ಬಸವ ಮಂಟಪ
ರವಿ ಹಂಜ್
ಜಗಜ್ಯೋತಿ ಬಸವಣ್ಣನವರು, “ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ" ಎಂದು ಹೇಳುತ್ತಾ ತಮ್ಮ ಅನೇಕ ವಚನಗಳಲ್ಲಿ ಲೋಕದ ಡೊಂಕ ತಿದ್ದುವ ಪ್ರಯತ್ನ ಮಾಡಿದ್ದಾರೆ.
ಉದಾಹರಣೆಗೆ “ಕಳಬೇಡ ಕೊಲಬೇಡ, ವೇದಕ್ಕೆ ಒರೆಯ ಕಟ್ಟುವೆ (ಕಮ್ಯುನಿಸ್ಟರ ವ್ಯಾಖ್ಯಾನದಂತೆ)" ಇತ್ಯಾದಿಯಾಗಿ ಲೋಕದ ಡೊಂಕ ತಿದ್ದಿದ ಬಸವಣ್ಣನವರಿಗೆ ತಮ್ಮ ನಿಲುವಿನ ನಿಲುವಿಲ್ಲದ ದ್ವಂದ್ವ ಪುರುಷ ಎನಿಸುತ್ತಾರೆ. ಈ ದ್ವಂದ್ವಗಳು ಬಸವಣ್ಣರಲ್ಲದೇ ಎಲ್ಲ ವಚನಕಾರರ ವಚನ ಗಳಲ್ಲಿ ಸಹ ಢಾಳಾಗಿ ಕಾಣಿಸುತ್ತವೆ. ಹಾಗಾಗಿಯೇ ವಚನಗಳು ಸ್ಪಷ್ಟ ನಿಲುವು ಬಯಸುವ ಧಾರ್ಮಿಕ ಗ್ರಂಥಗಳಾಗಲು ಅರ್ಹವಲ್ಲ.
ಅವು ಸಾಂದರ್ಭಿಕ ಚರ್ಚೆಯ ಉಕ್ತಿಗಳಷ್ಟೇ! ದಾಸ ಸಾಹಿತ್ಯ, ಕೀರ್ತನೆ, ಜನಪದೀಯ ತತ್ವಪದ ಗಳಂತೆಯೇ ವಚನಗಳನ್ನು ತತ್ವಪದಗಳು ಎನ್ನಬಹುದು. ಹಾಗಾಗಿ ಬಸವಣ್ಣನವರು ಸಹ ಭಕ್ತಿಪಂಥದಲ್ಲಿ ಉದಯಿಸಿದ ಒಬ್ಬ ತತ್ವeನಿ ಆಗಿzರೆ. ಅಲ್ಲದೇ ಹಲವಾರು ವಚನಕಾರರೇ ಬಸವಣ್ಣನವರನ್ನು ಭಕ್ತಸ್ಥಲದ ಮೂರ್ತರೂಪ ಎಂದು ಅವರನ್ನು ಷಟ್‌ಸ್ಥಲದ ಮೊದಲ ಮೆಟ್ಟಿಲಾದ ಭಕ್ತಸ್ಥಲಕ್ಕೆ ಸೀಮಿತಗೊಳಿಸಿದ್ದಾರೆ.
ಇದನ್ನೂ ಓದಿ: Ravi Hunj Column: ಅಷ್ಟಕ್ಕೂ, ಲಿಂಗಾಯತ ಮತ್ತು ಇಸ್ಲಾಂ ಧರ್ಮ ಒಂದೇನಾ ? ಏನಿದರ ಹಕೀಕತ್ ?
