#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG: ಅರ್ಧಶತಕ ಸಿಡಿಸಿ ಸೋಲಂಚಿನಲ್ಲಿದ್ದ ಭಾರತವನ್ನು ಗೆಲ್ಲಿಸಿದ ತಿಲಕ್‌ ವರ್ಮಾ!

IND vs ENG 2nd T20I Highlights: ತಿಲಕ್‌ಗ ವರ್ಮಾ ನಿರ್ಣಾಯಕ ಬ್ಯಾಟಿಂಗ್‌ ಬಲದಿಂದ ಭಾರತ ತಂಡ, ಎರಡನೇ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 2-0 ಮುನ್ನಡೆಯನ್ನು ಪಡೆಯಿತು.

IND vs ENG: ಎರಡನೇ ಟಿ20ಐ ಪಂದ್ಯದಲ್ಲಿ ಭಾರತವನ್ನು ಗೆಲ್ಲಿಸಿದ ತಿಲಕ್‌ ವರ್ಮಾ!

IND vs ENG 2nd T20I Highlights

Profile Ramesh Kote Jan 25, 2025 10:47 PM

ಚೆನ್ನೈ: ಇಂಗ್ಲೆಂಡ್‌ ವಿರುದ್ಧ ಕೊನೆಯ ಓವರ್‌ವರೆಗೂ ತೀವ್ರ ಕುತೂಹಲದಿಂದ ಕೂಡಿದ್ದ ಎರಡನೇ ಟಿ20ಐ ಪಂದ್ಯದಲ್ಲಿ (IND vs ENG) ಭಾರತ ತಂಡ, 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಕೊನೆಯ ಓವರ್‌ವರೆಗೂ ಏಕಾಂಗಿ ಹೋರಾಟ ನಡೆಸಿದ ತಿಲಕ್‌ ವರ್ಮಾ (Tilak Verma) ನಿರ್ಣಾಯಕ ಅರ್ಧಶತಕ ಸಿಡಿಸಿ ಇನ್ನೂ 4 ಎಸೆತಗಳು ಬಾಕಿ ಇರುವಾಗಲೇ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಎರಡು ಪಂದ್ಯಗಳ ಅಂತ್ಯಕ್ಕೆ ಟೀಮ್‌ ಇಂಡಿಯಾ ಟಿ20ಐ ಸರಣಿಯಲ್ಲಿ 2-0 ಮುನ್ನಡೆಯನ್ನು ಪಡೆದಿದೆ.

ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್‌ ನೀಡಿದ್ದ 166 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ತಿಲಕ್‌ ವರ್ಮಾ ಅರ್ಧಶತಕದ ಬಲದಿಂದ 19.2 ಓವರ್‌ಗಳಿಗೆ ತಲುಪಿತು. ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌, ಹಾರ್ದಿಕ್‌ ಪಾಂಡ್ಯ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಎಡವಿದರೂ ತಿಲಕ್‌ ವರ್ಮಾ ಭಾರತವನ್ನು ಗೆಲ್ಲಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

IND vs ENG: ಟಿ20ಐ ಸರಣಿಯ ಇನ್ನುಳಿದ ಭಾಗದಿಂದ ರಿಂಕು ಸಿಂಗ್‌, ನಿತೀಶ್‌ ರೆಡ್ಡಿ ಔಟ್‌!

ನಿರ್ಣಾಯಕ ಅರ್ಧಶತಕ ಸಿಡಿಸಿದ ತಿಲಕ್‌ ವರ್ಮಾ

ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌, ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ಧ್ರುವ್‌ ಜುರೆಲ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ವಾಷಿಂಗ್ಟನ್‌ ಸುಂದರ್‌ 26 ರನ್‌ಗಳ ನಿರ್ಣಾಯಕ ಕೊಡುಗೆ ನೀಡಿ ವಿಕೆಟ್‌ ಒಪ್ಪಿಸಿದರು. ಆದರೆ, ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಬ್ಯಾಟ್‌ ಮಾಡಿದ ತಿಲಕ್‌ ವರ್ಮಾ, ಅತ್ಯಂತ ಜವಾಬ್ದಾರಿಯುತವಾಗಿ ಆಟವಾಡಿದರು. ಅವರನ್ನು ನಿಯಂತ್ರಿಸಲು ಇಂಗ್ಲೆಂಡ್‌ ಬೌಲರ್‌ಗಳಿಂದ ಸಾಧ್ಯವಾಗಲಿಲ್ಲ. ಆಡಿದ 55 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 72 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಭಾರತ ತಂಡವನ್ನು ಕೊನೆಯ ಓವರ್‌ನಲ್ಲಿ ಗೆಲುವಿನ ದಡ ಸೇರಿಸಿದರು. 5 ಎಸೆತಗಳಲ್ಲಿ 9 ರನ್‌ ಗಳಿಸಿದ ರವಿ ಬಿಷ್ಣೋಯ್‌ ಕೂಡ ಭಾರತದ ಗೆಲುವಿನಲ್ಲಿ ಅಳಿವು ಸೇವೆ ಸಲ್ಲಿಸಿದರು. ಇಂಗ್ಲೆಂಡ್‌ ಪರ ಬ್ರೈಡೆನ್‌ ಕಾರ್ಸ್‌ 3 ವಿಕೆಟ್‌ ಕಿತ್ತರು.



