ಅರ್ಧಶತಕ ಸಿಡಿಸಿದ ತಮ್ಮ ಶಿಷ್ಯ ಅಭಿಷೇಕ್ ಶರ್ಮಾಗೆ ಯುವರಾಜ್ ಸಿಂಗ್ ವಿಶೇಷ ಸಂದೇಶ!
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಮೊದಲ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ 7 ಗೆಲುವು ಸಾಧಿಸಿದೆ ಭಾರತದ ಪರ 34 ಎಸೆತಗಳಲ್ಲಿ 79 ರನ್ ಸಿಡಿಸಿದ ಯುವ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರನ್ನು ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಹಾಗೂ ಸಿಕ್ಸರ್ ಸರದಾರ ಯುವರಾಜ್ ಸಿಂಗ್ ಶ್ಲಾಘಿಸಿದ್ದಾರೆ.
ನವದೆಹಲಿ: ಟೀಮ್ ಇಂಡಿಯಾದ ಯುವ ಎಡಗೈ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರನ್ನು ವಿಶ್ವಕಪ್ ವಿಜೇತ ಆಟಗಾರ ಹಾಗೂ ಮೆಂಟರ್ ಯುವರಾಜ್ ಸಿಂಗ್ (Yuvraj Singh) ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಬುಧವಾರ (ಜನವರಿ 22) ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಮೊದಲ ಟಿ20ಐ (IND vs ENG 1st T20I Highlights) ಪಂದ್ಯದಲ್ಲಿ 79 ರನ್ ಸಿಡಿಸಿದ ಅಭಿಷೇಕ್ ಶರ್ಮಾ, ಭಾರತ ತಂಡದ 7 ವಿಕೆಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ 24ನೇ ವಯಸ್ಸಿನ ಎಡಗೈ ಆಟಗಾರನನ್ನು ಯುವರಾಜ್ ಸಿಂಗ್ ಕೊಂಡಾಡಿದ್ದಾರೆ. ಅಭಿಷೇಕ್ ಶರ್ಮಾ ಹೆಚ್ಚಾಗಿ ಚೆಂಡನ್ನು ಗಾಳಿಯಲ್ಲಿ ಬಾರಿಸಿದ ಹೊರತಾಗಿಯೂ ಗ್ರೌಂಡ್‌ನಲ್ಲಿ ಬೌಂಡರಿ ಗಳಿಸಿ ತಮ್ಮಲ್ಲಿರುವ ಬ್ಯಾಟಿಂಗ್ ಕೌಶಲವನ್ನು ಪ್ರದರ್ಶಿಸಿದ್ದಕ್ಕೆ ಸಿಕ್ಸರ್ ಸರದಾರ ವಿಶೇಷ ಪದಗಳಿಂದ ಬಣ್ಣಿಸಿದ್ದಾರೆ.
ವರುಣ್ ಸ್ಪಿನ್ ಮೋಡಿಗೆ ಇಂಗ್ಲೆಂಡ್ ತತ್ತರ, ಅಭಿಷೇಕ್ ಅಬ್ಬರದಿಂದ ಭಾರತಕ್ಕೆ ಮೊದಲ ಜಯ!
ಅಭಿಷೇಕ್ ಶರ್ಮಾ ಬ್ಯಾಟಿಂಗ್‌ಗೆ ಯುವಿ ಮೆಚ್ಚುಗೆ
"ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯ ಗೆಲ್ಲುವ ಮೂಲಕ ಯುವಕರ ತಂಡ ಶುಭಾರಂಭ ಮಾಡಿದೆ. ನಮ್ಮ ತಂಡದ ಬೌಲರ್‌ಗಳು ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದಾರೆ. ಅದರಲ್ಲೂ ಅಭಿಷೇಕ್ ಶರ್ಮಾ ಗ್ರೌಂಡ್ ಶಾಟ್‌ಗಳ ಮೂಲಕ ಗಳಿಸಿದ ಎರಡು ಬೌಂಡರಿಗಳು ನನ್ನನ್ನು ರಂಜಿಸಿವೆ," ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಅತಿ ವೇಗದ ಎರಡನೇ ಶತಕ
ಇಂಗ್ಲೆಂಡ್ ವಿರುದ್ಧದ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಯುವರಾಜ್ ಸಿಂಗ್ (12 ಎಸೆತ) ಹೆಸರಿನಲ್ಲಿದೆ. ಆದರೆ ನಿನ್ನೆ (ಬುಧವಾರ) ನಡೆದಿದ್ದ ಪಂದ್ಯದಲ್ಲಿ 20 ಎಸೆತಗಳಲ್ಲೇ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ ಅತಿ ವೇಗವಾಗಿ ಅರ್ಧಶತಕ ಸಿಡಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
IND vs ENG: ಯುಜ್ವೇಂದ್ರ ಚಹಲ್‌ಗೆ ಕ್ಷಮೆ ಕೇಳಿದ ಅರ್ಷದೀಪ್ ಸಿಂಗ್! ಕಾರಣವೇನು?