ಹಾಗಾಗಿಯೇ ಬಸವಣ್ಣನವರು ‘ಭಕ್ತಿ ಭಂಡಾರಿ’ ಎನಿಸಿರುವುದು. ಹೀಗೆ ಬಸವಣ್ಣನವರನ್ನು ಭಕ್ತಸ್ಥಲಕ್ಕೆ ಸೀಮಿತಗೊಳಿಸಿದ ಕೆಲವು ವಚನಗಳು ಹೀಗಿವೆ: “ಭಕ್ತಸ್ಥಲ ಸಂಗನ ಬಸವಣ್ಣಂಗಾ ಯಿತ್ತು. ಮಾಹೇಶ್ವರ ಸ್ಥಲ ಮಡಿವಾಳಯ್ಯಂಗಾಯಿತ್ತು. ಪ್ರಸಾದಿಸ್ಥಲ ಚನ್ನಬಸವಣ್ಣಂಗಾಯಿತ್ತು. ಪ್ರಾಣಲಿಂಗಿಸ್ಥಲ ಚಂದಯ್ಯಂಗಾಯಿತ್ತು. ಶರಣಸ್ಥಲ ಘಟ್ಟಿವಾಳ ಯ್ಯಂಗಾಯಿತ್ತು. ಐಕ್ಯಸ್ಥಲ ಅಜಗಣ್ಣಂಗಾಯಿತ್ತು. ಇಂತೀ ಷಡುಸ್ಥಲಬ್ರಹ್ಮಿಗಳೆಲ್ಲರೂ ಎನ್ನಂಗದ ಮೊರದ ಮಾರಿಯ ಸಂಗಾತದಲೈದಾರೆ. ಆರಂಗದ ಮೂರು ಸಂಗದ ತೋರಿಕೆಯ ತೋರಾ, ಕಾಲಾಂತಕ ಭೀಮೇಶ್ವರಲಿಂಗವೆ" (ಡಕ್ಕೆಯ ಬೊಮ್ಮಣ್ಣ ಸಮಗ್ರ ವಚನ ಸಂಪುಟ: 7. ವಚನದ ಸಂಖ್ಯೆ: 951).
“ಭಕ್ತಸ್ಥಲ ಸಾಧ್ಯವಾಯಿತ್ತು ಸಂಗನಬಸವರಾಜದೇವರಿಗೆ. ಮಾಹೇಶ್ವರಸ್ಥಲ ಸಾಧ್ಯವಾಯಿತ್ತು ಮಡಿವಾಳಮಾಚಿತಂದೆಗಳಿಗೆ. ಪ್ರಸಾದಿಸ್ಥಲ ಸಾಧ್ಯವಾಯಿತ್ತು ಬಿಬ್ಬಿಬಾಚಯ್ಯಗಳಿಗೆ. ಪ್ರಾಣ ಲಿಂಗಿಸ್ಥಲ ಸಾಧ್ಯವಾಯಿತ್ತು ಅನುಮಿಷದೇವರಿಗೆ. ಶರಣಸ್ಥಲ ಸಾಧ್ಯವಾಯಿತ್ತು ಅಲ್ಲಮಪ್ರಭು ದೇವರಿಗೆ. ಐಕ್ಯಸ್ಥಲ ಸಾಧ್ಯವಾಯಿತ್ತು ಅಜಗಣ್ಣಗಳಿಗೆ. ಸರ್ವಾಚಾರಸ್ಥಲ ಸಾಧ್ಯವಾಯಿತ್ತು, ಚೆನ್ನಬಸವಯ್ಯಗಳಿಗೆ.
ಎನಗೆ ಷಟಸ್ಥಲಸರ್ವಾಚಾರವೆ ಸಾಧ್ಯವಾಗಿ ಇಂತಿವರ ನೆನೆದು ಶುದ್ಧನಾದೆನು ಕಾಣಾ, ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ" (ಉರಿಲಿಂಗಪೆದ್ದಿ, ಸಮಗ್ರ ವಚನ ಸಂಪುಟ: 6. ವಚನದ ಸಂಖ್ಯೆ: 1474). “ಭಕ್ತಸ್ಥಲ ಬಸವಣ್ಣಂಗಾಯಿತ್ತು. ಮಾಹೇಶ್ವರಸ್ಥಲ ಮಡಿವಾಳಂಗಾಯಿತ್ತು. ಪ್ರಸಾದಿಸ್ಥಲ ಚೆನ್ನಬಸವಣ್ಣಂಗಾಯಿತ್ತು. ಪ್ರಾಣಲಿಂಗಿಸ್ಥಲ ಸಿದ್ಧರಾಮಯ್ಯಂಗಾಯಿತ್ತು. ಶರಣಸ್ಥಲ ಪ್ರಭುದೇವರಿಗಾಯಿತ್ತು. ಐಕ್ಯಸ್ಥಲ ಅಜಗಣ್ಣಂಗಾಯಿತ್ತು. ಎನಗಿನ್ನಾವ ಸ್ಥಲವೂ ಇಲ್ಲವೆಂದು ನಾನಿರಲು, ಇಂತಿವರೆ ಷಡುಸ್ಥಲ ಪ್ರಸಾದವನಿತ್ತರಾಗಿ, ನಾನು ಮುಕ್ತನಾದೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ" (ಸ್ವತಂತ್ರ ಸಿದ್ಧಲಿಂಗ, ಸಮಗ್ರ ವಚನ ಸಂಪುಟ: 11. ವಚನದ ಸಂಖ್ಯೆ: 938). ಹೀಗೆ ಸರ್ವ ವಚನಕಾರರೂ ಸರ್ವಸಮ್ಮತರಾಗಿ ಬಸವಣ್ಣನವರನ್ನು ಭಕ್ತಿಗೆ ಆದರ್ಶವಾಗಿಸಿ ದ್ದಾರೆ. ಅಲ್ಲಿಗೆ ಭಕ್ತಿಯೇ ಬಸವತತ್ವ!
