Los Angeles Wildfire: ಲಾಸ್ ಏಂಜಲಿಸ್‌ನಲ್ಲಿ ನಿಲ್ಲದ ಕಾಡ್ಗಿಚ್ಚು; ಸಾವಿನ ಸಂಖ್ಯೆ 24ಕ್ಕೆ ಏರಿಕೆ- ಮತ್ತೊಂದೆಡೆ ಮನೆಗಳಿಗೆ ಖದೀಮರು ಕನ್ನ
Los Angeles Wildfire : ಲಾಸ್ ಏಂಜಲಿಸ್‌ನಲ್ಲಿ ಈ ವರೆಗೆ ಬೆಂಕಿಯ ಕೆನ್ನಾಲಿಗೆಗೆ 24 ಮಂದಿ ಬಲಿಯಾಗಿದ್ದಾರೆ. ಈ ನಡುವೆ ಲಾಸ್ ಏಂಜಲಿಸ್‌ನಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು, ಮನೆಯನ್ನು ತೊರೆದು ಹೋದ ಜನರ ಮನೆಗೆ ಕನ್ನ ಹಾಕಲಾಗುತ್ತಿದೆ.
Vishakha Bhat
January 13, 2025
ವಾಷಿಂಗ್ಟನ್ : ವೇಗವಾಗಿ ಹಬ್ಬುತ್ತಿರುವ ಕಾಡ್ಗಿಚ್ಚಿಗೆ (Los Angeles Wildfire) ಲಾಸ್ ಏಂಜಲಿಸ್ ಅಕ್ಷರಶಃ ನಲುಗಿ ಹೋಗಿದೆ. ಪೆಸಿಫಿಕ್ ಪ್ಯಾಲಿಸೈಡ್ಸ್ (Palisades) ಹಾಗೂ ಪ್ಯಾಸಡೀನಾದ ಈಟನ್ ಕೆಯಾನ್ ಪ್ರದೇಶದಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಹರಸಾಹಸ ಪಡುತ್ತಿದ್ದಾರೆ. ಸಾವಿರಾರು ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ. ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಈವರೆಗೆ ಬೆಂಕಿಯ ಕೆನ್ನಾಲಿಗೆಗೆ 24 ಮಂದಿ ಬಲಿಯಾಗಿದ್ದಾರೆ. ಈ ನಡುವೆ ಲಾಸ್ ಏಂಜಲಿಸ್‌ನಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು, ಜೀವ ಭಯದಲ್ಲಿ ಮನೆ ಮಠ ತೊರೆದು ಬೀದಿಪಾಲಾಗಿರುವ ಜನರ ಮನೆಗೆ ಕನ್ನ ಹಾಕಲಾಗುತ್ತಿದೆ.
ಮಾಲಿಬು ಪ್ರದೇಶದಲ್ಲಿ ಅಗ್ನಿಶಾಮಕ ದಳದ ವೇಷದಲ್ಲಿ ಮನೆಗಳಿಗೆ ಕನ್ನ ಹಾಕುತ್ತಿದ್ದ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಭಾನುವಾರ (ಜನವರಿ 12) ಪತ್ರಿಕಾಗೋಷ್ಠಿಯಲ್ಲಿ, ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ರಾಬರ್ಟ್ ಲೂನಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ತಾನು ಅಗ್ನಿಶಾಮಕ ದಳದವರ ಜೊತೆ ಚರ್ಚಿಸಲು ತೆರಳಿದ್ದಾಗ ಕಳ್ಳ ಅಗ್ನಿಶಾಮಕ ದಳದ ವೇಷದಲ್ಲಿದ್ದ. ಆತನನ್ನು ಪ್ರಶ್ನಿಸಿದಾಗ ಆತ ಕನ್ನ ಹಾಕಲು ಬಂದಿದ್ದಾನೆ ಎಂಬುದು ತಿಳಿಯಿತು. ಆತನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಈವರೆಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 29 ಜನರನ್ನು ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.
Looters in LA are dressing as firefighters amidst wildfires to burgle homes. Sheriff Luna reported several arrests, including one mistaken for a real firefighter. The public is urged to be vigilant. Need to prosecute to the fullest extent! @PORACalifornia pic.twitter.com/Ifrwne25YI— Brian Marvel (@BrianMarvel) January 12, 2025
ಶನಿವಾರ ಮುಂಜಾನೆ ಬ್ರೆಂಟ್‌ವುಡ್‌ನಲ್ಲಿರುವ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ನಿವಾಸದ ಬಳಿ ಕರ್ಫ್ಯೂ ಉಲ್ಲಂಘನೆಗಾಗಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಹೆಚ್ಚುತ್ತಿರುವ ಅಪರಾಧಕ್ಕೆ ಪ್ರತಿಕ್ರಿಯೆಯಾಗಿ, ಭದ್ರತೆಯನ್ನು ಹೆಚ್ಚಿಸಲು ಮತ್ತು ಲೂಟಿಯನ್ನು ತಡೆಯಲು ಪೀಡಿತ ಪ್ರದೇಶಗಳಿಗೆ 400 ರಾಷ್ಟ್ರೀಯ ಗಾರ್ಡ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ಮುಖ್ಯಸ್ಥ ಜಿಮ್ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.
ನೀವು ಸಾರ್ವಜನಿಕ ಸುರಕ್ಷತಾ ಸಿಬ್ಬಂದಿ ಅಥವಾ ಇತರ ವಿಪತ್ತು ಕಾರ್ಯಕರ್ತರಲ್ಲದಿದ್ದರೆ, ಈ ಸ್ಥಳಗಳಲ್ಲಿರಲು ನಿಮಗೆ ಯಾವುದೇ ಅವಕಾಶವಿಲ್ಲ. ನೀವು ಆ ಪ್ರದೇಶಗಳಲ್ಲಿದ್ದರೆ, ನೀವು ಬಂಧನಕ್ಕೆ ಒಳಗಾಗುತ್ತೀರಿ. ಕರ್ಫ್ಯೂ ಜಾರಿಗೊಳಿಸುವುದು ಅನಿವಾರ್ಯವಾಗಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಹವಾಮಾನ ಅಧಿಕಾರಿಗಳ ಪ್ರಕಾರ ಮುಂದಿನ ದಿನಗಳಲ್ಲಿ ಪರಿಸ್ಥಿತಿಗಳು ಹದಗೆಡುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಗಂಟೆಗೆ 120 ಕಿಮೀ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆಯನ್ನು ಅವರು ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ : Los Angeles Wildfire: ಅಮೆರಿಕಾದಲ್ಲಿ ಭೀಕರ ಕಾಡ್ಗಿಚ್ಚು; ಜೀವ ಪಣಕ್ಕಿಟ್ಟು ಮೊಲವನ್ನು ರಕ್ಷಿಸಿದ ಯುವಕ – ವಿಡಿಯೋ ವೈರಲ್
https://youtu.be/9hj1tboehmg?si=3vcWhRd8KI1TftBd