ಗಮನ ಸೆಳೆದ ಅಭಿಷೇಕ್ ಶರ್ಮಾ
ಜಿಂಬಾಬ್ವೆ ವಿರುದ್ಧ ನಡೆದಿದ್ದ ಸರಣಿಯಲ್ಲಿ ಚೊಚ್ಚಲ ಶತಕ ಸಿಡಿಸಿದ್ದರ ಹೊರತಾಗಿಯೂ, ಅಭಿಷೇಕ್ ಶರ್ಮಾ 13 ಟಿ20ಐ ಪಂದ್ಯದಲ್ಲಿ ಕೇವಲ 256 ರನ್ ಗಳಿಸಿ ಕ್ರಿಕೆಟ್ ದಿಗ್ಗಜರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಭಿಷೇಕ್ ಶರ್ಮಾ ಬದಲಿಗೆ ಯುವ ಆಟಗಾರರಾದ ಶುಭಮನ್ ಗಿಲ್ ಅಥವಾ ಯಶಸ್ವಿ ಜೈಸ್ವಾಲ್‌ಗೆ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದರು. ಆದರೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯ ಆರಂಭಿಕ ಪಂದ್ಯದಲ್ಲೇ 79 ರನ್ ಸಿಡಿಸಿರುವ ಅಭಿಷೇಕ್ ಶರ್ಮಾ, ಉಳಿದ ಪಂದ್ಯಗಳಲ್ಲೂ ದೊಡ್ಡ ಮೊತ್ತ ಗಳಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಅವಕಾಶ ಹೊಂದಿದ್ದಾರೆ.
Good start to the series boys ! 🇮🇳 great tone set by our bowlers and well played sir !@IamAbhiSharma4 top knock ‘!! I’m impressed you hit 2 boundaries down the ground aswell 🤪! #indiavsengland
— Yuvraj Singh (@YUVSTRONG12) January 22, 2025
ಭಾರತಕ್ಕೆ 7 ವಿಕೆಟ್ ಗೆಲುವು
ಇನ್ನು ಈ ಪಂದ್ಯದಲ್ಲಿ 133 ರನ್‌ಗಳ ಸುಲಭದ ಗುರಿಯನ್ನು ಹಿಂಬಾಲಿಸಿದ್ದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದರೂ ಸಂಜು ಸ್ಯಾಮ್ಸನ್ (26 ರನ್) ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಅವರ ವಿಕೆಟ್‌ಗಳನ್ನು ಸತತವಾಗಿ ಕಳೆದುಕೊಂಡಿತು. ಆದರೆ ಮೂರನೇ ವಿಕೆಟ್‌ಗೆ ಜೊತೆಗೂಡಿದ ಅಭಿಷೇಕ್ ಶರ್ಮಾ (79 ರನ್, 5X4, 8x6) ಹಾಗೂ ತಿಲಕ್ ವರ್ಮಾ (19* ರನ್, 3X4) 42 ಎಸೆತಗಳಲ್ಲಿ 84 ರನ್ ಜೊತೆಯಾಟದಿಂದ 12.5 ಓವರ್‌ಗಳಲ್ಲೇ ಟೀಮ್ ಇಂಡಿಯಾ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಗೆಲುವಿನ ದಡ ಸೇರಿತು. ಆ ಮೂಲಕ 5 ಪಂದ್ಯಗಳ ಟಿ20ಐ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.