Mahakumbh Mela Stampede: ಮಹಾ ಕುಂಭಮೇಳ ಕಾಲ್ತುಳಿತ ದುರಂತ; ಬೆಳಗಾವಿ ಮೂಲದ ತಾಯಿ-ಮಗಳು ಸೇರಿ ನಾಲ್ವರ ಸಾವು
Mahakumbh Mela Stampede: ಕುಂಭಮೇಳ ಕಾಲ್ತುಳಿತ ದುರ್ಘಟನೆಯಲ್ಲಿ ಬೆಳಗಾವಿ ಮೂಲದ ಹತ್ತಾರು ಜನ ಕಾಣೆಯಾಗಿದ್ದು, ಸದ್ಯ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.


ಬೆಳಗಾವಿ : ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ( Mahakumbh Mela Stampede) ಬೆಳಗಾವಿ ಮೂಲದ ನಾಲ್ವರು ಮೃತಪಟ್ಟಿದ್ದಾರೆ. ನಗರದ ವಡಗಾವಿ ನಿವಾಸಿಗಳಾದ ತಾಯಿ-ಮಗಳಾದ ಜ್ಯೋತಿ ಹತ್ತರವಾಠ (50) ಹಾಗೂ ಮೇಘಾ ಹತ್ತರವಾಠ, ಶೆಟ್ಟಿ ಗಲ್ಲಿಯ ಅರುಣ್ ಕೋರ್ಪಡೆ, ಶಿವಾಜಿನಗರ ನಿವಾಸಿ ಮಹಾದೇವಿ ಬಾವನೂರ ಮೃತ ದುರ್ದೈವಿಗಳು.
ಕುಂಭಮೇಳ ಕಾಲ್ತುಳಿತ ದುರ್ಘಟನೆಯಲ್ಲಿ ಬೆಳಗಾವಿ ಮೂಲದ ಹತ್ತಾರು ಜನ ಕಾಣೆಯಾಗಿದ್ದು, ಸದ್ಯ ಜಿಲ್ಲೆಯವರ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಮೌನಿ ಅಮಾವಾಸ್ಯೆ ಹಿನ್ನೆಲೆ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಕೋಟ್ಯಂತರ ಜನ ತೆರಳಿದ್ದಾರೆ. ಮುಂಜಾನೆ ನದಿಯಲ್ಲಿ ಸ್ನಾನ ಮಾಡುವಾಗ ಕಾಲ್ತುಳಿತ ಸಂಭವಿಸಿ ಹಲವರು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದಾರೆ. ಈ ಬಗ್ಗೆ ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ.
ಬೆಳಗಾವಿಯಿಂದ ಸುಮಾರ 60 ಜನ ಕುಂಭಮೇಳಕ್ಕೆ ತೆರಳಿದ್ದರು. ಸಾಯಿರಥ ಟ್ರಾವೆಲ್ಸ್ ಮೂಲಕ ಇವರೆಲ್ಲಾ 3 ದಿನದ ಹಿಂದೆ ಕುಂಭಮೇಳಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ, ಕಾಲ್ತುಳಿತದಲ್ಲಿ ತಾಯಿ-ಮಗಳಾದ ಜ್ಯೋತಿ ಹತ್ತರವಾಠ, ಮೇಘಾ ಹತ್ತರವಾಠ ಸೇರಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸುತ್ತಿದೆ.
ಈ ಸುದ್ದಿಯನ್ನೂ ಓದಿ | ಮಹಾಕುಂಭ ಮೇಳದಲ್ಲಿ ತಾರತಮ್ಯ? ವಿಐಪಿಗಳಿಗೆ ಸ್ಪೆಷಲ್ ಟ್ರೀಟ್‌ಮೆಂಟ್- ಭಕ್ತರ ಆಕ್ರೋಶ