಂಸಾ ಹೋರಾಟ ತೀವ್ರಗೊಳಿಸಿದೆ. ಪಾಕ್ ಸೇನೆ, ಆಡಳಿತದ ವಿರುದ್ಧ ತನ್ನ ದಾಳಿ ಮುಂದುವರಿಸು ತ್ತಲೇ ಬಂದಿದೆ

ನರೇಂದ್ರ ಪಾರೇಕಟ್

ಬಲೂಚಿಸ್ಥಾನ ಬಂಡುಕೋರರಿಂದ ಪಾಕ್‌ ರೈಲು ಅಪಹರಣ

ಸುಮಾರು 27 ಅಪಹರಣಕಾರರು, 30 ಸೈನಿಕರು ಹತ್ಯೆ

ಬಿಎಲ್‌ಎನಿಂದ ಆಗಾಗ ಒಂದಲ್ಲ ಒಂದು ವಿಧ್ವಂಸಕ ಚಟುವಟಿಕೆಗಳು

ದಶಕಗಳಿಂದ ನಡೆಯುತ್ತಿರುವ ಹೋರಾಟ

ಪಾಕಿಸ್ತಾನದಲ್ಲಿ ಪ್ರತ್ಯೇಕ ಬಲೂಚಿಸ್ತಾನದ ಬೇಡಿಕೆ ಇಂದು ನಿನ್ನೆಯದಲ್ಲ, ಅದು ದಶಕ ಗಳಷ್ಟು ಹಳೆಯ ವಿಷಯ. ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಇತ್ತೀಚಿನ ವರ್ಷ ಗಳಲ್ಲಿ ತನ್ನ ಬಲವೃದ್ಧಿ ಮಾಡಿಕೊಂಡಿದ್ದು, ಹಿಂಸಾ ಹೋರಾಟ ತೀವ್ರಗೊಳಿಸಿದೆ. ಪಾಕ್ ಸೇನೆ, ಆಡಳಿತದ ವಿರುದ್ಧ ತನ್ನ ದಾಳಿ ಮುಂದುವರಿಸು ತ್ತಲೇ ಬಂದಿದೆ. ಬಲೂಚಿಸ್ತಾನ ಹೋರಾಟಗಾರರು ಚೀನೀಯರನ್ನೂ ಗುರಿಯಾಗಿ ಟ್ಟುಕೊಂಡು ದಾಳಿ ನಡೆಸುತ್ತಿದ್ದಾರೆ. ಹೀಗಾಗಿ ಪಾಕಿಸ್ತಾನ ಸರಕಾರಕ್ಕೆ ಬಲೂಚಿ ಸ್ತಾನ ಬಂಡುಕೋರರು ತಲೆನೋವಾಗಿ ಪರಿಣಮಿಸಿದ್ದಾರೆ.

ಜಾಫರ್‌ ಏಕ್ಸ್‌ ಪ್ರೆಸ್‌ ಘಟನೆ

ರೈಲು ಕ್ವೆಟ್ಟಾದಿಂದ ಪೇಶಾವರಕ್ಕೆ ಹೊರಟಿತ್ತು. 450ಕ್ಕೂ ಹೆಚ್ಚು ಪ್ರಯಾಣಿಕರಿದ್ದ ರೈಲನ್ನು ಅಪಹರಿಸಿರುವ ಬಿಎಲ್‌ಎ, ರೈಲಿನಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿ ಕೊಂಡರು. ರೈಲಿನಲ್ಲಿದ್ದ ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆಗೊಳಿಸಿದ್ದಾರೆ.

