Yagati Raghu Naadig Column: ಪ್ರೀತಿ ನೀತಿ ಇಲ್ಲದ ಮೇಲೆ, ಹೂವು ಅರಳಿತು ಹೇಗೆ...?
ಗುರುಮಾತೆಯ ಮಡಿಲಲ್ಲಿ, ಅವರ ನಿರಂತರ ಪಾಲನೆ-ಪೋಷಣೆಯಲ್ಲಿ ಬೆಳೆದ ಅವಧೂತರು, ಮಹಾನ್ ತೇಜೋವಂತರಾಗಿದ್ದು ಮತ್ತು ಅಸೀಮ ಸಾಧಕರಾಗಿದ್ದು ಹೇಗೆ? ಇಷ್ಟಾಗಿಯೂ ಪ್ರಚಾರ-ಪ್ರಸಿದ್ಧಿಗೆ ಹಂಬಲಿಸದ ಸರಳತನ ಅವರಲ್ಲಿ ಮೈಗೂಡಿಕೊಂಡಿದ್ದು ಹೇಗೆ? ಎಂಬ ಶಿಷ್ಯರ ‘ಮೌನ’ ಪ್ರಶ್ನೆಗಳಿಗೆ ಸ್ಥಳದಲ್ಲೇ ‘ವಾಚ್ಯ’ ಉತ್ತರ ಸಿಕ್ಕಿತ್ತು.

-

ರಸದೌತಣ
(ಭಾಗ - 15)
ಅಮಾಯಕಿ ಶಾರದೆಗೆ ಒದಗಿದ ಸಂಕಷ್ಟಗಳನ್ನು ಅವಧೂತರ ಬಾಯಿಂದ ಕೇಳಿಸಿಕೊಳ್ಳುತ್ತಾ, ಆ ಗುಂಗಿನಲ್ಲೇ ಮೈಮರೆತಿದ್ದ ಶಿಷ್ಯರಿಗೆ ಹೊತ್ತು ಹೋಗಿದ್ದೇ ಗೊತ್ತಿರಲಿಲ್ಲ. ಆದರೆ ಅಷ್ಟು ಹೊತ್ತಿಗಾ ಗಲೇ ರಾತ್ರಿಯೂಟದ ವಾಡಿಕೆಯ ಸಮಯವೂ ಬಂದಿದ್ದನ್ನು ಮನಗಂಡೇ ಅವಧೂತರು “ಎಲ್ಲರೂ ಹೊಟ್ಟೆಗೆ ಏನಾದರೂ ಹಾಕಿಕೊಂಡು ನಂತರ ಕಥೆ ಮುಂದುವರಿಸೋಣ ಕಣ್ರಯ್ಯಾ.." ಎಂದು ಹೇಳಿ, ಕಥಾಶ್ರವಣಕ್ಕೆ ಒಂದು ಪುಟ್ಟ ವಿರಾಮವನ್ನು ನೀಡಿದ್ದರು.
