IPL 2025: ಅರ್ಧಶತಕ ಸಿಡಿಸುವ ಮೂಲಕ ಕ್ರಿಸ್ ಗೇಲ್ ದಾಖಲೆ ಮುರಿದ ವಿರಾಟ್ ಕೊಹ್ಲಿ!
ರಾಜಸ್ಥಾನ್ ರಾಯಲ್ಸ್ ವಿರುದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅರ್ಧಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಟಿ20 ಕ್ರಿಕೆಟ್ನಲ್ಲಿ 111ನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಆ ಮೂಲಕ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ದಾಖಲೆಯನ್ನು ವಿರಾಟ್ ಕೊಹ್ಲಿ ಹಿಂದಿಕ್ಕಿದ್ದಾರೆ.



ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ ಅರ್ಧಶತಕವನ್ನು ಬಾರಿಸಿದರು. ಅವರು ಆಡಿದ 42 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 70 ರನ್ಗಳನ್ನು ಸಿಡಿಸಿದರು.

ಕ್ರಿಸ್ ಗೇಲ್ ದಾಖಲೆ ಮುರಿದ ಕೊಹ್ಲಿ
ರಾಜಸ್ಥಾನ್ ರಾಯಲ್ಸ್ ವಿರುದ್ದ 70 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ, ತಮ್ಮ ಟಿ20 ವೃತ್ತಿ ಜೀವನದಲ್ಲಿ 111ನೇ ಬಾರಿ 50ಕ್ಕಿಂತ ಹೆಚ್ಚು ರನ್ಗಳನ್ನು ದಾಖಲಿಸಿದರು. ಆ ಮೂಲಕ ವೆಸ್ಟ್ ಇಂಡೀಸ್ ಮಾಜಿ ಆರಂಭಿಕ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿದರು. ಗೇಲ್ 110ನೇ ಬಾರಿ ಟಿ20 ಕ್ರಿಕೆಟ್ನಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಕೊಹ್ಲಿ 408 ಪಂದ್ಯಗಳಿಂದ ಈ ದಾಖಲೆ ಬರೆದಿದ್ದಾರೆ.

ಅಗ್ರ ಸ್ಥಾನದಲ್ಲಿ ಡೇವಿಡ್ ವಾರ್ನರ್
ಆಸ್ಟ್ರೇಲಿಯಾ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಜಿ ಆರಂಬಿಕ ಡೇವಿಡ್ ವಾರ್ನರ್ ಈ ದಾಖಲೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅವರು ತಮ್ಮ ಟಿ20 ವೃತ್ತಿ ಜೀವನದಲ್ಲಿ 117 ಬಾರಿ 50ಕ್ಕಿಂತ ಹೆಚ್ಚಿನ ರನ್ಗಳನ್ನು ದಾಖಲಿಸಿಒದ್ದಾರೆ. ಇವರು ಈ ದಾಖಲೆಯನ್ನು ಬರೆಯಲು 404 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ.

ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು 50ಕ್ಕಿಂತ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): 117 (404 ಪಂದ್ಯಗಳು)
ವಿರಾಟ್ ಕೊಹ್ಲಿ (ಭಾರತ): 111* (408* ಪಂದ್ಯಗಳು)
ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್): 110 (463 ಪಂದ್ಯಗಳು)
ಬಾಬರ್ ಆಝಮ್ (ಪಾಕಿಸ್ತಾನ): 101 (314 ಪಂದ್ಯಗಳು)
ಜೋಸ್ ಬಟ್ಲರ್ (ಇಂಗ್ಲೆಂಡ್): 95 (442 ಪಂದ್ಯಗಳು)

205 ರನ್ಗಳನ್ನು ಕಲೆ ಹಾಕಿದ ಆರ್ಸಿಬಿ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತನ್ನ ಪಾಲಿನ 20 ಓವರ್ಳಿಗೆ 5 ವಿಕೆಟ್ಗಳ ನಷ್ಟಕ್ಕೆ 205 ರನ್ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ರಾಜಸ್ಥಾನ್ ರಾಯಲ್ಸ್ಗೆ 206 ರನ್ಗಳ ಗುರಿಯನ್ನು ನೀಡಿತ್ತು. ಆರ್ಸಿಬಿ ಪರ ಕೊಹ್ಲಿ 70 ರನ್ ಹಾಗೂ ದೇವದತ್ ಪಡಿಕ್ಕಲ್ 50 ರನ್ಗಳನ್ನು ಗಳಿಸಿದರು.

ತವರಿನನಲ್ಲಿ ಆರ್ಸಿಬಿಗೆ ಮೊದಲ ಜಯ
206 ರನ್ಗಳ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್ ತಂಡ, ಕೊನೆಯವರೆಗೂ ಹೋರಾಟ ನಡಸಿತು. ಆದರೆ, ಆರ್ಸಿಬಿಯ ಪರಿಣಾಮಕಾರಿ ಬೌಲಿಂಗ್ ದಾಳಿಯಿಂದ 194 ರನ್ಗಳಿಗೆ ಸೀಮಿತವಾಯಿತು. ಆ ಮೂಲಕ ರಜತ್ ಪಾಟಿದಾರ್ ನಾಯಕತ್ವದ ಆರ್ಸಿಬಿ ತಂಡ 11 ರನ್ಗಳಿಂದ ಗೆಲುವು ಸಾಧಿಸಿತು.