ಇಂಥ ಬಸವತತ್ವವನ್ನು ಅಪವ್ಯಾಖ್ಯಾನಗೊಳಿಸಿ ಕಾರ್ಲ್ ಮಾರ್ಕ್ಸ್, ಪ್ರಜಾಪ್ರಭುತ್ವವಾದಿ, ಸಮಾಜ ವಾದಿ ಇತ್ಯಾದಿಯಾಗಿ ಅಧ್ಯಾತ್ಮಹೀನ ನಾಸ್ತಿಕನನ್ನಾಗಿಸಿರುವ ಲಿಂಗಾಹತರು ತಮ್ಮ ಸ್ವತತ್ವಕ್ಕೆ ಬಸವ ಕವಚ ತೊಡಿಸಿದ್ದಾರೆ. “ಮೂತ್ರ ಮಾಡಬಾರದು, ತಾಂಬೂಲ ಉಗಿಯಬಾರದು" ಎಂದು ಮೂಲೆಗಳಲ್ಲಿ ಹೇಗೆ ದೇವರುಗಳ ಟೈಲ್ಸ ಅಳವಡಿಸಿರುತ್ತಾರೋ ಹಾಗೆ ಬಸವಣ್ಣನವರನ್ನು ಬಳಸುತ್ತಾರೆ.
ವಚನಗಳನ್ನು ತಾವಷ್ಟೇ ವ್ಯಾಖ್ಯಾನಿಸಬೇಕು, ತಾವು ಹೇಳಿದ್ದೇ ಧರ್ಮ, ತಾವಷ್ಟೇ ಬಸವನ ವಾರಸುದಾರರು ಇತ್ಯಾದಿಯಾದ ಎಲ್ಲಾ ಮೂಲಭೂತವಾದ ಇವರದಾಗಿರುವುದು ಬಸವ ತಾಲಿಬಾನಿತನವೇ ಆಗಿದೆ. ಇನ್ನು ಇದೇ ಗುಂಪಿನ ಕಾವಿವೇಷದ ‘ಲಿಂಗಾಹತ ಲಿಂಗಾಯತ ಮಠಾಧೀಶರರ ಒಕ್ಕೂಟ’ವು “ಬಸವಣ್ಣನ ವಿರುದ್ಧ ಸೂಡೋ ಲಿಂಗಾಯತರು, ಬಸವಣ್ಣ ವೀರಶೈವ ಧರ್ಮ ಸ್ವೀಕರಿಸಿದ ಎನ್ನುವ ಷಡ್ಯಂತ್ರದ ಬಸವ ವಿರೋಧಿಗಳು..." ಇತ್ಯಾದಿಯಾಗಿ ಅಪಾನ ವಾಯುಪೀಡಿತವಾಗಿ ಗುಡುಗುತ್ತಿದೆ.
ಇವರ ಆರೋಪಗಳು ಪುಂಖಾನುಪುಂಖ ಸುಳ್ಳುಗಳು ಎಂದು ಬಸವಣ್ಣನವರೇ ತಮ್ಮ ವಚನ ವೊಂದರಲ್ಲಿ ಓರ್ವ ಭಕ್ತನಾದ ತಾನು ಯಾರ ಭಕ್ತ? ತನ್ನ ಗುರು ಯಾರು? ತನ್ನ ಧರ್ಮವಾವುದು? ಎಂಬೆ ಪ್ರಶ್ನೆಗಳಿಗೆ ಸಟಿಕದ ಶಲಾಖೆಯಷ್ಟು ಸ್ಪಷ್ಟವಾದ ಉತ್ತರ ನೀಡಿದ್ದಾರೆ.
