Interest Rate: ಫೆಬ್ರವರಿಯಲ್ಲಿ ನಿಮ್ಮ ಗೃಹ ಸಾಲ ಬಡ್ಡಿ ಇಳಿಕೆ? ಆರ್‌ಬಿಐನಿಂದ ಸಿಆರ್‌ಆರ್ ಕಟ್
Interest Rate: ಕೊನೆಗೂ ಹೊಸ ವರ್ಷ 2025ರಲ್ಲಿ ಗೃಹ ಸಾಲಗಾರರಿಗೆ ರಿಲೀಫ್ ಸಿಗುವ ನಿರೀಕ್ಷೆ ಉಂಟಾಗಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ರೆಪೋ ದರವನ್ನು 6.5%ರ ಯಥಾಸ್ಥಿತಿಯಲ್ಲಿ ಉಳಿಸಿದ್ದಾರೆ. ಹೀಗಾಗಿ ತಕ್ಷಣ ಇಲ್ಲದಿದ್ದರೂ, 2025ರಲ್ಲಿ ಗೃಹ ಸಾಲದ ಬಡ್ಡಿ ಇಳಿಕೆಯಾಗುವ ನಿರೀಕ್ಷೆ ಇದೆ.
![Profile](https://vishwavani.news/static/img/user.png)
ಹೊಸದಿಲ್ಲಿ: ಕೊನೆಗೂ ಹೊಸ ವರ್ಷ 2025ರಲ್ಲಿ ಗೃಹ ಸಾಲಗಾರರಿಗೆ ರಿಲೀಫ್ ಸಿಗುವ ನಿರೀಕ್ಷೆ ಉಂಟಾಗಿದೆ. ಹಾಗಾದರೆ ಇದಕ್ಕೆ ಕಾರಣವೇನು? ಆರ್‌ಬಿಐ (RBI) ಏನು ಮಾಡಲಿದೆ? ಈಗ ನೋಡೋಣ (Interest Rate).
ಮೊದಲನೆಯದಾಗಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಕ್ಯಾಶ್ ರಿಸರ್ವ್ ರೇಶಿಯೊ ಅಥವಾ ನಗದು ಮೀಸಲು ಅನುಪಾತವನ್ನು 4.50%ರಿಂದ 4%ಕ್ಕೆ ಇಳಿಸಿದೆ. ಇದರ ಪರಿಣಾಮವಾಗಿ ಬ್ಯಾಂಕಿಂಗ್ ವ್ಯವಸ್ಥೆಗೆ 1 ಲಕ್ಷದ 16 ಸಾವಿರ ಕೋಟಿ ರೂ. ದೊರೆಯಲಿದೆ. ಹೀಗಿದ್ದರೂ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ರೆಪೋ ದರವನ್ನು 6.5%ರ ಯಥಾಸ್ಥಿತಿಯಲ್ಲಿ ಉಳಿಸಿದ್ದಾರೆ. ಹೀಗಾಗಿ ತಕ್ಷಣ ಇಲ್ಲದಿದ್ದರೂ, 2025ರಲ್ಲಿ ಗೃಹ ಸಾಲದ ಬಡ್ಡಿ ಇಳಿಕೆಯಾಗುವ ನಿರೀಕ್ಷೆ ಉಂಟಾಗಿದೆ. ಸಿಆರ್‌ಆರ್ ಇಳಿಕೆಯಾಗಿರುವುದರಿಂದ, ಬ್ಯಾಂಕ್‌ಗಳಿಗೆ ಬಡ್ಡಿ ದರವನ್ನು ಇಳಿಸಲು ಹಾದಿ ಸುಗಮವಾಗಿದೆ. ಎಚ್‌ಎಸ್‌ಬಿಸಿ ರೀಸರ್ಚ್ ವರದಿಯ ಪ್ರಕಾರ 2025ರ ಫೆಬ್ರವರಿಯಲ್ಲಿ ಬಡ್ಡಿ ದರ ಇಳಿಕೆಯಾಗಬಹುದು.
आरक्षित नकदी निधि अनुपात (सीआरआर) बनाए रखनाMaintenance of Cash Reserve Ratio (CRR)https://t.co/Lq1c414Ex8— ReserveBankOfIndia (@RBI) December 6, 2024
ಸಿಆರ್‌ಆರ್ ಎಂದರೆ ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಕಡ್ಡಾಯವಾಗಿ ಇಡಬೇಕಾಗಿರುವ ಠೇವಣಿ ಹಣವಾಗಿದೆ. ಆರ್‌ಬಿಐನ ಈ ಘೋಷಣೆಯ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳ ಚೇತರಿಸಿವೆ. ರಿಯಲ್ ಎಸ್ಟೇಟ್ ವಲಯದ ಷೇರುಗಳೂ ಚೇತರಿಸಿವೆ.
