ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

IND vs NZ: ವರುಣ್‌ ಸ್ಪಿನ್‌ ಮೋಡಿಗೆ ಸೋತ ಕಿವೀಸ್‌, ಸೆಮೀಸ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಎದುರಾಳಿ!

IND vs NZ Match Highlights: ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕೊನೆಯ ಲೀಗ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು ಭಾರತ ತಂಡ 44 ರನ್‌ಗಳಿಂದ ಗೆಲುವು ಪಡೆದಿದೆ. ಭಾರತ ನೀಡಿದ್ದ 250 ರನ್‌ ಗುರಿ ಹಿಂಬಾಲಿಸಿದ್ದ ಕಿವೀಸ್, ವರುಣ್‌ ಚಕ್ರವರ್ತಿ ಸ್ಪಿನ್‌ ಮೋಡಿಗೆ ನಲುಗಿ 205 ರನ್‌ಗಳಿಗೆ ಆಲೌಟ್‌ ಆಗಿತ್ತು.

IND vs NZ: ನ್ಯೂಜಿಲೆಂಡ್‌ ವಿರುದ್ದ ಭಾರತಕ್ಕೆ ಅಧಿಕಾರಯುತ ಜಯ!

ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡಕ್ಕೆ 44 ರನ್‌ ಜಯ.

Profile Ramesh Kote Mar 2, 2025 10:20 PM

ದುಬೈ: ಶ್ರೇಯಸ್‌ ಅಯ್ಯರ್‌ (79 ರನ್‌) ಅರ್ಧಶತಕ ಹಾಗೂ ವರುಣ್‌ ಚಕ್ರವರ್ತಿ (42 ಕ್ಕೆ 5) ಸ್ಪಿನ್‌ ಮೋಡಿಯ ನೆರವಿನಿಂದ ಭಾರತ ತಂಡ, 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 44 ರನ್‌ಗಳ ಅಧಿಕಾರಯುತ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಎ ಗುಂಪಿನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ ಭಾರತ ತಂಡ, ಸೆಮಿಫೈನಲ್‌ ಹಣಾಹಣಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಮಾರ್ಚ್‌ 4 ರಂದು ಕಾದಾಟ ನಡೆಸಲಿದೆ.

ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 250 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್‌, ಕೇನ್‌ ವಿಲಿಯಮ್ಸನ್‌ (81 ರನ್‌) ಏಕಾಂಗಿ ಹೋರಾಟದ ಹೊರತಾಗಿಯೂ ವರುಣ್‌ ಚಕ್ರವರ್ತಿ ಸ್ಪಿನ್‌ ಮೋಡಿಗೆ ನಲುಗಿ 45.3 ಓವರ್‌ಗಳಿಗೆ 205 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಮಿಚೆಲ್‌ ಸ್ಯಾಂಟ್ನರ್‌ ನಾಯಕತ್ವದ ಕಿವೀಸ್‌ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ ನ್ಯೂಜಿಲೆಂಡ್‌ ತಂಡ ಮಾರ್ಚ್‌ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಸೆಮಿಫೈನಲ್‌ನಲ್ಲಿ ಕಾದಾಟ ನಡೆಸಲಿದೆ.

IND vs NZ: ರವೀಂದ್ರ ಜಡೇಜಾರ ಸ್ಟನಿಂಗ್‌ ಕ್ಯಾಚ್‌ ಪಡೆದ ಕೇನ್‌ ವಿಲಿಯಮ್ಸನ್‌! ವಿಡಿಯೊ

ಕೇನ್‌ ವಿಲಿಯಮ್ಸನ್‌ ಏಕಾಂಗಿ ಹೋರಾಟ

ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್‌ ತಂಡದ ಪರ ಕೇನ್‌ ವಿಲಿಯಮ್ಸನ್‌ ಏಕಾಂಗಿ ಹೋರಾಟ ನಡೆಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ರವೀದ್ರ ಜಡೇಜಾ, ಅಕ್ಷರ್‌ ಪಟೇಲ್‌, ಕುಲ್ದೀಪ್‌ ಯಾದವ್‌ ಹಾಗೂ ವರುಣ್‌ ಚಕ್ರವರ್ತಿ ಸ್ಪಿನ್‌ ಮೋಡಿಯನ್ನು ಮೆಟ್ಟಿ ನಿಲ್ಲಲು ಕಿವೀಸ್‌ ಬ್ಯಾಟರ್‌ಗಳಿಂದ ಸಾಧ್ಯವಾಗಲಿಲ್ಲ. ಆದರೆ, ಕಿವೀಸ್‌ ಪರ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಕೇನ್‌ ವಿಲಿಯಮ್ಸನ್‌, ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 120 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 81 ರನ್‌ ಗಳಿಸಿದರು. ಆ ಮೂಲಕ ತಂಡವನ್ನು ಗೆಲ್ಲಿಸುವ ಹಾದಿಯಲ್ಲಿದ್ದರು. ಆದರೆ, ಅವರನ್ನು ಅಕ್ಷರ್‌ ಪಟೇಲ್‌ ಔಟ್‌ ಮಾಡಿದರು. ಆ ಮೂಲಕ ಕಿವೀಸ್‌ ಗೆಲುವಿನ ಕನಸು ಭಗ್ನವಾಯಿತು. ವಿಲ್‌ ಯಂಗ್‌ (22) ಹಾಗೂ ಮಿಚೆಲ್‌ ಸ್ಯಾಂಟ್ನರ್‌ (28) ಬಿಟ್ಟರೆ ಇನ್ನುಳಿದವರು ವೈಯಕ್ತಿಕ 20 ರನ್‌ಗಳನ್ನು ಕಲೆ ಹಾಕಲು ಸಾಧ್ಯವಾಗಲಿಲ್ಲ.