ಅದು ಹೀಗಿದೆ: “ಎನ್ನ ಬಂದ ಭವಂಗಳನು ಪರಿಹರಿಸಿ, ಎನಗೆ ಭಕ್ತಿಘನವೆತ್ತಿ ತೋರಿ, ಎನ್ನ ಹೊಂದಿದ ಶೈವಮಾರ್ಗಂಗಳನತಿಗಳೆದು, ನಿಜ ವೀರಶೈವಾಚಾರವನರುಹಿ ತೋರಿ, ಎನ್ನ ಕರಸ್ಥಲದ ಸಂಗಮನಾಥನಲ್ಲಿ ಮಾಡುವ ಜಪ ಧ್ಯಾನ ಅರ್ಚನೆ ಉಪಚರಿಯ ಅರ್ಪಿತ ಪ್ರಸಾದಭೋಗಂಗಳಲ್ಲಿ ಸಂದಿಸಿದ ಶೈವಕರ್ಮವ ಕಳೆದು, ಭವಮಾಲೆಯ ಹರಿದು, ಭಕ್ತಿಮಾಲೆಯನಿತ್ತು,
ಭವಜ್ಞಾನವ ಕೆಡೆಮೆಟ್ಟಿ, ಭಕ್ತಿeನವ ಗಟ್ಟಿಗೊಳಿಸಿ, ಭವಮಾಟಕೂಟವ ಬಿಡಿಸಿ, ಭಕ್ತಿಮಾಟಕೂಟವ ಹಿಡಿಸಿ, ಭವಶೇಷವನುತ್ತರಿಸಿ, ಭಕ್ತಿಶೇಷವನಿತ್ತು, ಎನಗೆ, ಎನ್ನ ಬಳಿವಿಡಿದು ಬಂದ ಶರಣಗಣಂ ಗಳೆಲ್ಲರಿಗೆ ಶಿವಸದಾಚಾರದ ಘನವನರುಹಿ ತೋರಿ, ಮರ್ತ್ಯಲೋಕದಲ್ಲಿ ಸತ್ಯಸದಾಚಾರವನು ಹರಿಸಿ, ಶಿವಭಕ್ತಿಯನುದ್ಧರಿಸಿ, ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣ ಎನ್ನನಾಗುಮಾಡಿ ಉಳುಹಿದನಾಗಿ ಇನ್ನೆನಗೆ ಭವವಿಲ್ಲದೆ, ಬಂಧನ ವಿಲ್ಲದೆ, ಭಕ್ತಿ ಮಾಟಕೂಟದ ಗೊತ್ತಿನಲ್ಲಿರ್ದು ನಾನು ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕುವೆನು".
ಅಲ್ಲಿಗೆ ಬಸವಣ್ಣ ವೀರಶೈವ ದೀಕ್ಷೆ ಪಡೆದು ಗುರುವಿನ ಅನುಗ್ರಹ ಪಡೆದು ಭಕ್ತನಾಗಿ ಬಾಳುವೆನು ಎಂದು ಘೋಷಿಸಿಕೊಂಡಿದ್ದಾರೆ ಎಂಬುದು ಸರ್ವಮಾನ್ಯ ಸತ್ಯವಾಗಿದೆ. ಹೀಗೆ ತಾನೇ ಖುದ್ದು ವೀರ ಶೈವನಾದೆ ಎಂದರೂ, “ನೀನ್ಯಾವ ವೀರಶೈವ? ನೀನೇನು ಹೇಳುವುದು! ನೀನು ಲಿಂಗಾಯತ. ನೀನು ಸಮಾಜವಾದಿ. ನೀನು ಕಮ್ಯುನಿ. ನೀನು ನಮ್ಮ ರಾಜಕೀಯ ಸ್ಪೂರ್ತಿ. ನಾವು ಹೇಳಿದಂತೆ ಕೇಳಿ ಕೊಂಡು ಉತ್ಸವಮೂರ್ತಿಯಾಗಿರು, ಬಸವಾ" ಎಂದು ಇಂದಿನ ಬಸವಚರ್ಮ ಹೊದ್ದ ತೋಳಗಳು ಫರ್ಮಾನು ಹೊರಡಿಸಿವೆ.