ಆದರೆ ಕಥೆಯ ರುಚಿ ಹತ್ತಿಸಿಕೊಂಡಿದ್ದ ಹೊಸ ಶಿಷ್ಯರೊಬ್ಬರು, “ಗುರುಗಳೇ, ಊಟ ಮಾಡೋದು ಇದ್ದೇ ಇರುತ್ತೆ. ನೀವು ದಯವಿಟ್ಟು ಕಥನವನ್ನು ಮುಂದುವರಿಸಿ; ಇಂದು ತಡರಾತ್ರಿಯಲ್ಲಿ ಊಟ ಮಾಡೋಣವಂತೆ..." ಎಂದು ಬಿಟ್ಟರು. ಅದು ಅವಧೂತರ ಜತೆಗೆ ಅಷ್ಟು ಹೊತ್ತಿಗಾಗಲೇ ಬೆಳೆದು ಬಿಟ್ಟಿದ್ದ ಸದರದ ಫಲಶ್ರುತಿ! ಹಾಗೆ ಉಚಾಯಿಸಿ ಮಾತನಾಡಿದ್ದಕ್ಕೆ ಪಕ್ಕದಲ್ಲಿದ್ದ ಹಿರಿಯ ಶಿಷ್ಯ ರೊಬ್ಬರು ಆ ಹೊಸಶಿಷ್ಯರಿಗೆ ಲಘುವಾಗಿ ಜಿಗುಟಿ, ಒಮ್ಮೆ ಕೆಂಗಣ್ಣು ಬೀರಿದರು. ಅದರ ಸೂಚ್ಯರ್ಥ ಅರಿವಾಗಿ ಆ ಹೊಸಶಿಷ್ಯರು ಕೈಮುಗಿದು, “ತಪ್ಪಾಯ್ತು ಗುರುಗಳೇ, ನಿಮ್ಮ ಸೂಚನೆಯನ್ನು ಉಚಾಯಿಸಿ, ನಿಮಗೇ ಸಲಹೆ ನೀಡುವಂಥ ಉದ್ಧಟತನವನ್ನು ನಾನು ತೋರಬಾರದಿತ್ತು" ಎನ್ನುತ್ತಾ ಕಣ್ಣೀರಾಗಿ ತಲೆ ಬಾಗಿಸಿದರು.

“ಇರಲಿ ಬಿಡಯ್ಯಾ, ನೊಂದುಕೊಳ್ಳಬೇಡ. ಮಹಾಭಾರತದಲ್ಲಿ ಶ್ರೀಕೃಷ್ಣನ ಜತೆಗೆ ಅರ್ಜುನ ನಿಗೆ ಇದ್ದ ‘ಸ್ನೇಹ-ಸಲಿಗೆ’ಯ ಭಕ್ತಿ ನಿನ್ನದು. ಪರವಾಗಿಲ್ಲ, ನನಗೆ ಅರ್ಥವಾಗುತ್ತೆ..." ಎನ್ನುತ್ತಲೇ ಆಪ್ಯಾ ಯತೆಯಿಂದ ಅವರ ತಲೆ ನೇವರಿಸಿ ಕಣ್ಣೀರು ಒರೆಸಿದ ಅವಧೂತರು, “ಅಯ್ಯಾ, ನೀವೆಲ್ಲಾ ‘ಶ್ರಾವ್ಯ ಸುಖ’ಕ್ಕೆ ಮಾತ್ರವೇ ಓಗೊಟ್ಟರೆ ನಿಮ್ಮ ‘ಜಠರಬಾಧೆ’ ನೀಗುವುದಾದರೂ ಹೇಗೆ? Work while you Work, Play while you Play ಎಂಬ ಹಿತನುಡಿಯನ್ನು ನಿಮ್ಮ ಶಾಲೆಗಳಲ್ಲಿ ಕಲಿಸಿದ್ದಾರಲ್ಲವೇ? ಅಂತೆಯೇ ಆಯಾ ಸಂದರ್ಭದಲ್ಲಿ ಆಯಾ ಕೆಲಸವನ್ನು ಮುಗಿಸಿಯೇ ಮುಂದಕ್ಕೆ ಹೋಗಬೇಕು. ನೀವೆಲ್ಲಾ ಇನ್ನೂ ಹುಡುಗರು. ವೈಯಕ್ತಿಕ ನೆಲೆಯ ಸಾಧನೆಯನ್ನು ಕೈಗೊಳ್ಳುವುದು ಮಾತ್ರ ವಲ್ಲದೆ ನಿಮ್ಮ ಮನೆಯ, ಸಮಾಜದ ಮತ್ತು ದೇಶದ ಭವ್ಯ ಭವಿಷ್ಯವನ್ನೂ ರೂಪಿಸಬೇಕಾದವರು. ಅದಕ್ಕೆ ಬೇಕಾದುದು