ಸತತ 11 ಸಲ ದ್ವೈಮಾಸಿಕ ಎಂಪಿಸಿ ಸಭೆಯಲ್ಲಿ ಆರ್‌ಬಿಐ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿದೆ. ಸುದೀರ್ಘ ಸಮಯದಿಂದ ಗೃಹ ಸಾಲಗಾರರು ಬಡ್ಡಿ ದರ ಇಳಿಕೆಯನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಆರ್‌ಬಿಐ ಬಡ್ಡಿ ದರ ಕಡಿತಕ್ಕೆ ಮುಂದಾಗಿಲ್ಲ. ಆದರೆ ಇದೀಗ ಜಿಡಿಪಿ ಬೆಳವಣಿಗೆಯಲ್ಲೂ ಇಳಿಕೆಯಾಗಿರುವುದರಿಂದ ಬಡ್ಡಿ ದರದ ಇಳಿಕೆಗೆ ಒತ್ತಡ ಉಂಟಾಗಿದೆ. ಕಳೆದ ಜುಲೈ-ಸೆಪ್ಟೆಂಬರ್‌ನಲ್ಲಿ ಜಿಡಿಪಿ ಬೆಳವಣಿಗೆ 5.4%ಕ್ಕೆ ಇಳಿದಿತ್ತು.
ಹೀಗಿದ್ದರೂ, ಅಕ್ಟೋಬರ್ ಬಳಿಕ ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆ ಕಂಡು ಬರುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೊಡು-ಕೊಳ್ಳುವಿಕೆ ಹೆಚ್ಚುತ್ತಿದೆ. ಜತೆಗೆ ಸರ್ಕಾರದ ಸಾರ್ವಜನಿಕ ವೆಚ್ಚಗಳು, ಅಂದ್ರೆ ರಸ್ತೆ, ನೀರಾವರಿ, ಕಟ್ಟಡ ನಿರ್ಮಾಣ ಇತ್ಯಾದಿ ಸಾರ್ವಜನಿಕ ಕೆಲಸಗಳಿಗೆ ವೆಚ್ಚವಾಗುತ್ತಿದೆ. ಹೀಗಾಗಿ ಮುಂದಿನ ಎರಡು ತ್ರೈಮಾಸಿಕಗಳಲ್ಲಿ ಜಿಸಿಪಿ ಏರಿಕೆಯಾದೀತು ಎಂದು ಎಚ್‌ಎಸ್‌ಬಿಸಿ ರೀಸರ್ಚ್ ವರದಿ ತಿಳಿಸಿದೆ.
ಬೆಲೆ ಏರಿಕೆ ಇಳಿಯೋದು ಯಾವಾಗ?
ಮುಂಬರುವ ತಿಂಗಳುಗಳಲ್ಲಿ ಹಣದುಬ್ಬರ ಕೂಡ ಇಳಿಕೆಯಾಗಲಿದೆ. ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ದರಗಳು ಇಳಿಕೆಯಾಗುವ ನಿರೀಕ್ಷೆ ಇದ್ದು, ಇದರಿಂದ ಭಾರತದ ಹಣದುಬ್ಬರ ಕೂಡ ತಗ್ಗಲಿದೆ. ಅಕ್ಟೋಬರ್‌ನಲ್ಲಿ 6.2%ರಷ್ಟಿದ್ದ ಹಣದುಬ್ಬರವು ನವೆಂಬರ್‌ನಲ್ಲಿ 5.7%ಕ್ಕೆ ಇಳಿಕೆಯಾಗಲಿದೆ ಎಂದು ಎಚ್‌ಎಸ್‌ಬಿಸಿ ವರದಿ ತಿಳಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ, 2024ರ ಅಕ್ಟೋಬರ್-ಡಿಸೆಂಬರ್‌ನಲ್ಲಿ ಹಣದುಬ್ಬರ 5.7% ಇರಬಹುದು. 2025ರ ಜನವರಿ-ಮಾರ್ಚ್‌ನಲ್ಲಿ 4.5%ಕ್ಕೆ ಇಳಿಯಲಿದೆ.
ಮುಂದಿನ ಫೆಬ್ರವರಿ ಮತ್ತು ಏಪ್ರಿಲ್‌ನಲ್ಲಿ ಆರ್‌ಬಿಐ, ಬಡ್ಡಿ ದರದಲ್ಲಿ ತಲಾ 0.25%ರಷ್ಟು ಇಳಿಕೆ ಮಾಡಬಹುದು. ಆಗ ರೆಪೊ ದರ 6%ಕ್ಕೆ ತಗ್ಗಲಿದೆ. ಗೃಹ ಸಾಲದ ಇಎಂಐ ಆಗ ಅಗ್ಗವಾಗಲಿದೆ ಎಂದು ವರದಿ ತಿಳಿಸಿದೆ. ಜಪಾನಿನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ನೊಮುರಾ ಪ್ರಕಾರ 2025ರಲ್ಲಿ ಆರ್‌ಬಿಐ 1% ತನಕ ಬಡ್ಡಿ ದರ ಕಡಿತಗೊಳಿಸುವ ಸಾಧ್ಯತೆ ಇದೆ. ಅಮೆರಿಕದಲ್ಲೂ ಬಡ್ಡಿ ದರ ಇಳಿಕೆಯ ಟ್ರೆಂಡ್ ಶುರುವಾಗಿದೆ. ಭಾರತದಲ್ಲೂ ಆರಂಭವಾದರೆ ಗೃಹ ಸಾಲಗಾರರಿಗೆ ಅನುಕೂಲವಾಗಲಿದೆ.
