Chikkaballapur shootout: ಚಿಕ್ಕಬಳ್ಳಾಪುರದಲ್ಲಿ ರಸ್ತೆ ನಿರ್ಮಾಣ ವಿರೋಧಿಸಿದ ವ್ಯಕ್ತಿ ಮೇಲೆ ಫೈರಿಂಗ್; ಮಾಜಿ ಎಂಎಲ್‌ಸಿ ಸಂಬಂಧಿ ಅರೆಸ್ಟ್
Chikkaballapur shootout: ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಕನಗಾನಕೊಪ್ಪದಲ್ಲಿ ಬುಧವಾರ ಘಟನೆ ನಡೆದಿದೆ. ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ರಸ್ತೆ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದ್ದರಿಂದ ರೈತ ಚಿಕನ್ ರವಿ ಮೇಲೆ ಸಕಲೇಶಕುಮಾರ್ ಎಂಬಾತ ಫೈರಿಂಗ್ ಮಾಡಿದ್ದಾರೆ.


ಚಿಕ್ಕಬಳ್ಳಾಪುರ: ಇತ್ತೀಚೆಗೆ ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣ ನಡೆದ ಬೆನ್ನಲ್ಲೇ ಮತ್ತೊಂದು ಶೂಟೌಟ್ ಪ್ರಕರಣ ರಾಜ್ಯದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಕನಗಾನಕೊಪ್ಪದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನ ಕಾಲಿಗೆ ಗುಂಡು ಹಾರಿಸಲಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ರಸ್ತೆ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದ್ದರಿಂದ ರೈತ ಚಿಕನ್ ರವಿ ಎಂಬುವವರ ಮೇಲೆ ಸಕಲೇಶಕುಮಾರ್ ಎಂಬಾತ ಫೈರಿಂಗ್ ಮಾಡಿದ್ದಾನೆ.
ಗುಂಡಿನ ದಾಳಿ ನಡೆಸಿರುವ ಸಕಲೇಶಕುಮಾರ್, ಬಿಜೆಪಿ ಮಾಜಿ ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ ಅವರ ಸಂಬಂಧಿ ಎನ್ನಲಾಗಿದೆ. ರಸ್ತೆ ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸುವ ವೇಳೆ ಚಿಕನ್ ರವಿ ಕಾಲಿಗೆ ಸಕಲೇಶಕುಮಾರ್ ಗುಂಡು ಹಾರಿಸಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲೂಕು ಕನಗಾನಕೊಪ್ಪದ ಬಳಿ ಮಾಜಿ ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ ಕುಟುಂಬಸ್ಥರಿಂದ ಗಣಿಗಾರಿಕೆ ನಡೆಯುತ್ತಿದ್ದು, ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಸಕಲೇಶಕುಮಾರ್ ಗುಂಡು ಹಾರಿಸಿದ್ದಾನೆ. ಗಾಯಾಳು ರವಿಯನ್ನು ಮಂಚೇನಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ತಲೆಗೆ ಕಲ್ಲಿನಿಂದ ಹೊಡೆದರು ಎಂಬ ಕಾರಣಕ್ಕೆ ಸಕಲೇಶಕುಮಾರ್ ಫೈರಿಂಗ್ ಮಾಡಿದ್ದಾನೆ ಎನ್ನಲಾಗಿದೆ. ತಲೆಗೆ ಯಾರೋ ಕಲ್ಲು ಹೊಡೆಯುತ್ತೀರಾ ಎಂದು ಗನ್ ಹಿಡಿದು ಸಕಲೇಶಕುಮಾರ್ ಬೆದರಿಸಿದ್ದು, ಸ್ಥಳದಲ್ಲಿದ್ದ ಜನ ಭಯಭೀತರಾಗಿದ್ದಾರೆ. ಇನ್ನು ಗಾಯಾಳು ಚಿಕನ್ ರವಿ ಕಾಲಿಗೆ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸ್ಥಳಕ್ಕೆ ಕುಶಲ್ ಚೌಕ್ಸೆ ಹಾಗೂ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದು, ಗುಂಡು ಹಾರಿಸಿದ ಸಕಲೇಶಕುಮಾರ್‌ನನ್ನು ಬಂಧಿಸಿದ್ದಾರೆ.
ಆಸ್ಪತ್ರೆಯಲ್ಲಿ ಗಾಯಾಳು ರವಿಕುಮಾರ್ ಪ್ರತಿಕ್ರಿಯಿಸಿ, ನಮ್ಮ ಜಮೀನಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ದೂರು ನೀಡಲಾಗಿತ್ತು. ರಸ್ತೆ ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸಿದ್ದಕ್ಕೆ, ನಿನ್ನಿಂದಲೇ ಇಷ್ಟೆಲ್ಲಾ ಆಗುತ್ತಿರುವುದು ಎಂದು ಸಕಲೇಶಕುಮಾರ್ ಎಂಬಾತ ನನ್ನ ಮೇಲೆ ಗುಂಡು ಹಾರಿಸಿದ್ದಾನೆ. ಆತನ ಮೇಲೆ ನಾವು ಹಲ್ಲೆ ಮಾಡಿಲ್ಲ. ಗಾಳಿಯಲ್ಲಿ ಗುಂಡು ಹಾರಿಸುವಾಗ ಆತ ತಲೆಗೆ ಪೆಟ್ಟು ಮಾಡಿಕೊಂಡಿದ್ದಾನೆ. ಅಧಿಕಾರಿಗಳು ಲಂಚ ಪಡೆದು ಗಣಿಗಾರಿಕೆಗೆ ಅವಕಾಶ ಕೊಟ್ಟಿದ್ದಾರೆ, ದಯವಿಟ್ಟು ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದಾರೆ.
ಘಟನೆಗೆ ಸಂಸದ ಡಾ.ಕೆ.ಸುಧಾಕರ್ ಖಂಡನೆ

ಘಟನೆ ಬಗ್ಗೆ ಸಂಸದ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದು, ಕನಗಾನಕೊಪ್ಪ ಗ್ರಾಮದಲ್ಲಿ ಯಾವುದೇ ಕಾರಣಕ್ಕೆ ಗಣಿಗಾರಿಕೆ ಮಾಡಬಾರದು ಎಂದು ಹಲವು ವರ್ಷಗಳಿಂದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ನಾನು ಕೂಡ ಇದಕ್ಕೆ ವಿರೋಧ ಮಾಡಿದ್ದೆ. ಆದರೆ, ಯಾವುದೇ ಕಾರಣಕ್ಕೆ ಗಣಿಕಾರಿಕೆಗೆ ಅನುಮತಿ ನೀಡುವುದಿಲ್ಲ ಎಂದಿದ್ದ ಹಾಲಿ ಶಾಸಕರು ಈಗ ಏನು ಮಾಡಿದ್ದಾರೆ, ಎಷ್ಟು ಹಣಕ್ಕೆ ಮಾರಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ವರ್ಷಗಳಲ್ಲಿ ಬಂದೂಕು ಹಿಡಿದು ಶೂಟೌಟ್ ಮಾಡಿದ ಪ್ರಕರಣ ನೋಡಿಲ್ಲ. ಇವತ್ತು ಪರಿಸ್ಥಿತಿ ಎಲ್ಲಿಗೆ ಬಂದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸತ್ತು ಹೋಗಿದೆ. ಈ ಕೂಡಲೇ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Pahalgam Terror Attack: ಮೂರು ಸೇನಾ ಪಡೆಗಳ ಮುಖ್ಯಸ್ಥರ ಜೊತೆ ತುರ್ತು ಸಭೆ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್