ಸತ್‌ಚಿಂತನೆ, ಬದ್ಧತೆ, ಪ್ರಾಮಾಣಿಕತೆ. ಅಂತರಾಳದಲ್ಲಿ ಅವೆಲ್ಲವೂ ಗಟ್ಟಿಯಾಗಿ ಸ್ವಸ್ಥ ಮನಸ್ಸು ನಿಮ್ಮದಾಗಬೇಕೆಂದರೆ, ನಿಮ್ಮ ದೇಹವೂ ಸ್ವಸ್ಥವಾಗಿರಬೇಕು, ಸದೃಢವಾಗಿರಬೇಕು. ಈ ದೇಹಕ್ಕೆ ಕಾಲಕಾಲಕ್ಕೆ ಸಲ್ಲಬೇಕಾದ ಪಾಲನೆ-ಪೋಷಣೆಗಳು ನಡೆಯುತ್ತಲೇ ಇರಬೇಕು. ‘ಶರೀರ ಮಾದ್ಯಂ ಖಲು ಧರ್ಮ ಸಾಧನಂ’ ಎಂಬ ಮಾತನ್ನು ಕೇಳಿದ್ದೀರಲ್ಲವೇ? ನೀವು ತೊಡಗಿ ಕೊಳ್ಳುವುದು ಲೌಕಿಕ ವ್ಯವಹಾರಗಳಿಗೆ ಸಂಬಂಧಿಸಿದ ಕೆಲಸ-ಕಾರ್ಯಗಳಲ್ಲೇ ಆಗಿರಲಿ ಅಥವಾ ಆಧ್ಯಾತ್ಮಿಕ ಅಭ್ಯಾಸಗಳಿಗೆ ಒಡ್ಡಿಕೊಂಡು ಸಾಧನೆ ಮಾಡುವುದೇ ಆಗಿರಲಿ, ಅದಕ್ಕಾಗಿ ನಿಮ್ಮ ದೇಹವನ್ನು ಸದೃಢವಾಗಿ ಮತ್ತು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಮೊದಲ ಅವಶ್ಯಕತೆ ಎಂಬುದನ್ನು ಮರೆಯಬೇಡಿ. ನಡೀರಿ, ಅಮ್ಮ ಕಾಯ್ತಾ ಇರ‍್ತಾರೆ..." ಎನ್ನುತ್ತಾ ಎಲ್ಲರನ್ನೂ ಹಿತ್ತಲಿಗೆ ಕರೆದೊಯ್ದರು.
ಇದನ್ನೂ ಓದಿ: Yagati Raghu Naadig Column: ಸರ್ವಸಂಗ ಪರಿತ್ಯಾಗಿಯೇ ವ್ಯಾಮೋಹಕ್ಕೆ ಹಾಸಿಗೆ ಹಿಡಿದಾಗ...
ಅಷ್ಟು ಹೊತ್ತಿಗಾಗಲೇ, ಗುರುಮಾತೆ ಅಲ್ಲಿ ಸ್ವತಃ ಜಮಖಾನವನ್ನು ಹಾಸಿ, ಅಲಸಂದೆಕಾಳು- ಬದನೇ ಕಾಯಿ ಹುಳಿಯಲ್ಲಿ ಕಲಸಿದ ಅನ್ನವನ್ನು ಹಿತ್ತಾಳೆ ಕೊಳದಪ್ಪಲೆಯಲ್ಲಿ ತುಂಬಿಸಿಕೊಂಡು ಕಾಯು ತ್ತಿದ್ದರು. ಅವಧೂತರ ಸಮೇತ ಎಲ್ಲರೂ ಗುರುಮಾತೆಗೆ ನಮಸ್ಕರಿಸಿ, ಅವರ ಎದುರು ಅರ್ಧಚಂದ್ರಾ ಕಾರದಲ್ಲಿ ಕುಳಿತರು. ಸಾಕ್ಷಾತ್ ಅನ್ನಪೂರ್ಣೆಯಂತೆಯೇ ಕಂಗೊಳಿಸುತ್ತಿದ್ದ ಗುರುಮಾತೆ ಅವರೆಲ್ಲ ರಿಗೂ ಕೈತುತ್ತು ಹಾಕಲು ಸನ್ನದ್ಧರಾದರು, ಆ ಕೈಂಕರ್ಯದ ಒಂದು ಭಾಗವಾಗಿ ಅವಧೂತರು ಸೇರಿದಂತೆ ಎಲ್ಲ ಶಿಷ್ಯರ ಎದುರಿನಲ್ಲೂ ಒಂದೊಂದು ಪುಟ್ಟ ಬೋಗುಣಿಯನ್ನು ಇಟ್ಟುಕೊಂಡು ಬಂದರು.
