Rashmika Mandanna: ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಕಾಲಿಟ್ಟು 8 ವರ್ಷ; ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನ್ಯಾಷನಲ್ ಕ್ರಶ್
Rashmika Mandanna: ಕನ್ನಡದ ʼಕಿರಿಕ್ ಪಾರ್ಟಿʼ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಸಿನಿರಂಗದಲ್ಲಿ 8 ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
Ramesh B
December 31, 2024
ಬೆಂಗಳೂರು: ನ್ಯಾಷನಲ್ ಕ್ರಶ್, ಪಡ್ಡೆಗಳ ನೆಚ್ಚಿನ ಶೀವಲ್ಲಿ, ಕನ್ನಡಿಗರ ಸಾನ್ವಿ, ಸೂಪರ್ ಸ್ಟಾರ್‌ಗಳ ಲಕ್ಕಿ ನಾಯಕಿ, ನಿರ್ಮಾಪಕರ ಬಹು ಬೇಡಿಕೆಯ ನಟಿ ಎಂದೆಲ್ಲ ಕರೆಯಿಸಿಕೊಳ್ಳುವ ಕನ್ನಡತಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಡಿಸೆಂಬರ್ 30 ಸ್ಪೆಷಲ್ ಡೇ. ಇದಕ್ಕೆ ಕಾರಣವೂ ಇದೆ. 2016ರ ಇದೇ ದಿನದಂದು ರಿಲೀಸ್ ಆದ ಕನ್ನಡದ 'ಕಿರಿಕ್ ಪಾರ್ಟಿ' (Kirik Party) ಚಿತ್ರದ ಮೂಲಕ ರಶ್ಮಿಕಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ಕಾಂಬಿನೇಷನ್‌ನ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕಾಲೇಜ್ ಕಥೆಯನ್ನು ಒಳಗೊಂಡ ಈ ಚಿತ್ರ ಇಂದಿಗೂ ಹಲವರ ಫೆವರೇಟ್ ಲಿಸ್ಟ್‌ನಲ್ಲಿದೆ. ಚಿತ್ರರಂಗಕ್ಕೆ ಕಾಲಿಟ್ಟು 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ʼʼಚಿತ್ರರಂಗದಲ್ಲಿ 8 ವರ್ಷ ಪೂರೈಸಿದ್ದೇನೆ. ನಾನು ಇಂದು ಏನಾಗಿದ್ದೇನೋ ಅದಕ್ಕೆಲ್ಲ ನಿಮ್ಮ ಪ್ರೀತಿ ಮತ್ತು ಬೆಂಬಲವೇ ಕಾರಣʼʼ ಎಂದು ಅವರು ಬರೆದುಕೊಂಡಿದ್ದಾರೆ. ಜತೆಗೆ ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ್ದಾರೆ.
ಸಾನ್ವಿಯಾಗಿ ಚಿರ ಪರಿಚಿತ
2016ರಲ್ಲಿ ʼರಿಕ್ಕಿʼ ಮೂಲಕ ನಿರ್ದೇಶಕರಾಗಿ ಸ್ಯಾಂಲ್‌ವುಡ್‌ಗೆ ಕಾಲಿಟ್ಟ ರಿಷಬ್ ಶೆಟ್ಟಿ 2ನೇ ಬಾರಿಗೆ ರಕ್ಷಿತ್ ಶೆಟ್ಟಿಗೆ ಆ್ಯಕ್ಷನ್ ಕಟ್ ಹೇಳಿದ ಚಿತ್ರ ʼಕಿರಿಕ್ ಪಾರ್ಟಿʼ. ಯೂತ್ ಎಂಟರ್‌ಟೈನ್‌ಮೆಂಟ್ ಆಗಿದ್ದ ʼಕಿರಿಕ್ ಪಾರ್ಟಿʼಯ ಮೂಲಕ ನಾಯಕಿಯರಾಗಿ ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತಾ ಹೆಗ್ಡೆ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಅದರಲ್ಲಿಯೂ ರಶ್ಮಿಕಾ ಮಂದಣ್ಣ ನಿರ್ವಹಿಸಿದ ಸಾನ್ವಿ ಜೋಸೆಫ್ ಪಾತ್ರ ಬಹು ಜನಪ್ರಿಯವಾಗಿತ್ತು. ಇಂದಿಗೂ ಬಹುತೇಕರು ಸಾನ್ವಿ ಎಂದೇ ರಶ್ಮಿಕಾ ಅವರನ್ನು ಗುರುತಿಸುತ್ತಾರೆ. ಅದರಲ್ಲಿಯೂ ರಶ್ಮಿಕಾ ತೊಟ್ಟಿದ್ದ ಕನ್ನಡವೂ ಟ್ರೆಂಡ್ ಸೃಷ್ಟಿಸಿತ್ತು. ಸುಮಾರು 4 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ರೂ. ಗಳಿಸಿತ್ತು. ಜತೆಗೆ ತೆಲುಗಿಗೂ ರಿಮೇಕ್ ಆಗಿತ್ತು.
