IND vs ENG: ನಾಲ್ಕನೇ ಟೆಸ್ಟ್‌ಗೆ ರಿಷಭ್ ಪಂತ್ ಲಭ್ಯತೆ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿ!
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಪಂದ್ಯದ ಮೊದಲನೇ ದಿನ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಪಾದದ ಗಾಯಕ್ಕೆ ತುತ್ತಾಗಿದ್ದರು. ಇದೀಗ ಅವರು ಎರಡನೇ ದಿನ ಬ್ಯಾಟಿಂಗ್‌ಗೆ ಇಳಿದಿದ್ದಾರೆ. ಈ ಬಗ್ಗೆ ಬಿಸಿಸಿಐ ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಮ್ಯಾಂಚೆಸ್ಟರ್ ಟೆಸ್ಟ್‌ಗೆ ರಿಷಭ್ ಪಂತ್ ಲಭ್ಯತೆ ಬಗ್ಗೆ ಬಿಸಿಸಿಐ ಹೇಳಿಕೆ.

ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ(IND vs ENG) ಮೊದಲನೇ ದಿನ ಬ್ಯಾಟಿಂಗ್ ವೇಳೆ ಪಾದದ ಗಾಯಕ್ಕೆ ತುತ್ತಾಗಿ ಮೈದಾನ ತೊರೆದಿದ್ದ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಲಭ್ಯತೆ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಪಂದ್ಯದ ಮೊದಲನೇ ದಿನ 37 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದ ರಿಷಭ್ ಪಂತ್(Rishabh Pant), 68ನೇ ಓವರ್‌ನಲ್ಲಿ ಕ್ರಿಸ್ ವೋಕ್ಸ್ ಎಸೆದಿದ್ದ ಸ್ಲೋ ಎಸೆತದಲ್ಲಿ ರಿವರ್ಸ್ ಸ್ವೀಪ್ ಆಡಲು ಹೋಗಿ ರಿಷಭ್ ಪಂತ್ ತಮ್ಮ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಇದಾದ ಬಳಿಕ ಬ್ಯಾಟಿಂಗ್ ಮುಂದುವರಿಸದೆ ಪೆವಿಲಿಯನ್‌ಗೆ ಮರಳಿದ್ದರು. ಇದೀಗ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ರಿಷಭ್ ಪಂತ್ ಲಭ್ಯತೆ ಬಗ್ಗೆ ಬಿಸಿಸಿಐ ಮಾಹಿತಿ ನೀಡಿದೆ.
ಭಾರತೀಯ ಆಟಗಾರನಿಗೆ ಮೂಳೆ ಮುರಿತದ ಸಾಧ್ಯತೆ ಹೆಚ್ಚಿದ್ದು, ಸುಮಾರು ಆರು ವಾರಗಳ ಕಾಲ ಅವರು ಆಟದಿಂದ ಹೊರಗುಳಿದಿದ್ದಾರೆ ಎಂದು ವರದಿಗಳು ಸೂಚಿಸಿವೆ. ಆದಾಗ್ಯೂ, ಗಾಯದ ತೀವ್ರತೆಯ ಹೊರತಾಗಿಯೂ, ಎರಡನೇ ದಿನದಂದು ನೋವು ನಿವಾರಕಗಳೊಂದಿಗೆ ರಿಷಭ್ ಪಂತ್ ಕ್ರೀಸ್‌ಗೆ ಬಂದಿದ್ದಾರೆ ಹಾಗೂ ಅರ್ಧಶತಕವನ್ನು ಪೂರ್ಣಗೊಳಿಸಿದ್ದಾರೆ.
IND vs ENG: ವಾಷಿಂಗ್ಟನ್ ಸುಂದರ್‌ಗೂ ಮುನ್ನ ಶಾರ್ದುಲ್ ಠಾಕೂರ್ ಆಡಿದ್ದಕ್ಕೆ ದಿನೇಶ್ ಕಾರ್ತಿಕ್ ಆಕ್ರೋಶ!
