Bomb Threat: ದೆಹಲಿಯ ಶಾಲೆಗೆ ಮತ್ತೆ ಬಾಂಬ್ ಬೆದರಿಕೆ ಕರೆ; ಕಳೆದ ಒಂದು ವಾರದಲ್ಲಿ 7ನೇ ಘಟನೆ
Bomb Threat: ದೆಹಲಿಯ ಹಲವು ಶಾಲೆಗಳಿಗೆ ಬರುವ ಬಾಂಬ್ ಬೆದರಿಕೆ ಕರೆ ನಿಲ್ಲುತ್ತಿಲ್ಲ, ಇದೀಗ ಇಲ್ಲಿನ ದ್ವಾರಕ ನಗರದಲ್ಲಿರುವ ಖಾಸಗಿ ಶಾಲೆ ಬಾಂಬ್ ಬೆದರಿಕೆ ಕರೆ ಬಂದಿದೆ.
Sushmitha Jain
Dec 20, 2024 11:20 AM
ನವದೆಹಲಿ : ದೆಹಲಿಯ ಹಲವು ಶಾಲೆಗಳಿಗೆ(Delhi Bomb Threat) ಬರುವ ಬಾಂಬ್ ಬೆದರಿಕೆ ಕರೆ ನಿಲ್ಲುತ್ತಿಲ್ಲ, ಇದೀಗ ಇಲ್ಲಿನ ದ್ವಾರಕ(Dwarka) ನಗರದಲ್ಲಿರುವ ಖಾಸಗಿ ಶಾಲೆ(Private School) ಬಾಂಬ್ ಬೆದರಿಕೆ(Bomb Threat) ಕರೆ ಬಂದಿದ್ದು, ಪೊಲೀಸರು(Police) ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಕರೆ ಬಂದ ತಕ್ಷಣ ಶಾಲೆಯ ಆಡಳಿತ ಮಂಡಳಿ ದೆಹಲಿ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ತನಿಖೆ ಪ್ರಾರಂಭಿಸಿ ಬಿಗಿ ಬಂದೋಬಸ್ತ್ ವಹಿಸಿದ್ದಾರೆ. ತನಿಖೆಯಲ್ಲಿ ಇದುವರೆಗೆ ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಬೆದರಿಕೆ ಕರೆ ಬಂದ ಹಿನ್ನಲೆ ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಲು ಶಾಲೆ ಮುಂದಾಗಿದೆ.
ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ, ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಸ್ಥಳಗಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಇದುವರೆಗೆ ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ರಾಷ್ಟ್ರ ರಾಜಧಾನಿಯ ಈಗಾಗಲೇ ಹಲವು ಶಾಲೆಗಳಿಗೆ ಇಂತಹ ಕರೆ ಹಾಗೂ ಇಮೇಲ್ ಗಳು ನಿರಂತರವಾಗಿ ಬರುತ್ತಲೇ ಇದ್ದು, ಕಳೆದ ಶನಿವಾರ ಕೂಡ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಒಂದೇ ವಾರದಲ್ಲಿ ಮೂರು ಬಾರಿ ಈ ರೀತಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿ. 8 ರಂದು 40 ಶಾಲೆ, ಡಿ. 13ರಂದು 30 ಮತ್ತು ಡಿ. 14ರಂದು ಕೂಡ ಡಿಪಿಎಸ್ ಆರ್‌ಕೆ ಪುರಂ ಶಾಲೆಗಳಿಗೆ ಬೆದರಿಕೆ ಕರೆ ಬಂದಿವೆ.
ದೆಹಲಿಯ ಆರ್‌ಕೆ ಪುರಂನಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲ್ ಸೇರಿದಂತೆ ಹಲವು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ. ಕೂಡಲೇ ತನಿಖೆ ಮಾಡಿರುವ ಪೊಲೀಸರು ಇದು ಹುಸಿ ಬಾಂಬ್ ಬೆದರಿಕೆ ಎಂದು ಹೇಳಿದ್ದಾರೆ. ದೆಹಲಿಯಾದ್ಯಂತ 30 ಶಾಲೆಗಳು ನಕಲಿ ಬಾಂಬ್ ಬೆದರಿಕೆ ಸ್ವೀಕರಿಸಿವೆ.
