#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG: ಗೌತಮ್‌ ಗಂಭೀರ್‌ ದಾಖಲೆ ಮುರಿಯುವ ಸನಿಹದಲ್ಲಿ ಸಂಜು ಸ್ಯಾಮ್ಸನ್‌!

IND vs ENG 3rd T20I: ಮಂಗಳವಾರ ರಾಜ್‌ಕೋಟ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಮೂರನೇ ಟಿ20ಐ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರ ದಾಖಲೆಯನ್ನು ಮುರಿಯಲು ಅವಕಾಶವಿದೆ.

ಗೌತಮ್‌ ಗಂಭೀರ್‌ ದಾಖಲೆ ಮುರಿಯಲು ಸಂಜು ಸ್ಯಾಮ್ಸನ್‌ಗೆ 92 ರನ್‌ ಅಗತ್ಯ!

Sanju Samson need 92 Runs to Overtake Gambhir in T20I Scorers

Profile Ramesh Kote Jan 27, 2025 5:32 PM

ನವದೆಹಲಿ: ಇಂಗ್ಲೆಂಡ್‌ ವಿರುದ್ಧ ಆರಂಭಿಕ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ, 5 ಪಂದ್ಯಗಳ ಟಿ20ಐ ಸರಣಿಯಲ್ಲಿ 2-0 ಮುನ್ನಡೆ ಪಡೆದಿದೆ. ಇದೀಗ ಉಭಯ ತಂಡಗಳು ಮಂಗಳವಾರ (ಜನವರಿ 28) ರಾಜ್‌ಕೋಟ್‌ನಲ್ಲಿ ನಡೆಯುವ ಮೂರನೇ ಟಿ20ಐ ಪಂದ್ಯದಲ್ಲಿ ಸೆಣಿಸಲಿವೆ. ಮೊದಲನೇ ಟಿ20ಐ ಪಂದ್ಯದಲ್ಲಿ ಸ್ಪೋಟಕ 26 ರನ್‌ ಸಿಡಿಸಿದ್ದ ಸಂಜು ಸ್ಯಾಮ್ಸನ್‌, ಎರಡನೇ ಟಿ20ಐ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಇದೀಗ ಮೂರನೇ ಟಿ20ಐ ಪಂದ್ಯದಲ್ಲಿ ಅವರ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಡಲಾಗಿದೆ.

ಚೆನ್ನೈನಲ್ಲಿ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ 7 ಎಸೆತಗಳಲ್ಲಿ ಕೇವಲ 5 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಇದಕ್ಕೂ ಮುನ್ನ ಅಭಿಷೇಕ್‌ ಶರ್ಮಾ ಕೂಡ ಬೇಗ ವಿಕೆಟ್‌ ಒಪ್ಪಿಸಿದ್ದರು. 166 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡ 19 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತವನ್ನು ಅನುಭವಿಸಿತ್ತು. ನಂತರ ತಿಲಕ್‌ ವರ್ಮಾ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಭಾರತ ತಂಡ ಗೆಲುವು ಪಡೆದಿತ್ತು.

IND vs ENG: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

ಮೂರನೇ ಟಿ20ಐ ಪಂದ್ಯದಲ್ಲಿ ಕಮ್‌ಬ್ಯಾಕ್‌ ಮಾಡಲು ಸಂಜು ಸ್ಯಾಮ್ಸನ್‌ ಎದುರು ನೋಡುತ್ತಿದ್ದಾರೆ. ಇಲ್ಲಿಯವರೆಗೂ ಆಡಿದ 39 ಟಿ20ಐ ಪಂದ್ಯಗಳಿಂದ ಕೇರಳ ಮೂಲದ ಬ್ಯಾಟ್ಸ್‌ಮನ್‌ 841 ರನ್‌ಗಳನ್ನು ಕಲೆ ಹಾಕಿದ್ದಾರೆ. ಸಂಜು ಸ್ಯಾಮ್ಸನ್‌ ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಗೌತಮ್‌ ಗಂಭೀರ್‌ ಅವರ ಸನಿಹದಲ್ಲಿದ್ದಾರೆ. ತಮ್ಮ ಟಿ20 ಐ ವೃತ್ತಿ ಜೀವನದಲ್ಲಿ ಗೌತಮ್‌ ಗಂಭೀರ್‌ 932 ರನ್‌ಗಳನ್ನು ಸಿಡಿಸಿದ್ದಾರೆ.

ಸಂಜು ಸ್ಯಾಮ್ಸನ್‌ಗೆ 92 ರನ್‌ಗಳ ಅಗತ್ಯ

ಇಂಗ್ಲೆಂಡ್‌ ವಿರುದ್ದದ ಮೂರನೇ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಅವರು 92 ರನ್‌ಗಳನ್ನು ಗಳಿಸಿದರೆ, ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರನ್ನು ಹಿಂದಿಕ್ಕಿದ್ದಾರೆ. ಅಂದ ಹಾಗೆ ಸಂಜು ಸ್ಯಾಮ್ಸನ್‌ ಅವರು 2015ರಲ್ಲಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

IND vs ENG 3rd T20: ಮೂರನೇ ಟಿ20 ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ, ಸಂಭಾವ್ಯ ತಂಡ ಹೀಗಿದೆ

2024ರ ಟಿ20 ವಿಶ್ವಕಪ್‌ ಭಾರತ ತಂಡದಲ್ಲಿದ್ದ ಸಂಜು

ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಕೇರಳ ಮೂಲದ ಬ್ಯಾಟ್ಸ್‌ಮನ್‌ ಮುಂದಿನ ನಾಲ್ಕು ವರ್ಷಗಳ ಕಾಲ ಭಾರತ ತಂಡದಿಂದ ದೂರ ಉಳಿದಿದ್ದರು. 2019ರಲ್ಲಿ ಅವರು ಭಾರತ ತಂಡಕ್ಕೆ ಮರಳಿದ್ದರು. 2024ರ ಐಸಿಸಿ ಟಿ20 ವಿಶ್ವಕಪ್‌ ಗೆದ್ದಿದ್ದ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್‌ ಇದ್ದರು. 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹಾಗೂ ರವೀಂದ್ರ ಜಡೇಜಾ ಅವರು ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಂಜುಗೆ ಟಿ20ಐ ತಂಡದಲ್ಲಿ ಸ್ಥಾನ ಲಭಿಸಿತ್ತು. 2024ರಲ್ಲಿ ಸಂಜು ಸ್ಯಾಮ್ಸನ್‌ ಮೂರು ಟಿ20ಐ ಶತಕಗಳನ್ನು ಬಾರಿಸಿದ್ದರು.

ಮೂರನೇ ಟಿ20ಐ ಪಂದ್ಯದ ವಿವರ

ಭಾರತ vs ಇಂಗ್ಲೆಂಡ್‌

ದಿನಾಂಕ: ಜನವರಿ 28, 2025

ಸಮಯ: ಸಂಜೆ 07: 00ಕ್ಕೆ

ಸ್ಥಳ: ನಿರಂಜನ್‌ ಶಾ ಸ್ಟೇಡಿಯಂ, ರಾಜ್‌ಕೋಟ್‌

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