IND vs NZ Final: ನ್ಯೂಜಿಲೆಂಡ್ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!
New Zealand Playing XI for Final vs IND: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಭಾನುವಾರ ದುಬೈ ಇಂಟರ್‌ನ್ಯಾನಷಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪೈನಲ್‌ನಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಕಿವೀಸ್ ತಂಡದ ಪ್ಲೇಯಿಂಗ್ XI ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ XI

ದುಬೈ: ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ (ಮಾರ್ಚ್ 9) ನಡೆಯುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ (Champions Trophy 2025) ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ (IND vs NZ) ತಂಡಗಳು ಕಾದಾಟ ನಡೆಸಲಿವೆ. ಈ ಮಹತ್ವದ ಪಂದ್ಯಕ್ಕೆ ಎರಡೂ ತಂಡಗಳು ಸಿದ್ದತೆಯನ್ನು ನಡೆಸುತ್ತಿವೆ. ಅದರಲ್ಲಿಯೂ ವಿಶೇಷವಾಗಿ ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ಕಿವೀಸ್, ಲೀಗ್ ಹಂತದಲ್ಲಿ ತನ್ನನ್ನು ಸೋಲಿಸಿದ್ದ ಭಾರತ ತಂಡವನ್ನು ಮಣಿಸಲು ಸೂಕ್ತ ರಣತಂತ್ರವನ್ನು ರೂಪಿಸುತ್ತಿದೆ. ಅಂದ ಹಾಗೆ ಫೈನಲ್ ಹಣಾಹಣಿಯಲ್ಲಿ ನ್ಯೂಜಿಲೆಂಡ್ ತಂಡದ ಪ್ಲೇಯಿಂಗ್ XI ಯಾವ ರೀತಿ ಇರಲಿದೆ ಎಂದು ಇಲ್ಲಿ ವಿವರಿಸಲಾಗಿದೆ.
ನ್ಯೂಜಿಲೆಂಡ್ ತಂಡ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 50 ರನ್‌ಗಳಿಂದ ಗೆಲುವು ಪಡೆದಿತ್ತು. ಆ ಮೂಲಕ ಫೈನಲ್‌ಗೆ ಅರ್ಹತೆ ಪಡೆದಿತ್ತು. ಅದೇ ರೀತಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಆಸ್ಟ್ರೇಲಿಯಾ ಎದುರು 4 ವಿಕೆಟ್‌ಗಳಿಂದ ಗೆದ್ದು ಅಂತಿಮ ನಾಲ್ಕರ ಹಂತಕ್ಕೆ ಲಗ್ಗೆ ಇಟ್ಟಿತ್ತು. ಆದರೆ, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಭಾರತ ತಂಡ 44 ರನ್‌ಗಳಿಂದ ಗೆಲುವು ಪಡೆದಿತ್ತು. ವರುಣ್ ಚಕ್ರವರ್ತಿ ಈ ಪಂದ್ಯದಲ್ಲಿ ಕಿವೀಸ್ ಬ್ಯಾಟರ್‌ಗಳಿಗೆ ಕಾಟ ನೀಡಿ, 5 ವಿಕೆಟ್ ಸಾಧನೆ ಮಾಡಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
IND vs NZ final: ಫೈನಲ್ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ
ಆದರೆ, ನಾಕ್‌ಔಟ್ ಪಂದ್ಯಗಳಲ್ಲಿ ಭಾರತ ತಂಡಕ್ಕೆ, ನ್ಯೂಜಿಲೆಂಡ್ ಸಾಕಷ್ಟು ಆಘಾತಗಳನ್ನು ನೀಡಿದೆ. ಅದೇ ರೀತಿ ಮಾರ್ಚ್ 9 ರಂದು ಫೈನಲ್ ಪಂದ್ಯದಲ್ಲಿಯೂ ಟೀಮ್ ಇಂಡಿಯಾಗೆ ಶಾಕ್ ನೀಡಲು ಕಿವೀಸ್ ಬಳಗ ಎದುರು ನೋಡುತ್ತಿದೆ.