ಇನ್ನು ದೆಹಲಿಯ ಶಾಲೆಗಳಿಗೆ ಸರಣಿ ಬಾಂಬ್ ಬೆದರಿಕೆಯ ಕರೆಗಳು ಮುಂದುವರಿಯುತ್ತಿದ್ದು, ಪ್ರತಿ ದಿನ ಯಾರೋ ಅಪರಿಚಿತ ವ್ಯಕ್ತಿಗಳು ಇ-ಮೇಲ್ ಅಥವಾ ಕರೆ ಮೂಲಕ ಬಾಂಬ್ ಇಟ್ಟಿರುವ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗುತ್ತಲೇ ಇದೆ. ಕಳೆದ ಸೋಮವಾರವೂ (ಡಿಸೆಂಬರ್ 9) ದೆಹಲಿಯ ಸುಮಾರು 40 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಇ-ಮೇಲ್ ಮೂಲಕ ಈ ಬೆದರಿಕೆ ಬಂದಿತ್ತು. ಸೋಮವಾರ ಬೆಳಗ್ಗೆ ಈ ಕರೆ ಬಂದಿದ್ದರಿಂದ ಆಗಲೇ ತರಗತಿಗೆ ಹಾಜರಾಗಲು ಮಕ್ಕಳು ಬಂದಿದ್ದರು. ಇ-ಮೇಲ್ ಬಂದ ತಕ್ಷಣ ಶಾಲೆಯ ಆಡಳಿತ ಮಂಡಳಿ ಪೋಷಕರಿಗೆ ಮಾಹಿತಿ ನೀಡಿ ಎಲ್ಲ ಮಕ್ಕಳನ್ನು ಮನೆಗೆ ವಾಪಸ್ ಕಳುಹಿಸಿ ಕೊಡಲಾಗಿತ್ತು.
ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಪರಿಶೀಲನೆ ನಡೆಸಲು ಅನೇಕ ಪೊಲೀಸ್ ತಂಡಗಳನ್ನು ರಚಿಸಲಾಯಿತು, ತನಿಖಾ ತಂಡ ಪ್ರತಿ ಶಾಲೆಯ ಮೂಲೆ ಮೂಲೆಯನ್ನು ಪರಿಶೀಲಿಸಿತು, ಆದರೆ ಎಲ್ಲೂ ಕೂಡ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ. ದೆಹಲಿಯ ಶಾಲೆಗಳು, ವಿಮಾನ ನಿಲ್ದಾಣಗಳು, ವಿಮಾನಗಳು, ಹೋಟೆಲ್‌ಗಳು, ಮಾಲ್‌ಗಳು ಇತ್ಯಾದಿಗಳ ವಿರುದ್ಧ ಪ್ರತಿದಿನ ಬರುತ್ತಿರುವ ಈ ಬೆದರಿಕೆಗಳು ಹುಸಿ ಅನ್ನೋದು ಇದುವರೆಗೆ ಸಾಬೀತಾಗಿದೆ. ಆದರೆ, ಭದ್ರತಾ ಏಜೆನ್ಸಿಗಳು ಈ ಬೆದರಿಕೆಗಳನ್ನು ಲಘುವಾಗಿ ತೆಗೆದುಕೊಳ್ಳುವ ತಪ್ಪನ್ನು ಮಾಡುತ್ತಿಲ್ಲ ಅನ್ನೋದು ಗಮನಾರ್ಹ.
ಈ ಸುದ್ದಿಯನ್ನು ಓದಿ:Casting couch: ಕಾಸ್ಟಿಂಗ್ ಕೌಚ್ಗೆ ನಾನೂ ಬಲಿಯಾಗಿದ್ದೆ; ಚಿತ್ರರಂಗದ ಕರಾಳ ಸತ್ಯ ಬಿಚ್ಚಿಟ್ಟ ನಟ ರವಿಕಿಶನ್