ಬಲೂಚಿಸ್ತಾನ್ ಬಂಡುಕೋರ ಸೇನೆಯ ಇತಿಹಾಸ: ಬಲೂಚ್ ಲಿಬರೇಶನ್ ಆರ್ಮಿ ಯನ್ನು (ಬಿಎಲ್‌ಎ) 2011ರಲ್ಲಿ ಬಲೂಚಿಸ್ತಾನ ಬಂಡುಕೋರರು ಅಧಿಕೃತವಾಗಿ ರಚಿಸಿ ದರು. 1974ರಲ್ಲಿ ಅಬ್ದುಲ್ ಮಜೀದ್ ಬಲೋಚ್ ಎಂಬಾತನು ಪಾಕಿಸ್ತಾನದ ಆಗಿನ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೊ ಅವರ ಹತ್ಯೆ ಮಾಡಲು ಪ್ರಯತ್ನಿಸಿದ್ದ. ಅಬ್ದುಲ್ ಮಜೀದ್ ಅವರ ಹೆಸರಿನಲ್ಲಿ ಈ ಸಂಸ್ಥೆಗೆ ಮಜೀದ್ ಬ್ರಿಗೇಡ್ ಎಂದು ಈ ಮೊದಲು ಹೆಸರಿಡಲಾಗಿತ್ತು. ಗೆರಿಲ್ಲಾ ಯುದ್ಧ ಮಾದರಿ ಅನುಸರಿಸುತ್ತಾ, ಅದು ಪಾಕಿಸ್ತಾನದ ಮಿಲಿಟರಿ ಬೆಂಗಾವಲು ಪಡೆಗಳ ಮೇಲೆ ಹಿಟ್ ಆಂಡ್ ರನ್ ತಂತ್ರಗಳನ್ನು ಅಳವಡಿಸಿ ಕೊಂಡಿತು, ಮಜೀದ್ ಬ್ರಿಗೇಡ್ ಬಿಎಲ್‌ಎಯ ಆತ್ಮಹತ್ಯಾ ದಾಳಿ ಘಟಕವಾಗಿದ್ದು, ಈಗಾ ಗಲೇ ಪಾಕಿಸ್ತಾನದಾದ್ಯಂತ ಹಲವು ಆತ್ಮಹತ್ಯಾ ದಾಳಿಗಳನ್ನು ನಡೆಸಿದೆ, ಅಷ್ಟೇ ಅಲ್ಲದೇ, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಮೇಲೆ ಹಲವಾರು ದಾಳಿಗಳನ್ನೂ ನಡೆಸಿದೆ. ಅದರ ಫೈಟರ್‌ಗಳು ವಿಮಾನ ವಿರೋಧಿ ಬಂದೂಕುಗಳನ್ನು ಹೊಂದಿದ್ದು, ಇಂತಹ ವ್ಯವಸ್ಥೆ ಹೊಂದಿರುವ ಜಗತ್ತಿನ ಕೆಲವೇ ಕೆಲವು ಬಂಡುಕೋರ ಸಂಸ್ಥೆಗಳಲ್ಲಿ ಬಿಎಲ್‌ಎ ಪ್ರಮುಖ ವಾಗಿವೆ.

ಇದನ್ನೂ ಓದಿ: Vishweshwar Bhat Column: ಇಳಿದು ಬಾ ತಾಯಿ ಇಳಿದು ಬಾ, ಸಂತೇಶಿವರಕ್ಕೆ ಹರಿದು ಬಾ !

ಭಾರತವನ್ನು ದೂಷಿಸಿದ ಪಾಕ್ ?

ತನ್ನ ಎಲ್ಲಾ ಸಮಸ್ಯೆಗಳಿಗೆ ಭಾರತ ವನ್ನುದೂಷಿಸುವುದು ಪಾಕಿಸ್ತಾನದ ಹಳೆಯ ಚಾಳಿ. ಪಾಕಿಸ್ತಾನದ ದೌರ್ಜನ್ಯಗಳಿಂದಾಗಿ ಬಲೂಚಿಸ್ತಾನ್ ಬಂಡುಕೋರರು ಈ ಸಲವೂ ರೈಲಿನ ಅಪಹರಣಕ್ಕಾಗಿ ಶಸ್ತ್ರಾಸ್ತ್ರ ಕೈಗೆತ್ತಿಕೊಂಡಾಗ, ಆ ವಿಷಯಕ್ಕೂ ಭಾರತವನ್ನು ಪಾಕ್ ದೂಷಿ ಸಿದೆ. ಪಾಕಿಸ್ತಾನ ಸರಕಾರವು ಭಾರತದ ವಿರುದ್ಧ ಬಹಳ ವಿಚಿತ್ರ ಮತ್ತು ಗಂಭೀರ ಆರೋಪ ಗಳನ್ನು ಮಾಡಿದೆ. ಪ್ರಧಾನಿ ಶಹಬಾಜ್ ಷರೀಫ್ ಅವರ ರಾಜಕೀಯ ಸಲಹೆಗಾರ ರಾಣಾ ಸನಾವುಲ್ಲಾ, ಬಲೂಚ್ ಲಿಬರೇಶನ್ ಆರ್ಮಿ ಮತ್ತು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ ಸಂಘಟನೆಗಳಿಗೆ ಭಾರತ ಸರಕಾರವು ಸಹಾಯ ಮಾಡುತ್ತಿದೆ ಎಂದು ದೂಷಿಸಿದ್ದು, ಭಾರತವು ಇದನ್ನೆಲ್ಲಾ ಮಾಡಿಸುತ್ತಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದೂ ಹೇಳಿದ್ದಾರೆ.‌

Baluchistan 2

ಬಲೂಚಿಗಳೆಂದರೆ ಯಾರು ?