ಈ ಚಿತ್ರದ ಗೆಲುವಿನಲ್ಲಿ ಅದರ ಹಾಡುಗಳೂ ಪ್ರಧಾನ ಪಾತ್ರವಹಿಸಿದ್ದವು. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನದ ಹಾಡುಗಳೆಲ್ಲ ಹಿಟ್ ಲಿಸ್ಟ್ ಸೇರಿದ್ದವು. ಈ ಚಿತ್ರದ ಬಳಿಕ ರಶ್ಮಿಕಾ ಅದೃಷ್ಟವೇ ಖುಲಾಯಿಸಿತ್ತು. ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಅವರು ಬಾಲಿವುಡ್, ಕಾಲಿವುಡ್‌ನಲ್ಲಿಯೂ ಗಮನ ಸೆಳೆದಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟ ಅವರು ಈಗ ಬಹು ಬೇಡಿಯ ನಟಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಜತೆಗೆ ನ್ಯಾಷನಲ್ ಕ್ರಶ್ ಆಗಿ ಬದಲಾಗಿದ್ದಾರೆ.
https://youtu.be/TcxdPnVsAgE
ಡಿಸೆಂಬರ್ ಲಕ್ಕಿ ತಿಂಗಳು
ಇನ್ನೊಂದು ವಿಶೇಷ ಎಂದರೆ ಡಿಸೆಂಬರ್ ರಶ್ಮಿಕಾಗೆ ಲಕ್ಕಿ ತಿಂಗಳು ಎನಿಸಿಕೊಂಡಿದೆ. ವರ್ಷಾಂತ್ಯದ ತಿಂಗಳಲ್ಲಿ ರಿಲೀಸ್ ಆದ ಅವರ ಬಹುತೇಕ ಎಲ್ಲ ಚಿತ್ರಗಳು ಹಿಟ್ ಲಿಸ್ಟ್ ಸೇರಿವೆ. ʼಕಿರಿಕ್ ಪಾರ್ಟಿʼಯಿಂದ ತೊಡಗಿ ʼಪುಷ್ಪʼ, ʼಪುಷ್ಪ 2ʼ, ʼಅಂಜನಿ ಪುತ್ರʼ, ʼಚಮಕ್ʼ, ʼಅನಿಮಲ್ʼ ಮುಂತಾದ ಚಿತ್ರಗಳು ಡಿಸೆಂಬರ್‌ನಲ್ಲೇ ತೆರೆಕಂಡಿವೆ. ಈವೆಲ್ಲ ಸೂಪರ್ ಹಿಟ್ ಆಗಿವೆ. ಅದರಲ್ಲಿಯೂ ಈ ವರ್ಷದ ಡಿ. 5ರಂದು ರಿಲೀಸ್ ಆಗಿರುವ ʼಪುಷ್ಪ 2ʼ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.
ಈ ಸುದ್ದಿಯನ್ನೂ ಓದಿ: Pushpa 2 Collection: ಬಾಕ್ಸ್ ಆಫೀಸ್‌ನಲ್ಲಿ ಕೊಂಚ ತಗ್ಗಿದ ‘ಪುಷ್ಪ 2’ ಕಲೆಕ್ಷನ್; 2 ದಿನದ ಗಳಿಕೆ ಎಷ್ಟು?