ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಉತ್ತಮ ಸ್ನೇಹಿತರ ಲಕ್ಷಣ

ರಾಜನು ಸ್ವಲ್ಪ ಹೊತ್ತು ಹಾಗೆ ಯೋಚಿಸಿದನು. ಕಲಾಕಾರನನ್ನು ಕುರಿತು, ‘ನೀನು ಬಹಳ ಬುದ್ಧಿವಂತ. ನಿನ್ನ ಗೊಂಬೆ ಮಾಡುವ ಕಲಾಕೃತಿಯ ಮೂಲಕ ಜನರಿಗೆ ಜ್ಞಾನದ ಸಂದೇಶ ವನ್ನು ಕೊಡುತ್ತಿರುವೆ. ಪ್ರತೀ ವ್ಯಕ್ತಿಯ ಬದುಕಿನಲ್ಲಿ ಕಷ್ಟ ಬಂದಾಗ ಹೇಳಿಕೊಳ್ಳಲು ಒಬ್ಬ ಆತ್ಮೀ ಯ ಗೆಳೆಯನ ಅಗತ್ಯವಿರುತ್ತದೆ.

ಒಂದೊಳ್ಳೆ ಮಾತು

ಒಮ್ಮೆ ಒಬ್ಬ ಪ್ರಜಾನುರಾಗಿ ಕಲೆಗಳ ಬಗ್ಗೆ ವಿಶೇಷ ಗೌರವವಿದ್ದ ರಾಜನ ಆಸ್ಥಾನಕ್ಕೆ ಗೊಂಬೆ ಮಾಡುವ ಕಲಾಕಾರನು ಅಪರೂಪದ ಮೂರುಗೊಂಬೆಗಳೊಂದಿಗೆ ಬಂದನು. ಆ ಗೊಂಬೆ ಗಳನ್ನು ರಾಜನಿಗೆ ತೋರಿಸಿ, ‘ಪ್ರಭು, ಈ ಮೂರುಗೊಂಬೆಗಳಲ್ಲಿರುವ ವ್ಯತ್ಯಾಸವನ್ನು ಹಾಗೂ ಇದರ ಗುಣವನ್ನು ತಿಳಿಸಿ’ ಎಂದನು. ರಾಜನು ಮೂರೂ ಗೊಂಬೆಗಳನ್ನು ತೆಗೆದು ಕೊಂಡು ಸೂಕ್ಷ್ಮವಾಗಿ ಗಮನಿಸಿದನು. ಆ ಮೂರು ಗೊಂಬೆಗಳು ಒಂದೇ ತರಹ ಇದ್ದವು. ಒಂದನ್ನೊಂದು ಅದಲು ಬದಲು ಮಾಡಿದರೂ ವ್ಯತ್ಯಾಸ ಗೊತ್ತಾಗುತ್ತಿರಲಿಲ್ಲ. ಒಂದು ಗೊಂಬೆಯನ್ನು ಕೈಲಿ ಹಿಡಿದು ಸೂಕ್ಷ್ಮವಾಗಿ ಗಮನಿಸಿದ.

ಆ ಗೊಂಬೆಯ ಎರಡು ಕಿವಿಗಳಲ್ಲಿ ಚಿಕ್ಕ ತೂತಿರುವುದನ್ನು ನೋಡಿದನು. ಒಂದು ಮಣಿ ಯನ್ನು ತರಿಸಿ ಗೊಂಬೆಯ ಒಂದು ಕಿವಿಯೊಳಗೆ ಹಾಕಿ ಅಲ್ಲಾಡಿಸಿದನು, ಆ ಮಣಿ ಮತ್ತೊಂದು ಕಿವಿಯಿಂದ ಹೊರಗೆ ಬಂದಿತು. ಎರಡನೇ ಗೊಂಬೆಯನ್ನು ಪರೀಕ್ಷಿಸಿದನು, ಆ ಗೊಂಬೆಯ ಒಂದು ಕಿವಿಯಲ್ಲಿ ತೂತು ಮತ್ತು ಬಾಯಲ್ಲಿ ಚಿಕ್ಕ ತೂತು ಇತ್ತು.

