ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Pradeep Eshwar: ನಿಮ್ಮ ಮನೆಬಾಗಿಲಿಗೇ ಖಾತೆ ತಂದು ಕೊಡುವ ಜವಾಬ್ದಾರಿ ನನ್ನದು: ಶಾಸಕ ಪ್ರದೀಪ್ ಈಶ್ವರ್

Pradeep Eshwar: ಚಿಕ್ಕಬಳ್ಳಾಪುರ ನಗರದ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ಬಿ ಖಾತೆ ಸಂಬಂಧ ನಡೆಸಿದ ದಿಢೀರ್ ಸುದ್ದಿಗೋಷ್ಠಿಯಲ್ಲಿ ಶಾಸಕ ಪ್ರದೀಪ್‌ ಈಶ್ವರ್‌ ಅವರು ಮಾತನಾಡಿದ್ದಾರೆ. ನಗರಸಭೆ ಅಧಿಕಾರಿಗಳೇ ಎಲ್ಲಾ ವಾರ್ಡ್‌ಗಳಿಗೂ ಭೇಟಿ ನೀಡಲಿದ್ದು, ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ನಿಮ್ಮ ಮನೆಬಾಗಿಲಿಗೇ ಖಾತೆ ತಂದು ಕೊಡುವ ಹೊಣೆ ನನ್ನದು: ಪ್ರದೀಪ್ ಈಶ್ವರ್

Profile Prabhakara R Feb 14, 2025 10:52 PM

ಚಿಕ್ಕಬಳ್ಳಾಪುರ: ನಗರ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳನ್ನು ಹೊಂದಿರದ 10 ರಿಂದ 14 ಸಾವಿರ ಮನೆಗಳಿದ್ದು, ಅಂತಹವರಿಗೆ ಬಿ-ಖಾತೆ ಮಾಡಿಕೊಡುವ ನಿಟ್ಟಿನಲ್ಲಿ ಫೆ. 20, 21, 22ರಂದು ನಗರದ ಪ್ರತೀ ವಾರ್ಡ್‌ಗಳಿಗೂ ನಗರಸಭೆ ಅಧಿಕಾರಿಗಳು ಬರಲಿದ್ದು, ತಮ್ಮ ಆಸ್ತಿಗಳ ಖಾತೆ ಹೊಂದಿರದ ಮಾಲೀಕರು ತಮ್ಮ ದಾಖಲೆಗಳನ್ನು ಅಧಿಕಾರಿಗಳಿಗೆ ಕೊಟ್ಟರೆ ನಿಮ್ಮ ಮನೆಬಾಗಿಲಿಗೇ ಖಾತೆ ತಂದು ಕೊಡುವ ಜವಾಬ್ದಾರಿ ನನ್ನದು ಎಂದು ನಗರ ಶಾಸಕ ಪ್ರದೀಪ್ ಈಶ್ವರ್ ಅವರು ನಗರವಾಸಿಗಳಿಗೆ ಭರವಸೆ ತುಂಬಿದರು. ಚಿಕ್ಕಬಳ್ಳಾಪುರ ನಗರದ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ಬಿ ಖಾತೆ ಸಂಬಂಧ ನಡೆಸಿದ ದಿಢೀರ್ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಗರವಾಸಿಗಳ ಬಹುವರ್ಷಗಳ ಕನಸು ಈಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕಾರಣವಾಗಿ ನನಸಾಗುತ್ತಿದೆ. ಹತ್ತಾರು ವರ್ಷಗಳಿಂದ ತಮ್ಮ ಆಸ್ತಿಗಳಿಗೆ ಖಾತೆ ಮಾಡಿಸಿಕೊಳ್ಳಲು ನಗರಸಭೆಗೆ ಅಲೆದು, ಮಧ್ಯವರ್ತಿಗಳ ಹಾವಳಿಗೆ ಸಿಕ್ಕಿ ಹೈರಾಣಾಗಿದ್ದರು. ನಾನು ಶಾಸಕ ಆದ ಮೇಲೆ ಇದಕ್ಕೆ ಇತಿಶ್ರೀ ಹಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದೆ. ಈಗ ಕಾಲಕೂಡಿಬಂದಿದ್ದು ನಗರಸಭೆ ಅಧಿಕಾರಿಗಳೇ ಎಲ್ಲಾ ವಾರ್ಡ್‌ಗಳಿಗೂ ಭೇಟಿ ನೀಡಲಿದ್ದು, ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲಿದ್ದಾರೆ. ಖಾತೆ ಮಾಡಿಸಿ ಅಲ್ಲಿಯೇ ತಂದು ನಿಮ್ಮ ಮನೆಬಾಗಿಲಿಗೆ ನೀಡಲಾಗುವುದು ಎಂದು ಹೇಳಿದರು.