‘ಕೈತುತ್ತು ಹಾಕಿಸಿಕೊಳ್ಳುವಾಗ ಈ ಬೋಗುಣಿಯ ಹಂಗೇಕೆ?’ ಎಂಬ ಪ್ರಶ್ನೆ ಶಿಷ್ಯರ ಮನದಲ್ಲಿ ಗಿರಕಿ ಹೊಡೆಯುತ್ತಿರುವಾಗಲೇ, ಬಿದಿರಿನ ಹೆಡಿಗೆಯಲ್ಲಿ ತಂದಿಟ್ಟುಕೊಂಡಿದ್ದ ಪುಟ್ಟಪುಟ್ಟ ಈರುಳ್ಳಿ ಪಕೋಡಗಳನ್ನು ಆ ಬೋಗುಣಿಗೆ ತುಂಬಿಸುತ್ತಾ ಬಂದರು ಗುರುಮಾತೆ. ಅಮ್ಮ ಹಾಕಿದ ಕೈತುತ್ತಿನ ಮೇಲೆ ಆ ಪಕೋಡದ ಚೂರುಗಳನ್ನು ಇರಿಸಿಕೊಂಡು ಸವಿಯುವುದು ಅವಧೂತರ ವೈಖರಿ ಯಾಗಿತ್ತು. ಅದರಲ್ಲೂ, ಅಲಸಂದೆಕಾಳು- ಬದನೇಕಾಯಿಯ ಹುಳಿ ಮಾಡಿದಾಗಲಂತೂ ಈರುಳ್ಳಿ ಪಕೋಡವೂ ಸಿದ್ಧವಾಗುವುದು By default ಎನ್ನುವ ರೀತಿಯ ಪರಿಪಾಠವಾಗಿತ್ತು ಅವಧೂತರ ಮನೆಯಲ್ಲಿ!
“ಸೊಗಸಾಗಿ ಚಪ್ಪರಿಸಿಕೊಂಡು ತಿನ್ನಿ ಸ್ವಾಮೀ..." ಎನ್ನುತ್ತಾ ಶಿಷ್ಯರನ್ನು ಹುರಿದುಂಬಿಸಿದ ಅವಧೂತರು ನಂತರ ‘ಗುರುಮಾತೆ’ ಯನ್ನುದ್ದೇಶಿಸಿ, “ಅಮ್ಮಾ, ವ್ಯಕ್ತಿಯೊಬ್ಬನ ವ್ಯಕ್ತಿತ್ವವು ಸಂಸ್ಕಾರಭರಿತವಾಗಿ ನಿರ್ಮಾಣವಾಗುವಲ್ಲಿ ಆತ ಉಣ್ಣುವ ಆಹಾರದ ಪಾತ್ರವೇನು?" ಎಂದು ಪ್ರಶ್ನಿಸಿದರು. ಇದರ ಉತ್ತರ ಸ್ವತಃ ತಮಗೇ ಗೊತ್ತಿದ್ದರೂ, ‘ಶಂಖದ ಬಾಯಿಂದ ಬಂದರೆ ಮಾತ್ರವೇ ತೀರ್ಥ’ ಎಂಬ ಗ್ರಹಿಕೆಯಲ್ಲಿ ಅವಧೂತರು, ಸಾಕ್ಷಾತ್ ಅನ್ನಪೂರ್ಣೆಯೇ ಆಗಿದ್ದ ತಮ್ಮ ತಾಯಿ ಯನ್ನು ಹೀಗೆ ಪ್ರಶ್ನಿಸಿದ್ದರು.
