KN Rajanna: ವಯಸ್ಸಾಯ್ತು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಕೆಎನ್ ರಾಜಣ್ಣ
ಬೆಂಗಳೂರು ಮಳೆ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಅವರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ರಾಜಣ್ಣ (KN Rajanna) ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಎನ್ ರಾಜಣ್ಣ

ಮೈಸೂರು: ಮುಂದಿನ ಚುನಾವಣೆ (Election) ವೇಳೆಗೆ ನನಗೆ 78 ವರ್ಷ ವಯಸ್ಸಾಗುತ್ತದೆ. ಹೀಗಾಗಿ ಚುನಾವಣೆ ರಾಜಕಾರಣಕ್ಕೆ ಗುಡ್ ಬೈ ಹೇಳುತ್ತೇನೆ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಹೇಳಿದ್ದಾರೆ. ಮೈಸೂರಿನಲ್ಲಿ (Mysuru news) ಮಾತನಾಡಿದ ಅವರು, ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ. ಒಂದು ವೇಳೆ ಸ್ಪರ್ಧಿಸಿ ಗೆದ್ದರೂ ಜನರ ಸೇವೆ ಮಾಡುವುದು ಕಷ್ಟ. ಆರೋಗ್ಯದ ದೃಷ್ಟಿಯಿಂದ ಅದು ಕಷ್ಟಸಾಧ್ಯ. ಹಾಗಾಗಿ ಚುನಾವಣೆಗೆ ಸ್ಪರ್ಧಿಸಲ್ಲ. ಆದರೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ರಾಜಣ್ಣ ನಡುವಣ ಮುಸುಕಿನ ಗುದ್ದಾಟದ ಕೆಲವೇ ದಿನಗಳ ನಂತರ ಸಹಕಾರ ಸಚಿವರು ಇಂಥದ್ದೊಂದು ನಿರ್ಧಾರ ಪ್ರಕಟಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಧನಾ ಸಮಾವೇಶವನ್ನು ಬಿಜೆಪಿ ನಾಯಕರು ಟೀಕಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷವಾಗಿ ಟೀಕೆ ಮಾಡಬೇಕೆಂದು ಅವರು ಟೀಕಿಸುತ್ತಾರೆ. ಬಿಜೆಪಿಗರ ಟೀಕೆಗಳಿಗೆ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ ಎಂದರು.
ಮೈಸೂರು ಅಂದರೆ ನನಗೆ ಬಹಳ ಇಷ್ಟ. ಮೈಸೂರು ವಿವಿಯಲ್ಲೇ ನಾನು ವ್ಯಾಸಂಗ ಮಾಡಿದ್ದೇನೆ. ಇಲ್ಲೇ ಗಣಿತದಲ್ಲಿ ಮಾಸ್ಟರ್ಸ್ ಮಾಡಿದ್ದೇನೆ. ಆಗ ವಿದ್ಯಾರ್ಥಿ ನಾಯಕನಾಗಿದ್ದೆ ಎಂದು ರಾಜಣ್ಣ ನೆನಪಿಸಿಕೊಂಡರು. ಮೈಸೂರಿನ ವಾತಾವರಣ ಅಹ್ಲಾದಕಾರವಾಗಿದೆ. ಇಲ್ಲಿನದ್ದು ಬಹಳ ಉತ್ತಮ ವಾತಾವರಣ. ಮೈಸೂರಿಗೆ ಅದರದ್ದೇ ಆದ ಗೌರವ ಹಾಗೂ ಇತಿಹಾಸ ಇದೆ. ಮೈಸೂರು ನನಗೆ ತುಂಬಾ ಇಷ್ಟವಾದ ನಗರ ಎಂದು ರಾಜಣ್ಣ ಹೇಳಿದರು.
ಬೆಂಗಳೂರು ಮಳೆ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಅವರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಜಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರು ನಗರದಲ್ಲಿ ಭಾರಿ ಮಳೆಯಿಂದ ಹಲವೆಡೆ ಹಾನಿಯಾಗಿರುವುದು ನಮ್ಮ ಸ್ವಯಂಕೃತ ಅಪರಾಧದ ಪ್ರತಿಫಲ. ಕೆರೆ, ಕಾಲುವೆ, ಚರಂಡಿ ಒತ್ತುವರಿಯಿಂದ ಈ ಪರಿಸ್ಥಿತಿ ಬಂದಿದೆ. ನೀರು ಹೇಗೆ ಹರಿಯಬೇಕು ಎಂದು ನಾವು ಹೇಳಲು ಸಾಧ್ಯವಿಲ್ಲ. ಅದಕ್ಕೆ ಅದರ ದಾರಿ ಗೊತ್ತಿದೆ ಎಂದು ರಾಜಣ್ಣ ಹೇಳಿದರು.
ಚರಂಡಿಗಳು, ಕಾಲುವೆಗಳನ್ನು ಮುಚ್ಚಿದ ಪರಿಣಾಮ ಈ ರೀತಿ ಅಗಿದೆ. ಸಾಧನಾ ಸಮಾವೇಶ ಮುಗಿದ ನಂತರ ಎಲ್ಲರೂ ಸೇರಿ ಪರಿಶೀಲನೆ ನಡೆಸಲಿದ್ದೇವೆ. ಈ ಬಗ್ಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ರಾಜಕಾಲುವೆ ಒತ್ತುವರಿ ತೆರವು ಮಾಡಲಾಗುವುದು. ಮಳೆ ಬಂದಾಗ ಮಾತ್ರವಲ್ಲ ಎಲ್ಲಾ ಸಮಯದಲ್ಲೂ ಒತ್ತುವರಿ ತೆರವು ಮಾಡುತ್ತೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: Honey Trap Case: ಹೀನ ಕೃತ್ಯ ಮಾಡುವವರು ರಾಜಕೀಯದಲ್ಲಿ ಇರಬಾರದು: ಸಚಿವ ಕೆ.ಎನ್. ರಾಜಣ್ಣ