ಇದನ್ನೂ ಓದಿ: Roopa Gururaj Column: ತಂದೆ - ತಾಯಿಯರನ್ನು ನಿರ್ಲಕ್ಷಿಸಬೇಡಿ

ಹಿಂದಿನಂತೆ ಒಂದು ಮಣಿಯನ್ನು ಗೊಂಬೆಯ ಕಿವಿಯ ತೂತಿಗೆ ಹಾಕಿ ಅಲುಗಾಡಿಸಿದಾಗ ಅದು ಗೊಂಬೆಯ ಬಾಯಿಂದ ಹೊರಗೆ ಬಂತು. ಈಗ ಮೂರನೇ ಗೊಂಬೆಯನ್ನು ಪರೀಕ್ಷಿಸಿ ದಾಗ, ಆ ಗೊಂಬೆಗೆ ಒಂದೇ ಕಿವಿಯಲ್ಲಿ ತೂತು ಇದ್ದಿತು, ಮತ್ತೊಂದು ತೂತು ಕೈಯಲ್ಲಿತ್ತು. ಮಣಿಯನ್ನು ಹಾಕಿದಾಗ ಕಿವಿಯಿಂದ ಹೋದ ಮಣಿ ಕೈಯಿಂದ ಹೊರಗೆ ಬಂತು.

ರಾಜನು ಸ್ವಲ್ಪ ಹೊತ್ತು ಹಾಗೆ ಯೋಚಿಸಿದನು. ಕಲಾಕಾರನನ್ನು ಕುರಿತು, ‘ನೀನು ಬಹಳ ಬುದ್ಧಿವಂತ. ನಿನ್ನ ಗೊಂಬೆ ಮಾಡುವ ಕಲಾಕೃತಿಯ ಮೂಲಕ ಜನರಿಗೆ ಜ್ಞಾನದ ಸಂದೇಶ ವನ್ನು ಕೊಡುತ್ತಿರುವೆ. ಪ್ರತೀ ವ್ಯಕ್ತಿಯ ಬದುಕಿನಲ್ಲಿ ಕಷ್ಟ ಬಂದಾಗ ಹೇಳಿಕೊಳ್ಳಲು ಒಬ್ಬ ಆತ್ಮೀಯ ಗೆಳೆಯನ ಅಗತ್ಯವಿರುತ್ತದೆ. ನೀನು ತಂದಿರುವ ಈ ಮೂರು ಗೊಂಬೆಗಳು, ಮೂರು ಗೆಳೆಯರ ಕುರಿತ ಉದಾಹರಣೆಯಾಗಿದೆ’ ಒಂದನೇ ಗೊಂಬೆ: ಒಂದು ಕಿವಿಯಲ್ಲಿ ಮಣಿ ಹಾಕಿದಾಗ ಮತ್ತೊಂದು ಕಿವಿಯಿಂದ ಬರುವ ಮೊದಲ ಗೊಂಬೆ ನಿಕೃಷ್ಟವಾದುದು ಏಕೆಂದರೆ, ಗೆಳೆಯನೊಬ್ಬ ಅವನಲ್ಲಿ ಕಷ್ಟಗಳನ್ನು ಹೇಳಿಕೊಂಡಾಗ ಕೇಳಿದಂತೆ ನಟಿಸಿ, ಇನ್ನೊಂದು ಕಿವಿಯಿಂದ ಹೊರಗೆ ಬಿಡುತ್ತಾನೆ.

ಇವನು ಯಾರಿಗೂ ಸಹಾಯ ಮಾಡುವವನಲ್ಲ. ಎರಡನೆಯ ಗೊಂಬೆ: ಮಧ್ಯಮ ಗುಣದ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಈತ ತನ್ನ ಗೆಳೆಯ ಹೇಳುವ ಕಷ್ಟ -ಸುಖ, ಲಾಭ- ನಷ್ಟ, ಒಳ್ಳೆಯವರು -ಕೆಟ್ಟವರು, ಬಡತನ-ಸಿರಿತನ, ಮಾನ- ಮರ್ಯಾದೆ ಹೀಗೆ ಎಲ್ಲವನ್ನೂ ತಾಳ್ಮೆಯಿಂದ ಕೇಳುತ್ತಾನೆ, ಆದರೆ ಅವುಗಳನ್ನು ತನ್ನೊಳಗೆ ಇಟ್ಟುಕೊಳ್ಳದೆ ಎಲ್ಲರಿಗೂ ಹೇಳುತ್ತಾನೆ.

ಇದು ಅಪಾಯಕ್ಕೆ ದಾರಿ ಮಾಡಿಕೊಡುತ್ತಾನೆ. ಹೀಗಾಗಿ ಎರಡನೇ ಗೊಂಬೆ ಮಧ್ಯಮ ವರ್ಗದ ಗೆಳೆಯನಂತೆ. ಮೂರನೇ ಗೊಂಬೆ: ಇದು ಅತ್ಯಂತ ಪ್ರಾಮಾಣಿಕ ಸ್ನೇಹಕ್ಕೆ ಉದಾ ಹರಣೆ. ಈತ ತನ್ನ ಗೆಳೆಯನ ಕಷ್ಟ-ಸುಖ ಎಲ್ಲವನ್ನು ತಾಳ್ಮೆಯಿಂದ ಆಲೈಸುತ್ತಾನೆ. ಅದನ್ನು ಎಲ್ಲಿಯೂ ಯಾರ ಹತ್ತಿರವೂ ಬಾಯಿ ಬಿಡದೆ ತನ್ನೊಳಗೆ ಇಟ್ಟುಕೊಳ್ಳುತ್ತಾನೆ. ಹಾಗೆ ಕಷ್ಟದಲ್ಲಿರುವ ಗೆಳೆಯನಿಗೆ, ಒಳ್ಳೆಯ ಸಲಹೆ ಕೊಡುತ್ತಾನೆ, ತನ್ನ ಕೈಲಾದ ಸಹಾಯ ಮಾಡುತ್ತಾನೆ. ಈತ ಎಲ್ಲಾ ದೃಷ್ಟಿಯಿಂದಲೂ ಉತ್ತಮ ಗೆಳೆಯನಾಗುತ್ತಾನೆ.

ರಾಜನ ಮಾತುಗಳು ಕೇಳಿದ ಕಲಾವಿದನು, ‘ಮಹಾರಾಜ, ನೀವು ಕೊಟ್ಟ ವಿವರಣೆಯಿಂದ ನನಗೆ ತುಂಬಾ ಸಂತೋಷವಾಗಿದೆ, ಈ ಗೊಂಬೆಗಳನ್ನು ನಿಮಗೆ ಉಡುಗೊರೆಯಾಗಿ ಕೊಡು ವೆ’ ಎಂದು ರಾಜನಿಗೆ ಕಾಣಿಕೆಯಾಗಿ ಕೊಟ್ಟನು ನಿಜ ಜೀವನದಲ್ಲಿಯೂ ಕೂಡ ಇಂತಹ ಅನೇಕರು ನಮ್ಮ ಸುತ್ತಮುತ್ತಲಿರುತ್ತಾರೆ. ಯಾರ ಹತ್ತಿರ ಏನು ಮಾತನಾಡಬೇಕು, ಎಷ್ಟು ಹೇಳಿಕೊಳ್ಳಬೇಕು ಎನ್ನುವ ಸೂಕ್ಷ್ಮಪ್ರಜ್ಞೆ ನಮಗಿರಬೇಕು. ಹಾಗೆಯೇ ಎಲ್ಲರ ಬಳಿ ಎಲ್ಲ ವನ್ನೂ ಹೇಳಿಕೊಳ್ಳುವುದು ಮೂರ್ಖತನವಾಗುತ್ತದೆ.

ಕೆಲವರಿಗೆ ನಮ್ಮ ಸುಖದ ಕ್ಷಣಗಳನ್ನು ತಡೆದುಕೊಳ್ಳುವ ಶಕ್ತಿಯೇ ಇರುವುದಿಲ್ಲ, ಮತ್ತೆ ಕೆಲವರು ನಮ್ಮ ದುಃಖವನ್ನು ಸಂಭ್ರಮಿಸುವ ವಿಕೃತ ಮನಸ್ಥಿತಿಯಲ್ಲಿ ಇರುತ್ತಾರೆ. ಆದ್ದ ರಿಂದ ಕೇಳಿಸಿಕೊಳ್ಳುವವರೆಲ್ಲ ಗೆಳೆಯರಲ್ಲ. ಕಷ್ಟದಲ್ಲಿ ಯಾರು ನೆರವಾಗುತ್ತಾರೆ ಎಂದು ಸೂಕ್ಷ್ಮವಾಗಿ ಗಮನಿಸಿ, ನಿಜವಾದ ಹಿತೈಷಿಗಳು ಬರೀ ಬಾಯಿ ಮಾತಿನಲ್ಲಿ ಜೊತೆ ಇರುವುದಿಲ್ಲ, ಕೃತಿಯಲ್ಲಿ ಕೂಡ ನಮಗೆ ಬೆಂಬಲವಾಗಿರುತ್ತಾರೆ.

ರೂಪಾ ಗುರುರಾಜ್

View all posts by this author