5 ವಿಕೆಟ್‌ ಸಾಧನೆ ಮಾಡಿದ ವರುಣ್‌ ಚಕ್ರವರ್ತಿ

ಸ್ಪಿನ್‌ ಮೋಡಿ ಮಾಡಿದ ವರುಣ್‌ ಚಕ್ರವರ್ತಿ 5 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಅವರು ಬೌಲ್‌ ಮಾಡಿದ 10 ಓವರ್‌ಗಳಲ್ಲಿ 42 ರನ್‌ ನೀಡಿ ಪ್ರಮುಖ 5 ವಿಕೆಟ್‌ ಸಾಧನೆ ಮಾಡಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ವಿಲ್‌ ಯಂಗ್‌, ಗ್ಲೆನ್‌ ಫಿಲಿಪ್ಸ್‌, ಮೈಕಲ್‌ ಬ್ರೇಸ್‌ವೆಲ್‌, ಮಿಚೆಲ್‌ ಸ್ಯಾಂಟ್ನರ್‌ ಹಾಗೂ ಮ್ಯಾಟ್‌ ಹೆನ್ರಿ ಅವರನ್ನು ಔಟ್‌ ಮಾಡಿದರು.

IND vs NZ: ಅರ್ಧಶತಕ ಬಾರಿಸಿ ಅಪಾಯದಲ್ಲಿದ್ದ ಭಾರತ ತಂಡಕ್ಕೆ ಆಸರೆಯಾದ ಶ್ರೇಯಸ್‌ ಅಯ್ಯರ್‌!

249 ರನ್‌ ಕಲೆ ಹಾಕಿದ್ದ ಭಾರತ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ, ಮ್ಯಾಟ್‌ ಹೆನ್ರಿ (42 ಕ್ಕೆ 5) ಅವರ ಮಾರಕ ಬೌಲಿಂಗ್‌ ದಾಳಿಯ ಹೊರತಾಗಿಯೂ ಶ್ರೇಯಸ್‌ ಅಯ್ಯರ್‌ (79 ರನ್‌) ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 249 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ನ್ಯೂಜಿಲೆಂಡ್‌ ತಂಡಕ್ಕೆ 250 ರನ್‌ಗಳ ಗುರಿಯನ್ನು ನೀಡಿತ್ತು.



ಶ್ರೇಯಸ್‌ ಅಯ್ಯರ್‌ ಅರ್ಧಶತಕ

ಮೊದಲು ಬ್ಯಾಟ್‌ ಮಾಡಿದ ಭಾರತ ತಂಡದ ಪರ ಅಗ್ರ ಕ್ರಮಾಂಕದ ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌ ಹಾಗೂ ವಿರಾಟ್‌ ಕೊಹ್ಲಿ ಬಹುಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ನಾಲ್ಕನೇ ವಿಕೆಟ್‌ಗೆ ಜೊತೆಯಾದ ಶ್ರೇಯಸ್‌ ಅಯ್ಯರ್‌ ಹಾಗೂ ಅಕ್ಷರ್‌ ಪಟೇಲ್‌ 98 ರನ್‌ಗಳ ನಿರ್ಣಾಯಕ ಕೊಡುಗೆಯನ್ನು ನೀಡಿದ್ದರು. ಆ ಮೂಲಕ ಸಂಕಷ್ಟದಲ್ಲಿ ಭಾರತ ತಂಡಕ್ಕೆ ಆಸರೆಯಾಗಿದ್ದರು. 42 ರನ್‌ ಗಳಿಸಿದ ಬಳಿಕ ಅಕ್ಷರ್‌ ಪಟೇಲ್‌ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್‌ ಮಾಡಿದ ಶ್ರೇಯಸ್‌ ಅಯ್ಯರ್‌ ಕಿವೀಸ್‌ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 98 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಗಳೊಂದಿಗೆ 79 ರನ್‌ ಗಳಿಸಿ ಭಾರತ ತಂಡದ ಮೊತ್ತವನ್ನು 200ರ ಗಡಿ ಸನಿಹ ತಂದು ಔಟ್‌ ಆದರು. ಕೊನೆಯಲ್ಲಿ ಅಬ್ಬರಿಸಿದ ಹಾರ್ದಿಕ್‌ ಪಾಂಡ್ಯ, 45 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿದರು.

ಸ್ಕೋರ್‌ ವಿವರ

ಭಾರತ: 50 ಓವರ್‌ಗಳಿಗೆ 249-9 (ಶ್ರೇಯಸ್‌ಅಯ್ಯರ್‌ 79, ಹಾರ್ದಿಕ್‌ ಪಾಂಡ್ಯ 45, ಅಕ್ಷರ್‌ ಪಟೇಲ್‌ 42; ಮ್ಯಾಟ್‌ ಹೆನ್ರಿ 42 ಕ್ಕೆ 5, ಕೈಲ್‌ ಜೇಮಿಸನ್‌ 31 ಕ್ಕೆ 1)

ನ್ಯೂಜಿಲೆಂಡ್‌: 45.3 ಓವರ್‌ಗಳಿಗೆ 205-10 (ಕೇನ್‌ ವಿಲಿಯಮ್ಸನ್‌ 81, ವಿಲ್‌ ಯಂಗ್‌ 22; ಮಿಚೆಲ್‌ ಸ್ಯಾಂಟ್ನರ್‌ 28; ವರುಣ್‌ ಚಕ್ರವರ್ತಿ 42 ಕ್ಕೆ 5, ಕುಲ್ದೀಪ್‌ ಯಾದವ್‌ 56ಕ್ಕೆ 2)