ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

NZ vs SA: ದಕ್ಷಿಣ ಆಫ್ರಿಕಾವನ್ನು ಮಣಿಸಿ ಫೈನಲ್‌ಗೆ ಪ್ರವೇಶಿಸಿದ ನ್ಯೂಜಿಲೆಂಡ್‌!

SA vs NZ Match Highlights: ರಚಿನ್‌ ರವೀಂದ್ರ ಹಾಗೂ ಕೇನ್‌ ವಿಲಿಯಮ್ಸನ್‌ ಶತಕಗಳ ಬಲದಿಂದ ನ್ಯೂಜಿಲೆಂಡ್‌ ತಂಡ, ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ 50 ರನ್‌ಗಳ ಗೆಲುವು ಪಡೆದಿದೆ. ಆ ಮೂಲಕ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ಗೆ ಪ್ರವೇಶ ಪಡೆದಿದೆ. ಮಾರ್ಚ್‌ 9 ರಂದು ದುಬೈನಲ್ಲಿ ಭಾರತದ ವಿರುದ್ಧ ಫೈನಲ್‌ನಲ್ಲಿ ಕಿವೀಸ್‌ನಲ್ಲಿ ಸೆಣಸಲಿದೆ.

ದಕ್ಷಿಣ ಆಫ್ರಿಕಾ ವಿರುದ್ದ ಗೆದ್ದು ಫೈನಲ್‌ಗೇರಿದ ನ್ಯೂಜಿಲೆಂಡ್‌!

ದಕ್ಷಿಣ ಆಫ್ರಿಕಾ ವಿರುದ್ದ ಗೆಲುವು ಪಡೆದು ಫೈನಲ್‌ಗೆ ಪ್ರವೇಶಿಸಿದ ನ್ಯೂಜಿಲೆಂಡ್‌.

Profile Ramesh Kote Mar 5, 2025 10:51 PM

ಲಾಹೋರ್‌: ರಚಿನ್‌ ರವೀಂದ್ರ (108 ರನ್‌) ಹಾಗೂ ಕೇನ್‌ ವಿಲಿಯಮ್ಸನ್‌ (102 ರನ್‌) ಅವರ ಶತಕಗಳ ಬಲದಿಂದ ನ್ಯೂಜಿಲೆಂಡ್‌ ತಂಡ, ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ 50 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್‌ಗೆ ಮಿಚೆಲ್‌ ಸ್ಯಾಂಟ್ನರ್‌ ನಾಯಕತ್ವದ ಕಿವೀಸ್‌ ಪ್ರವೇಶ ಮಾಡಿದೆ. ಮಾರ್ಚ್‌ 9 ರಂದು ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ ಹಣಾಹಣಿಯಲ್ಲಿ ಭಾರತ ತಂಡದ ವಿರುದ್ಧ ನ್ಯೂಜಿಲೆಂಡ್‌ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದ ರಚಿನ್‌ ರವೀಂದ್ರ ಭರ್ಜರಿ ಶತಕ ಸಿಡಿಸಿ ಕಿವೀಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ನ್ಯೂಜಿಲೆಂಡ್‌ ತಂಡ, ರಚಿನ್‌ ರವೀಂದ್ರ ಹಾಗೂ ಕೇನ್‌ ವಿಲಿಯಮ್ಸನ್‌ ಶತಕಗಳ ನೆರವಿನಿಂದ 50 ಓವರ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು 362 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ 363 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಬಳಿಕ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ, ಡೇವಿಡ್‌ ಮಿಲ್ಲರ್‌ (100*) ಶತಕದ ಹೊರತಾಗಿಯೂ ಕಿವೀಸ್‌ ಶಿಸ್ತುಬದ್ದ ಬೌಲಿಂಗ್‌ ದಾಳಿಗೆ ನಲುಗಿ 50 ಓವರ್‌ಗಳನ್ನು ಮುಗಿಸಿದರೂ 9 ವಿಕೆಟ್‌ ನಷ್ಟಕ್ಕೆ 312 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಹರಿಣ ಪಡೆ 50 ರನ್‌ಗಳಿಂದ ಸೋಲು ಅನುಭವಿಸಿತು.

Champions Trophy: 19000 ರನ್‌ ಪೂರ್ಣಗೊಳಿಸಿ ವಿಶೇಷ ದಾಖಲೆ ಬರೆದ ಕೇನ್‌ ವಿಲಿಯಮ್ಸನ್‌!

ಡೇವಿಡ್‌ ಮಿಲ್ಲರ್‌ ಶತಕ ವ್ಯರ್ಥ

ಬೃಹತ್‌ ಮೊತ್ತದ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಪರ ಗಮನ ಸೆಳೆದಿದ್ದು ಡೇವಿಡ್‌ ಮಿಲ್ಲರ್‌. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ತೆಂಬಾ ಬವೂಮ (56 ರನ್‌) ಹಾಗೂ ರಾಸಿ ವ್ಯಾನ್‌ ಡೆರ್‌ ಡುಸೆನ್‌ (69 ರನ್‌) ಅವರು ಅರ್ಧಶತಕಗಳನ್ನು ಸಿಡಿಸಿ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟಿದ್ದರು. ಏಡೆನ್‌ ಮಾರ್ಕ್ರಮ್‌ 31ರನ್‌ ಗಳಿಸಿ ಬೇಗ ಔಟ್‌ ಆದರು. ಕೇವಲ ಮೂರು ರನ್‌ ಗಳಿಸಿ ಹೆನ್ರಿಚ್‌ ಕ್ಲಾಸೆನ್‌ ನಿರಾಶೆ ಮೂಡಿಸಿದರು.