ಮಗನೆಡೆಗೆ ಒಮ್ಮೆ ಹೆಮ್ಮೆಯಿಂದ ನೋಡಿ ನಕ್ಕ ಗುರುಮಾತೆ, “ನಾವು ಉಣ್ಣುವ ಆಹಾರವೇ ನಮ್ಮ ವ್ಯಕ್ತಿತ್ವದ ಮೂಲದ್ರವ್ಯ ಕಣ್ರಪ್ಪಾ. ಎಲ್ಲಿಂದಲೋ ಲಪಟಾಯಿಸಿ ತಂದ ಅಥವಾ ಪರರನ್ನು ಪೀಡಿಸಿ ನೋವುಂಟುಮಾಡಿ, ಅವರಿಂದ ಬಲವಂತದಿಂದ ಕಿತ್ತುಕೊಂಡ ಹಣದಿಂದ ಆಹಾರ ಧಾನ್ಯಗಳನ್ನು ಸಂಗ್ರಹಿಸುವ ಬದಲಿಗೆ, ಬೆವರು ಸುರಿಸಿ ಪ್ರಾಮಾಣಿಕ ದುಡಿಮೆಗೆ ಒಡ್ಡಿಕೊಂಡು ಅದರಿಂದ ದಕ್ಕಿದ ಹಣದಿಂದಲೇ ಅದನ್ನು ಸಂಗ್ರಹಿಸುವಂತಾಗಬೇಕು. ಹಾಗೆ ಉಂಡ ಅನ್ನವು ಮೈಗೆ ಹತ್ತುತ್ತದೆ, ಸಂಸ್ಕಾರಭರಿತ ವ್ಯಕ್ತಿತ್ವವನ್ನು ರೂಪಿಸುತ್ತದೆ, ಹಾಗೂ ಆ ವ್ಯಕ್ತಿತ್ವದ ಸುತ್ತಲೂ ಒಂದು ಆಹ್ಲಾದಕರ ಪ್ರಭಾವಳಿಯನ್ನು ರೂಪಿಸುತ್ತದೆ. ಬೇಕಿದ್ದರೆ ಒಮ್ಮೆ ಪರೀಕ್ಷೆ ಮಾಡಿ ನೋಡಿ, ಸನ್ಮಾರ್ಗದಲ್ಲಿ ದುಡಿಮೆ ಮಾಡಿ ಅನ್ನವನ್ನು ಸಂಪಾದಿಸಿ ಉಂಡವರು ಒಮ್ಮೆ ಎದುರಾದರೆ, ‘ಇವರ ಸಂಗದಲ್ಲಿ ಇನ್ನಷ್ಟು ಹೊತ್ತು ಇರೋಣ, ಇವರ ಮಾತಿಗೆ ಕಿವಿಯಾ ಗೋಣ’ ಎಂಬ ಹಿತವಾದ ಬಯಕೆ ಪರರಲ್ಲಿ ಮೂಡುತ್ತದೆ. ಜತೆಗೆ, ನ್ಯಾಯಮಾರ್ಗದಲ್ಲಿ ಧಾನ್ಯವನ್ನು ಸಂಪಾದಿಸುವುದು ಎಷ್ಟು ಮುಖ್ಯವೋ, ಅದನ್ನು ಬಳಸಿ ಆಹಾರ ತಯಾರಿಸುವಾಗಲೂ ಸಂಬಂಧಪಟ್ಟವರು ಶಾಂತಚಿತ್ತತೆಯನ್ನು ಕಾಯ್ದು ಕೊಳ್ಳಬೇಕು. ಮನದಲ್ಲಿ ಹತಾಶೆ, ದುರಾಲೋಚನೆ, ದ್ವೇಷ, ಅಸೂಯೆ, ಕ್ರೋಧ, ಅಸಹಜ ವಾಂಛೆ ಇತ್ಯಾದಿ ಗಳನ್ನು ತುಂಬಿಕೊಂಡು ಆಹಾರ ಪದಾರ್ಥವನ್ನು ತಯಾರಿಸಿದರೆ, ಅದನ್ನು ಉಣ್ಣುವವರ ಮೇಲೂ ನಕಾರಾತ್ಮಕ ಪರಿಣಾಮವಾಗುತ್ತದೆ. ಅವರ ವ್ಯಕ್ತಿತ್ವದಲ್ಲಿ ಕರಾಳ ಛಾಯೆ ತುಂಬಿಕೊಳ್ಳು ತ್ತದೆ. ಈ ಬಗ್ಗೆ ಮುಂದೆಂದಾದರೂ ವಿವರವಾಗಿ ತಿಳಿಸುವೆ, ಈಗ ಹೊಟ್ಟೆತುಂಬಾ ಊಟ ಮಾಡಿ" ಎಂದರು.
ಗುರುಮಾತೆಯ ಮಡಿಲಲ್ಲಿ, ಅವರ ನಿರಂತರ ಪಾಲನೆ-ಪೋಷಣೆಯಲ್ಲಿ ಬೆಳೆದ ಅವಧೂತರು, ಮಹಾನ್ ತೇಜೋವಂತರಾಗಿದ್ದು ಮತ್ತು ಅಸೀಮ ಸಾಧಕರಾಗಿದ್ದು ಹೇಗೆ? ಇಷ್ಟಾಗಿಯೂ ಪ್ರಚಾರ-ಪ್ರಸಿದ್ಧಿಗೆ ಹಂಬಲಿಸದ ಸರಳತನ ಅವರಲ್ಲಿ ಮೈಗೂಡಿಕೊಂಡಿದ್ದು ಹೇಗೆ? ಎಂಬ ಶಿಷ್ಯರ ‘ಮೌನ’ ಪ್ರಶ್ನೆಗಳಿಗೆ ಸ್ಥಳದಲ್ಲೇ ‘ವಾಚ್ಯ’ ಉತ್ತರ ಸಿಕ್ಕಿತ್ತು. ಇಂಥ ಮಹಾನುಭಾವರಿಂದ ‘ಅನ್ನ-ಅರಿವು-ಆಶ್ರಯ’ ದಕ್ಕಿಸಿಕೊಂಡಿರುವ ತಾವೇ ಭಾಗ್ಯವಂತರು ಎಂಬ ಧನ್ಯತಾಭಾವ ಶಿಷ್ಯರಲ್ಲಿ ಕೆನೆಗಟ್ಟಿ, ಎಲ್ಲರೂ ಗುರುಮಾತೆಗೂ, ಅವಧೂತರಿಗೂ ಮನದಲ್ಲೇ ಸಾವಿರ ನಮನ ಸಲ್ಲಿಸಿದರು.
ಕೈತುತ್ತಿನ ಸಮಾರಾಧನೆ ಮುಗಿದು ಕೈತೊಳೆದು ಕೊಂಡ ನಂತರ ಶಿಷ್ಯರೆಲ್ಲರೂ ಪಾತ್ರೆಗಳನ್ನು ತೆರವುಗೊಳಿಸಲು ಗುರುಮಾತೆಗೆ ನೆರವಾದರು. ನಂತರ ಹಿತ್ತಲನ್ನು ಬಿಟ್ಟು ಕದಲದೆ, ಜಮಖಾನ ವನ್ನು ಮತ್ತೊಮ್ಮೆ ಕೊಡವಿ ಕೂತರು. ಅದು ಶಾರದೆಯ ಮುಂದುವರಿದ ಕಥನವನ್ನು ಕೇಳುವು ದಕ್ಕೆ ಅವರು ಮಾರ್ಪಡಿಸಿಕೊಂಡ ಸಜ್ಜಿಕೆ!
