ಆರ್ಎಸ್ಎಸ್ ವಿರುದ್ಧ ಅವಹೇಳನಕಾರಿ ಪೋಸ್ಟ್; ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್ಗೆ ಕೋರ್ಟ್ ನೋಟಿಸ್
ಆರ್ಎಸ್ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ವಿರುದ್ಧ ಆರ್ಎಸ್ಎಸ್ ಕಾರ್ಯಕರ್ತ ಎ. ತೇಜಸ್ ಎಂಬುವರು ಕೋರ್ಟ್ಗೆ ಖಾಸಗಿ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದೆ.
-
ಬೆಂಗಳೂರು: ಆರ್ಎಸ್ಎಸ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪದ ಹಿನ್ನಲೆಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮತ್ತು ಮೊಹಮ್ಮದ್ ನಲಪಾಡ್ಗೆ ಬೆಂಗಳೂರಿನ 42 ನೇ ಎಸಿಜೆಎಂ ಕೋರ್ಟ್ ಸಮನ್ಸ್ ನೀಡಿದೆ. ಕ್ರಿಮಿನಲ್ ಮಾನನಷ್ಟ ಕೇಸ್ ವಿಚಾರಣೆಗೆ ಅಂಗೀಕರಿಸಿದ ನ್ಯಾಯಾಲಯ, ಜುಲೈ 21 ರಂದು ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸಿದೆ.
2025 ಅಕ್ಟೋಬರ್ 14 ರಂದು ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಸದಸ್ಯರ ವಿರುದ್ದ ಟ್ವೀಟ್ ಮಾಡಿದ್ದರು. ಅಲ್ಲದೇ ಕಾಂಗ್ರೆಸ್ ಮುಖಂಡ ನಲಪಾಡ್ ಅವರು ಕೂಡ ಯೂಟ್ಯೂಬ್ ಚಾನೆಲ್ವೊಂದರಲ್ಲಿ ಆರ್ಎಸ್ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಆರ್ಎಸ್ಎಸ್ ಕಾರ್ಯಕರ್ತ ಎ. ತೇಜಸ್ ಎಂಬುವರು ಖಾಸಗಿ ದೂರು ದಾಖಲಿಸಿದ್ದರು. ಅವಹೇಳನಕಾರಿ ಹೇಳಿಕೆಯಿಂದ ಸಂಘದ ಘನತೆಗೆ ಧಕ್ಕೆಯಾಗಿದೆ ಎಂದು ಬೆಂಗಳೂರಿನ ಸಿದ್ದಾಪುರದ ಎ.ತೇಜಸ್ ದೂರು ದಾಖಲಿಸಿದ್ದರು.
ಕಾರ್ತಿಕೇಯ ಸಿಂಗ್ ಮಾನನಷ್ಟ ಮೊಕದ್ದಮೆ: ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ವಿಷಾದ
ಈ ಹಿನ್ನೆಲೆ ಇಂದು ವಿಚಾರಣೆ ನಡೆಸಿದ ಬೆಂಗಳೂರಿನ 42 ನೇ ಎಸಿಜೆಎಂ ಕೋರ್ಟ್, ಕ್ರಿಮಿನಲ್ ಮಾನನಷ್ಟ ಕೇಸ್ ವಿಚಾರಣೆಗೆ ಅಂಗೀಕರಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮೊಹಮ್ಮದ್ ಹ್ಯಾರಿಸ್ ನಲಪಾಡ್ಗೆ ಸಮನ್ಸ್ ಜಾರಿ ಮಾಡಿದೆ.