ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಉಗ್ರರ ಉಸಿರು ಅಡಗಿಸಿದ ಲೋಟರಿಂಗ್‌ ಮ್ಯುನಿಷನ್ಸ್ ಡ್ರೋನ್‌:‌ ಹಾಗಂದ್ರೇನು ಗೊತ್ತ?

Operation Sindoor: 'ಲೋಟರಿಂಗ್ ಮ್ಯುನಿಷನ್' (LMS) ಎಂಬುದು ದಾಳಿಯ ನಿಖರತೆ ಕಾಯ್ದುಕೊಳ್ಳುವ ಡ್ರೋನ್‌ ಸ್ವರೂಪದ ಆಯುಧ. ಇವು ಹೆಲಿಕಾಪ್ಟರ್‌ಗಿಂತ ಸಣ್ಣವು ಹಾಗೂ ಡ್ರೋನ್‌ಗಿಂತ ದೊಡ್ಡವು. ಗುರಿ ಇರುವ ಪ್ರದೇಶದ ಮೇಲೆ ಎತ್ತರದಲ್ಲಿ ಹಾರಾಡಿ ನಿಖರವಾಗಿ ಅದನ್ನು ಪತ್ತೆಹಚ್ಚುತ್ತವೆ. ನಂತರ ದಾಳಿ ನಡೆಸುತ್ತವೆ.

ಉಗ್ರರ ಉಸಿರು ಅಡಗಿಸಿದ ಲೋಟರಿಂಗ್‌ ಮ್ಯುನಿಷನ್ಸ್ ಡ್ರೋನ್‌:‌ ಹಾಗಂದ್ರೇನು?

ಹರೀಶ್‌ ಕೇರ ಹರೀಶ್‌ ಕೇರ May 7, 2025 7:55 AM

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಗೆ ತೀವ್ರ ಪ್ರತಿಕ್ರಿಯೆಯಾಗಿ ಭಾರತ (India) ಪಾಕಿಸ್ತಾನದ (Pakistan) 9 ಭಯೋತ್ಪಾದಕ ನೆಲೆಗಳ ಮೇಲೆ ನಡೆಸಿರುವ ʼಆಪರೇಶನ್‌ ಸಿಂಧೂರ್‌ʼ (Operation Sindoor) ದಾಳಿ ಯಶಸ್ವಿಯಾಗಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಾದ್ಯಂತ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಯಶಸ್ವಿಯಾಗಿ ಗುರಿಯಾಗಿಸಿಕೊಂಡ ಆಪರೇಷನ್ ಸಿಂಧೂರ್‌ನಲ್ಲಿ ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆ (ಐಎಎಫ್)ಗಳು ನಿಖರವಾದ ದಾಳಿ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಬಳಸಿಕೊಂಡಿವೆ. ಇವುಗಳನ್ನು ಲೋಟರಿಂಗ್ ಮನಿಷನ್ ಸಿಸ್ಟಮ್ಸ್ (LMS) ಎಂದು ಕರೆಯಲಾಗುತ್ತದೆ. ಇವು ಒಂದು ಬಗೆಯ ಡ್ರೋನ್‌ಗಳು.

ಈ ದಾಳಿಗಳಿಗೆ ನಿಖರ ಲೊಕೇಶನ್‌ ಪಾಯಿಂಟ್‌ಗಳನ್ನು ಗುಪ್ತಚರ ಸಂಸ್ಥೆಗಳು ಒದಗಿಸಿದವು. ದಾಳಿಗಳನ್ನು ಸಂಪೂರ್ಣವಾಗಿ ಭಾರತೀಯ ನೆಲದಿಂದಲೇ ನಡೆಸಲಾಯಿತು. ಭಾರತದಲ್ಲಿ ಭಯೋತ್ಪಾದನೆ ನಡೆಸುತ್ತಿರುವ ಪ್ರಮುಖ ಉಗ್ರ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದ ನೆಲೆಗಳನ್ನೇ ಗುರಿಯಾಗಿಸಿ ಭಾರತೀಯ ಪಡೆಗಳು ಈ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದವು.

'ಲೋಟರಿಂಗ್ ಮ್ಯುನಿಷನ್' (LMS) ಎಂಬುದು ದಾಳಿಯ ನಿಖರತೆ ಕಾಯ್ದುಕೊಳ್ಳುವ ಡ್ರೋನ್‌ ಸ್ವರೂಪದ ಆಯುಧ. ಇವು ಹೆಲಿಕಾಪ್ಟರ್‌ಗಿಂತ ಸಣ್ಣವು ಹಾಗೂ ಡ್ರೋನ್‌ಗಿಂತ ದೊಡ್ಡವು. ಗುರಿ ಇರುವ ಪ್ರದೇಶದ ಮೇಲೆ ಎತ್ತರದಲ್ಲಿ ಹಾರಾಡಿ ನಿಖರವಾಗಿ ಅದನ್ನು ಪತ್ತೆಹಚ್ಚುತ್ತವೆ. ಮಾನವ ನಿಯಂತ್ರಣದಲ್ಲಿ ಹಾರಾಡುತ್ತವೆ. ಇವು ಕೆಲವೊಮ್ಮೆ ಸ್ವತಂತ್ರವಾಗಿಯೂ ಹಾರಾಡಬಲ್ಲವು. ಗುರಿ ನಿಖರಗೊಳಿಸಿದ ಕೂಡಲೇ ದಾಳಿ ನಡೆಸುತ್ತವೆ. ಇವುಗಳನ್ನು ಲೋಟರಿಂಗ್ ಸ್ಪೋಟಕಗಳು ಎಂದೂ ಕರೆಯಲಾಗುತ್ತದೆ. ಥೇಲ್ಸ್ ಮತ್ತು ಏರೋವೈರಾನ್‌ಮೆಂಟ್ ಕಂಪನಿಗಳು LMS ಅನ್ನು ತಯಾರಿಸುತ್ತವೆ. ಇವು ವೈಮಾನಿಕ ವಾಹನಗಳು ಅಥವಾ ಸಾಮಾನ್ಯವಾಗಿ ಡ್ರೋನ್‌ಗಳು ಕೂಡ ಆಗಿವೆ. ಇವುಗಳಲ್ಲಿ ಸ್ಫೋಟಕ ಸಿಡಿತಲೆಗಳು, ಸಣ್ಣ ಕ್ಷಿಪಣಿಗಳು ಸೇರಿದಂತೆ ವಿವಿಧ ಪೇಲೋಡ್‌ಗಳನ್ನು ಅಳವಡಿಸಲಾಗುತ್ತದೆ. ಇವುಗಳಲ್ಲಿ ಚಾಲಕನಿರುವುದಿಲ್ಲ, ಹೀಗಾಗಿ ಒಂದು ವೇಳೆ ಇವು ದಾಳಿಗೀಡಾದರೂ ಜೀವಹಾನಿಯಾಗುವುದಿಲ್ಲ.