ನಗರ ವ್ಯಾಪ್ತಿಯಲ್ಲಿ ಸರಿಯಾದ ದಾಖಲೆಗಳನ್ನು ಹೊಂದಿರದ ಸುಮಾರು 10 ಸಾವಿರಕ್ಕೂ ಅಧಿಕ ನಿವಾಸಿಗಳಿದ್ದು, ಇದು ದೊಡ್ಡ ತಲೆನೋವಾಗಿತ್ತು. ಇದನ್ನು ಸರಕಾರದ ಗಮನಕ್ಕೆ ತರಲಾಗಿತ್ತು. ಇದೀಗ ನ್ಯಾಯಾಲಯದ ಆದೇಶ ಬಂದಿದ್ದು, 90 ದಿನಗಳ ಸಮಯ ನೀಡಲಾಗಿದೆ. ಖಾತೆ ಹೊಂದಿಲ್ಲದ ನಗರ ವಾಸಿಗಳು ಮನೆಯ ಯಾವುದೇ ದಾಖಲೆಗಳನ್ನು ನೀಡಿ ಬಿ-ಖಾತೆ ಪಡೆಯಬಹುದಾಗಿದೆ. ಈ ಹಿಂದೆ ಯಾವುದೇ ವ್ಯಕ್ತಿ ಖಾತೆ ಹೊಂದಲು ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯಬೇಕಿತ್ತು. ಇದೀಗ ದಾಖಲೆ ಇಲ್ಲದವರು ಬಿ-ಖಾತೆ ಪಡೆಯಬಹುದಾಗಿದೆ. ಇದರಿಂದ ನಗರ ನಿವಾಸಿಗಳ ಆತಂಕ ದೂರವಾಗಲಿದೆ ಎಂದು ಹೇಳಿದರು.

ಬಿ-ಖಾತೆ ಪಡೆಯಲು 90 ದಿನಗಳ ಗಡುವು ನೀಡಲಾಗಿದೆ. ಅಷ್ಟರೊಳಗೆ ಎಲ್ಲಾ ವಾರ್ಡ್ ನಿವಾಸಿಗಳ ದಾಖಲೆ ಪಡೆದು ಬಿ-ಖಾತೆ ಮಾಡಿಕೊಡುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ದಲ್ಲಾಳಿಗಳಿಗೆ ಹಣ ನೀಡುವುದು ತಪ್ಪಲಿದ್ದು, ಪಾರದರ್ಶಕತೆ ಇರಲಿದೆ. ಈ ಕುರಿತು ಎರಡು ದಿನಗಳಲ್ಲಿ ಪ್ರತಿ ಮನೆಗೂ ಕರಪತ್ರ ಮತ್ತು ಚೆಕ್‌ಲಿಸ್ಟ್ ತಲುಪಿಸಲಾಗುವುದು ಎಂದು ಹೇಳಿದರು.

ಬಿ-ಖಾತೆ ನಮ್ಮ ಜನರ ಬಹುದಿನದ ಕನಸು. ಜನಸಾಮಾನ್ಯರು ಭಯಪಡುವ ಅಗತ್ಯವಿಲ್ಲ. ಯಾರೂ ಸಹ ಯಾರಿಗೂ ಹಣ ಕೊಡುವ ಅಗತ್ಯ ಇಲ್ಲ. ಬಡವರಿಂದ ಹಣ ಪಡೆದು ಕೆಲಸ ಮಾಡಿಕೊಡುವ ದಲ್ಲಾಳಿಗಳು ಯಾರಾದರೂ ಇದ್ದರೆ ನಮಗೆ ಹೆಸರು ಸಮೇತ ಮಾಹಿತಿ ಕೊಡಿ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

ಬಿ-ಖಾತೆ ಇದ್ದರೆ ಜನತೆ ಸಾಲ ಸೌಲಭ್ಯಗಳನ್ನು ಪಡೆಯಬಹುದಲ್ಲದೇ ಕಷ್ಟಕಾಲದಲ್ಲಿ ಆಸ್ತಿಯನ್ನು ಇನ್ನೊಬ್ಬರಿಗೆ ಮಾರಾಟ ಮಾಡಬಹುದಾಗಿದೆ. ಈ ಖಾತೆ ಮಾಡುವ ವಿಚಾರದಲ್ಲಿ ಏನಾದರೂ ತಾಂತ್ರಿಕ ಸಮಸ್ಯೆಗಳಿದ್ದರೆ, ಅಂತಹವರ ಪಟ್ಟಿಯನ್ನು ಮಾಧ್ಯಮದವರ ಗಮನಕ್ಕೆ ತರಲಾಗುವುದು. ಬಡವರು ಎಲ್ಲಿಯೂ ಸಹ ಕಷ್ಟ ಅನುಭವಿಸಬಾರದು. ನಾನು ಎಳ್ಳಷ್ಟೂ ಭ್ರಷ್ಟಾಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದರು.

