Ankit Chatterjee: ರಣಜಿಗೆ ಪದಾರ್ಪಣೆ ಮಾಡಿ ಗಂಗೂಲಿ ದಾಖಲೆ ಮುರಿದ 15ರ ಶಾಲಾ ಬಾಲಕ!
2024-25ರ ಸಾಲಿನ ರಣಜಿ ಟ್ರೋಫಿ ಎರಡನೇ ಅವಧಿಯ ಪಂದ್ಯಗಳು ಗುರುವಾರದಿಂದ ಆರಂಭವಾಗಿವೆ. ಅದರಂತೆ ಬಂಗಾಳ ಮತ್ತು ಹರಿಯಾಣ ತಂಡಗಳು ಕೂಡ ಪಂದ್ಯವನ್ನು ಆರಂಭಿಸಿವೆ. ಪಂದ್ಯದ ಮೊದಲನೇ ದಿನ ಬಂಗಾಳ ತಂಡದ ಅಂಕಿತ್ ಚಟರ್ಜಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡುವ ಮೂಲಕ 15ರ ವಯಸ್ಸಿನ ಅಂಕಿತ್ ಚಟರ್ಜಿ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಮುರಿದಿದ್ದಾರೆ.
ನವದೆಹಲಿ: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಎರಡನೇ ಸುತ್ತು ಆರಂಭವಾಗಿದೆ. ಗುರುವಾರದಿಂದ (ಜನವರಿ 23) ಎಲ್ಲಾ ತಂಡಗಳ ಎರಡನೇ ಸುತ್ತಿನ ಪಂದ್ಯಗಳು ಆರಂಭವಾಗಿವೆ. ದೇಶಿ ಕ್ರಿಕೆಟ್ ಆಡಲು ಬಿಸಿಸಿಐ ಆದೇಶದ ನಂತರ ಎಲ್ಲಾ ಕಣ್ಣುಗಳು ಭಾರತ ತಂಡದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಶುಭಮನ್ ಗಿಲ್, ರಿಷಭ್ ಪಂತ್, ರವೀಂದ್ರ ಜಡೇಜಾ ಮತ್ತು ಯಶಸ್ವಿ ಜೈಸ್ವಾಲ್ ಮೇಲೆ ಕೇಂದ್ರೀಕೃತವಾಗಿವೆ.
ಆದರೆ, ರವೀಂದ್ರ ಜಡೇಜಾ ಹೊರತುಪಡಿಸಿ ಇನ್ನುಳಿದ ಟೀಮ್ ಇಂಡಿಯಾ ಸ್ಟಾರ್‌ಗಳು ವೈಫಲ್ಯ ಅನುಭವಿಸಿದ್ದಾರೆ. ಇದರ ನಡುವೆ 10ನೇ ತರಗತಿ ಓದುತ್ತಿರುವ 15ರ ವಯಸ್ಸಿನ ಅಂಕಿತ್ ಚಟರ್ಜಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಅವರು ಹರಿಯಾಣ ವಿರುದ್ಧದ ಪಂದ್ಯದ ಮೂಲಕ ರಣಜಿ ಟ್ರೋಫಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೂಲಕ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ 35 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
Ranji Trophy: ಡೆಲ್ಲಿ ವಿರುದ್ಧ 5 ವಿಕೆಟ್ ಕಿತ್ತ ರವೀಂದ್ರ ಜಡೇಜಾ
ಸೌರವ್ ಗಂಗೂಲಿ ದಾಖಲೆ ಮುರಿದ ಅಂಕಿತ್ ಚಟರ್ಜಿ
ಅಂಕಿತ್ ಚಟರ್ಜಿ ಅವರು ತಮ್ಮ ರಣಜಿ ಟ್ರೋಫಿ ಚೊಚ್ಚಲ ಪಂದ್ಯದಲ್ಲಿ ಹರಿಯಾಣದ ಅನುಭವಿ ವೇಗದ ಬೌಲರ್ ಅಂಶುಲ್ ಕಾಂಬೋಜ್ ವಿರುದ್ಧ ಅದ್ಭುತ ಕವರ್ ಡ್ರೈವ್ ಹೊಡೆಯುವ ಮೂಲಕ ಬಂಗಾಳದ ಖಾತೆಯನ್ನು ತೆರೆದರು. ಇದರೊಂದಿಗೆ, ರಣಜಿ ಟ್ರೋಫಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ಸೌರವ್ ಗಂಗೂಲಿಯನ್ನು ಹಿಂದಿಕ್ಕಿದ್ದಾರೆ.