ಅಲ್ಲದೇ ಇವರ ಸುಳ್ಳಿನ ರೋಗವು ಶ್ರಾವಣ ಮಾಸದಲ್ಲಿ ಶುನಕಗಳು ಕುಂಯ್ಗುಡುತ್ತ ಒಂದರ ಹಿಂಬದಿಯನ್ನು ಒಂದು ಮೂಸುತ್ತಾ ಸಾಗುವ ಉಲ್ಬಣಾವಸ್ಥೆಯ ಸ್ಥಿತಿಯಂತೆ ಈ ಶ್ರಾವಣದಲ್ಲಿ ತಲುಪಿದೆ. ಇದಕ್ಕೆ ಕಾರಣ ಕೇಂದ್ರದ ಜನಗಣತಿ ಎಂಬ ಶ್ರಾವಣ!: ಬಸವಣ್ಣನವರಿಗೆ ಹೇಗೆ ಫರ್ಮಾನು ಹೊಡೆಸಿ ಲಿಂಗಾಯತ ಮಾಡಿದ್ದಾರೋ ಅದೇ ರೀತಿ ಈ ಒಕ್ಕೂಟವು ಜನಗಣತಿಯಲ್ಲಿ ‘ಹೀಗೆ ಬರೆಸಿ ಹಾಗೆ ಬರೆಸಿ" ಎಂದು ಧಾರ್ಮಿಕರಿಗೆ ಈಗ ಫರ್ಮಾನು ಹೊರಡಿಸಿದೆ.
ಇವರು ಏನೇ ಫರ್ಮಾನು ಹೊರಡಿಸಿದರೂ ಈ ಒಕ್ಕೂಟದ ಜಾತಿಪೀಠಿಗಳ ಜಾತಿಯವರು ಬರೆಸುವುದು ಹಿಂದೂ ಸಾದರು, ಹಿಂದೂ ಬೋವಿ, ಹಿಂದೂ ಕ್ಷೌರಿಕ, ಹಿಂದೂ ಅಗಸ, ಹಿಂದೂ ಜಂಗಮ ಇತ್ಯಾದಿ ಮೀಸಲಾತಿ ಪ್ರಣೀತ ಜಾತಿಗಳನ್ನೇ ಹೊರತು ಲಿಂಗಾಯತ ಎಂದಲ್ಲ. ಅಂದ ಹಾಗೆ ಈ ಒಕ್ಕೂಟದ ಐದು ಜಾತಿಪೀಠಿಗಳಲ್ಲದೆ ಉಳಿದ ವಿರಕ್ತರನ್ನೂ ಸೇರಿಸಿ ನೋಡಿದಾಗ ಇವರು ಲಿಂಗಾಯತ ಮಠಾಧೀಶರು ಎನ್ನಿಸಿಕೊಳ್ಳಲು ಅರ್ಹರೇ ಅಲ್ಲ.
ಇವರೆಲ್ಲರೂ ಲಿಂಗಾಯತಕ್ಕೆ ಹೊರಗು. ಏಕೆಂದರೆ ಇವರು ಲಿಂಗಾಯತವು ಸ್ಪಷ್ಟವಾಗಿ ಹೇಳಿರುವ ಯಾವ ಮಲತ್ರಯಗಳನ್ನೂ ಕಳೆದುಕೊಂಡಿಲ್ಲ ಮತ್ತು ಷಟ್‌ಸ್ಥಲ ಚಕ್ರವರ್ತಿ ಚೆನ್ನಬಸವಣ್ಣನು ನಿರೂಪಿಸಿದ ದೀಕ್ಷಾ ವಿಧಿವಿಧಾನದನ್ವಯ ದೀಕ್ಷೆಯನ್ನೇ ಪಡೆದುಕೊಂಡಿಲ್ಲ!
ಹೀಗಿದ್ದಾಗ ಇವರು ಯಾವ ಸೀಮೆಯ ಲಿಂಗಾಯತರು? ಭಕ್ತಸ್ಥಲಕ್ಕೂ ಅರ್ಹರಲ್ಲದ ಇವರು ಅದ್ಯಾವ ಲಿಂಗಾಯತ ಪೀಠದ ಗೂಟಗಳು? ಎಂದು ಅಖಂಡ ವೀರಶೈವ (ಲಿಂಗಾಯತ) ಧರ್ಮೀ ಯರು ಪ್ರಶ್ನಿಸಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.