ಕೈತೊಳೆದುಕೊಂಡು ಬಂದ ಅವಧೂತರು, ಶಿಷ್ಯರ ನಿರೀಕ್ಷೆಯಂತೆಯೇ ಜಮಖಾನದ ಮಧ್ಯೆ ಕುಳಿತು, “ಮುಂದ..?!" ಎಂದರು ತುಂಟದನಿಯಲ್ಲಿ. ಅಧ್ಯಾತ್ಮ ಸಾಧನೆ ಸೇರಿದಂತೆ ಗಂಭೀರ ವಿಷಯಗಳ ಕುರಿತು ಮಾತನಾಡುವಾಗ, ಆಗೊಮ್ಮೆ ಈಗೊಮ್ಮೆ ಹೀಗೆ ತುಂಟತನ ಮೆರೆದು, ತಮಾಷೆ ಮಾಡಿ, ‘ಗುರುತ್ವ’ ತುಂಬಿದ ವಾತಾವರಣವನ್ನು ಕೊಂಚ ‘ಲಘು’ವಾಗಿಸುವುದು ಅವಧೂತರ ವ್ಯಕ್ತಿತ್ವದ ಅವಿಭಾಜ್ಯ ವೈಶಿಷ್ಟ್ಯವಾಗಿತ್ತು. ಏನು ಬೇಕೆಂದು ಗೊತ್ತಿದ್ದರೂ ಅವಧೂತರು ಹೀಗೆ ಗೋಳಾಡಿಸುತ್ತಿದ್ದಾರಲ್ಲಾ ಎಂಬ ಭಾವದಲ್ಲಿ ಶಿಷ್ಯರು, “ಕಥೆ ಮುಂದುವರಿಸಿ ಗುರುಗಳೇ" ಎಂದು ಗೋಗರೆದರು. ಅವಧೂತರು ಇನ್ನೇನು ಗಂಟಲು ಸರಿ ಮಾಡಿಕೊಳ್ಳುತ್ತಿದ್ದಾಗ ಹೊಸ ಶಿಷ್ಯರು, “ಗುರುಗಳೇ, ಕೈತುತ್ತು ಹಾಕಿಸಿಕೊಳ್ಳುವಾಗ, ವ್ಯಕ್ತಿತ್ವದ ನಿರ್ಮಾಣದಲ್ಲಿ ನಾವು ಸೇವಿಸುವ ಆಹಾರವು ವಹಿಸುವ ಪಾತ್ರದ ಕುರಿತು ನೀವು ಗುರುಮಾತೆಯಿಂದ ಹೇಳಿಸಿದ್ದು ತುಂಬಾ ಖುಷಿಯಾಯಿತು..." ಎಂದು ಪೀಠಿಕೆ ಹಾಕಿದರು.
