ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Mahakumbh: ಕುಂಭಮೇಳದಲ್ಲಿ ಕಾಲ್ತುಳಿತ-12 ವರ್ಷಗಳ ಹಿಂದೆಯೂ ನಡೆದಿತ್ತು ಇಂತಹದ್ದೇ ದುರಂತ!

ಇಂದು(ಜ.29) ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯ ಪ್ರಯುಕ್ತ ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಸ್ನಾನ ಮಾಡಲು ಭಕ್ತಾದಿಗಳು ನೂಕು ನುಗ್ಗಲಿನೊಂದಿಗೆ ನದಿಯತ್ತ ಧಾವಿಸಿದ ಪರಿಣಾಮ 15 ಜನರು ಕಾಲ್ತುಳಿತಕ್ಕೊಳಗಾಗಿ ದಾರುಣವಾಗಿ ಮೃತಪಟ್ಟಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಮೌನಿ ಅಮಾವಾಸ್ಯೆಯಂದೇ ಕಾಲ್ತುಳಿತಕ್ಕೊಳಗಾಗಿ 36 ಭಕ್ತರು ದುರಂತವಾಗಿ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.

12 ವರ್ಷಗಳ ಹಿಂದೆಯೂ ಮೌನಿ ಅಮಾವಾಸ್ಯೆಯಂದು ನಡೆದಿತ್ತು ಘೋರ ದುರಂತ!

Mahakumbh

Profile Deekshith Nair Jan 29, 2025 6:29 PM

ಲಖನೌ: 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಅತಿದೊಡ್ಡ ಧಾರ್ಮಿಕ ಉತ್ಸವ ಮಹಾ ಕುಂಭಮೇಳ(Mahakumbh) ಪ್ರಯಾಗ್‌ರಾಜ್‌ನಲ್ಲಿ(Prayagraj) ನಡೆಯುತ್ತಿದೆ. ಇಂದು(ಜ.29) ಮೌನಿ ಅಮಾವಾಸ್ಯೆಯ(Mauni Amavasya) ಪ್ರಯುಕ್ತ ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಸ್ನಾನ ಮಾಡಲು ಭಕ್ತಾಧಿಗಳು ನೂಕುನುಗ್ಗಲಿನೊಂದಿಗೆ ನದಿಯತ್ತ ಧಾವಿಸಿದ ಪರಿಣಾಮ 15 ಜನರು ಕಾಲ್ತುಳಿತಕ್ಕೊಳಗಾಗಿ(Stampede) ದಾರುಣವಾಗಿ ಮೃತಪಟ್ಟಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಮೌನಿ ಅಮಾವಾಸ್ಯೆಯಂದೇ ಕಾಲ್ತುಳಿತಕ್ಕೆ ಒಳಗಾಗಿ 36 ಭಕ್ತರು ದುರಂತವಾಗಿ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.

ಹನ್ನೆರಡು ವರ್ಷಗಳ ಹಿಂದೆ ಇಂತಹದ್ದೇ ದುರಂತ

2013ರಲ್ಲಿ ಪ್ರಯಾಗ್‌ರಾಜ್‌ನಲ್ಲಿ(ಆಗಿನ ಅಲಹಾಬಾದ್) ನಡೆದ ಮಹಾ ಕುಂಭಮೇಳದಲ್ಲಿ ಮೂವತ್ತಕ್ಕೂ ಹೆಚ್ಚು ಭಕ್ತಾದಿಗಳು ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತಕ್ಕೊಳಗಾಗಿ ಮೃತಪಟ್ಟಿದ್ದರು. ಮೂರು ಕೋಟಿಗೂ ಹೆಚ್ಚು ಯಾತ್ರಾರ್ಥಿಗಳು ಹನ್ನೆರಡು ವರ್ಷಗಳ ಹಿಂದೆ ನಡೆದ ಕುಂಭಮೇಳದಲ್ಲಿ ಭಾಗವಹಿಸಿದ್ದರು. ಅಂದು ಕೂಡ ಮೌನಿ ಅಮಾವಾಸ್ಯೆಯಾಗಿತ್ತು.

