Love Jihad: ಮುಸ್ಲಿಂ ಯುವತಿಯಿಂದ ಹಿಂದೂ ಗಂಡನ ಮತಾಂತರ, ಲವ್ ಜಿಹಾದ್ ನಡೆಸಿದ ವಿಚಿತ್ರ ಆರೋಪ
Love Jihad: ಮದುವೆ ವೇಳೆ ತನ್ನ ಹೆಸರು ಬದಲಾವಣೆ ಮಾಡಿದ್ದಾರೆ ಎಂದು ವಿಶಾಲ್ ಕುಮಾರ್ ಆರೋಪಿಸಿದ್ದಾನೆ. ಮುಸ್ಲಿಂ ಸಂಪ್ರದಾಯದಂತೆ ಮದುವೆ ಆದ ವಿಡಿಯೋ ಕೂಡ ವೈರಲ್ ಆಗಿದೆ. ಈ ವೇಳೆ ಜಮಾತ್‌ಗೆ ಹೋಗುವಂತೆ ತಹಸಿನ್ ಬಾನು ಮತ್ತು ಆಕೆಯ ತಾಯಿ ಬೇಗಂ ಈತನಿಗೆ ಒತ್ತಾಯ ಮಾಡಿದ್ದಾರೆ ಎಂದು ವಿಶಾಲ್ ಕುಮಾರ್ ಗಂಭೀರವಾದ ಆರೋಪ ಮಾಡಿದ್ದಾನೆ.


ಗದಗ : ಗದಗದಲ್ಲಿ (Gadag news) ಒಂದು ವಿಚಿತ್ರ ಲವ್ ಜಿಹಾದ್ (love jihad) ಪ್ರಕರಣ ಘಟಿಸಿದೆ. ಮುಸ್ಲಿಂ ಯುವಕ ಹಿಂದೂ ಯುವತಿಯರನ್ನು ಪ್ರೀತಿಸಿ, ಓಡಿ ಹೋಗಿ ಮದುವೆ ಆಗುವುದನ್ನು ಲವ್ ಜಿಹಾದ್ ಎನ್ನುವ ರೂಢಿ ಬಂದಿದೆ. ಆದರೆ ಗದಗದಲ್ಲಿ ನಡೆದ ವಿಚಿತ್ರ ಘಟನೆಯಲ್ಲಿ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ಮದುವೆಯಾಗಿ ಆತನನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸುವ (conversion) ಯತ್ನ ಮಾಡಿದ್ದಾಳೆ. ಈ ಕುರಿತು ವರನೇ ಆಕೆಯ ವಿರುದ್ಧ ಆರೋಪ ಮಾಡಿದ್ದಾನೆ. ಹಿಂದೂ ಸಂಘಟನೆಗಳು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ತಹಸಿನ್ ಹೊಸಮನಿ ಎಂಬ ಯುವತಿ ಜೊತೆಗೆ ವಿಶಾಲ್ ಕುಮಾರ್ ಎಂಬಾತ ಪ್ರೇಮ ವಿವಾಹ ಆಗಿದ್ದ. ಗದಗದ ಗಾಂಧಿನಗರದ ಸೆಟಲ್ಮೆಂಟ್ ಏರಿಯಾದ ನಿವಾಸಿಯಾಗಿರುವ ವಿಶಾಲ್ ಕುಮಾರ್, ತಹಿಸನ್ ಜೊತೆಗೆ ನವೆಂಬರ್ 24, 2024ರಂದು ರಿಜಿಸ್ಟರ್ ಮದುವೆಯಾಗಿದ್ದ. ರಿಜಿಸ್ಟರ್ಡ್ ಮದುವೆ ಬಳಿಕ, ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಲು ತಹಸೀನ್ ಒತ್ತಾಯಿಸಿದ್ದಾಳೆ. ಬಳಿಕ ಏಪ್ರಿಲ್ 25, 2025ರಂದು ಮುಸ್ಲಿಂ ಸಂಪ್ರದಾಯದಂತೆ ಮತ್ತೆ ಮದುವೆಯಾಗಿದ್ದಾರೆ.
ಮದುವೆ ವೇಳೆ ತನ್ನ ಹೆಸರು ಬದಲಾವಣೆ ಮಾಡಿದ್ದಾರೆ ಎಂದು ವಿಶಾಲ್ ಕುಮಾರ್ ಆರೋಪಿಸಿದ್ದಾನೆ. ಮುಸ್ಲಿಂ ಸಂಪ್ರದಾಯದಂತೆ ಮದುವೆ ಆದ ವಿಡಿಯೋ ಕೂಡ ವೈರಲ್ ಆಗಿದೆ. ಈ ವೇಳೆ ಜಮಾತ್‌ಗೆ ಹೋಗುವಂತೆ ತಹಸಿನ್ ಬಾನು ಮತ್ತು ಆಕೆಯ ತಾಯಿ ಬೇಗಂ ಈತನಿಗೆ ಒತ್ತಾಯ ಮಾಡಿದ್ದಾರೆ ಎಂದು ವಿಶಾಲ್ ಕುಮಾರ್ ಗಂಭೀರವಾದ ಆರೋಪ ಮಾಡಿದ್ದಾನೆ.
ಈ ಮೊದಲು, ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಒಪ್ಪಿಗೆ ನೀಡಿದ್ದ ತಹಸೀನ್ ಬಳಿಕ ಅದಕ್ಕೆ ನಿರಾಕರಿಸಿದ್ದಾಳೆ. ವಿಶಾಲ್ ಕುಮಾರ್ ತನ್ನ ಕೊರಮ ಸಮಾಜ ಬಿಟ್ಟು ಇಸ್ಲಾಂ ಧರ್ಮ ಸ್ವೀಕರಿಸಲು ತಹಸಿನ್ ಕುಟುಂಬ ಒತ್ತಾಯಿಸಿದೆ. ಇಸ್ಲಾಂಗೆ ಮತಾಂತರ ಆಗದಿದ್ರೆ ರೇಪ್ ಕೇಸ್ ಹಾಕುತ್ತೇನೆ ಎಂದು ಆಕೆ ಬೆದರಿಕೆ ಹಾಕಿದ್ದಾಳೆ ಎಂದು ವಿಶಾಲ್ ದೂರಿದ್ದಾನೆ. ಇಬ್ಬರ ವಿರುದ್ಧವೂ ಕಾನೂನು ಕ್ರಮಕ್ಕೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಬಲವಂತದ ಮತಾಂತರ ನಡೆದಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಗದಗ ಎಸ್ಪಿಗೆ ಹಿಂದೂ ಸಂಘಟನೆಗಳು ದೂರು ಸಲ್ಲಿಸಿವೆ.