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಬ್ಯಾಟಿಂಗ್‌ನಲ್ಲಿ ನೆರವು ನೀಡಲಿದ್ದು, ವಿಕೆಟ್ ಕೀಪರ್ ಕಾರ್ಯವನ್ನು ಧ್ರುವ್ ಜುರೆಲ್ ಮುಂದುವರಿಸಲಿದ್ದಾರೆಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ಲಾರ್ಡ್ಸ್ ಟೆಸ್ಟ್‌ನಲ್ಲಿಯೇ ರಿಷಭ್ ಪಂತ್ ವಿಕೆಟ್ ಕೀಪಿಂಗ್ ವೇಳೆ ತಮ್ಮ ಎಡಗೈ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಇದಾದ ಬಳಿಕ ಅವರು ವಿಕೆಟ್ ಕೀಪಿಂಗ್ ನಿರ್ವಹಿಸಿರಲಿಲ್ಲ. ಇವರ ಬದಲು ಪಂದ್ಯದುದ್ದಕ್ಕೂ ಧ್ರುವ್ ಜುರೆಲ್ ವಿಕೆಟ್ ಕೀಪರ್ ಆಗಿ ಆಡಿದ್ದರು. ಇದೀಗ ಓಲ್ಡ್ ಟ್ರಾಫರ್ಡ್‌ನಲ್ಲಿಯೂ ಧ್ರುವ್ ಜುರೆಲ್ ಅವರು ವಿಕೆಟ್ ಕೀಪರ್ ಆಗಿ ಆಡಲಿದ್ದಾರೆ.
"ಮ್ಯಾಂಚೆಸ್ಟರ್ ಟೆಸ್ಟ್‌ನ ಮೊದಲ ದಿನದಂದು ಬಲಗಾಲಿಗೆ ಗಾಯ ಮಾಡಿಕೊಂಡಿದ್ದ ರಿಷಭ್ ಪಂತ್, ಪಂದ್ಯದ ಇನ್ನುಳಿದ ಭಾಗಕ್ಕೆ ವಿಕೆಟ್ ಕೀಪಿಂಗ್ ಕರ್ತವ್ಯಗಳನ್ನು ನಿರ್ವಹಿಸುವುದಿಲ್ಲ. ಧ್ರುವ್ ಜುರೆಲ್ ವಿಕೆಟ್ ಕೀಪರ್ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ. ಗಾಯದ ಹೊರತಾಗಿಯೂ, ರಿಷಭ್ ಪಂತ್ ಎರಡನೇ ದಿನದಂದು ತಂಡವನ್ನು ಸೇರಿಕೊಂಡಿದ್ದಾರೆ ಮತ್ತು ತಂಡದ ಅವಶ್ಯಕತೆಗಳಿಗೆ ಅನುಗುಣವಾಗಿ ಬ್ಯಾಟಿಂಗ್ ನಡೆಸಲು ಲಭ್ಯವಿರುತ್ತಾರೆ," ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
IND vs ENG: ಬ್ಯಾಟಿಂಗ್ ವೇಳೆ ಗಂಭೀರ ಗಾಯಕ್ಕೆ ತುತ್ತಾಗಿ ಮೈದಾನ ತೊರೆದ ರಿಷಭ್ ಪಂತ್!
ಅರ್ಧಶತಕ ಗಳಿಸಿದ ರಿಷಭ್ ಪಂತ್
ಗಾಯದ ಹೊರತಾಗಿಯೂ ರಿಷಭ್ ಪಂತ್ ಗುರುವಾರ ಕ್ರೀಸ್‌ಗೆ ಬಂದರು. ಅವರು ನೋವು ನಿವಾರಕಗಳನ್ನು ತೆಗೆದುಕೊಂಡು ಬ್ಯಾಟ್ ಮಾಡಿದ್ದರು. ಶಾರ್ದುಲ್ ಠಾಕೂರ್ ವಿಎಕಟ್ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಬಂದ ರಿಷಭ್ ಪಂತ್ ಅರ್ಧಶತಕವನ್ನು ಪೂರ್ಣಗೊಳಿಸಿದರು. ಅವರು ಆಡಿದ 75 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿಗಳೊಂದಿಗೆ 54 ರನ್ ಗಳಿಸಿದರು. ಅವರು ತಮ್ಮ ಮುಂದಿನ ಪಾದವನ್ನು ಮುಂದಕ್ಕೆ ತರಲು ಸಾಧ್ಯವಾಗುತ್ತಿರಲಿಲ್ಲ. ಆದಾಗ್ಯೂ ಬ್ಯಾಕ್ ಫುಟ್‌ನಲ್ಲಿಯೇ ಎರಡನೇ ದಿನ 17 ರನ್‌ಗಳನ್ನು ಕಲೆ ಹಾಕಿದರು. ಅಂತಿಮವಾಗಿ ಜೋಫ್ರಾ ಆರ್ಚರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಏಕೆಂದರೆ ಫ್ರಂಟ್ ಫುಟ್ ಎಸೆತದಲ್ಲಿ ಬ್ಯಾಕ್ ಫುಟ್ ಆಡಿದ ಕಾರಣ ಚೆಂಡಿನ ವೇಗವನ್ನು ಅರಿಯಲು ಸಾಧ್ಯವಾಗಲಿಲ್ಲ.