2013 ರ ಕಾಲ್ತುಳಿತದಿಂದ ರಾಜ್ಯ ಸಚಿವ ಅಜಂ ಖಾನ್ ಅವರು ಕುಂಭಮೇಳ ಸಂಘಟನಾ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.ಈ ಘಟನೆಯು ಕುಂಭಮೇಳ ಪ್ರದೇಶದ ಹೊರಗೆ ನಡೆದಿದೆ ಎಂದು ಖಾನ್ ಸಮರ್ಥಿಸಿಕೊಂಡರೂ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.

112 ರೆಗ್ಯುಲರ್ ರೈಲುಗಳ ಜೊತೆಗೆ 69 ವಿಶೇಷ ರೈಲುಗಳು 2013 ರಲ್ಲಿ ಮೌನಿ ಅಮಾವಾಸ್ಯೆಯಂದು ಸಂಚರಿಸಿತ್ತು. 14,000 ಕ್ಕೂ ಹೆಚ್ಚು ಪೊಲೀಸರು, ಅರೆಸೇನಾ ಪಡೆಗಳು ಮತ್ತು ಕಮಾಂಡೋಗಳನ್ನು ನಿಯೋಜಿಸಲಾಗಿತ್ತು. ಜನರು ಕಿಕ್ಕಿರಿದು ಸೇರಿದ ಪರಿಣಾಮ ಗಾಯಾಳುಗಳನ್ನು ಸ್ಥಳಾಂತರಿಸಲು ಆಂಬ್ಯುಲೆನ್ಸ್‌ ಬರುವುದು ಎರಡು ಗಂಟೆಗಳಷ್ಟು ತಡವಾಗಿತ್ತು.



ಇಂದು ಕುಂಭಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 70 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಪವಿತ್ರ ಸ್ನಾನಕ್ಕಾಗಿ ಹತ್ತು ಕೋಟಿ ಭಕ್ತರು ಸೇರುವ ನಿರೀಕ್ಷೆಯಿದೆ. ಅಧಿಕಾರಿಗಳು ವಿಶೇಷ ರೈಲುಗಳು ಮತ್ತು ಬಸ್‌ಗಳ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಭದ್ರತೆ ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಹೆಚ್ಚಿಸಿದ್ದಾರೆ. ಜನವರಿ 13ರಂದು ಪ್ರಾರಂಭವಾದ ಮಹಾ ಕುಂಭಮೇಳದಲ್ಲಿ ಈವರೆಗೆ ಕೋಟ್ಯಂತರ ಭಕ್ತಾದಿಗಳು ಪಾಲ್ಗೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Mahakumbh Mela: ಮಹಾ ಕುಂಭಮೇಳಕ್ಕೆ ತೆರಳಿ ವಾಪಸ್ ಬರುತ್ತಿದ್ದ ವೇಳೆ ಅಪಘಾತ; ರಾಜ್ಯದ ಇಬ್ಬರ ದುರ್ಮರಣ

ಮೃತರ ಕುಟುಂಬಗಳಿಗೆ ಪ್ರಧಾನಿ ಮೋದಿ ಸಂತಾಪ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸಾಗುತ್ತಿರುವ ಮಹಾಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ ಸಂಭವಿಸಿ ಹಲವರು ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಪ್ರಯಾಗ್‌ರಾಜ್‌ ಮಹಾಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿರುವುದು ಅತ್ಯಂತ ದುಃಖಕರ. ಘಟನೆಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ನನ್ನ ಸಂತಾಪಗಳು. ಘಟನೆಯಲ್ಲಿ ಗಾಯಗೊಂಡಿರುವವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮೋದಿ ತಮ್ಮ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.



ಘಟನಾ ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸುವುದರ ಜತೆಗೆ ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡುತ್ತಿದೆ. ನಾನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿದ್ದೇನೆ. ಜತೆಗೆ, ರಾಜ್ಯ ಸರ್ಕಾರದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ’ ಎಂದು ಮೋದಿ ತಿಳಿಸಿದ್ದಾರೆ.