ಈ ಡ್ರೋನ್‌ಗಳನ್ನು ಸಾಮಾನ್ಯವಾಗಿ ಗುಪ್ತ ಸುರಕ್ಷಿತ ಸ್ಥಾನದಿಂದ ಉಡಾಯಿಸಲಾಗುತ್ತದೆ. ಇವು ಸದ್ದಿಲ್ಲದೆ ಗುರಿ ಪ್ರದೇಶಕ್ಕೆ ಹಾರುತ್ತವೆ, ಗುರಿಯ ಮೇಲೆ ಅಡ್ಡಾಡುತ್ತವೆ, ಗುರಿಗಳನ್ನು ಪತ್ತೆಹಚ್ಚುತ್ತವೆ ಮತ್ತು ಪರಿಶೀಲಿಸುತ್ತವೆ. ಅವಕಾಶ ಸಿಕ್ಕಿದ ಕೂಡಲೇ ನಿಖರವಾಗಿ ಹೊಡೆಯುತ್ತವೆ. ಗುರಿ ಕೇವಲ ಒಂದು ಕ್ಷಣ ಕಾಣಿಸಿಕೊಂಡರೂ ಸಾಕು. ಕೊನೆಯ ಕ್ಷಣದಲ್ಲಿ ಕಾರ್ಯಾಚರಣೆಯ ಪರಿಸ್ಥಿತಿ ಬದಲಾದರೆ, ಇದನ್ನು ನಿರ್ವಹಿಸುವವರು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬಹುದು, ಮತ್ತೆ ಲೋಟರಿಂಗ್‌ ಮೋಡ್‌ಗೆ ಹಿಂತಿರುಗಬಹುದು, ಬೇರೆ ಗುರಿಯನ್ನು ನಿಯೋಜಿಸಬಹುದು ಅಥವಾ ಪರಿಸ್ಥಿತಿ ಅನುಕೂಲಕರವಾದಾಗ ಅದೇ ಗುರಿಯತ್ತ ಮರುನಿಯೋಜನೆಗೊಳಿಸಬಹುದು.

ಗುರಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದ ರಿಯಲ್‌ ಟೈಮ್‌ ಚಿತ್ರಣವನ್ನು ಈ ಡ್ರೋನ್‌ಗಳ ನಿರ್ವಾಹಕರು ನಿಯಂತ್ರಿಸುತ್ತಾರೆ. ಸ್ಥಿರ ಅಥವಾ ಚಲಿಸುವ ಗುರಿಯ ಮೇಲೂ ದಾಳಿಯ ನಿಖರವಾದ ಸಮಯ, ದಿಕ್ಕು ಮತ್ತು ಕೋನವನ್ನು ನಿಯಂತ್ರಿಸಲು ಸಾಧ್ಯವಿದೆ. ಸಾಂಪ್ರದಾಯಿಕ ಗುರಿ ಗುರುತಿಸುವಿಕೆ ಈ ಡ್ರೋನ್‌ಗಳಿಂದಾಗಿ ಇದೀಗ ಹೆಚ್ಚು ನಿಖರವಾಗಿದೆ. LMS ಅನ್ನು ಸಣ್ಣ ಸೈನ್ಯಗಳು, ಸೇನಾ ಘಟಕಗಳು ಕೂಡ ಹೊಂದಬಹುದು ಹಾಗೂ ದೊಡ್ಡ ಪ್ರಮಾಣದ ವಾಯುಪಡೆಯ ನೆರವಿನ ಅಗತ್ಯವಿಲ್ಲದೇ ಸ್ವತಂತ್ರವಾಗಿ ಇದನ್ನು ಬಳಸಬಹುದು.

ಇದನ್ನೂ ಓದಿ: Operation Sindoor: ನೋಡ ನೋಡುತ್ತಿದ್ದಂತೆ ಕ್ಷಿಪಣಿಗಳ ಎಂಟ್ರಿ; ವೈಮಾನಿಕ ದಾಳಿಗೆ ಬೆಚ್ಚಿದ ಪಾಕ್‌, ಹೇಗಿತ್ತು ಗೊತ್ತಾ ಆಪರೇಷನ್ ಸಿಂಧೂರ್‌? ದೃಶ್ಯಗಳು ವೈರಲ್‌