ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪರೀಕ್ಷೆಗೆ ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ ಶಿಕ್ಷಕಿಗೆ ವಿದ್ಯಾರ್ಥಿಯಿಂದ ಕಪಾಳಮೋಕ್ಷ

ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಶೇಹ್ರಾ ಪಟ್ಟಣದ ಎಸ್‌ಜೆ ದಾವೆ ಹೈಸ್ಕೂಲ್‌ನಲ್ಲಿ ಪೂರ್ವಭಾವಿ ಪರೀಕ್ಷೆಗೆ ತಡವಾಗಿ ಬಂದಿದ್ದ ವಿದ್ಯಾರ್ಥಿಯನ್ನು ಪ್ರಶ್ನಿಸಿದ ಶಿಕ್ಷಕಿಯ ಮೇಲೆ ಹಲ್ಲೆ ನಡೆದಿದೆ. ವಿದ್ಯಾರ್ಥಿಯೊಬ್ಬ ಕಪಾಳಮೋಕ್ಷ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.

ಶಿಕ್ಷಕಿಗೆ ವಿದ್ಯಾರ್ಥಿಯಿಂದ ಕಪಾಳಮೋಕ್ಷ

ಸಾಂದರ್ಭಿಕ ಚಿತ್ರ -

Profile
Sushmitha Jain Feb 8, 2026 11:45 AM

ಗಾಂಧಿನಗರ, ಫೆ. 8: 12ನೇ ತರಗತಿಯ ಪೂರ್ವಭಾವಿ ಪರೀಕ್ಷೆಗೆ ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ ಶಿಕ್ಷಕಿಗೆ ವಿದ್ಯಾರ್ಥಿಯೊಬ್ಬ ಕಪಾಳಮೋಕ್ಷ ಮಾಡಿದ ಆಘಾತಕಾರಿ ಘಟನೆ ಗುಜರಾತ್‌ (Gujarat)ನ ಪಂಚಮಹಲ್ (Panchmahal) ಜಿಲ್ಲೆಯ ಶೇಹ್ರಾ (Shehra) ಪಟ್ಟಣದಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಶಿಕ್ಷಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಜನವರಿ 24ರಂದು ಶೇಹ್ರಾದ ಎಸ್‌ಜೆ ದಾವೆ ಹೈಸ್ಕೂಲ್‌ (SJ Dave High School)ನಲ್ಲಿ ಪರೀಕ್ಷೆ ನಡೆಯುತ್ತಿತ್ತು. 18 ವರ್ಷದ ವಿದ್ಯಾರ್ಥಿ ಮೊಹಮ್ಮದ್ ಖಾನ್ ಅನ್ಸಾರಿ (Mohammed Khan Ansari) ಪರೀಕ್ಷೆಗೆ ತಡವಾಗಿ ಬಂದಿದ್ದ. ಈ ವೇಳೆ ಅಲ್ಲಿದ್ದ ಮಹಿಳಾ ಮೇಲ್ವಿಚಾರಕರು ತಡವಾಗಿ ಬಂದಿದ್ದಕ್ಕೆ ಕಾರಣ ಕೇಳಿದಾಗ, ಆತ ಅಹಂಕಾರದಿಂದ "ನನ್ನನ್ನು ಮನೆಯಲ್ಲೇ ಯಾರೂ ಪ್ರಶ್ನಿಸುವುದಿಲ್ಲ, ಇದನ್ನೆಲ್ಲಾ ಕೇಳಲು ನೀನ್ಯಾರು?" ಎಂದು ಕೂಗಾಡಿದ್ದಾನೆ. ಅಷ್ಟಕ್ಕೇ ನಿಲ್ಲದ ವಿದ್ಯಾರ್ಥಿ, ಶಿಕ್ಷಕಿಯ ಕೆನ್ನೆಗೆ ಹೊಡೆದು, ಅವರನ್ನು ದೂಡಿ ಕೊಠಡಿಯಿಂದ ಪರಾರಿಯಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.

ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿ:



ತಂದೆಯಿಂದಲೇ ಬೆದರಿಕೆ

ವರದಿಗಳ ಪ್ರಕಾರ ಘಟನೆ ನಡೆದ ದಿನವೇ ವಿದ್ಯಾರ್ಥಿಯ ತಂದೆ ಆ ಶಿಕ್ಷಕಿ ಹಾಗೂ ಪ್ರಾಂಶುಪಾಲರ ಬಳಿ ಕ್ಷಮೆಯಾಚಿಸಿದ್ದರು. ಆದರೆ ಜನವರಿ 27ರಂದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ವಿದ್ಯಾರ್ಥಿಯು ತನ್ನ ತಂದೆ ಮತ್ತು ಸುಮಾರು 15 ರಿಂದ 20 ಜನರ ಗುಂಪಿನೊಂದಿಗೆ ಶಾಲೆಗೆ ಬಂದು, "ನೀನು ಇಲ್ಲಿ ಒಬ್ಬಳೇ ವಾಸಿಸುತ್ತಿದ್ದೀಯಾ" ಎಂದು ಶಿಕ್ಷಕಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ! ಹೇಗೆ ಗೊತ್ತಾ?

ಎಫ್‌ಐಆರ್ ದಾಖಲು

ಶಿಕ್ಷಕಿಯ ದೂರಿನ ಮೇರೆಗೆ ಫೆಬ್ರವರಿ 3ರಂದು ಶೇಹ್ರಾ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿ ಮತ್ತು ಆತನ ತಂದೆ ಸೇರಿದಂತೆ ಸುಮಾರು 20 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ಸ್‌ಪೆಕ್ಟರ್ ಅಂಕುರ್ ಚೌಧರಿ ನೇತೃತ್ವದಲ್ಲಿ ಘಟನೆಯ ಮರುಸೃಷ್ಟಿ (Reconstruction) ನಡೆಸಲಾಗಿದ್ದು, ತನಿಖೆ ಮುಂದುವರಿದಿದೆ.

ಆರೋಪಿ ವಿದ್ಯಾರ್ಥಿಗೆ ಜಾಮೀನು ಮಂಜೂರು

ಬಂಧಿತ ವಿದ್ಯಾರ್ಥಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆತನಿಗೆ ಜಾಮೀನು ಮಂಜೂರಾಗಿದೆ. ತಾನು ಮತ್ತು ತನ್ನ ತಂದೆ ಶಾಲೆಗೆ ಹೋಗಿದ್ದು ಕೇವಲ ಕ್ಷಮೆಯಾಚಿಸಲು ಮಾತ್ರ ಎಂದು ಆರೋಪಿ ವಿದ್ಯಾರ್ಥಿ ವಾದಿಸಿದ್ದಾನೆ. ಆದರೆ, ಶಾಲಾ ಆವರಣದಲ್ಲಿಯೇ ಶಿಕ್ಷಕಿಯ ಮೇಲೆ ನಡೆದ ಈ ಹಲ್ಲೆ ಹಾಗೂ ನಂತರದ ಬೆದರಿಕೆ ತಂತ್ರಗಳು ಜಿಲ್ಲೆಯಾದ್ಯಂತ ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದೆ.