ದೋಹಾ: 2023 ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲಿನ ದಾಳಿಯ ರೂವಾರಿ, ಹಾಗೂ ಹಮಾಸ್ ಉಗ್ರ ಸಂಘಟನೆ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ನನ್ನು (Yahya Sinwar) ಇಸ್ರೇಲ್ ಸೇನೆ ಹೊಡೆದುರುಳಿಸಿತ್ತು. ಇದೀಗ ಇಸ್ರೇಲ್ ಜೊತೆಗಿನ ಸಂಘರ್ಷದ ಸಮಯದಲ್ಲಿ ಆತ ಯುದ್ಧ ಭೂಮಿಯಲ್ಲಿದ್ದ ವಿಡಿಯೋವನ್ನು ಕತಾರ್ ಮೂಲದ ಮಾಧ್ಯಮ ಸಂಸ್ಥೆಯೊಂದು ಬಿಡುಗಡೆ ಮಾಡಿದ್ದು, ಸದ್ಯ ವೈರಲ್(Viral Video) ಆಗುತ್ತಿದೆ.
ವಿಡಿಯೋದಲ್ಲಿ ಯಾಹ್ಯಾ ಸಿನ್ವಾರ್ ಗಾಜಾದ ರಫಾ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆಗಳನ್ನು ನಿರ್ದೇಶಿಸುತ್ತಿರುವುದನ್ನು ತೋರಿಸುತ್ತದೆ. ಆತ ಕೈಯಲ್ಲಿ ಕೋಲು ಹಿಡಿದುಕೊಂಡು, ಸಹಚರರಿಗೆ ನಿರ್ದೇಶನ ನೀಡುತ್ತಿದ್ದಾನೆ. ವಿಡಿಯೋದಲ್ಲಿ ಆತ ಮಿಲಿಟರಿ ಉಡುಪನ್ನು ಧರಿಸಿ ಕಂಬಳಿ ಹೊದ್ದಿದ್ದನ್ನು ಕಾಣಬಹುದಾಗಿದೆ. ಆತ ಇದ್ದ ಕಟ್ಟಡದ ಗೋಡೆಯ ಮೇಲೆ ಹೀಬ್ರೂ ಭಾಷೆಯಲ್ಲಿ ಉತ್ತರ ಎಂದು ಬರೆದಿರುವುದು ಕಾಣಿಸುತ್ತದೆ.
ಮತ್ತೊಂದು ದೃಶ್ಯದಲ್ಲಿ, ಸಿನ್ವಾರ್ ಇನ್ನೊಬ್ಬ ವ್ಯಕ್ತಿಯೊಂದಿಗೆ ಪೋಲೋ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾನೆ ಮತ್ತು ಅವರ ಮುಂದೆ ನಕ್ಷೆಯನ್ನು ಹರಡಲಾಗಿದೆ.
ಈ ಸುದ್ದಿಯನ್ನೂ ಓದಿ : Israel Hamas : ಕೊನೆಗೂ ತಾಯ್ನಾಡಿಗೆ ಮರಳಿದ ಇಸ್ರೇಲ್ ಒತ್ತೆಯಾಳುಗಳು , ಭಾವುಕ ವಿಡಿಯೋ ವೈರಲ್
2023 ರ ಅಕ್ಟೋಬರ್ 7ರಂದು ಇಸ್ರೇಲ್‌ನ ಸಂಗೀತ ಕಾರ್ಯಕ್ರಮದ ಮೇಲೆ ಹಮಾಸ್‌ನ ಉಗ್ರರು ದಾಳಿ ನಡೆಸಿದ್ದರು. ಘಟನೆಯಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. ನೂರಾರು ಜನರನ್ನು ಒತ್ತೆಯಾಳಾಗಿ ಕರೆದೊಯ್ಯಲಾಗಿತ್ತು. ನಂತರ ಅಕ್ಟೋಬರ್ 18 ರಂದು ಇಸ್ರೇಲ್ ಪ್ರತೀಕಾರಕ್ಕಾಗಿ, ಹಮಾಸ್ ಮೇಲೆ ದಾಳಿ ನಡೆಸಿ ಯಾಹ್ಯಾ ಸಿನ್ವಾರ್‌ನನ್ನು ಹತ್ಯೆ ಮಾಡಿತ್ತು. ನಂತರ ಇಸ್ರೇಲ್ ಸೇನೆ ಆತನ ಕೊನೆ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಈ ಡ್ರೋನ್ ವೀಡಿಯೋದಲ್ಲಿ ಸಿನ್ವಾರ್, ಕುರ್ಚಿಯಲ್ಲಿ ಕುಸಿದು, ಧೂಳಿನಿಂದ ಆವೃತವಾಗಿದ್ದು, ಬಲಗೈಯಲ್ಲಿ ರಕ್ತಸ್ರಾವವಾಗಿದೆ. ಡ್ರೋನ್ ಹತ್ತಿರ ಸುಳಿದಾಡುತ್ತಿದ್ದಂತೆ, ತೀವ್ರ ಗಾಯಗೊಂಡಿದ್ದ ಸಿನ್ವಾರ್ ಹತಾಶೆ ಅಥವಾ ಪ್ರತಿಭಟನೆಯ ಧ್ಯೋತಕವಾಗಿ ತನ್ನತ್ತ ಬಂದ ಇಸ್ರೇಲ್‌ನ ಡ್ರೋನ್ ಮೇಲೆ ಅಲ್ಲೇ ಇದ್ದ ಕೋಲನ್ನು ಎಸೆದಿರುವುದು ಕಂಡು ಬಂದಿತ್ತು. ನಂತರದ ವಿಡಿಯೋದಲ್ಲಿ ಇಸ್ರೇಲ್ ಸೇನಾ ಪಡೆ ಆತನ ಶವವನ್ನು ಹೊತ್ತು ಸಾಗುತ್ತಿರುವುದು ಕಂಡು ಬಂದಿತ್ತು.