ಅಂದ ಹಾಗೆ ಮಲತ್ರಯಗಳು ಎಂದರೆ ಏನು? ಚೆನ್ನಬಸವಣ್ಣನು ರೂಪಿಸಿದ ದೀಕ್ಷಾ ವಿಧಾನ ಯಾವುದು? ಮಲತ್ರಯಗಳು: ಬಸವಕಾಲೀನನಾದ ಸಕಲೇಶ ಮಾದರಸನ ಮೊಮ್ಮಗನಾದ ಕೆರೆಯ ಪದ್ಮರಸನು ‘ದೀಕ್ಷಾ ಬೋಧೆ’ ಎಂಬ ಗ್ರಂಥವನ್ನು ಬರೆದು ಮಲತ್ರಯ, ದೀಕ್ಷಾ ವಿಧಿವಿಧಾನಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದಾನೆ.
ಇದನ್ನು ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ.ಬಿ. ಹೆಂಡಿಯವರು ಸಂಪಾದಿಸಿದ್ದಾರೆ. 12ನೇ ಶತಮಾನದ ವಚನಕಾರರ ಅತ್ಯಂತ ಸಮೀಪದ ಕಾಲದಲ್ಲಿ ಅಂದರೆ ಸುಮಾರು 50 ವರ್ಷಗಳ ಅಂತರದಲ್ಲಿ ಪದ್ಮರಸನು ಬಾಳಿದ್ದನು. ಆದರೆ ಈತನ ಗ್ರಂಥಗಳಲ್ಲಿ ಎಲ್ಲಿಯೂ ಬಸವಣ್ಣ, ಕಲ್ಯಾಣ ಕ್ರಾಂತಿ, ಶರಣರ ಬಗ್ಗೆ ಒಂದೇ ಒಂದು ಪದವಿಲ್ಲ. ಖುದ್ದು ತನ್ನ ಅಜ್ಜ ವಚನಗಳನ್ನು ಬರೆದಿದ್ದ ಎಂದು ಈತನು ಎಲ್ಲಿಯೂ ಉಲ್ಲೇಖಿಸಿಲ್ಲ.
ಬಸವಪೂರ್ವದ ಕೊಂಡಗುಳಿ ಕೇಶಿರಾಜ, ದೇವರ ದಾಸಿಮಯ್ಯರ ಕುರಿತಾದ ಐತಿಹಾಸಿಕ ಮಾನ್ಯತೆ ಪಡೆದ ಪುರಾವೆಗಳಿವೆ. ಬಸವೋತ್ತರ ತೋಂಟದ ಸಿದ್ಧಲಿಂಗರ ಕುರಿತಾದ ಮತ್ತು ನಂತರದ ಶರಣರ ಇತಿಹಾಸವಿದೆ. ಆದರೆ ಬಸವಕಾಲೀನ ಶರಣರ ಯಾವುದೇ ಐತಿಹಾಸಿಕ ಮಾನ್ಯತೆ ಪಡೆದ ಪುರಾವೆ ಇಲ್ಲ. ಇದನ್ನು ಪುಷ್ಟೀಕರಿಸಲು ವಚನಗಳ ಒಂದೇ ಒಂದು ತಾಳೆಗರಿ 15ನೇ ಶತಮಾನಕ್ಕೂ ಮುಂಚೆ ಸಿಕ್ಕಿಲ್ಲ. ಈ ಐತಿಹಾಸಿಕ ಪುರಾವೆಗಳ ಗೈರನ್ನೂ ಅಖಂಡ ವೀರಶೈವ (ಲಿಂಗಾಯತ) ಧರ್ಮೀಯರು ಪ್ರಶ್ನಿಸಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.