ಈ ಸುದ್ದಿಯನ್ನೂ ಓದಿ | Micro Finance Ordinance: ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆ ಜಾರಿ; ಬಲವಂತದ ವಸೂಲಿಗೆ 10 ವರ್ಷ ಜೈಲು

ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕರು, ಆ ವಿಚಾರದಲ್ಲಿ ನನಿಗೆ ಅನುಭವ ಇಲ್ಲದ ಕಾರಣ ಹಿರಿಯರಾದ ಕೆ.ಪಿ.ಬಚ್ಚೇಗೌಡರಿಗೆ ಉಸ್ತುವಾರಿ ವಹಿಸಲಾಗಿತ್ತು. ಅವರಿಗೆ ಅಗತ್ಯ ಸಹಕಾರ ನೀಡಲಾಗಿತ್ತು. ಅವರ ನೇತೃತ್ವದಲ್ಲೇ ಚುನಾವಣೆ ನಡೆದಿದೆ. ಗೆದ್ದಿರುವ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಆಯುಕ್ತ ಮನ್ಸೂರ್ ಅಲಿ ಹಾಜರಿದ್ದರು.

ಕ್ಷೇತ್ರದ ಅಭಿವೃದ್ದಿಗೆ ಅನುದಾನ ತಂದೇ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇನೆ

Pradeep Eshwar (2)

ಚಿಕ್ಕಬಳ್ಳಾಪುರ: ನಗರಸಭೆಯ ಸೋಲು ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮ ಮಾಡಲು ನನಗೆ ಸ್ಫೂರ್ತಿ ನೀಡಿದ್ದು, ಈವರೆಗೆ ಬೊಮ್ಮಗಾನಹಳ್ಳಿ ಗ್ರಾಮವೂ ಸೇರಿದಂತೆ 116 ಹಳ್ಳಿಗಳನ್ನು ಸುತ್ತಿದ್ದೇನೆ. ಗ್ರಾಮಗಳಿಗೆ ಭೇಟಿ ನೀಡುವಾಗಿ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲು ಅನುದಾನ ಬೇಕಿದೆ. ಹೀಗಾಗಿ 10 ಕೋಟಿ ಅನುದಾನ ಇಟ್ಟುಕೊಂಡೇ ಈ ಕಾರ್ಯಕ್ರಮ ಮಾಡುತ್ತಿದ್ದೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಚೊಕ್ಕನಹಳ್ಳಿ, ಕರಕಮಾಕಲಹಳ್ಳಿ ಬೊಮ್ಮಗಾನಹಳ್ಳಿ ಗ್ರಾಮಗಳಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜನರ ಕಷ್ಟಗಳಿಗೆ ಕಣ್ಣಾದರು.

ಬಹುತೇಕ ಗ್ರಾಮಗಳ ದಲಿತ ಕೇರಿಗಳಿಗೆ ಭೇಟಿ ನೀಡಿ ಅವರ ಕಷ್ಟಸುಖ ಕೇಳುವುದು ಶಾಸಕ ಪ್ರದೀಪ್ ಈಶ್ವರ್ ಅವರ ದಿನಚರಿ. ಈ ವೇಳೆ ಅಲ್ಲಿನ ಅಲ್ಲಿನ ರಸ್ತೆ ಸಂಪರ್ಕ, ಜಾಗದ ಒತ್ತುವರಿ ತೆರವು, ಚರಂಡಿ ನಿರ್ಮಾಣ, ನೈರ್ಮಲ್ಯ,ಅಂಬೇಡ್ಕರ್ ಭವನ, ವಾಲ್ಮೀಕಿ ಭವನ ನಿರ್ಮಾಣಕ್ಕೆ ನೆರವು, ಹೊಲಗಳಿಗೆ ರಸ್ತೆ, ರೈತರ ವಿದ್ಯುತ್ ಸಮಸ್ಯೆ, ವೃದ್ದರ ಪಿಂಚಣಿ, ವಸತಿ, ನಿವೇಶನ, ಬಸ್, ಶಾಲಾ ಕೊಠಡಿಗಳ, ಶೌಚಾಲಯ ನಿರ್ಮಾಣ, ಸ್ಮಶಾನದ ಜಾಗದ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡುತ್ತಾರೆ.