ಬಲೂಚಿ ಎಂದರೆ ಅದೊಂದು ಸಮುದಾಯದ ಭಾಗ. ಆ ಸಮುದಾಯವು ಪಾಕಿಸ್ತಾನ, ಇರಾನ್, ಅಫ್ಘಾನಿಸ್ತಾನದಲ್ಲಿ ಹರಡಿದೆ. ಅವರು ಇರುವ ಪ್ರಾಂತ್ಯದ ವಿಸ್ತೀರ್ಣವು ಫ್ರಾನ್ಸ್ ಗಿಂತಲೂ ಕಡಿಮೆ. ಮೂರು ರಾಷ್ಟ್ರಗಳಲ್ಲಿರುವ ಬಲೂಚಿಗಳ ಪ್ರಾಂತ್ಯಗಳಿಗೆ ಹೋಲಿಸಿದರೆ ಪಾಕಿಸ್ತಾನದಲ್ಲಿ ಇರುವ ಬಲೂಚಿಗಳ ಪ್ರಾಂತ್ಯವೇ ದೊಡ್ಡದು. ಆ ಪ್ರಾಂತ್ಯದ ನಂತರ ಅವರು ಇರುವ ಎರಡನೇ ಅತಿ ದೊಡ್ಡ ಪ್ರದೇಶವೆಂದರೆ ಇರಾನ್‌ನ ಸಿಸ್ತಾನ್. ಬಲೂಚಿಗರು ವಾಸಿಸುವ ಪ್ರಾಂತ್ಯವು ಗುಡ್ಡಗಾಡು ಪ್ರದೇಶವಾಗಿದ್ದು, ಅಲ್ಲಿ ಸುಮಾರು 9 ಮಿಲಿಯನ್ (90 ಲಕ್ಷ) ಜನಸಂಖ್ಯೆಯಿದ್ದು, ಅವರೆಲ್ಲರೂ ಸಂಘಟಿತರಾಗಿದ್ದಾರೆ. ತಾವು ವಾಸಿಸುತ್ತಿರುವ ಪ್ರಾಂತ್ಯಕ್ಕೆ ಪ್ರತ್ಯೇಕ ದೇಶದ ಸ್ಥಾನಮಾನ ಸಿಗಬೇಕೆಂದು ಅವರು ದಶಕದಿಂದ ಹೋರಾಡು ತ್ತಿದ್ದಾರೆ. ಅದಕ್ಕಾಗಿ ಈಗ ಕ್ರಾಂತಿಕಾರಕ ಹಾದಿ ತುಳಿದಿದ್ದು, ಅವರಿಂದಲೇ ಈಗ ಜಾಫರ್ ರೈಲು ಅಪರಣ ಘಟನೆಯೂ ನಡೆದಿದೆ.

ಬಿಎಲ್‌ಎ ಆರೋಪಗಳೇನು ?

ಬಲೂಚಿಸ್ತಾನಕ್ಕೆ ಪ್ರತ್ಯೇಕ ದೇಶದ ಸ್ಥಾನಮಾನ ಸಿಗುವಂತಾಗಬೇಕು ಎಂದು ಹೋರಾಡು ತ್ತಿರುವ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಹಲವಾರು ಆರೋಪಗಳನ್ನು ಮಾಡಿದೆ. ತಾವು ಇರುವ ಪ್ರಾಂತ್ಯವನ್ನು ದಶಕಗಳ ಹಿಂದೆ ಖಾನ್ ಆಫ್ ಕಲಾತ್ ಎಂಬ ರಾಜ‌ ಆಳುತ್ತಿದ್ದ. 1948ರಲ್ಲಿ ಜಾರಿಗೊಂಡ ಇನ್‌ಸ್ಟ್ರುಮೆಂಟ್ ಆಫ್ ಎಕ್ಸೆಷನ್ ಎಂಬ ಒಪ್ಪಂದಕ್ಕೆ ಬಲವಂತವಾಗಿ ಸಹಿ ಹಾಕಿಸಲಾಗಿತ್ತು. ಆ ಮೂಲಕ ಪಾಕಿಸ್ತಾನವು ನಮ್ಮ ನೆಲದಲ್ಲಿ ಬಲವಂತವಾಗಿ ಕಾಲಿಟ್ಟು, ನಮ್ಮಲ್ಲಿದ್ದ ಸರಕಾರವನ್ನು ಪಾಕಿಸ್ತಾನದ ಅಧೀನ ಸರಕಾರದಂತೆ ಮಾಡಿ ಕೊಂಡು, ಆನಂತರ ನಮ್ಮ ಸರಕಾರವನ್ನು ಕಿತ್ತೊಗೆದು ನೇರವಾಗಿ ನಮ್ಮ ಮೇಲೆ ಪಾಕಿಸ್ತಾನವು ಆಡಳಿತ ಮಾಡುತ್ತಾ, ಅಧಿಕಾರ ಚಲಾಯಿಸುತ್ತಿದೆ ಎಂಬುದು ಬಿಎಲ್‌ಎ ಆರೋಪ.

