Byrathi Basavaraj: ರೌಡಿಶೀಟರ್ ಕೊಲೆ ಕೇಸ್; ಬಂಧನ ಭೀತಿಯಿಂದ ಕೋರ್ಟ್ ಮೊರೆ ಹೋದ ಶಾಸಕ ಭೈರತಿ ಬಸವರಾಜ್
Byrathi Basavaraj: ಕೊಲೆ ಆರೋಪಿ ಜಗ್ಗ, ಶಾಸಕ ಬೈರತಿ ಬಸವರಾಜ್‌ಗೆ ಅತ್ಯಾಪ್ತನಾಗಿದ್ದು, ಹಲವಾರು ವರ್ಷಗಳಿಂದ ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರುವ ಮಾಹಿತಿ ದೊರೆತಿದೆ. ಹೀಗಾಗಿ ಭೈರತಿ ಬಸವರಾಜ್ ಮತ್ತು ರೌಡಿಶೀಟರ್ ಜಗ್ಗ ಸೇರಿ ಆರೋಪಿಗಳ ಹಿನ್ನೆಲೆಯನ್ನು ಪೊಲೀಸರು ಕೆದಕುತ್ತಿದ್ದಾರೆ.

ಭೈರತಿ ಬಸವರಾಜ್

ಬೆಂಗಳೂರು: ಬಿಜೆಪಿ ಶಾಸಕ ಭೈರತಿ ಬಸವರಾಜ್ (BJP MLA Byrathi Basavaraj) ಅವರು, ರೌಡಿಶೀಟರ್ ಹತ್ಯೆ ಪ್ರಕರಣದಲ್ಲಿ ತಮ್ಮ ಬಂಧನದ ಭೀತಿಯಿಂದ ಪಾರಾಗಲು ಕೋರ್ಟ್ ಮೊರೆ ಹೋಗಿದ್ದಾರೆ. ರೌಡಿಶೀಟರ್ ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವ ಹತ್ಯೆ (Rowdy Sheeter Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಬಂಧನ ಭೀತಿ ಎದುರಾಗಿದೆ. ಪೊಲೀಸರು (Bengaluru Police) ವಶಕ್ಕೆ ಪಡೆಯುವ ಸಾಧ್ಯತೆ ಹಿನ್ನೆಲೆ ಬಿಜೆಪಿ ಶಾಸಕರು ಹೈಕೋರ್ಟ್ ಮೆಟ್ಟಿಲೇರಿದ್ದು, ಎಫ್ಐಆರ್ (FIR) ರದ್ದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ರೌಡಿಶೀಟರ್ ಕೊಲೆ ಪ್ರಕರಣದಲ್ಲಿ ಶಾಸಕರ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಭೈರತಿ ಬಸವರಾಜ್ ಅವರು ಎಫ್ಐಆರ್ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಮಧ್ಯಾಹ್ನವೇ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ನ್ಯಾ.ಕೃಷ್ಣಕುಮಾರ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಪ್ರಕರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬಳಿ ಕೂಡ ಭೈರತಿ ಬಸವರಾಜ್ ಮಾಹಿತಿ ಹಂಚಿಕೊಂಡಿದ್ದಾರೆ.
ರೌಡಿಶೀಟರ್ ಬಿಕ್ಲ ಶಿವ ಕೊಲೆ ಪ್ರಕರಣ ಸಂಬಂಧ ತೀವ್ರ ತನಿಖೆ ನಡೆಸ್ತಿರುವ ಪೊಲೀಸರು, ಆರೋಪಿಗಳ ಹತ್ತು ವರ್ಷದ ಹಿಸ್ಟರಿ ಕೆದಕುತ್ತಿದ್ದಾರೆ. ಹಲವಾರು ವರ್ಷಗಳಿಂದಲೂ ಭೈರತಿ ಬಸವರಾಜ್, ಜಗ್ಗ, ಕಿರಣ್ ಸೇರಿ ಕೆಲವರು ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಬಸವರಾಜ್ ಜಗ್ಗ ಮೂಲಕ ಹಲವು ಸಿವಿಲ್ ಕೇಸುಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರೆತಿದ್ದು, ಹಲವಾರು ಜಮೀನು ವಿಚಾರಗಳಲ್ಲಿ ಸೆಟ್ಲ್ಮೆಂಟ್ ಮಾಡಿರುವುದನ್ನೂ ಪರಿಶೀಲಿಸಲಾಗಿದೆ. ಹೆಣ್ಣೂರು ರೌಡಿಶೀಟರ್ ಆಗಿರುವ ಜಗದೀಶ್ ಅಲಿಯಾಸ್ ಜಗ್ಗ ವಿರುದ್ಧ ಹೆಣ್ಣೂರು, ಇಂದಿರಾನಗರ, ಭಾರತೀನಗರ ಸೇರಿ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಬೈರತಿ ಬಸವರಾಜ್‌ಗೆ ಅತ್ಯಾಪ್ತನಾಗಿರುವ ಜಗದೀಶ್ ಅಲಿಯಾಸ್ ಜಗ್ಗ, ಹಲವಾರು ವರ್ಷಗಳಿಂದ ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರುವ ಮಾಹಿತಿ ದೊರೆತಿದೆ. ಹೀಗಾಗಿ ಭೈರತಿ ಬಸವರಾಜ್ ಮತ್ತು ರೌಡಿಶೀಟರ್ ಜಗ್ಗ ಸೇರಿ ಆರೋಪಿಗಳ ಹಿನ್ನೆಲೆ ಕೆದಕುತ್ತಿರುವ ಪೊಲೀಸರು, ಇವರ ವಿರುದ್ಧ ಎಷ್ಟು ಪ್ರಕರಣಗಳು ಇವೆ, ಯಾವ್ಯಾವ ಕೇಸುಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ ಎಂಬುದನ್ನೂ ಪರಿಶೀಲಿಸುತ್ತಿದ್ದಾರೆ.
ಆವಲಹಳ್ಳಿ ಠಾಣೆ ವ್ಯಾಪ್ತಿಯ ಜಮೀನು ವಿವಾದ ಸಂಬಂಧ ಭೈರತಿ ಬಸವರಾಜ್ ಹಾಗೂ ಜಗ್ಗನ ವಿರುದ್ಧ ಬಿಕ್ಲು ಶಿವ ದೂರು ನೀಡಿದ್ದ. ಭಾರತೀನಗರ ಠಾಣೆಯಲ್ಲಿ ಬಿಕ್ಲ ಶಿವ ಎಫ್ಐಆರ್ ದಾಖಲಾದ ತಕ್ಷಣ ಕೋರ್ಟ್ ಮೂಲಕ ಜಗ್ಗ ಸ್ಟೇ ತಂದುಕೊಂಡಿದ್ದ. ಪೊಲೀಸರೂ ಜಗ್ಗನ ಮೇಲೆ ಕ್ರಮ ಕೈಗೊಳ್ಳದೇ, ಶಿವನನ್ನು ಠಾಣೆಗೆ ಕರೆದು ವಿಚಾರಣೆ ಮಾಡಿದ್ದರಂತೆ. ಹೀಗಾಗಿ ಪೊಲೀಸರ ವಿರುದ್ಧವೂ ತನಿಖೆ ಮಾಡಲು ಕಮಿಷನರ್ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.