ಇರಲಿ, ಕೆರೆಯ ಪದ್ಮರಸನು ಸಹ ಚೆನ್ನಬಸವಣ್ಣನು ನಿರೂಪಿಸಿದ್ದಾನೆ ಎನ್ನುವ ದೀಕ್ಷಾ ವಿಧಿ ವಿಧಾನಗಳನ್ನೇ ಸವಿಸ್ತಾರವಾಗಿ ತನ್ನ ‘ದೀಕ್ಷಾ ಬೋಧೆ’ಯಲ್ಲಿ ವಿವರಿಸಿದ್ದಾನೆ. ಈ ಗ್ರಂಥದ ಸಾರವು ಹೀಗಿದೆ: ಮಲತ್ರಯನಿವಾರಣೆಯು ದೀಕ್ಷಾ ಸಂಸ್ಕಾರದಲ್ಲಿ ಜರುಗುವ ಒಂದು ಮುಖ್ಯ ಪ್ರಕ್ರಿಯೆ. ದೀಕ್ಷಾ ಬೋಧೆಯ ಪ್ರಥಮಸ್ಥಲದಲ್ಲಿ ಗುರುವು ಶಿಷ್ಯನಿಗೆ ದೀಕ್ಷೆಯೀಯುವ ಪೂರ್ವದಲ್ಲಿ, ಮಲತ್ರಯಗಳು ಭಕ್ತಿಗೆ ವಿಘ್ನಗಳು, ಅವುಗಳನ್ನು ಕಳೆದಲ್ಲದೆ ದೀಕ್ಷೆ ಘಟಿಸದು ಎಂದು ಹೇಳಿ ಮಲತ್ರಯಸ್ವರೂಪವನ್ನೂ ಅವುಗಳ ನಿವಾರಣೋಪಾಯಗಳನ್ನು ವಿವರಿಸಲಾಗಿದೆ.
‘ಆಣವ ಮಲ’ವು ರೇತರಕ್ತದ ಜಠರಜಾತ ಅಥವಾ ಗರ್ಭಸಂಬಂಧಿಯಾಗಿ ಅಣುರೂಪವಾದುದು, ‘ಮಾಯಾಮಲ’ವು ಜಾತಿಧರ್ಮಗಳ ಸುಪ್ರೀತಿರೂಪವಾದುದು ಮತ್ತು ‘ಕಾರ್ಮಿಕಮಲ’ವು ಧನದ ಮೇಲಿನ ಕಾಂಕ್ಷಾರೂಪವಾದುದು. ಈ ಮಲಗಳನ್ನು ಗುರುವು ಅನುಕ್ರಮವಾಗಿ ವೇಧಾ, ಮಂತ್ರ ಹಾಗೂ ಕ್ರಿಯಾದೀಕ್ಷೆಗಳ ಪ್ರಕ್ರಿಯೆಯಿಂದ ಕಳೆಯುವನೆಂದು ಎಲ್ಲಾ ವೀರಶೈವ (ಲಿಂಗಾಯತ) ಶಾಸ್ತ್ರಗ್ರಂಥಗಳಲ್ಲಿ ನಿರೂಪಿಸಲಾಗಿದೆ.
ಆಣವಮಲವು ತೊಲಗಬೇಕಾದರೆ ದೀಕ್ಷಾಪೇಕ್ಷೆಯಲ್ಲಿ ತನ್ನ ಜನನದ ಬಗೆಗೆ ಸರಿಯಾದ ತಿಳಿವಳಿಕೆ ಇರತಕ್ಕುದು. ತಾನು ತಂದೆ ತಾಯಿಗಳ ಉಭಯ ಬಿಂದುಜಾತನೆಂಬ ಭ್ರಾಂತಿ ಇರತಕ್ಕುದಲ್ಲ. ಉತ್ಪತ್ತಿಗೆ ಪಿತಮಾತೆಯೆಂದೂ ಸ್ಥಿತಿ ಲಯಕ್ಕೆ ಶಿವನೆಂದೂ ಹೇಳುವುದು ಮರುಳತನ. ತಾಯಿತಂದೆ ಗಳಿಂದ ಮಗುವು ಜನಿಸುವುದಾದರೆ ಜನಿಸುವ ಪೂರ್ವದಲ್ಲಿ ಅದನ್ನು ಗಂಡು ಅಥವಾ ಹೆಣ್ಣು ಎಂದು ಅರಿತು ಹೆಸರಿಡಬಲ್ಲರೆ? ಹಾಗಾಗಿ ಶಿವನಲ್ಲದೆ ಜೀವಿಗಳ ಜನ್ಮಕ್ಕೆ ಬೇರೆ ಯಾರೂ ಕಾರಣ ರಲ್ಲವೆಂಬುದು ಸ್ಪಷ್ಟವಾಗುತ್ತದೆ ಎನ್ನಲಾಗಿದೆ.
