ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG: ಇಂಗ್ಲೆಂಡ್‌ಗೆ ಸೋಲಿನ ಬರೆ ಎಳೆದು ಟಿ20ಐ ಸರಣಿ ವಶಪಡಿಸಿಕೊಂಡ ಭಾರತ!

IND vs ENG 4th T20I Highlights: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ ನಾಲ್ಕನೇ ಟಿ20ಐ ಪಂದ್ಯದಲ್ಲಿ 15 ರನ್‌ಗಳಿಗೆ ಗೆಲುವು ಪಡೆದಿದೆ. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟಿ20ಐ ಸರಣಿಯನ್ನು ವಶಪಡಿಸಿಕೊಂಡಿದೆ.

IND vs ENG: ನಾಲ್ಕನೇ ಪಂದ್ಯ ಗೆದ್ದು ಟಿ20ಐ ಸರಣಿ ವಶಪಡಿಸಿಕೊಂಡ ಭಾರತ!

India won 4th T20I by 15 Runs

Profile Ramesh Kote Jan 31, 2025 10:41 PM

ಪುಣೆ: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ತಂಡ, ನಾಲ್ಕನೇ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 15 ರನ್‌ಗಳಿಂದ ಗೆಲುವು ಪಡೆದಿದೆ. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟೀಮ್‌ ಇಂಡಿಯಾ 3-1 ಅಂತರದಲ್ಲಿ ಟಿ20ಐ ಸರಣಿಯನ್ನು ವಶಪಡಿಸಿಕೊಂಡಿದೆ.

ಶುಕ್ರವಾರ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 182 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್‌ ತಂಡ, ಹ್ಯಾರಿ ಬ್ರೂಕ್‌ ಅರ್ಧಶತಕದ ಹೊರತಾಗಿಯೂ ಇನ್ನಿತರ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ 19.4 ಓವರ್‌ಗಳಿಗೆ 166 ರನ್‌ಗಳಿಗೆ ಆಲ್‌ಔಟ್‌ ಆಯಿತು. ಇದರೊಂದಿಗೆ ಇಂಗ್ಲೆಂಡ್‌ ತಂಡ ಟಿ20ಐ ಸರಣಿಯನ್ನು ಜೀವಂತವಾಗಿರಿಸಿಕೊಳ್ಳುವಲ್ಲಿ ವಿಫಲವಾಯಿತು.‌

IND vs ENG: ಅರ್ಧಶತಕ ಸಿಡಿಸಿ ವಿಶೇಷ ಟಿ20ಐ ದಾಖಲೆ ಬರೆದ ಹಾರ್ದಿಕ್‌ ಪಾಂಡ್ಯ!

ಭರ್ಜರಿ ಆರಂಭ ಪಡೆದಿದ್ದ ಇಂಗ್ಲೆಂಡ್‌

ಫಿಲ್‌ ಸಾಲ್ಟ್‌( 23) ಹಾಗೂ ಬೆನ್‌ ಡಕೆಟ್‌ (39) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಇಂಗ್ಲೆಂಡ್‌ ತಂಡ ಪವರ್‌ಪ್ಲೇನಲ್ಲಿ 62 ರನ್‌ಗಳಿಸಿ ಭರ್ಜರಿ ಆರಂಭ ಪಡೆದಿತ್ತು. ಆದರೆ, ರವಿ ಬಿಷ್ಣೋಯ್‌, ಬೆನ್‌ ಡಕೆಟ್‌ ಮತ್ತು ಜೋಸ್‌ ಬಟ್ಲರ್‌ ಅವರನ್ನು ಔಟ್‌ ಮಾಡಿದರೆ, ಅಕ್ಷರ್‌ ಪಟೇಲ್ ಆರಂಭಿಕ ಫಿಲ್‌ ಸಾಲ್ಟ್‌ ಅವರನ್ನು ಔಟ್‌ ಮಾಡಿದರು. ಆ ಮೂಲಕ ಇಂಗ್ಲೆಂಡ್‌ ತಂಡ‌ ಕೇವಲ 5 ರನ್‌ ಅಂತರದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಹ್ಯಾರಿ ಬ್ರೂಕ್‌ ಅರ್ಧಶತಕ ವ್ಯರ್ಥ

ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಹ್ಯಾರಿ ಬ್ರೂಕ್‌ ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಸ್ಪೋಟಕ ಬ್ಯಾಟ್‌ ಮಾಡಿದ ಹ್ಯಾರಿ ಬ್ರೂಕ್‌ ಕೇವಲ 26 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಐದು ಬೌಂಡರಿಗಳೊಂದಿಗೆ 51 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಇಂಗ್ಲೆಂಡ್‌ ತಂಡವನ್ನು ಗೆಲ್ಲಿಸುವ ಹಾದಿಯಲ್ಲಿದ್ದರು. ಆದರೆ, 15ನೇ ಓವರ್‌ನಲ್ಲಿ ವರುಣ್‌ ಚಕ್ರವರ್ತಿ, ಬ್ರೂಕ್‌ ಅವರನ್ನು ಔಟ್‌ ಮಾಡಿ ಭಾರತದ ಕಮ್‌ಬ್ಯಾಕ್‌ಗೆ ನೆರವು ನೀಡಿದರು.



ಬೌಲಿಂಗ್‌ನಲ್ಲಿ ಮಿಂಚಿದ ಬಿಷ್ಣೋಯ್‌-ಹರ್ಷಿತ್

ಹ್ಯಾರಿ ಬ್ರೂಕ್‌ ವಿಕೆಟ್‌ ಒಪ್ಪಿಸಿದ ಬಳಿಕ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಭಾರತದ ಬೌಲಿಂಗ್‌ ದಾಳಿಯನ್ನು ಎದುರಿಸುವಲ್ಲಿ ವಿಫಲವಾದರು. ಅಂದ ಹಾಗೆ ಶಿವಂ ದುಬೆ ಕನ್ಕಷನ್‌ಗೆ ಒಳಗಾದ ಕಾರಣ ಅವರ ಸ್ಥಾನದಲ್ಲಿ ಬೌಲ್‌ ಮಾಡಿದ ಹರ್ಷಿತ್‌ ರಾಣಾ ಹಾಗೂ ಸ್ಪಿನ್‌ ಮೋಡಿ ಮಾಡಿದ ರವಿ ಬಿಷ್ಣೋಯ್‌ ತಲಾ 3 ವಿಕೆಟ್‌ಗಳನ್ನು ಕಬಳಿಸಿದರು. ವರುಣ್‌ ಚಕ್ರವರ್ತಿ ಎರಡು ವಿಕೆಟ್‌ ಪಡದರು.

181 ರನ್‌ಗಳನ್ನು ಕಲೆ ಹಾಕಿದ ಭಾರತ

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ಹಾರ್ದಿಕ್‌ ಪಾಂಡ್ಯ ಮತ್ತು ಶಿವಂ ದುಬೆ ಅವರ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡು 181 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಇಂಗ್ಲೆಂಡ್‌ ತಂಡಕ್ಕೆ 182 ರನ್‌ಗಳ ಗುರಿಯನ್ನು ನೀಡಿತ್ತು.



ಭಾರತಕ್ಕೆ ಆರಂಭಿಕ ಆಘಾತ ನೀಡಿದ್ದ ಸಾಕಿಬ್‌ ಮಹ್ಮೂದ್‌

ಕಳೆದ ಪಂದ್ಯದಂತೆ ಈ ಪಂದ್ಯದಲ್ಲಿಯೂ ಓಪನರ್‌ ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಅವರು ಕೇವಲ ಮೂರು ಎಸೆತಗಳಲ್ಲಿ ಕೇವಲ ಒಂದು ರನ್‌ ಗಳಿಸಿ ಸಾಕಿಬ್‌ ಮಹ್ಮೂದ್‌ಗೆ ವಿಕೆಟ್‌ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ತಿಲಕ್‌ ವರ್ಮಾ ಗೋಲ್ಡನ್‌ ಡಕ್‌ಔಟ್‌ ಆದರೆ, ನಾಯಕ ಸೂರ್ಯಕುಮಾರ್‌ ಯಾದವ್‌ ನಾಲ್ಕು ಎಸೆತಗಳನ್ನು ಆಡಿದರೂ ಖಾತೆ ತೆರೆಯದೆ ವಿಕೆಟ್‌ ಕೈಚೆಲ್ಲಿದರು. ತಮ್ಮ ಮೊದಲನೇ ಓವರ್‌ನಲ್ಲಿಯೇ ಸಾಕಿಬ್‌ ಮಹ್ಮೂದ್‌ ಮೇಡಿನ್‌ ಜೊತೆಗೆ ಮೂರು ವಿಕೆಟ್‌ಗಳನ್ನು ಕಿತ್ತರು. ಆ ಮೂಲಕ ಭಾರತ ತಂಡ ಎರಡು ಓವರ್‌ಗಳ ಅಂತ್ಯಕ್ಕೆ 12 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.



