Champions Trophy ಟೂರ್ನಿಯ ಬಳಿಕ ಗೌತಮ್ ಗಂಭೀರ್ ಭವಿಷ್ಯ ನಿರ್ಧಾರ!
ಸತತ ಸೋಲುಗಳಿಂದ ತೀವ್ರ ಒತ್ತಡಕ್ಕೆ ಒಳಗಾಗಿರುವ ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್‌ಗೆ ಬಿಸಿಸಿಐ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿಲ್ಲವಾದರೆ ಗಂಭೀರ್ ಸ್ಥಾನಕ್ಕೆ ಕುತ್ತು ಬರಲಿದೆ ಎಂದು ಅವರು ಹೇಳಿದ್ದಾರೆ.
ನವದೆಹಲಿ: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಳಿಕ ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಭವಿಷ್ಯ ನಿರ್ಧಾರವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಿರಿಯ ಅಧಿಕಾರಿಯೊಬ್ಬರು ನೀಡಿದ್ದ ಮಾಹಿತಿಯನ್ನು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ವರ್ಷ ಜುಲೈನಲ್ಲಿ ಗೌತಮ್ ಗಂಭೀರ್ ಅವರು ಭಾರತ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದರು. ಅಂದಿನಿಂದ ಇಲ್ಲಿಯವರೆಗೆ ಅವರ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಹಾ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 6 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಅಷ್ಟೇ ಅಲ್ಲದೆ ಶ್ರೀಲಂಕಾದಲ್ಲಿ ಏಕದಿನ ಸರಣಿಯನ್ನು ಕೂಡ ಟೀಮ್ ಇಂಡಿಯಾ ಸೋತಿದೆ.
ಟೀಮ್ ಇಂಡಿಯಾ ಆಟಗಾರರಿಗೆ ಕಠಿಣ ಮಾರ್ಗಸೂಚಿ ಹೊರಡಿಸಲು ಬಿಸಿಸಿಐ ಸಜ್ಜು!
ಮತ್ತೊಂದು ಕಡೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಐದನೇ ಹಾಗೂ ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅಲ್ಲದೆ, ರೋಹಿತ್ ಶರ್ಮಾ ಐದನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಡ್ರೆಸ್ಸಿಂಗ್ ಕೊಠಡಿಯ ವಾತಾವರಣ ಉತ್ತಮವಾಗಿಲ್ಲ ಎಂದು ಹೇಳಲಾಗುತ್ತಿದೆ. ಇದರ ನಡುವೆ ಕಳೆದ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಟೆಸ್ಟ್ ಭವಿಷ್ಯ ಏನೆಂದು ರಹಸ್ಯವಾಗಿ ಉಳಿದಿದೆ. ಅಲ್ಲದೆ ಗೌತಮ್ ಗಂಭೀರ್ ಅವರು ಟೀಮ್ ಇಂಡಿಯಾದಲ್ಲಿ ಸ್ಟಾರ್ ಸಂಸ್ಕೃತಿಯನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಿದ್ದಾರೆ.
ಬಿಸಿಸಿಐ ಅಧಿಕಾರಿ ಹೇಳಿದ್ದೇನು?
"ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ತೋರಿಲ್ಲವಾದರೆ, ಗೌತಮ್ ಗಂಭೀರ್ ಅವರ ಹೆಡ್ ಕೋಚ್ ಸ್ಥಾನ ಅಸಮರ್ಥನೀಯವಾಗಿದೆ. ಹೌದು 2027ರ ವಿಶ್ವಕಪ್‌ವರೆಗೂ ಅವರ ಗುತ್ತಿಗೆ ಅವಧಿ ಇದೆ. ಆದರೆ, ಮೌಲ್ಯಮಾಪನ ಪ್ರಕ್ರಿಯೆಯು ಮುಂದುವರಿಯುತ್ತದೆ," ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.
"ಕ್ರೀಡೆಯು ಫಲಿತಾಂಶ-ಆಧಾರಿತವಾಗಿದೆ ಮತ್ತು ಇಲ್ಲಿಯವರೆಗೆ ಗಂಭೀರ್ ಯಾವುದೇ ಸ್ಪಷ್ಟವಾದ ಫಲಿತಾಂಶಗಳನ್ನು ನೀಡಿಲ್ಲ," ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಬಿಸಿಸಿಐನ ಹಿರಿಯ ಮೂಲಗಳು ಪಿಟಿಐಗೆ ತಿಳಿಸಿವೆ.
ʻನಿಮ್ಮ ತಲೆಗೆ ಗುಂಡು ಹೊಡೆಯುತ್ತೇನೆʼ:ಯೋಗರಾಜ್ ಸಿಂಗ್ ಹೇಳಿಕೆಗೆ ಕಪಿಲ್ ದೇವ್ ಪ್ರತಿಕ್ರಿಯೆ!
"ಗೌತಮ್ ಗಂಭೀರ್ ಹಲವು ವರ್ಷಗಳಿಂದ ಪ್ರಚಲಿತದಲ್ಲಿರುವ ಸೂಪರ್‌ಸ್ಟಾರ್ ಸಂಸ್ಕೃತಿಯನ್ನು ಕೊನೆಗೊಳಿಸಲು ಬಯಸಿದ್ದಾರೆ. 2012 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ನಾಯಕರಾಗಿ, ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದ ಫೈನಲ್ ಪಂದ್ಯದ XIನಿಂದ ಬ್ರೆಂಡನ್ ಮೆಕಲಮ್ ಅವರನ್ನು ಕೈಬಿಟ್ಟಿದ್ದರು," ಎಂದು ಹೇಳಿದ್ದಾರೆ.
"ಅವರು ಸೂಪರ್‌ಸ್ಟಾರ್ ಸಂಸ್ಕೃತಿಯನ್ನು ಕೆಡವಲು ಇಲ್ಲಿಗೆ ಬಂದಿದ್ದಾರೆ ಮತ್ತು ಇದು ಕೆಲವು ಆಡುವ ಸದಸ್ಯರಿಗೆ ಅಸ್ವಸ್ಥತೆಯನ್ನು ಉಂಟುಮಾಡಿದೆ," ಎಂದು ಗಂಭೀರ್ ಅವರ ಕಾರ್ಯವನ್ನು ಹತ್ತಿರದಿಂದ ನೋಡಿದ ಮೂಲವೊಂದು ಹೇಳಿದೆ.