ನ್ಯೂಜಿಲೆಂಡ್ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಸಾಧ್ಯತೆ
ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದ ಅದೇ ಆಡುವ ಬಳಗವನ್ನು ಭಾರತದ ವಿರುದ್ದವೂ ನ್ಯೂಜಿಲೆಂಡ್ ಉಳಿಸಿಕೊಳ್ಳಬಹುದು. ಆದರೆ, ಭಾರತ ತಂಡದ ಸ್ಪಿನ್ನರ್‌ಗಳ ಎದುರು ತಿಣುಕಾಡಿದ್ದ ಆರಂಭಿಕ ಬ್ಯಾಟ್ಸ್‌ಮನ್ ವಿಲ್ ಯಂಗ್ ಅವರ ಬದಲು ಫೈನಲ್‌ಗೆ ಡೆವೋನ್ ಕಾನ್ವೆ ಅವರನ್ನು ಆಡಿಸಿದರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಡೆವೋನ್ ಕಾನ್ವೆ ಅವರು ಸ್ಪಿನ್ನರ್‌ಗಳ ಎದುರು ಉತ್ತಮ ಕೌಶಲವನ್ನು ಹೊಂದಿದ್ದಾರೆ. ಈ ಒಂದು ಕಾರಣದಿಂದ ಡೆವೋನ್ ಕಾನ್ವೇಗೆ ಅವಕಾಶ ನೀಡಿದರೂ ಅಚ್ಚರಿ ಇಲ್ಲ.
IND vs NZ: ವರುಣ್ ಸ್ಪಿನ್ ಮೋಡಿಗೆ ಸೋತ ಕಿವೀಸ್, ಸೆಮೀಸ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಎದುರಾಳಿ!
ಭಾರತದ ಎದುರು ಫೈನಲ್ ಪಂದ್ಯಕ್ಕೆ ರಚಿನ್ ರವೀಂದ್ರ ಹಾಗೂ ಡೆವೋನ್ ಕಾನ್ವೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಮೂರನೇ ಕ್ರಮಾಂಕದಲ್ಲಿ ಇನ್ ಫಾರ್ಮ್ ಬ್ಯಾಟರ್ ಕೇನ್ ವಿಲಿಯಮ್ಸನ್ ಆಡಲಿದ್ದಾರೆ. ಮುಂದಿನ ಮೂರು ಕ್ರಮಾಂಕಗಳಲ್ಲಿ ಡ್ಯಾರಿಲ್ ಮಿಚೆಲ್, ಟಾಮ್ ಲೇಥಮ್ ಹಾಗೂ ಗ್ಲೆನ್ ಫಿಲಿಪ್ಸ್ ಆಡಲಿದ್ದಾರೆ. ಮೈಕಲ್ ಬ್ರೇಸ್‌ವೆಲ್ ಹಾಗೂ ಮಿಚೆಲ್ ಸ್ಯಾಂಟ್ನರ್ ಅವರು ಕಿವೀಸ್‌ಗೆ ಕೀ ಆಟಗಾರರು. ಏಕೆಂದರೆ ಈ ಇಬ್ಬರೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ತಂಡಕ್ಕೆ ನೆರವಾಗಬಲ್ಲರು. ಇನ್ನು ವೇಗದ ಬೌಲರ್‌ಗಳಾಗಿ ಮ್ಯಾಟ್ ಹೆನ್ರಿ, ಕೇನ್ ಜೇಮಿಸನ್ ಹಾಗೂ ವಿಲಿಯಮ್ ರೌರ್ಕಿ ಅವರು ಆಡಲಿದ್ದಾರೆ.
ಭಾರತದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ನ್ಯೂಜಿಲೆಂಡ್ ಪ್ಲೇಯಿಂಗ್ XI
ಡೆವೋನ್ ಕಾನ್ವೆ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲೇಥಮ್ (ವಿ ಕಿ), ಗ್ಲೆನ್ ಫಿಲಿಪ್ಸ್, ಮೈಕಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ವಿಲಿಯಮ್ ರೌರ್ಕಿ