ಶುಕ್ರವಾರದ ಬೊಮ್ಮಗಾನಹಳ್ಳಿ ಭೇಟಿಯ ವೇಳೆಯೂ ಕೂಡ ಗಂಡನನ್ನು ಕಳೆದುಕೊಂಡ ಮಹಿಳೆಯ ಸಮಸ್ಯೆಗೆ ಸ್ಪಂದಿಸಿದ ಶಾಸಕರು, ಆಕೆಗೆ ಆರ್ಥಿಕ ಸಹಾಯ ಮಾಡಿದ್ದಲ್ಲದೆ, ಮನೋರೋಗದ ವೈದ್ಯರ ಭೇಟಿ ಮಾಡಲು ಅವರದೇ ಅಮ್ಮ ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯುವ ಕೆಲಸ ಮಾಡಿದರು. ಇದೇ ಗ್ರಾಮದಲ್ಲಿ ಅಂಗನವಾಡಿಗೆ ಹೋಗುತ್ತಿರುವ ಪುಟ್ಟ ಮಗುವಿಗೆ ಮಧು ಮೇಹವಿರುವ ಬಗ್ಗೆ ಮಾಹಿತಿ ಪಡೆದು ಕೂಡಲೆ ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುಳ ಅವರಿಗೆ ವೈದ್ಯಕೀಯ ನೆರವು ನೀಡಲು ಸೂಚಿಸಿ, ಈಕೆಗೂ ಕೂಡ ಆರ್ಥಿಕ ಸಹಾಯ ಮಾಡಿದರು. ಈ ಮಗುವನ್ನು ಬೊಮ್ಮಗಾನಹಳ್ಳಿ ಗ್ರಾಮದಿಂದ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಈ ಇಬ್ಬರಿಗೂ ಕೂಡ ವಸತಿ ಮತ್ತು ನಿವೇಶನಗಳನ್ನು ನೀಡುವಂತೆ ಪಿಡಿಒ ಅವರಿಗೆ ಸೂಚಿಸಿದರು. ಇದೇ ವೇಳೆ ನಾಗರಿಕರಿಂದ ಬಂದ ಹತ್ತಾರು ಅರ್ಜಿಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ಅವುಗಳಿಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ಶಾಸಕರು ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಜನರು ಸ್ವಯಂ ಪ್ರೇರಿತರಾಗಿ ಪಟಾಕಿ ಸಿಡಿಸಿ, ಜೈಕಾರ ಕೊಗುತ್ತಾ, ತಮಟೆ ವಾದ್ಯಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸುತ್ತಿದ್ದರು. ಎಂದಿನಂತೆ ತಮ್ಮ ತೆಲುಗು ಕನ್ನಡ ಮಿಶ್ರಿತ ಸಂಭಾಷಣೆಯೊಂದಿಗೆ ಗ್ರಾಮದ ನಡುವೆ ಕೂತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರಲ್ಲದೆ, ಗ್ರಾಮದ ಎಲ್ಲಡೆ ಸಂಚರಿಸಿ, ಲವಲವಿಕೆಯಿಂದಲೇ ಜನತೆಯ ಸಂಕಷ್ಟಗಳಿಗೆ ಸ್ಪಂದಿಸಿದರು.

ರಾಜ್ಯದಲ್ಲಿ ಬಹಳಷ್ಟು ಶಾಸಕರು ನಮ್ಮೂರಿಗೆ ನಮ್ಮ ಶಾಸಕ ಎಂಬ ನನ್ನ ಈ ಕಾರ್ಯಕ್ರಮದಿಂದ ಪ್ರೇರಣೆಗೊಂಡು ಅವರ ಕ್ಷೇತ್ರದಲ್ಲಿ ಮಾಡಲು ನನ್ನಿಂದ ಫೀಡ್ ಬ್ಯಾಕ್ ಪಡೆದಿದ್ದಾರೆ. ಅಷ್ಟೊಂದು ಒಳ್ಳೆಯ ಕಾರ್ಯಕ್ರಮವಾಗಿ ಇದು ಜನಪ್ರಿಯಗೊಳ್ಳುತ್ತಿದೆ. ನನ್ನ ಕ್ಷೇತ್ರದ ಮುಖಂಡರು, ಅಧಿಕಾರಿಗಳು ನನ್ನೊಂದಿಗೆ ಕೈಜೋಡಿಸಿದ್ದರ ಫಲವಾಗಿ ಜನರ ಕಷ್ಟಗಳು ಅವರ ಕಣ್ಣಮುಂದೆಯೇ ಕರುಗುತ್ತಿರುವುದು ನೋಡಿ ಸಾರ್ಥಕಭಾವ ಮೂಡುತ್ತಿದೆ ಎಂದು ಹೇಳಿದರು.