ಬಡ್ಡಿ ದರ ಇಳಿಕೆಯ ಟ್ರೆಂಡ್ ಹೊಸ ವರ್ಷ ಆರಂಭವಾದಾಗ ಗೃಹ ಸಾಲಗಾರರಿಗೆ ಗಣನೀಯ ಉಳಿತಾಯವಾಗುತ್ತದೆ. ಆಗ ಎರಡು ಆಯ್ಕೆಗಳು ಸಾಲಗಾರರಿಗೆ ಸಿಗುತ್ತದೆ. ಮೊದಲನೆಯದ್ದು ಇಎಂಐ ಅನ್ನು ಯಥಾಸ್ಥಿತಿಯಲ್ಲಿ ಇಟ್ಟುಕೊಳ್ಳುವುದು. ಇದರಿಂದ ಸಾಲದ ಮರು ಪಾವತಿಯಲ್ಲಿ ಹೆಚ್ಚಳವಾಗುವುದರಿಂದ ಸಾಲವನ್ನು ಬೇಗ ತೀರಿಸಬಹುದು. ಎರಡನೆಯದ್ದು ಇಎಂಐಯನ್ನೇ ಕಡಿಮೆ ಮಾಡುವ ಆಯ್ಕೆ. ಆದರೆ ಇದರಿಂದ ಏನಾಗುತ್ತದೆ ಎಂದರೆ ಮುಂದೊಮ್ಮೆ ಬಡ್ಡಿ ದರ ಏರಿದಾಗ ಸಾಲದ ಅವಧಿಯೂ ಹೆಚ್ಚುತ್ತದೆ. ಆದ್ದರಿಂದ ಹಣಕಾಸು ಪರಿಸ್ಥಿತಿ ಕಷ್ಟಕರವಾಗಿದ್ದರೆ ಮಾತ್ರ ಇಎಂಐ ಕಡಿತಕ್ಕೆ ಮುಂದಾಗುವುದು ಉತ್ತಮ. ನೀವು ಖಾಸಗಿ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಗೃಹ ಸಾಲ ತೆಗೆದುಕೊಂಡಿದ್ದರೆ, ಬಡ್ಡಿ ದರ ಇಳಿಕೆಯಾದಾಗ ಸಂಪರ್ಕಿಸಿ, ಇಳಿಕೆಯಾಗಿರುವುದನ್ನು ಖಾತರಿಪಡಿಸಿಕೊಳ್ಳಲು ಮರೆಯದಿರಿ. ಇದಕ್ಕಾಗಿ ಬ್ಯಾಂಕಿಗೇ ಹೋಗಬೇಕೆಂದೇನೂ ಇಲ್ಲ. ದೂರವಾಣಿ ಮೂಲಕ ತಿಳಿಯಬಹುದು. ಆನ್‌ಲೈನ್ ಲೋನ್ ಅಕೌಂಟ್ ಇದ್ದರೆ, ಮೊಬೈಲ್‌ನಲ್ಲೇ ಪರಿಶೀಲಿಸಬಹುದು. ಗೃಹಸಾಲಗಳು ದೀರ್ಘಾವಧಿಯದ್ದಾಗಿರುವುದರಿಂದ ಬಡ್ಡಿ ದರದಲ್ಲಿ ಸ್ವಲ್ಪ ಇಳಿದರೂ, ದೊಡ್ಡ ಮಟ್ಟಿನಲ್ಲಿ ಉಳಿತಾಯವಾಗುತ್ತದೆ. ಆದ್ದರಿಂದ ಸಾಲಗಾರರು ಆರ್‌ಬಿಐ ಹಣಕಾಸು ನೀತಿಯನ್ನು ತಪ್ಪದೆ ಗಮನಿಸುತ್ತಿರಬೇಕು.
ಈ ಸುದ್ದಿಯನ್ನೂ ಓದಿ: Repo Rate: ಇಎಂಐ ಹೊರೆ ಇಳಿಕೆ ಸದ್ಯಕ್ಕಿಲ್ಲ; 11ನೇ ಬಾರಿ ಯಥಾಸ್ಥಿತಿಯಲ್ಲಿ ಮುಂದುವರಿದ ರೆಪೋ ದರ