ಇನ್ನು ಮಾಯಾಮಲವನ್ನು ಜಾಳಿಸಲು ಕುಲವೆಂಬ ಕಾಳ್ಮರುಳತನವನ್ನು ತ್ಯಜಿಸತಕ್ಕುದು. ಕುಲದ ನೆಲೆಯನ್ನು ಅರಿಯುವುದಾದರೆ ಹೊಲೆಯೆಂಬುದೆ ಉಂಟಲ್ಲದೆ ಶುದ್ಧ ಕುಲವಿಲ್ಲ. ಕಾಯಕ್ಕೆ ಕುಲವೋ, ಜೀವಕ್ಕೆ ಕುಲವೋ-ಈ ಎರಡರಲ್ಲಿ ಯಾವುದಕ್ಕೆ ಸತ್ಕುಲವಿದೆ? ಕಾಯವಾದರೋ ಹೊಲೆಯಲ್ಲಿ ಹುಟ್ಟಿದುದು; ಜೀವವೋ ನಿರವಯವಾದುದು.
ಇವೆರಡಕ್ಕೆ ಸತ್ಕುಲವಿರಲು ಸಾಧ್ಯವಿಲ್ಲ. ಸತ್ಕುಲದ ವಿಚಾರ ಕೇವಲ ಅಹಂಕಾರದ ಮಾತು. ತಾಯಿತಂದೆಗಳಿಂದ ಹುಟ್ಟಿದೆವೆನ್ನುವವರು ಅವರ ಮಲದಿಂದ ಬಂದವರಷ್ಟೆ. ಎಂದಮೇಲೆ ಆ ದುಷ್ಟುಲವನ್ನು ಯಾರು ಕಳೆಯಲು ತಾನೇ ಸಾಧ್ಯ? ಮಗುವು ತಾಯ ಗರ್ಭದಲ್ಲಿ ಹುಟ್ಟುವ ಮೊದಲು ಆಕೆಗೆ ಸೂತಕಗಳಾಗುತ್ತಿರುತ್ತವೆ. ಮುಟ್ಟು ತಡೆದಾಗ ಆ ಸೂತಕದ ರಕ್ತದಲ್ಲಿ ರೇತವು ಕೂಡಿ ಈ ಕುಲಮದದ ಪಿಂಡ ಹುಟ್ಟಿ ಬೆಳೆಯುತ್ತದೆ. ಹೀಗೆ ಹೊಲೆಯಲ್ಲಿ ಉದಿಸಿದ ಶರೀರವನ್ನು ಹಿಡಿದು ಸತ್ಕುಲವೆಂದು ಹೋರಾಡುವವರನ್ನು ಕಂಡು ಜ್ಞಾನಿಗಳು ಹೇಸುವರು. ಹೊಟ್ಟೆಯಲ್ಲಿ ಹೊಲೆ, ಹುಟ್ಟುವಲ್ಲಿ ಹೊಲೆ, ಹೊಂದುವಲ್ಲಿ ಹೊಲೆ, ನಟ್ಟ ನಡುವೆ ಸತ್ಕುಲ ಹೇಗೆ ತಾನೇ ಬಂದೀತು. ಹೊಲೆ ಹೊದ್ದಿದವನು ಕುಲಜನು ಹೇಗೆ ತಾನೇ ಆದಾನು.
ಉತ್ತಮಸುವರ್ಣ ಹಿತ್ತಾಳೆಯಾಗಲಾರದು. ಹಿತ್ತಾಳೆಯು ಸುವರ್ಣವಾಗಲಾರದು. ಒಮ್ಮೆ ಹೊಲೆ ಒಮ್ಮೆ ಕುಲವೆಂದು ಹೋರಾಡುವವರು ತುಚ್ಛರು. ಅವರ ಮಾತನ್ನು ಜ್ಞಾನಿಗಳೆಂದೂ ಮೆಚ್ಚರು. ಸತ್ಕುಲದವರಿಗೆ ಹೊಲೆಯೆಂಬುದೆ ಇರುವುದಿಲ್ಲ ಎನ್ನಲಾಗಿದೆ.
(ಮುಂದುವರಿಯುವುದು)
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)