ಸೈನಿಕರು ಮತ್ತಯ ರೈತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಯಾವುದೇ ಸರಕಾರವಿರಲಿ ವಿಶೇಷ ಒತ್ತು ನೀಡಬೇಕು. ದೇಶ ಕಾಯುವ ಯೋಧನ ಮಗ ಶೇ.60ಕಿಂತ ಹೆಚ್ಚಿನ ಅಂಕ ಪಡೆದರೆ ಆತ ಯಾವ ಶಿಕ್ಷಣ ಪಡೆಯುತ್ತಾನೋ ಆ ಶಿಕ್ಷಣವನ್ನು ಉಚಿತವಾಗಿ ನೀಡಬೇಕು. ಅಂತಹ ವ್ಯವಸ್ಥೆಯನ್ನು ಜಾರಿಗೆ ಬರಬೇಕು ಎಂಬುದೇ ನನ್ನ ಬಯಕೆ. ಪುಲ್ವಾಮಾ ದಾಳಿಯಲ್ಲಿ ಹತರಾದ ಎಲ್ಲಾ ಸೈನಿಕ ಕುಟುಂಬಗಳಿಗೆ ನನ್ನದೊಂದು ನಮಸ್ಕಾರವಿರಲಿ. ಆರ್ಮಿ ಮಕ್ಕಳ ರಿಸರ್ವೇಶನ್ ಎಲ್ಲರಿಗೂ ಅನುಕೂಲ ಆಗುತ್ತಿಲ್ಲ ಎಂದರು.

ಪ್ರೀತಿ ಪ್ರೇಮ ಬೇಕು. ಆದರೆ ಪ್ರೀತಿ ಎಂದರೆ ಬೈಕಿನ ಹಿಂದೆ ಖಾಲಿ ಇರುವ ಸೀಟಾ!!,ಕಾಡುವ ಒಂಟಿತನಕ್ಕೆ ಉತ್ತರವಾ!!, ಮನೆಯಲ್ಲಿ ಸಿಗದ್ದನ್ನು ಮತ್ತೆಲ್ಲೋ ಹುಡುಕುವ ಪ್ರಯತ್ನವಾ!! ಹಾಂ ಪ್ರೀತಿ ಎಂದರೆ ಪದೇ ಪದೇ ಪ್ರೀತಿಸುತ್ತಿರುವುದೇ ಪ್ರೀತಿ. ಆದರೆ ಅದು ಒಬ್ಬರನ್ನೇ ಪ್ರೀತಿಸಬೇಕು. ಪ್ರೀತಿಯಲ್ಲಿ ಕೂಡ ಸ್ವಾರ್ಥವಿದೆ ಎನ್ನುತ್ತಾ ತಂದೆ-ತಾಯಿಗಳ ಪ್ರೀತಿಗೆ ದ್ರೋಹ ಮಾಡಬೇಡಿ ಎನ್ನುತ್ತಾ ಪ್ರೇಮಿಗಳ ದಿನದ ಬಗ್ಗೆ ತಮ್ಮದೇ ಆದ ವ್ಯಾಖ್ಯಾನ ಮಾಡಿದವರು ಶಾಸಕ ಪ್ರದೀಪ್ ಈಶ್ವರ್.

ಈ ವೇಳೆ ತಹಸೀಲ್ದಾರ್ ಅನಿಲ್ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಮಂಜುಳಾ, ಗ್ರಾಮ ಪಂಚಾಯತಿ ಪಿಡಿಒ ಮದ್ದಿರೆಡ್ಡಿ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಮೋಹನ್ ರೆಡ್ಡಿ, ಮುಖಂಡರಾದ ಅರವಿಂದ, ಎಸ್.ಪ.ಶ್ರೀನಿವಾಸ್, ಲಕ್ಷ್ಮೀಪತಿ, ನಾಗಭೂಷಣ್, ರಾಜಣ್ಣ, ಶಂಕರ್, ವಿವಿಧ ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಇದ್ದರು.