165 ರನ್‌ಗಳನ್ನು ಕಲೆ ಹಾಕಿದ ಇಂಗ್ಲೆಂಡ್‌

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಇಂಗ್ಲೆಂಡ್‌ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 165 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 166 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು. ಪ್ರವಾಸಿಗರ ಪರ ನಾಯಕ ಜೋಸ್‌ ಬಟ್ಲರ್‌ (45 ರನ್‌) ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

IND vs ENG: ಯುಜ್ವೇಂದ್ರ ಚಹಲ್‌ಗೆ ಕ್ಷಮೆ ಕೇಳಿದ ಅರ್ಷದೀಪ್‌ ಸಿಂಗ್‌! ಕಾರಣವೇನು?

ಇಂಗ್ಲೆಂಡ್‌ ಬ್ಯಾಟಿಂಗ್‌ ವೈಫಲ್ಯ

ಮೊದಲನೇ ಪಂದ್ಯದಂತೆ ಈ ಪಂದ್ಯದಲ್ಲಿಯೂ ಇಂಗ್ಲೆಂಡ್‌ ತಂಡದ ಆರಂಭಿಕರಾದ ಫಿಲ್‌ ಸಾಲ್ಟ್‌ (4) ಹಾಗೂ ಬೆನ್‌ ಡಕೆಟ್‌ (3) ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಹ್ಯಾರಿ ಬ್ರೂಕ್‌ (13) ಮತ್ತೊಮ್ಮೆ ವೈಫಲ್ಯ ಕಂಡರು. ಆದರೆ, ಕಳೆದ ಪಂದ್ಯದಂತೆ ಈ ಪಂದ್ಯದಲ್ಲಿಯೂ ನಾಯಕ ಜೋಸ್‌ ಬಟ್ಲರ್‌ ತಮ್ಮ ಬ್ಯಾಟಿಂಗ್‌ನಲ್ಲಿ ಭರವಸೆ ನೀಡಿದರು. 30 ಎಸೆತಗಳನ್ನು ಎದುರಿಸಿದ ಅವರು 3 ಸಿಕ್ಸರ್‌ ಹಾಗೂ 2 ಬೌಂಡರಿಯೊಂದಿಗೆ 45 ರನ್‌ ಗಳಿಸಿದರು. ಆದರೆ, ಅರ್ಧಶತಕದಂಚಿನಲ್ಲಿ ಅಕ್ಷರ್‌ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದರು.



ಲಿಯಾಮ್‌ ಲಿವಿಂಗ್‌ಸ್ಟೋನ್‌ (13) ಮತ್ತೊಮ್ಮೆ ವಿಫಲರಾದರು. ಆದರೆ, ಕೇವಲ 12 ಎಸೆತಗಳಲ್ಲಿ 22 ರನ್‌ ಗಳಿಸಿ ಕ್ರೀಸ್‌ನಲ್ಲಿ ನೆಲೆಯೂರಿದ್ದ ಜೇಮಿ ಸ್ಮಿತ್‌, ಅಭಿಷೇಕ್‌ ಶರ್ಮಾ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಲಾಂಗ್‌ ಆನ್‌ನಲ್ಲಿ ಕ್ಯಾಚಿತ್ತರು. 17 ಎಸೆತಗಳಲ್ಲಿ 31 ರನ್‌ ಸಿಡಿಸಿ ಆಡುತ್ತಿದ್ದ ಬ್ರೈಡನ್‌ ಕಾರ್ಸ್‌ ಅವರು ಅನಗತ್ಯವಾಗಿ ರನ್‌ ಕದಿಯಲು ಹೋಗಿ ರನ್‌ಔಟ್‌ ಆದರು. ಜೋಫ್ರಾ ಆರ್ಚರ್‌ (12) ಹಾಗೂ ಆದಿಲ್‌ ರಶೀದ್‌ (10) ಅವರು ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.

ಭಾರತದ ಪರ ಅಕ್ಷರ್‌ ಪಟೇಲ್‌ ಹಾಗೂ ವರುಣ್‌ ಚಕ್ರವರ್ತಿ ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರೆ, ರವಿ ಬಿಷ್ಣೋಯ್ ಬಿಟ್ಟರೆ ಬೌಲ್‌ ಮಾಡಿದ ಇನ್ನುಳಿದ ಎಲ್ಲಾ ಬೌಲರ್‌ಗಳು ತಲಾ ಒಂದೊಂದು ವಿಕೆಟ್‌ ಕಿತ್ತರು.



ಸ್ಕೋರ್‌ ವಿವರ

ಇಂಗ್ಲೆಂಡ್‌: 20 ಓವರ್‌ಗಳಿಗೆ 165-9 ( ಜೋಸ್‌ ಬಟ್ಲರ್‌ 45, ಬ್ರೈಡನ್ ಕಾರ್ಸ್‌ 32, ಜೇಮಿ ಸ್ಮಿತ್‌ 22; ಅಕ್ಷರ್‌ ಪಟೇಲ್‌ 32ಕ್ಕೆ 2, ವರುಣ್‌ ಚಕ್ರವರ್ತಿ 38ಕ್ಕೆ 2)

ಭಾರತ: 19.2 ಓವರ್‌ಗಳಿಗೆ 166-8 (ತಿಲಕ್‌ ವರ್ಮಾ 72*, ವಾಷಿಂಗ್ಟನ್‌ ಸುಂದರ್‌ 26; ಬ್ರೈಡೆನ್‌ ಕಾರ್ಸ್‌ 29ಕ್ಕೆ 3)

ಪಂದ್ಯ ಶ್ರೇಷ್ಠ ಪ್ರಶಸ್ತಿ: ತಿಲಕ್‌ ವರ್ಮಾ