ಆದರೆ, ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಡೇವಿಡ್‌ ಮಿಲ್ಲರ್‌ಗೆ ಮತ್ತೊಂದು ತುದಿಯಿಂದ ಯಾವುದೇ ಬ್ಯಾಟ್ಸ್‌ಮನ್‌ ಸರಿಯಾಗಿ ಸಾಥ್‌ ನೀಡಲಿಲ್ಲ. ಆದರೂ ಕೊನೆಯವರೆಗೂ ಏಕಾಂಗಿ ಹೋರಾ ನಡೆಸಿದ ಡೇವಿಡ್‌ ಮಿಲ್ಲರ್‌, ಕಿವೀಸ್‌ ಬೌಲರ್‌ಗಳಿಗೆ ನಡುಕು ಹುಟ್ಟಿಸಿದರು. ಅವರು ಆಡಿದ ಕೇವಲ 67 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ ಅಜೇಯ 100 ರನ್‌ಗಳನ್ನು ಸಿಡಿಸಿದರು. ಆದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಒಂದು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಸ್ಟ್ರೈಕ್‌ ರೇಟ್‌ ರನ್‌ ಗಳಿಸಿದ್ದರೆ, ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು.

ನ್ಯೂಜಿಲೆಂಡ್‌ ಪರ ಮಿಚೆಲ್‌ ಸ್ಯಾಂಟ್ನರ್‌ 3 ವಿಕೆಟ್‌ ಪಡೆದರೆ, ಮ್ಯಾಟ್‌ ಹೆನ್ರಿ ಮತ್ತು ಗ್ಲೆನ್‌ ಫಿಲಿಪ್ಸ್‌ ತಲಾ ಎರಡೆರಡು ವಿಕೆಟ್‌ ಪಡೆದಿದ್ದಾರೆ.



ಅಬ್ಬರಿಸಿದ ರಚಿನ್‌-ವಿಲಿಯಮ್ಸನ್‌

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ್ದ ರಚಿನ್‌ ರವೀಂದ್ರ ಹಾಗೂ ಕೇನ್‌ ವಿಲಿಯಮ್ಸನ್‌ ತಲಾ ಶತಕಗಳನ್ನು ಬಾರಿಸಿದ್ದರು. ಇನಿಂಗ್ಸ್‌ ಆರಂಭಿಸಿದ್ದ ರಚಿನ್‌ ರವೀಂದ್ರ 101 ಎಸೆತಗಳಲ್ಲಿ 108 ರನ್‌ಗಳನ್ನು ಕಲೆ ಹಾಕಿದರು. ಕಿವೀಸ್‌ಗೆ ಉತ್ತಮ ಆರಭವನ್ನು ತಂದುಕೊಟ್ಟಿದ್ದರು. ಇವರ ಜೊತೆ ಮತ್ತೊಂದು ತುದಿಯಲ್ಲಿ ಬ್ಯಾಟ್‌ ಮಾಡುತ್ತಿದ್ದ 94 ಎಸೆತಗಳಲ್ಲಿ 102 ರನ್‌ ಗಳಿಸಿದರು. ರಚಿನ್‌ ರವೀಂದ್ರ ಹಾಗೂ ಕೇನ್‌ ವಿಲಿಯಮ್ಸನ್‌ ಮುರಿಯದ ಎರಡನೇ ವಿಕೆಟ್‌ಗೆ 164 ರನ್‌ಗಳ ಜೊತೆಯಾಟವನ್ನು ಆಡಿದರು ಹಾಗೂ ತಂಡದ ಮೊತ್ತವನ್ನು 200ರ ಗಡಿಯನ್ನು ದಾಟಿಸಿದ್ದರು. ಡ್ಯಾರಿಲ್‌ ಮಿಚೆಲ್‌ ಹಾಗೂ ಗ್ಲೆನ್‌ ಫಿಲಿಪ್ಸ್‌ ಅವರು ತಲಾ 49 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿದ್ದರು.



ಸ್ಕೋರ್‌ ವಿವರ

ನ್ಯೂಜಿಲೆಂಡ್‌: 50 ಓವರ್‌ಗಳಿಗೆ 362-6 (ರಚಿನ್‌ ರವೀಂದ್ರ 108, ಕೇನ್‌ ವಿಲಿಯಮ್ಸನ್‌ 102, ಗ್ಲೆನ್‌ ಫಿಲಿಪ್ಸ್‌ 49*, ಡ್ಯಾರಿಲ್‌ ಮಿಚೆಲ್‌ 49; ಲುಂಗಿ ಎನ್‌ಗಿಡಿ 72ಕ್ಕೆ 3, ಕಗಿಸೊ ರಬಾಡ 70ಕ್ಕೆ 2)

ದಕ್ಷಿಣ ಆಫ್ರಿಕಾ: 50 ಓವರ್‌ಗಳಿಗೆ 312-9 (ಡೇವಿಡ್‌ ಮಿಲ್ಲರ್‌ 100*, ರಾಸಿ ವ್ಯಾನ್‌ ಡೆರ್‌ ಡುಸೆನ್‌ 69, ತೆಂಬಾ ಬವೂಮಾ 56)

ಪಂದ್ಯ ಶ್ರೇಷ್ಠ ಪ್ರಶಸ್ತಿ: ರಚಿನ್‌ ರವೀಂದ್ರ