IPL 2025: ಕೆಕೆಆರ್‌ಗೆ ರಹಾನೆ ಅಲ್ಲ ರಿಂಕು ಸಿಂಗ್ ನಾಯಕ?
IPL 2025: ಐಪಿಎಲ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ಕೆಕೆಆರ್ ತಂಡದ ಪರವೇ ಆಡುತ್ತಾ ಬಂದಿರುವ ರಿಂಕು ಸಿಂಗ್ ಅವರನ್ನು ಈ ಬಾರಿ ಫ್ರಾಂಚೈಸಿ13 ಕೋಟಿಗೆ ರಿಟೇನ್ ಮಾಡಿಕೊಂಡಿತ್ತು.
Abhilash BC
December 21, 2024
ಕೋಲ್ಕತಾ: ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್(KKR) ತಂಡವು ಮುಂಬರುವ ಐಪಿಎಲ್(IPL 2025) ಟೂರ್ನಿಗೆ ಹೊಸ ನಾಯಕನ ಹುಡುಕಾಟದಲ್ಲಿದೆ. ನಾಯಕನಾಗಿದ್ದ ಶ್ರೇಯಸ್ ಅಯ್ಯರ್ ಅವರನ್ನು ಫ್ರಾಂಚೈಸಿ ಹರಾಜಿಗೂ ಮುನ್ನ ತಂಡದಿಂದ ರಿಲೀಸ್ ಮಾಡಿತ್ತು. ಇದೀಗ ವರದಿಯಾದ ಪ್ರಕಾರ ರಿಂಕು ಸಿಂಗ್(Rinku Singh) ನೂತನ ನಾಯಕನಾಗಿ ನೇಮಕಗೊಳ್ಳಲಿದ್ದಾರೆ ಎನ್ನಲಾಗಿದೆ.
ಐಪಿಎಲ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ಕೆಕೆಆರ್ ತಂಡದ ಪರವೇ ಆಡುತ್ತಾ ಬಂದಿರುವ ರಿಂಕು ಸಿಂಗ್ ಅವರನ್ನು ಈ ಬಾರಿ ಫ್ರಾಂಚೈಸಿ13 ಕೋಟಿಗೆ ರಿಟೇನ್ ಮಾಡಿಕೊಂಡಿತ್ತು. ಈ ಹಿಂದಿನ ಆವೃತ್ತಿಯಲ್ಲಿ ರಿಂಕು ಸಿಂಗ್ ಅವರಿಗೆ 55 ಲಕ್ಷ ರೂ. ಸಂಭಾವನೆ ನೀಡಲಾಗಿತ್ತು. ನಾಯಕತ್ವ ನೀಡುವ ಸಲುವಾಗಿಯೇ ಅವರಿಗೆ ಈ ಬಾರಿ ಭಾರೀ ಮೊತ್ತ ನೀಡಿದ್ದು ಎನ್ನಲಾಗಿದೆ. ರಿಂಕುಗೆ ನಾಯಕತ್ವ ನೀಡುವ ಬಗ್ಗೆ ಇದುವರೆಗೂ ಫ್ರಾಂಚೈಸಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ದೇಶೀಯ ಟೂರ್ನಿಯಾದ ವಿಜಯ್ ಹಜಾರೆ ಟೂರ್ನಿಯಲ್ಲೂ ರಿಂಕು ಅವರಿಗೆ ಉತ್ತರ ಪ್ರದೇಶ ತಂಡದ ನಾಯಕತ್ವ ನೀಡಲಾಗಿದೆ.