ಈ ಮಾತಿಗೆ ಅವಧೂತರು, “ಹೌದು ಕಣ್ರಯ್ಯಾ, ‘ಜೈಸಾ ಅನ್ನ್, ವೈಸಾ ಮನ್’ ಎಂಬ ಮಾತನ್ನು ನೀವು ಕೇಳಿದ್ದೀರಲ್ಲವೇ? ನಮ್ಮ ಅಮ್ಮ ಕೊನೆಯಲ್ಲಿ ಏನು ಹೇಳಿದರು ನೋಡಿ? ಮನದಲ್ಲಿ ಹತಾಶೆ, ದುರಾಲೋಚನೆ, ದ್ವೇಷ, ಅಸೂಯೆ, ಕ್ರೋಧ, ಅಸಹಜ ವಾಂಛೆಗಳನ್ನು ತುಂಬಿಕೊಂಡು ಆಹಾರ ಪದಾರ್ಥವನ್ನು ತಯಾರಿಸಿದರೆ, ಅದನ್ನು ಉಣ್ಣುವವರ ಮೇಲೂ ನಕಾರಾತ್ಮಕ ಪರಿಣಾಮವಾಗಿ ವ್ಯಕ್ತಿತ್ವದಲ್ಲಿ ಕರಾಳ ಛಾಯೆ ತುಂಬಿಕೊಳ್ಳುತ್ತದೆ ಅಂತ, ಅಲ್ಲವೇ? ಈ ಸತ್ಯವನ್ನು ನಿಮಗೆ ಮನವರಿಕೆ ಮಾಡಿಸಲೆಂದೇ ಅಮ್ಮನನ್ನು ಪ್ರಶ್ನಿಸಿ ಮಾತಾಡುವಂತೆ ಮಾಡಿದೆ. ಆದರೆ, ಈ ಸರಳ ಸತ್ಯವನ್ನು ಅರಿಯದ ಸಂಸ್ಥೆಯ ಮ್ಯಾನೇಜರ್ ಕೆಲಕಾಲ ತಮ್ಮ ಕರ್ತವ್ಯಪ್ರಜ್ಞೆಯನ್ನು ಮರೆತು, ಸ್ವಾರ್ಥಕ್ಕೆ ಸಿಲುಕಿ, ತಮ್ಮ ಕಡೆಯವನಾದ ‘ನಳಪಾಕ’ನನ್ನು ವಿದ್ಯಾರ್ಥಿ ನಿಲಯದಲ್ಲಿ ಅಡುಗೆ ಭಟ್ಟನ ಕೆಲಸಕ್ಕೆ ಸೇರಿಸಿ ಬಿಟ್ಟರು. ಮೇಲೆ ಉಲ್ಲೇಖಿಸಿದ ಹತಾಶೆ, ದುರಾಲೋಚನೆ, ದ್ವೇಷ, ಅಸೂಯೆ, ಕ್ರೋಧ, ಅಸಹಜ ವಾಂಛೆಯಂಥ ಅವಗುಣಗಳ ಮೂಟೆಯೇ ಆಗಿದ್ದ ಆ ‘ನಳಪಾಕ’ನು ವಿದ್ಯಾರ್ಥಿ ನಿಲಯದಲ್ಲಿ ಅಡುಗೆಗೆ ಶುರುವಿಟ್ಟುಕೊಂಡಿದ್ದೇ ಬಂತು, ಸಂಸ್ಥೆಯ ಒಂದಿಡೀ ಆವರಣವನ್ನು ನಕಾರಾತ್ಮಕ ಛಾಯೆ ಆವರಿಸುವುದಕ್ಕೆ ಅದು ನಾಂದಿ ಹಾಡಿತು..." ಎಂದು ಹೇಳಿ ನಿಡಿದಾದ ಉಸಿರು ಬಿಟ್ಟರು.
“ಅಂದರೆ, ಕೆಲಹೊತ್ತಿನ ಮುಂಚೆ ನೀವು ಹೇಳಿದಂತೆ ಅನಾಚಾರದ ಸರಣಿ ಶುರುವಾಗುವುದಕ್ಕೆ ‘ನಳಪಾಕ’ನೇ ಮೂಲಕಾರಣವೇ?" ಎಂದು ಶಿಷ್ಯರೊಬ್ಬರು ಪ್ರಶ್ನಿಸಿದಾಗ, ಹೌದು ಎಂಬಂತೆ ಗೋಣು ಹಾಕಿದ ಅವಧೂತರು, “ಶಿವ ಶಿವಾ..." ಎನ್ನುತ್ತಾ ಅರೆಕ್ಷಣ ಕಣ್ಣು ಮುಚ್ಚಿಕೊಂಡರು...
ಶಿಷ್ಯರ ಹಣೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿತು...
(ಮುಂದುವರಿಯುವುದು)