ಶಿವಂ ದುಬೆ-ಹಾರ್ದಿಕ್‌ ಪಾಂಡ್ಯ ಜುಗಲ್‌ಬಂದಿ

ಆರಂಭಿಕ ಅಭಿಷೇಕ್‌ ಶರ್ಮಾ ಕೂಡ ಅಲ್ಪ ಪ್ರತಿರೋಧ ತೋರಿ 29 ರನ್‌ ಗಳಿಸಿದರೆ, ಈ ಪಂದ್ಯದಲ್ಲಿ ಅವಕಾಶ ಪಡೆದುಕೊಂಡ ರಿಂಕು ಸಿಂಗ್‌ 30 ರನ್‌ ಗಳಿಸಿ ತಂಡದ ಕಮ್‌ಬ್ಯಾಕ್‌ಗೆ ನೆರವು ನೀಡಿದ್ದರು. ಆದರೆ, ಭಾರತದ ಇನಿಂಗ್ಸ್‌ನಲ್ಲಿ ಗಮನ ಸೆಳೆದಿದ್ದು, ಹಾರ್ದಿಕ್‌ ಪಾಂಡ್ಯ ಹಾಗೂ ಶಿವಂ ದುಬೇ ಬ್ಯಾಟಿಂಗ್‌ ಅಬ್ಬರ. ಈ ಇಬ್ಬರೂ ಮುರಿಯದ ಆರನೇ ವಿಕೆಟ್‌ಗೆ 87 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿದರು. ಆ ಮೂಲಕ ಭಾರತ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದ ಹಾರ್ದಿಕ್‌ ಪಾಂಡ್ಯ 30 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 53 ರನ್‌ಗಳನ್ನು ಗಳಿಸಿದರು. ಹಾರ್ದಿಕ್‌ಗೆ ಮತ್ತೊಂದು ತುದಿಯಲ್ಲಿ ಹೆಗಲು ನೀಡಿದ್ದ ಶಿವಂ ದುಬೆ ಕೂಡ ಸ್ಪೋಟಕ ಇನಿಂಗ್ಸ್‌ ಆಡಿ 34 ಎಸೆತಗಳಲ್ಲಿ 53 ರನ್‌ ಗಳಿಸಿ ಅನಗತ್ಯ ರನ್‌ಗೆ ಹೋಗಿ ರನ್‌ ಔಟ್‌ ಆದರು.



ಇಂಗ್ಲೆಂಡ್‌ ತಂಡದ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಸಾಕಿಬ್‌ ಮಹ್ಮೂದ್‌ ಮೂರು ವಿಕೆಟ್‌ಗಳನ್ನು ಪಡೆದರೆ, ಜೇಮಿ ಓವರ್ಟನ್‌ ಎರಡು ವಿಕೆಟ್‌ಗಳನ್ನು ಕಿತ್ತಿದ್ದಾರೆ.

ಸ್ಕೋರ್‌ ವಿವರ

ಭಾರತ: 20 ಓವರ್‌ಗಳಿಗೆ 181-9 (ಹಾರ್ದಿಕ್‌ ಪಾಂಡ್ಯ 53, ಶಿವಂ ದುಬೆ 53, ರಿಂಕು ಸಿಂಗ್‌ 30, ಅಭಿಷೇಕ್‌ ಶರ್ಮಾ 29; ಸಾಕಿಬ್‌ ಮಹ್ಮೂದ್‌ 35ಕ್ಕೆ 3, ಜೇಮಿ ಓವರ್ಟನ್‌ 32ಕ್ಕೆ 2)

ಇಂಗ್ಲೆಂಡ್‌: 19.4 ಓವರ್‌ಗಳಿಗೆ 166-10 (ಹ್ಯಾರಿ ಬ್ರೂಕ್‌ 51, ಬೆನ್‌ ಡಕೆಟ್‌ 39, ಫಿಲ್‌ ಸಾಲ್ಟ್‌ 23, ರವಿ ಬಿಷ್ಣೋಯ್‌ 28 ಕ್ಕೆ 3, ಹರ್ಷಿತ್‌ ರಾಣಾ 33 ಕ್ಕೆ 3, ವರುಣ್‌ ಚಕ್ರವರ್ತಿ 28ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಶಿವಂ ದುಬೆ