ಬೆಂಗಳೂರು ಬುಲ್ಸ್‌ಗೆ ಕನ್ನಡಿಗ ಬಿ.ಸಿ.ರಮೇಶ್ ನೂತನ ಕೋಚ್
ಕಳೆದ ಆವತ್ತಿಯಲ್ಲಿ ಬುಲ್ಸ್ ತಂಡ ಆಡಿದ 22 ಪಂದ್ಯಗಳಲ್ಲಿ ಕೇವಲ 2 ಪಂದ್ಯ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಿಯಾಗಿತ್ತು. ರಣಧೀರ್ ನಿರ್ಗಮನದ ಕುರಿತಾಗಿ ಫ್ರಾಂಚೈಸಿಯು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ದೃಢಪಡಿಸಿದೆ.


ಬೆಂಗಳೂರು: ಕಳೆದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ(Pro Kabaddi League) ನೀರಸ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಬೆಂಗಳೂರು ಬುಲ್ಸ್(Bengaluru Bulls) ತಂಡದ ಕೋಚ್ ರಣದೀರ್ ಸಿಂಗ್ ಸೆಹ್ರಾವತ್(Randhir Singh Sehrawat) ಅವರ ತಲೆದಂಡವಾಗಿದೆ. ನೂತನ ಕೋಚ್ ಆಗಿ ಕನ್ನಡಿಗ ಬಿ.ಸಿ ರಮೇಶ್(BC Ramesh) ಆಯ್ಕೆಯಾಗಿದ್ದಾರೆ. ಸತತ 11 ಸೀಸನ್‌ಗಳಿಂದ ರಣದೀರ್‌ಗೆ ಬುಲ್ಸ್ ತಂಡದೊಂದಿಗೆ ಇದ್ದ ನಂಟು ಇದೀಗ ಕೊನೆಗೊಂಡಿದೆ. ರಣಧೀರ್ ನಿರ್ಗಮನದ ಕುರಿತಾಗಿ ಫ್ರಾಂಚೈಸಿಯು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ದೃಢಪಡಿಸಿದೆ.
ರಣಧೀರ್ ಸಿಂಗ್ ಸೆಹ್ರಾವತ್ ಅವರ ಕೋಚಿಂಗ್‌ನಲ್ಲಿ ಬೆಂಗಳೂರು ಬುಲ್ಸ್ ತಂಡ 2018ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿತ್ತು. ಈ ವೇಳೆ ಬಿ.ಸಿ ರಮೇಶ್ ಸಹಾಯಕ ಕೋಚ್ ಆಗಿದ್ದರು. ರಮೇಶ್ ಕೋಚಿಂಗ್‌ನಲ್ಲಿ 2019ರಲ್ಲಿ ಬೆಂಗಾಲ್ ವಾರಿಯರ್ಸ್ ಚಾಂಪಿಯನ್ ಆಗಿತ್ತು.
ಕಳೆದ ಆವತ್ತಿಯಲ್ಲಿ ಬುಲ್ಸ್ ತಂಡ ಆಡಿದ 22 ಪಂದ್ಯಗಳಲ್ಲಿ ಕೇವಲ 2 ಪಂದ್ಯ ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಿಯಾಗಿತ್ತು.
'ಕರ್ನಾಟಕದ ಹೆಮ್ಮೆ, ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ.ಸಿ.ರಮೇಶ್ ಸರ್, ಈಗ ಬೆಂಗಳೂರು ಬುಲ್ಸ್ ತಂಡದ ದ್ರೋಣ. 2018ರಲ್ಲಿ ಗೂಳಿ ಪಡೆಗೆ ತಮ್ಮ ಮೊದಲ ಟ್ರೋಫಿ ದಕ್ಕಿಸಿದ ರಮೇಶ್ ಸರ್, ಪುಣೆ ಹಾಗೂ ಬೆಂಗಾಲ್ ತಂಡಗಳೊಂದಿಗೂ ವಿಜಯ ಸಾಧಿಸಿದ್ದಾರೆ. ಗೂಳಿ ಪಡೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯೊಂದಿಗೆ, ಬಿ.ಸಿ.ರಮೇಶ್ ಅವರನ್ನು ಸ್ವಾಗತಿಸುತ್ತಿದ್ದೇವೆ' ಎಂದು ಬುಲ್ಸ್ ತಂಡ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.