ರಿಂಕು ಸಿಂಗ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಇದುವರೆಗೂ 46 ಪಂದ್ಯಗಳನ್ನಾಡಿದ್ದು, 30ರ ಸರಾಸರಿಯಲ್ಲಿ 893 ರನ್ ಸಿಡಿಸಿದ್ದಾರೆ. ಇದರಲ್ಲಿ 4 ಸ್ಪೋಟಕ ಅರ್ಧಶತಕಗಳು ಸೇರಿವೆ. ಕಳೆದ ಆರು ವರ್ಷಗಳಿಂದಲೂ ರಿಂಕು ಸಿಂಗ್ ಕೆಕೆಆರ್ ತಂಡದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ರಿಂಕು ಮೇಲೆ ಕೆಕೆಆರ್ ಮ್ಯಾನೇಜ್‌ಮೆಂಟ್ ಅಪಾರ ನಂಬಿಕೆ ಇಟ್ಟುಕೊಂಡಿದೆ. ಹಲವು ಪಂದ್ಯಗಳಲ್ಲಿ ರಿಂಕು ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ಕೂಡ ತಂದುಕೊಟ್ಟಿದ್ದರು. ಭಾರತ ಟಿ20 ತಂಡದಲ್ಲಿಯೂ ರಿಂಕು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಇದನ್ನೂ ಓದಿ IPL Auction 2025: ʻಪಂತ್ ಅತ್ಯಂತ ದುಬಾರಿ ಆಟಗಾರʼ-ಮೆಗಾ ಹರಾಜಿನ ಬಳಿಕ 10 ತಂಡಗಳ ಆಟಗಾರರ ವಿವರ!
ಕೆಕೆಆರ್ ತಂಡ
ಸುನಿಲ್ ನರೈನ್(12 ಕೋಟಿ ರೂ.), ರಿಂಕು ಸಿಂಗ್(13 ಕೋಟಿ ರೂ.), ಆಂಡ್ರೆ ರಸೆಲ್(12 ಕೋಟಿ ರೂ.), ವರುಣ್ ಚಕ್ರವರ್ತಿ(12 ಕೋಟಿ ರೂ), ಹರ್ಷಿತ್ ರಾಣಾ(4 ಕೋಟಿ ರೂ.) ಮತ್ತು ರಮಣ್ ದೀಪ್ ಸಿಂಗ್(4 ಕೋಟಿ ರೂ.) ವೆಂಕಟೇಶ್ ಅಯ್ಯರ್ (23.75 ಕೋಟಿ), ಅನ್ರಿಚ್ ನೋರ್ಜೆ (6.50 ಕೋಟಿ), ಕ್ವಿಂಟನ್ ಡಿಕಾಕ್ (3.60 ಕೋಟಿ), ರಹಮಾನುಲ್ಲಾ ಗುರ್ಬಜ್ (2 ಕೋಟಿ), ಅಂಗ್ಕೃಷ್ ರುವಂಶಿ (3 ಕೋಟಿ), ವೈಭವ್ ಅರೋರ (1.80 ಕೋಟಿ), ಮಯಾಂಕ್ ಮಾರ್ಕಂಡೆ (30 ಲಕ್ಷ). ಸ್ಪೆನ್ಸರ್ ಜಾನ್ಸನ್ (2.80 ಕೋಟಿ), ರೋವ್ಮನ್ ಪೊವೆಲ್ (1.50 ಕೋಟಿ), ಮನೀಷ್ ಪಾಂಡೆ (75 ಲಕ್ಷ), ಲವನೀತ್ ಸಿಸೋಡಿಯಾ (30 ಲಕ್ಷ), ಅಜಿಂಕ್ಯ ರಹಾನೆ (1.50 ಕೋಟಿ), ಅನುಕೂಲ್ ರಾಯ್ (40 ಲಕ್ಷ), ಮೊಯಿನ್ ಅಲಿ (2 ಕೋಟಿ), ಉಮ್ರಾನ್ ಮಲಿಕ್ (75 ಲಕ್ಷ), ಅಜಯ್ ಮಂಡಲ್ (30 ಲಕ್ಷ). ಒಟ್ಟು ಆಟಗಾರರು: 21 (8 ವಿದೇಶಿ), ಒಟ್ಟು ವೆಚ್ಚ: 119.95 ಕೋಟಿ