ಅಂಕಿತ್ ಚಟರ್ಜಿ 15 ವರ್ಷ ಮತ್ತು 361 ದಿನಗಳಲ್ಲಿ ರಣಜಿಗೆ ಪಾದಾರ್ಪಣೆ ಮಾಡಿದ್ದಾರೆ. ಆದರೆ ಗಂಗೂಲಿ 1989-90ರಲ್ಲಿ 17ನೇ ವಯಸ್ಸಿನಲ್ಲಿ ಬಂಗಾಳಕ್ಕಾಗಿ ತಮ್ಮ ಮೊದಲ ರಣಜಿ ಪಂದ್ಯವನ್ನು ಆಡಿದರು. ಈ ಪಂದ್ಯವು ರಣಜಿ ಟ್ರೋಫಿಯ ಫೈನಲ್ ಆಗಿದ್ದು, ಇದರಲ್ಲಿ ಬಂಗಾಳ ತಂಡ, ದಿಲ್ಲಿಯನ್ನು ಸೋಲಿಸಿ ಚಾಂಪಿಯನ್ ಆಗಿತ್ತು.
Ranji Trophy: ಕರ್ನಾಟಕದ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್; 55 ರನ್‌ಗೆ ಆಲೌಟ್
ಬಂಗಾವ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಂಕಿತ್ ಚಟರ್ಜಿಗೆ ಸತತ ಕಠಿಣ ಪರಿಶ್ರಮದಿಂದ ಸಿಕ್ಕ ಪ್ರತಿಫಲ ಇದಾಗಿದೆ. ಕಳೆದ ಮೂರು ವರ್ಷಗಳಿಂದ ಪ್ರತಿದಿನ ಮುಂಜಾನೆ 3.30ಕ್ಕೆ ಎದ್ದು ಬೊಂಗಾವ್-ಸೀಲ್ದಾಹ್ ಲೋಕಲ್ ರೈಲಿನಲ್ಲಿ ಎರಡು ಗಂಟೆಗಳ ಪ್ರಯಾಣದ ನಂತರ ಅವರು ಕೋಲ್ಕತ್ತಾ ತಲುಪಲು ಅರ್ಧ ಘಂಟೆಯವರೆಗೆ ನಡೆಯುತ್ತಿದ್ದರು. ಅವರ ದಿನಚರಿ ರಾತ್ರಿ 9 ಅಥವಾ 10 ಗಂಟೆಗೆ ಕೊನೆಗೊಳ್ಳುತ್ತಿತ್ತು. ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಭಾರತ ಎ ಕ್ರಿಕೆಟಿಗ ಅಭಿಮನ್ಯು ಈಶ್ವರನ್ ಗಾಯದ ಕಾರಣ ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಕಿತ್ ಚಟರ್ಜಿಗೆ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಲು ಅವಕಾಶ ಸಿಕ್ಕಿದೆ.
ಅಜೇಯ 5 ರನ್ ಗಳಿಸಿರುವ ಅಂಕಿತ್
ತಮ್ಮ ಪದಾರ್ಪಣೆ ಪಂದ್ಯದ ಇನಿಂಗ್ಸ್‌ನಲ್ಲಿ ಅಂಕಿತ್ ಚಟರ್ಜಿ ಇನಿಂಗ್ಸ್ ಆರಂಭಿಸಿದರು. ಮೊದಲನೇ ದಿನದಾಟದ ಅಂತ್ಯಕ್ಕೆ ಬಂಗಾಳ ತಂಡ 5 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 5 ರನ್ ಗಳಿಸಿದೆ. ಮತ್ತೊರ್ವ ಆರಂಭಿಕ ವೃತಿಕ್ ಚಟರ್ಜಿ ಒಂದು ರನ್ ಗಳಿಸಿ ಸುಮಿತ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಕುಮಾರ್ ಮತ್ತೊಂದು ತುದಿಯಲ್ಲಿ ಬ್ಯಾಟ್ ಮಾಡಲಿದ್ದಾರೆ.