ಬಿಎಲ್‌ಎ ಬೇಡಿಕೆ ಏನು ?

ತಮ್ಮ ಪ್ರಾಂತ್ಯವು ತನ್ನೊಡಲಿನಲ್ಲಿ ಅನೇಕ ಖನಿಜಗಳು, ನೈಸರ್ಗಿಕ ತೈಲವನ್ನು ಹೊಂದಿದೆ, ಆದರೆ ಪಾಕಿಸ್ತಾನ ಸರಕಾರವು ಈ ಎಲ್ಲಾ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿದೆ ಎಂದು ಬಿಎಲ್‌ಎ ಆರೋಪಿಸಿದೆ. ಎಷ್ಟೆಲ್ಲಾ ನೈಸರ್ಗಿಕ ಖನಿಜಗಳಿದ್ದರೂ ತಮ್ಮ ಸಮು ದಾಯ ಮಾತ್ರ ದಶಕಗಳಿಂದ ಬಡವರಾಗಿಯೇ ಉಳಿದಿದ್ದಾರೆ, ಹಾಗಾಗಿ ಪಾಕಿಸ್ತಾನದ ಹಿಡಿತದಿಂದ ತಮ್ಮ ಪ್ರಾಂತ್ಯವನ್ನು ರಕ್ಷಿಸಿ, ಪ್ರತ್ಯೇಕ ದೇಶ ಸ್ಥಾಪಿಸಲು ನಿರ್ಧರಿಸಿರುವುದಾಗಿ ಬಿಎಲ್‌ಎ ತನ್ನ ಬೇಡಿಕೆ ತಿಳಿಸಿದೆ.

ಚೀನಾಕ್ಕೆ ಪಾಠ ಕಲಿಸಲು ನಿರ್ಧಾರ

ಇದೇ ವೇಳೆ ಚೀನಾ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬಿಎಲ್‌ಎ, ‘ಚೀನಾ, ನೀವು ನಮ್ಮ ಒಪ್ಪಿಗೆ ಯಿಲ್ಲದೆ ಇಲ್ಲಿಗೆ ಬಂದಿದ್ದೀರಿ, ನಮ್ಮ ಶತ್ರುಗಳನ್ನು ಬೆಂಬಲಿಸಿದ್ದೀರಿ, ನಮ್ಮ ಹಳ್ಳಿ ಗಳನ್ನು ನಾಶ ಮಾಡುವಲ್ಲಿ ಪಾಕಿಸ್ತಾನಿ ಮಿಲಿಟರಿಗೆ ಸಹಾಯ ಮಾಡಿದ್ದೀರಿ. ಆದರೆ ಈಗ ನಮ್ಮ ಸರದಿ. ಬಿಎಲ್‌ಎ ನಿಮ್ಮನ್ನು ಬಲೂಚ್ ನೆಲದಿಂದ ಒದ್ದು ಓಡಿಸುತ್ತದೆ. ನಾವದಕ್ಕೆ ಸಕಲ ರೀತಿಯಲ್ಲೂ ಸಿದ್ಧವಿದ್ದು, ದೊಡ್ಡ ಸಂಖ್ಯೆಯಲ್ಲಿ ಸ್ವಯಂ ಸೇವಕರು ನಮ್ಮ ಹೋರಾಟಕ್ಕೆ ಕೈ ಜೋಡಿ ಸಿದ್ದು, ನಮ್ಮ ನೆಲ- ಜಲಕ್ಕಾಗಿ ಬಲಿದಾನಕ್ಕೆ ಸಿದ್ಧವಾಗಿದ್ದಾರೆ. ಚೀನಾ ಅಧಿಕಾರಿಗಳನ್ನೇ ಗುರಿಯಾಗಿಸಿ ಕೊಂಡು ದಾಳಿ ಮಾಡಲು ಬಿಎಲ್‌ಎ ವಿಶೇಷ ಘಟಕವೂ ರಚನೆಯಾಗಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್‌ಗೆ ಬಿಎಲ್‌ಎ ಖಾರವಾಗಿ ಪ್ರತಿ ಕ್ರಯಿಸಿದ್ದು, ‘ನೀನು ಜೀವಂತವಾಗಿರಬೇಕು ಎಂದರೆ ಕೂಡಲೇ ಬಲೂಚಿಸ್ತಾನದಿಂದ ನಿನ್ನ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೋ, ಇಲ್ಲವೆಂದರೆ ಚೀನಾ ಸೇನೆಗೆ ನಾವು ತಕ್ಕ ಪಾಠ ಕಲಿಸುತ್ತೇವೆ, ನೀನು ಜೀವನ ಪರ್ಯಂತ ಮರೆಯದಂತೆ ಎಂದೂ ಎಚ್ಚರಿಕೆ ನೀಡಿದೆ.